‘ಭಾರತೀಯ ಮಸ್ಲಿಮರ ಪೌರತ್ವಕ್ಕೆ ಧಕ್ಕೆ ಇಲ್ಲ’

By Kannadaprabha NewsFirst Published Jan 13, 2020, 8:24 AM IST
Highlights

ದೇಶದಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ಕಾಯ್ದೆಯಿಂದ ಭಾರತೀಯ ಮುಸ್ಲಿಮರಿಗೆ ಯಾವುದೇ ರೀತಿಯ ಧಕ್ಕೆ ಇಲ್ಲ ಎಂದು ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.

ಬೆಂಗಳೂರು (ಜ.13): ಇಸ್ಲಾಮಿಕ್‌ ರಾಷ್ಟ್ರಗಳಾಗಿರುವ ಪಾಕಿಸ್ತಾನ, ಅಷ್ಘಾನಿಸ್ತಾನ ಹಾಗೂ ಬಾಂಗ್ಲಾದೇಶದ ಮುಸ್ಲಿಮರು ಭಾರತಕ್ಕೆ ಬರಲು ಬಯಸುವುದಿಲ್ಲ. ಅದಕ್ಕಾಗಿ ಅವರನ್ನು ಪೌರತ್ವ ತಿದ್ದುಪಡಿ ಕಾಯ್ದೆಯಲ್ಲಿ (ಸಿಎಎ) ಸೇರಿಸಿಲ್ಲ ಎಂದು ರಾಜ್ಯಸಭಾ ಸದಸ್ಯ ಡಾ.ಸುಬ್ರಮಣಿಯನ್‌ ಸ್ವಾಮಿ ತಿಳಿಸಿದ್ದಾರೆ.

‘ವಿರಾಟ್‌ ಹಿಂದೂಸ್ತಾನ್‌ ಸಂಗಮ್‌  ಶಿಕ್ಷಕರ ಸದನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಧರ್ಮದ ಆಧಾರದಲ್ಲಿ ಕಿರುಕುಳಕ್ಕೆ ಒಳಗಾದ ಪಾಕಿಸ್ತಾನ, ಅಷ್ಘಾನಿಸ್ತಾನ ಹಾಗೂ ಬಂಗ್ಲಾದೇಶದಿಂದ ಬಂದ 31 ಸಾವಿರ ಮಂದಿ ಕಳೆದ ಎಪ್ಪತ್ತು ವರ್ಷಗಳಿಂದ ಅಕ್ರಮ ವಲಸಿಗರಾಗಿ ನಿರಾಶ್ರಿತ ಕೇಂದ್ರಗಳಲ್ಲಿ ವಾಸ ಮಾಡುತ್ತಿದ್ದಾರೆ. ಅವರಿಗೆ ಪೌರತ್ವ ನೀಡಲು ಕಾಯ್ದೆ ಜಾರಿ ಮಾಡಲಾಗಿದೆ ಎಂದು ತಿಳಿಸಿದರು.

ಪೌರತ್ವ ತಿದ್ದುಪಡಿ ಕಾಯ್ದೆಯಲ್ಲಿ ಏನಿದೆ ಎನ್ನುವುದನ್ನು ತಿಳಿದುಕೊಳ್ಳದೆ ಗೊಂದಲ ಹುಟ್ಟು ಹಾಕಲಾಗುತ್ತಿದೆ. ಕಾಂಗ್ರೆಸ್‌ನ ಬಹುತೇಕ ನಾಯಕರು ಸೇರಿದಂತೆ ಕಾಯ್ದೆಯ ವಿರುದ್ಧ ಹೋರಾಟ ಮಾಡುತ್ತಿರುವವರು ಕಾಯ್ದೆಯನ್ನು ಓದಿಲ್ಲ. ಈ ಕಾಯ್ದೆಯಿಂದ ಭಾರತದ ಮುಸ್ಲಿಮರ ಪೌರತ್ವಕ್ಕೆ ಯಾವುದೇ ಬಾಧೆ ಉಂಟಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಭಾರತ ಧರ್ಮ ಶಾಲೆಯಲ್ಲ:

ರೋಹಿಂಗ್ಯಾ ಮುಸ್ಲಿಮರಿಗೆ ಭಾರತದಲ್ಲಿ ಆಶ್ರಯ ನೀಡಬೇಕು ಎಂಬ ಕೂಗು ಕೇಳಿಬರುತ್ತಿದೆ. ಆದರೆ, ರೋಹಿಂಗ್ಯಾಗಳು ಬರ್ಮಾದಲ್ಲಿ ಇದ್ದೂ ಮಹಮ್ಮದ್‌ ಅಲಿ ಜಿನ್ನಾ ತಮ್ಮ ನಾಯಕ ಎಂದು 1944ರಲ್ಲೇ ಘೋಷಿಸಿಕೊಂಡಿದ್ದರು. ಅಲ್ಲಿನ ಸಂವಿಧಾನ ರಚನಾ ಸಭೆ ನಡೆದಾಗ ನಾವು ಬರ್ಮಾದ ಭಾಗವಾಗಿ ಇರಲು ಬಯಸುವುದಿಲ್ಲ ಎಂದು ಹೇಳಿದ್ದರು. ಆದರೆ, ಇದೀಗ ಪಾಕಿಸ್ತಾನ ಅವರನ್ನು ಒಪ್ಪಿಕೊಳ್ಳಲು ನಿರಾಕರಿಸಿದೆ. ಹೀಗಿರುವಾಗ ಭಾರತ ಯಾಕೆ ಅಶ್ರಯ ನೀಡಬೇಕು ಎಂದು ಪ್ರಶ್ನಿಸಿದರು.

