ಇಂಜಿನಿಯರ್‌ಗಳ ಕಳ್ಳಾಟದಿಂದಾಗಿ ಸಾವಿರಾರು ಎಕರೆ ಬೆಳೆಹಾನಿ: ಕುಡಿಯಲು ಸಹ ನೀರು ಇಲ್ಲದೆ ರೈತರ ಗೋಳಾಟ!

By Govindaraj S  |  First Published Nov 2, 2023, 9:59 AM IST

ರಾಜ್ಯಾದ್ಯಂತ ಈ ವರ್ಷ ಮುಂಗಾರು ‌ಮಳೆ ಕಡಿಮೆ ಆಗಿದೆ. ಡ್ಯಾಂಗಳಲ್ಲಿಯೂ ನೀರು ಕಡಿಮೆ ಸಂಗ್ರಹಣೆ ಆಗಿದೆ. ಐಸಿಸಿ ಸಭೆ ಮಾಡಿದ ಬಳಿಕ ತುಂಗಭದ್ರಾ ಕಾಲುವೆಗೆ ನೀರು ಹರಿಸಲಾಗುತ್ತಿದೆ. 


ವರದಿ: ಜಗನ್ನಾಥ ಪೂಜಾರ್, ಏಷ್ಯಾನೆಟ್ ಸುವರ್ಣನ್ಯೂಸ್, ರಾಯಚೂರು

ರಾಯಚೂರು (ನ.02): ರಾಜ್ಯಾದ್ಯಂತ ಈ ವರ್ಷ ಮುಂಗಾರು ‌ಮಳೆ ಕಡಿಮೆ ಆಗಿದೆ. ಡ್ಯಾಂಗಳಲ್ಲಿಯೂ ನೀರು ಕಡಿಮೆ ಸಂಗ್ರಹಣೆ ಆಗಿದೆ. ಐಸಿಸಿ ಸಭೆ ಮಾಡಿದ ಬಳಿಕ ತುಂಗಭದ್ರಾ ಕಾಲುವೆಗೆ ನೀರು ಹರಿಸಲಾಗುತ್ತಿದೆ. ತುಂಗಭದ್ರಾ ಎಡದಂಡೆಯ ನೀರು ಎಲ್ಲಿಯೂ ಕಳ್ಳತನವಾಗಬಾರದು ಎಂದು ರಾಯಚೂರು ಜಿಲ್ಲಾಡಳಿತ 144 ಜಾರಿ ಮಾಡಿದೆ. ಜೊತೆಗೆ ಕಾಲುವೆಗಳ ಮೇಲೆ ಟ್ಕಾಸ್ ಫೋರ್ಸ್ ತಂಡ ಕೂಡ ನಿಯೋಜನೆ ಮಾಡಿದೆ. ಆದ್ರೂ ಸಹ ತುಂಗಭದ್ರಾ ಎಡದಂಡೆ ಕಾಲುವೆಯಲ್ಲಿ ನೀರು ಕಳ್ಳತನ ದಂಧೆಯೂ ವ್ಯವಸ್ಥಿತವಾಗಿ ನಡೆದಿದೆ. ಈ ಕಳ್ಳತನ ದಂಧೆಗೆ ಪರೋಕ್ಷವಾಗಿ ನೀರಾವರಿ ಇಲಾಖೆ ಅಧಿಕಾರಿಗಳೇ ಸಾಥ್ ನೀಡಿದ್ದಾರೆ ಎಂಬ ಗಂಭೀರ ಆರೋಪವಿದೆ.

Tap to resize

Latest Videos

ಮತ್ತೊಂದು ಕಡೆ ರಾಯಚೂರು ಜಿಲ್ಲೆಯ 104 ಮೈಲ್‌ ನ ಕಾಲುವೆಗೆ  ಮಾತ್ರ ಕುಡಿಯಲು ಸಹ ನೀರು ಬರುತ್ತಿಲ್ಲ. ತುಂಗಭದ್ರಾ ಎಡದಂಡೆಯ 104 ಕಾಲುವೆ ನೀರು ಹರಿಸಿವೆಂದು ರೈತರು ಕಾಲುವೆ ಬಳಿ ಮತ್ತು ವಿವಿಧೆಡೆ ಹೋರಾಟ‌ ಮುಂದುವರೆಸಿದ್ದಾರೆ. ಆದ್ರೂ ಸಹ ಕಾಲುವೆಗೆ ನೀರು ಬಿಡಲು ನೀರಾವರಿ ಅಧಿಕಾರಿಗಳು ಮುಂದಾಗುತ್ತಿಲ್ಲ. ಕಾಲುವೆ ನೀರು ನಂಬಿ ಬಿತ್ತನೆ ಮಾಡಿದ ಬೆಳೆಗಳು ‌ಕಾಯಿ ಮತ್ತು ಹೂ ಕಟ್ಟಿ ನೀರು ಇಲ್ಲದೆ ಜಮೀನಿನಲ್ಲಿಯೇ ಒಣಗಿ ಹೋಗುತ್ತಿವೆ. ಸಾವಿರಾರು ರೂ. ಖರ್ಚು ಮಾಡಿ ಬೆಳೆದ ಬೆಳೆ ಒಣಗಿ ಹೋಗುವುದು ನೋಡಿದ ರೈತರು ಕಾಲುವೆಗೆ ನೀರು ಕೊಡಿವೆಂದು ಬೀದಿಗೆ ಇಳಿದು ಹೋರಾಟ ಶುರು ಮಾಡಿದ್ದಾರೆ. ಅಲ್ಲದೇ ಸ್ಥಳೀಯ ಜನಪ್ರತಿನಿಧಿಗಳ ಮೇಲೆ ಒತ್ತಡ ಹಾಕಲು ಶುರು ಮಾಡಿದ್ದಾರೆ.

ಕಾಂಗ್ರೆಸ್‌ ಶಾಸಕರಿಗೆ 50 ಕೋಟಿ ನೀಡಲು ಗ್ರಹಚಾರ ಕೆಟ್ಟಿದೆಯಾ?: ಈಶ್ವರಪ್ಪ

ತುಂಗಭದ್ರಾ ಎಡದಂಡೆ ಕಾಲುವೆಯಲ್ಲಿ ಆಗುತ್ತಿರುವುದು ಏನು?: ತುಂಗಭದ್ರಾ ಎಡದಂಡೆ ಕಾಲುವೆಗೆ ಐಸಿಸಿ ಸಭೆಯ ನಿಯಮದ ಪ್ರಕಾರ ಕಾಲುವೆಗೆ 4100 ಕ್ಯೂಸೆಕ್ ನೀರು ಬಿಡುಗಡೆ ಮಾಡುತ್ತಾರೆ. ಈ ವರ್ಷ ಮಳೆಗಾಲ ಕಡಿಮೆ ಆಗಿದ್ದರಿಂದ ತುಂಗಭದ್ರಾ ನದಿಗೂ ಸಹ ನೀರು ಬಿಡದೇ ಕಾಲುವೆಗಳಿಗೆ ಮಾತ್ರ ನೀರು ಬಿಡುಗಡೆ ಮಾಡುತ್ತಿದ್ದಾರೆ. ಕಾಲುವೆಗೆ ಬಿಟ್ಟ ನೀರಿನಲ್ಲಿ ಪಾಚಿಯೂ ಸಹ ನೀರಿನ ಜೊತೆಗೆ ಹೆಚ್ಚಾಗಿ ಬರುತ್ತಿದೆ. ಮತ್ತೊಂದು ಕಡೆ ತುಂಗಭದ್ರಾ ಎಡದಂಡೆಯ ಮೇಲ್ಬಾಗದಲ್ಲಿ ‌ಪೈಪ್ ಗಳು ಹಾಕಿ ರೈತರು ಅಕ್ರಮವಾಗಿ ನೀರಾವರಿ ಬೆಳೆಗಳು ‌ಮಾಡುತ್ತಿದ್ದಾರೆ. ನಿಯಮದ ಹೀಗಾಗಿ 4100 ಕ್ಯೂಸೆಕ್ ‌ನೀರು ಬಿಟ್ಟರೂ ರಾಯಚೂರು ಜಿಲ್ಲೆಗೆ ನೀರು ತಲುಪುವುದರಲ್ಲಿ 400-500 ಕ್ಯೂಸೆಕ್ ನೀರು ಕಳ್ಳತನವಾಗಿರುತ್ತೆ. ಈ ವಿಚಾರ ರಾಯಚೂರು ಜಿಲ್ಲೆಯ ಎಲ್ಲಾ ಶಾಸಕರಿಗೂ ಮತ್ತು ನೀರಾವರಿ ಅಧಿಕಾರಿಗಳು ಗೊತ್ತು. ಇನ್ನುಳಿದ 3600 ಕ್ಯೂಸೆಕ್ ನೀರಿನಲ್ಲಿ ತುಂಗಭದ್ರಾ ಎಡದಂಡೆಯ ಕಾಲುವೆ ಮೈಲ್ 108ರವರೆಗೆ ನೀರು ತಲುಪಿಸಬೇಕು. ಇದು ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ದೊಡ್ಡ ಚಾಲೆಂಜ್ ಆಗಿದೆ. 