ಅಲ್ಲದೆ, ಚಾಪೆ ಹಿಡಿದು ಬಂದವರಿಗೆಲ್ಲ ಜಾಗ ನೀಡಲು ನಮ್ಮ ದೇಶ ‘ಧರ್ಮ ಶಾಲೆ’ ಅಲ್ಲ. ಇಲ್ಲಿ ಹುಟ್ಟು, ಇಲ್ಲೇ ಬದುಕು-ಬಾಳಿದವರಿಗೆ ಆಶ್ರಯ ನೀಡಲಾಗುತ್ತದೆ ಎಂದರು.

‘ಸಿಎಎ: ಜಾತಿ, ಧರ್ಮಕ್ಕೆ ಸಂಬಂಧಪಟ್ಟಿಲ್ಲ’...

ಇಸ್ಲಾಮ್‌ ಮತ್ತು ಕ್ರಿಶ್ಚಿಯನ್‌ ಆಡಳಿತವಿರುವ ದೇಶಗಳಲ್ಲಿ ಧರ್ಮಗಳು ಬದಲಾಗುತ್ತಿವೆ. ಆದರೆ, ಭಾರತ ದೇಶದಲ್ಲಿ 600 ವರ್ಷಗಳ ಕಾಲ ಮೊಘಲರು ಮತ್ತು 200 ವರ್ಷಗಳ ಕಾಲ ಬ್ರಿಟಿಷರು ಆಡಳಿತ ನಡೆಸಿದ್ದರೂ, ಇಂದಿಗೂ ದೇಶದಲ್ಲಿ ಶೇ.82ರಷ್ಟುಜನ ಹಿಂದೂಗಳಿದ್ದಾರೆ. ಇದಕ್ಕೆ ಹಿಂದೂಗಳ ಹೋರಾಟವೇ ಮುಖ್ಯವಾಗಿತ್ತು ಎಂದು ತಿಳಿಸಿದರು.

'ಬಾಂಗ್ಲಾ ವಲಸಿಗರ ಹೊರಗೆ ಹಾಕ್ತೀವಿ ಅನ್ನೋದು ಸರಿಯಲ್ಲ.

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮಾತನಾಡಿ, ಸಾರ್ವಜನಿಕ ಜೀವನದಲ್ಲಿ ಸತತ ಐದು ದಶಕಗಳ ಕಾಲ ಸೇವೆ ಸಲ್ಲಿಸಿರುವ ಸುಬ್ರಮಣಿಯನ್‌ ಸ್ವಾಮಿಯವರು ಮಹಾ ಮೇಧಾವಿ, ಸೂಕ್ಷ್ಮಮತಿ ಹಾಗೂ ಸಾರ್ವಜನಿಕ ಕಾಳಜಿಯುಳ್ಳ ವಿಶಿಷ್ಟರಾಜಕಾರಣಿ. ಅವರು ಆಡಿದ ಮಾತುಗಳು ಅನೇಕ ಸಂದರ್ಭಗಳಲ್ಲಿ ಕಾನೂನು ಹೋರಾಟದ ಸ್ವರೂಪ ಪಡೆದುಕೊಂಡಿವೆ. ಭ್ರಷ್ಟರಾಜಕಾರಣಿಗಳು ಕಾನೂನಿನಿಂದ ನುಣಚಿಕೊಳ್ಳದಂತೆ ಮಾಡಿದವರು. ಸ್ವದೇಶಿ ಚಿಂತನೆಯ ಪ್ರಬಲ ಪ್ರತಿಪಾದಕರು. ಆಯೋಧ್ಯ ವಿವಾದ ಸುಪ್ರೀಂಕೋರ್ಟ್‌ನಲ್ಲಿ ಸುದೀರ್ಘ ವಿಚಾರಣೆ ನಡೆದು ತಾರ್ಕಿಕ ಅಂತ್ಯ ಕಾಣಲು ಅವರ ಪಾತ್ರ ಮುಖ್ಯವಾಗಿದೆ. ಈಗಿನ ಸನ್ನಿವೇಶದಲ್ಲಿ ಹೊರಗಿನ ಶತ್ರುಗಳು ಮಾತ್ರವಲ್ಲ ಒಳಗಿನ ಶತ್ರುಗಳ ಬಗ್ಗೆ ಎಚ್ಚರಿಕೆ ವಹಿಸಬೇಕಾಗಿದೆ ಎಂದರು.

click me!