ಗೇಜ್ ನಿರ್ವಹಣೆ ಮಾಡುವಲ್ಲಿ ನೀರಾವರಿ ಅಧಿಕಾರಿಗಳು ವಿಫಲ: ತುಂಗಭದ್ರಾ ಎಡದಂಡೆ ಕಾಲುವೆಯಲ್ಲಿ ನೀರು ಕಳ್ಳತನವೆಂಬುವುದು ಸರ್ವೇ ಸಾಮಾನ್ಯವಾಗಿ ಹೋಗಿದೆ. ಇಲ್ಲಿ ಯಾವುದೇ ಆದೇಶಕ್ಕೂ ಕಿಮ್ಮತ್ತು ನೀಡದೇ ನೀರು ಕಳ್ಳತನ ನಡೆಯುತ್ತೆ. ಹೀಗಾಗಿ ಕಾಲುವೆಯಲ್ಲಿ ಗೇಜ್ ನಂತೆ ನೀರು ಕೊಡಲು ಅಸಾಧ್ಯವಾಗಿದೆ. ಮತ್ತೊಂದು ಕಡೆ ಬೆಳೆಯ ಮಾದರಿ(crop patterns) ಕೂಡ ಉಲ್ಲಂಘನೆ ಮಾಡಲಾಗಿದೆ. ಮೇಲ್ಭಾಗದ ಎಲ್ಲಾ ರೈತರು ಸರ್ವೇಸಾಮಾನ್ಯವಾಗಿ ಭತ್ತ ನಾಟಿ ಮಾಡಿದ್ದಾರೆ. ಭತ್ತ ನಾಟಿ ಮಾಡಿ ಮನಬಂದಂತೆ ‌ನೀರು ಬಳಕೆ ಮಾಡುತ್ತಾರೆ. ಇನ್ನೊಂದು ಕಡೆ ಮೇಲ್ಭಾಗದಲ್ಲಿ ನೂರಾರು ಎಕರೆ ಕೆರೆಗಳಿಗೆ ನೀರು ತುಂಬಿಸಿಕೊಳ್ಳುವ ಪದ್ಧತಿಯೂ ಇದೆ. ಕಾಲುವೆಗಳಿಗೆ ಎಷ್ಟೇ ನೀರು ಬಂದ್ರೂ ಮೇಲ್ಭಾಗದವರು ತಾವು ಮಾಡಿಕೊಂಡ ಕೆರೆಗೆ ನೀರು ಹರಿಸಿಕೊಳ್ಳುತ್ತಿದ್ದಾರೆ. ಈ ವಿಚಾರ ಗೊತ್ತಿದ್ರೂ ನೀರಾವರಿ ‌ಅಧಿಕಾರಿಗಳು ಮೌನವಹಿಸಿದ್ದು ಕೆಳಭಾಗದ ರೈತರ ಮತ್ತು ‌ಶಾಸಕರ ಆಕ್ರೋಶಕ್ಕೆ ಕಾರಣವಾಗಿದೆ. 

7 ಗೇಟ್ ಗಳು ಮುರಿದರೂ ನೀರಾವರಿ ಅಧಿಕಾರಿಗಳು ‌ಕೇಸ್ ಮಾಡಲ್ಲ, ದುರಸ್ತಿಯೂ ಮಾಡಿಲ್ಲ: ತುಂಗಭದ್ರಾ ಎಡದಂಡೆಯ ಕಾಲುವೆ ಆರಂಭದಿಂದಲ್ಲೇ ನೀರು ಕಳ್ಳತನ ಶುರುವಾಗುವುದು. ಪ್ರತಿ ವರ್ಷ ಮಳೆಗಾಲ ಇರುವುದರಿಂದ ‌ಕಾಲುವೆ ನೀರಿಗಾಗಿ ಯಾರು ಅಷ್ಟೇ ಎದುರು‌ ನೋಡುತ್ತಿರಲಿಲ್ಲ. ಆದ್ರೆ ಈ ವರ್ಷ ಮಳೆ ಕಡಿಮೆ ಆಗಿದ್ದರಿಂದ ಮೇಲ್ಭಾಗದಿಂದ ಹಿಡಿದು ಕೆಳಭಾಗದವರೆಗೆ ಎಲ್ಲಾ ರೈತರು ಕಾಲುವೆ ನೀರಿನ ಮೇಲೆ ಅವಲಂಬನೆ ಆಗಿದ್ದಾರೆ. ಇಂತಹ ವೇಳೆಯಲ್ಲಿ ಕಾಲುವೆ ನೀರಿನ ಲೆಕ್ಕ ಎಲ್ಲರೂ ‌ಕೇಳುವಂತೆ ಆಗಿದೆ. ರಾಯಚೂರು ಜಿಲ್ಲಾಡಳಿತವೂ ತುಂಗಭದ್ರಾ ಕಾಲುವೆ ಸುತ್ತಮುತ್ತ 144 ಜಾರಿ ಮಾಡಿದ್ರೂ ಸಹ ನೀರಿನ ಕಳ್ಳತನ ವ್ಯವಸ್ಥಿತವಾಗಿ ‌ಆಗುತ್ತಿದೆ. ಇದಕ್ಕೆ ಕಾರಣಗಳು ಹಲವಾರು ಇವೆ. 

ಅದರಲ್ಲಿ ಗೇಟ್ ಗಳು ‌ಮುರಿದು ಹೋಗಿದ್ದು ಒಂದಾಗಿದೆ. ಸಿರವಾರ ವಿಭಾಗದಲ್ಲಿ ‌ಬರುವ ಕಾಲುವೆಯ ಮೈಲ್ 62, 63, 73,74,78, 79 ಗೇಟ್ ಗಳು ಮುರಿದು ಹೋಗಿ ವರ್ಷಗಳೂ ಆಗಿದ್ರೂ ನೀರಾವರಿ ಅಧಿಕಾರಿಗಳು ಕೇರ್ ಮಾಡಿಲ್ಲ. ಇನ್ನೊಂದು ಮೈಲ್ 71ರ ಗೇಟ್ ತುಕ್ಕು ಹಿಡಿದು ಹಾಳಾಗಿ ಹೋಗಿ ಅಲ್ಲಿಯೂ ಗೇಟ್ ಬಂದ್ ಮಾಡಿದ್ರೂ ನೀರು ಹೋಗುತ್ತಿದೆ. ಗೇಟ್ ಗಳ ಬಗ್ಗೆ ನಿಗಾವಹಿಸಬೇಕಾದ ನೀರಾವರಿ ಅಧಿಕಾರಿಗಳು ಕೇರ್ ಮಾಡದೇ ಇರುವುದರಿಂದ ಗೇಟ್ ಗಳ ಬೀಗ ಮುರಿದು ಗೇಟ್ ಗೆ ಲುಂಗಿ ಸುತ್ತಿ ಐದು- ಆರು ಜನರು ಸೇರಿ ಗೇಟ್ ಗಳು ಓಪನ್ ಮಾಡಿರುವ ಹತ್ತಾರು ಘಟನೆಗಳು ‌ನಡೆದಿವೆ.

ಗ್ಯಾಂಗ್ ಮ್ಯಾನ್ ಗಳು ಆಡಿದೇ ಆಟ!: ತುಂಗಭದ್ರಾ ಎಡದಂಡೆ ಕಾಲುವೆಯ ಗೇಟ್ ಗಳ ನಿರ್ವಹಣೆ ‌ಮಾಡಿ ರೈತರಿಗೆ ನೀರು ತಲುಪಿಸುವುದು ನೀರಾವರಿ ಇಲಾಖೆಯ ಅಧಿಕಾರಿಗಳ ಕರ್ತವ್ಯ. ಆದ್ರೆ ನೀರಾವರಿ ಇಲಾಖೆಯಲ್ಲಿ ಇಂಜಿನಿಯರ್ ಹಾಗು ಸಿಬ್ಬಂದಿ ಕೊರತೆ ಇದೆ. ಹೀಗಾಗಿ ಸರ್ಕಾರ ಗುತ್ತಿಗೆ ಆಧಾರದ ಮೇಲೆ ಕಾಲುವೆಯಲ್ಲಿನ ಗೇಟ್ ಗಳ ನಿರ್ವಹಣೆ ಮಾಡಲು ಗ್ಯಾಂಗ್ ಮ್ಯಾನ್ ಗಳನ್ನ ನೇಮಕ ಮಾಡಿದೆ. ಆ ಗ್ಯಾಂಗ್ ಮ್ಯಾನ್ ಗಳು ಚಿಲ್ಲರೆ ಆಸೆಗೆ ಬಲಿಯಾಗಿ  ನೀರಿನ ನಿರ್ವಹಣೆ ಮಾಡದೇ ಮನಬಂದಂತೆ ತಮಗೆ ಬೇಕಾದವರ ಕಡೆಗೆ ಗೇಟ್ ಗಳು ಓಪನ್‌ ಮಾಡಿ ಬಿಡುತ್ತಾರೆ. ಈ ವಿಚಾರ ಗೊತ್ತು ಇದ್ರೂ ನೀರಾವರಿ ಅಧಿಕಾರಿಗಳು ಯಾವುದೇ ‌ಕ್ರಮ ಜರುಗಿಸಲ್ಲ. ಆ ಕುರಿತಂತೆ ಹತ್ತಾರು ಆರೋಪಗಳು ನೀರಾವರಿ ಅಧಿಕಾರಿಗಳ ಮೇಲೆ ಇದೆ. ಅಲ್ಲದೇ ನೀರಾವರಿ ಅಧಿಕಾರಿಗಳು ಗೇಟ್ ಬಂದ್ ಮಾಡಲು ಹೇಳಿ ಹೋದ್ರೂ ಗ್ಯಾಂಗ್ ಮ್ಯಾನ್ ಗಳೂ ಆ ತಕ್ಷಣಕ್ಕೆ ಮಾತ್ರ ಬಂದ್ ಮಾಡಿ ಮತ್ತೆ ಓಪನ್‌ ‌ಮಾಡುವ ರೂಢಿ ಮಾಡಿಕೊಂಡಿದ್ದಾರೆ. ಇದರಿಂದಾಗಿ ಕೆಳಭಾಗಕ್ಕೆ ನೀರೇ ಹೋಗದ ಪರಿಸ್ಥಿತಿ ಇದೆ.

ಬೆಳೆ ಒಣಗಿ ಹೋಗುತ್ತಿದ್ರೂ ಜಿಲ್ಲಾ ಉಸ್ತುವಾರಿ ಸಚಿವರು ಏನು ಹೇಳಿದ್ದಾರೆ ಗೊತ್ತಾ?: ರಾಯಚೂರು ಮತ್ತು ಸಿರವಾರ ತಾಲೂಕಿನ ಜನರು ನೀರಿಗಾಗಿ 7ಮೈಲ್ ಕ್ರಾಸ್ ಬಳಿ ರಸ್ತೆತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ರೈತರ ಹೋರಾಟದ ಬಿಸಿ ದಿನೇ ದಿನೇ ಹೆಚ್ಚಾಗುತ್ತಿದೆ. ಕಾಲುವೆ ‌ನೀರು ನಂಬಿ ರೈತರು ಬೆಳೆಗೆ ಸಾವಿರಾರು ರೂಪಾಯಿ ಖರ್ಚು ಮಾಡಿ ಕಂಗಾಲಾಗಿದ್ದಾರೆ. ಮೆಣಸಿನಕಾಯಿ ಹೂ ಮತ್ತು ಕಾಯಿ ಆಗುತ್ತಿದೆ. ಹತ್ತಿ ಕಾಯಿ ಆಗಿ ಅರಳುವ ಸಮಯ, ಭತ್ತ ತೆನೆ ಕಟ್ಟುವ ವೇಳೆ ಇಂತಹ ವೇಳೆಯಲ್ಲಿ ಕೆಳಭಾಗದ ಕಾಲುವೆ ನೀರೇ ಬರುತ್ತಿಲ್ಲ. ಇದರಿಂದಾಗಿ ರೈತರಿಗೆ ದಿಕ್ಕೇ ತೋಚದಂತ ಪರಿಸ್ಥಿತಿ ಬಂದಿದೆ. 

ಮತ್ತೊಂದು ಕಡೆ ರಾಯಚೂರು, ಮಾನ್ವಿ ಮತ್ತು ಸಿರವಾರ ತಾಲೂಕಿನ ಬಹುತೇಕ ಹಳ್ಳಿಗಳಿಗೆ ಕುಡಿಯಲು ಕಾಲುವೆ ನೀರೇ ಆಧಾರವಾಗಿದೆ. ಈಗ ಕಾಲುವೆಗೆ ನೀರು ಬರದೇ ಇರುವುದರಿಂದ 30-33 ಹಳ್ಳಿಗಳಲ್ಲಿ ಕೆಲದಿನಗಳಲ್ಲಿ ಹನಿ ನೀರಿಗೂ ಪರದಾಟ ನಡೆಸುವ ಪರಿಸ್ಥಿತಿ ಬರಬಹುದು. ಹೀಗಾಗಿ ಜಿಲ್ಲಾಡಳಿತ ತೀವ್ರ ನಿಗಾವಹಿಸಿ ದೇವದುರ್ಗ ತಾಲೂಕಿನ ಬಿ.ಆರ್. ಗಣೇಕಲ್ ಬಳಿ ಇರುವ ಬಂಗಾರಪ್ಪ ಕೆರೆ ತುಂಬಿಸಲು ಮುಂದಾಗಿದೆ. ಸದ್ಯ ರಾಯಚೂರು ಜಿಲ್ಲೆ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ್ ‌ಪಾಟೀಲ್ ಅವರು ಹೇಳುವ ಪ್ರಕಾರ ನಾವು ಈಗಾಗಲೇ ಬಂಗಾರಪ್ಪ ಕೆರೆಗೆ 11 ಫೀಟ್ ನೀರು ತುಂಬಿದ್ದೇವೆ. ನಾನು ಜಿಲ್ಲಾಧಿಕಾರಿ ಮತ್ತು ಎಸ್ ಪಿ ಜೊತೆಗೆ ಮಾತನಾಡಿದ್ದೇನೆ. 

ದಲಿತ ಸಿಎಂ ಬಗ್ಗೆ ಚರ್ಚೆಯೇ ನಡೆದಿಲ್ಲ: ವಿಶೇಷ ಸಂದರ್ಶನದಲ್ಲಿ ಸಚಿವ ಮಹದೇವಪ್ಪ ಹೇಳಿದ್ದೇನು?

ಇನ್ನೂ ಮೂರು ದಿನಗಳಲ್ಲಿ ಕೆರೆಯಲ್ಲಿ ‌15 ಫೀಟ್ ನೀರು ಆಗುವಂತೆ ನೋಡಿಕೊಳ್ಳುತ್ತೇವೆ. ಆ ಬಂಗಾರಪ್ಪ ಕೆರೆ ತುಂಬುತ್ತೇ, ಆ ಬಳಿಕ ಕೆಳಭಾಗದ ರೈತರಿಗೆ ನೀರು ಕೊಡುತ್ತೇವೆ. ಇದು ಪ್ರತಿವರ್ಷ ಇರುತ್ತೇ.ನಾವು ಹರಸಾಹಸ ಮಾಡಿ ನೀರು ತುಂಬಿಸುತ್ತೇವೆ.  ಕೆಳಭಾಗದ ರೈತರಿಗೆ ಯಾವಾಗಲೂ ನೀರು ಕೊಡುತ್ತೇವೆ. ಈ ಬಾರಿಯೂ ನೀರು ಬರುತ್ತೆ ಎಂದು ರಾಯಚೂರು ಜಿಲ್ಲೆ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಭರವಸೆ ನೀಡಿದ್ರು. ಒಟ್ಟಾರೆ ರಾಯಚೂರು ಜಿಲ್ಲೆಯಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗಿ ಕಾಲುವೆಯಲ್ಲಿ ‌ನೀರು ಇಲ್ಲದಕ್ಕೆ ಬೆಳೆ ಒಣಗಿ ಹೋಗುತ್ತಿದೆ. ಕೂಡಲೇ ಕಾಲುವೆಗೆ ನೀರು ಬಿಟ್ಟು ಬಾಡಿ ಹೋಗುವ ಬೆಳೆಗಳನ್ನ ಜಿಲ್ಲಾಡಳಿತ ಉಳಿಸಬೇಕಾಗಿದೆ.

click me!