
ಶಿವಮೊಗ್ಗದಲ್ಲಿ ಬೆಳಕಿಗೆ ಬಂದಿರುವ ಜ್ಯೋತಿಷಿ ಕಮಲಾಕರ್ ಭಟ್ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವುಗಳನ್ನು ಪಡೆಯುತ್ತಿದ್ದು, ತನಿಖೆ ಮುಂದುವರಿದಂತೆ ಹಲವು ಆಘಾತಕಾರಿ ಅಂಶಗಳು ಬಹಿರಂಗವಾಗುತ್ತಿವೆ. ಈ ಪ್ರಕರಣದಲ್ಲಿ ಜ್ಯೋತಿಷಿ ಕಮಲಾಕರ್ ಭಟ್ ಮತ್ತು ಸುಚಿತ್ರಾ ನಡುವೆ ಇದ್ದ ಸಂಬಂಧ, ಅವರ ಜೀವನ ಶೈಲಿ ಹಾಗೂ ಹಣಕಾಸು ವ್ಯವಹಾರಗಳು ಇದೀಗ ಚರ್ಚೆಯ ಕೇಂದ್ರಬಿಂದುವಾಗಿವೆ. ಐಷಾರಾಮಿ ಜೀವನ, ರೀಲ್ಸ್ ಹುಚ್ಚಿಗೆ ಬಿದ್ದಿದ್ದ ಸುಚಿತ್ರಾ ಗಂಡ ಮಕ್ಕಳನ್ನು ಬಿಟ್ಟು ಬಂದು ಕಮಲಾಕರ ಭಟ್ ಜೊತೆಗೆ ಪತ್ನಿಯಂತೆಯೇ ಆರಾಮ ಜೀವನ ನಡೆಸುತ್ತಿದ್ದಳು.
ಜ್ಯೋತಿಷಿ ಕಮಲಾಕರ್ ಭಟ್ ಶಿವಮೊಗ್ಗ ನಗರದ ಪಂಪನಗರದಲ್ಲಿ ಸುಚಿತ್ರಾ ಜೊತೆ ಬಾಡಿಗೆ ಮನೆಯನ್ನು ಮಾಡಿಕೊಂಡು ವಾಸವಾಗಿದ್ದನು. ಕಳೆದ ಹಲವು ತಿಂಗಳಿನಿಂದ ಈ ಮನೆ ಅವರಿಬ್ಬರ ಐಷಾರಾಮಿ ಜೀವನಕ್ಕೆ ಸಾಕ್ಷಿಯಾಗಿತ್ತು ಎನ್ನಲಾಗುತ್ತಿದೆ. ಪಂಪನಗರದ ಈ ಮನೆಯಲ್ಲಿ ಸುಚಿತ್ರಾ ಮತ್ತು ಕಮಲಾಕರ್ ಭಟ್ ಪತಿ–ಪತ್ನಿಯರಂತೆ ವಾಸವಾಗಿದ್ದರು.
ಸುಚಿತ್ರಾಳ ಮೇಲೆ ಅಪಾರ ಪ್ರೀತಿ ಹಾಗೂ ನಂಬಿಕೆ ಹೊಂದಿದ್ದ ಜ್ಯೋತಿಷಿ ಕಮಲಾಕರ್ ಭಟ್, ಆಕೆಗೆ ಹಲವು ದುಬಾರಿ ಉಡುಗೊರೆಗಳನ್ನು ನೀಡಿದ್ದಾನೆ. ಕಾರು, ಎನ್‌ಫೀಲ್ಡ್ ಬೈಕ್ ಹಾಗೂ ಥಾರ್ ಕಾರು ಸೇರಿದಂತೆ ಹಲವು ಐಷಾರಾಮಿ ವಾಹನಗಳನ್ನು ಸುಚಿತ್ರಾಳಿಗೆ ಗಿಫ್ಟ್ ರೂಪದಲ್ಲಿ ನೀಡಿರುವುದು ಇದೀಗ ಬೆಳಕಿಗೆ ಬಂದಿದೆ. ಈ ಉಡುಗೊರೆಗಳು ಅವರಿಬ್ಬರ ನಡುವಿನ ನಿಕಟ ಸಂಬಂಧದ ಆಳವನ್ನು ತೋರಿಸುತ್ತವೆ. ಇದರ ಜೊತೆಗೆ ಕಮಲಾಕರ್ ಭಟ್ 10 ಎಕರೆ ಭೂಮಿ ಕೂಡ ಖರೀದಿಸಿದ್ದ, ಸುಚಿತ್ರಾಳ ಹೆಸರಲ್ಲಿ ತೆಗೆದಿದ್ದನಾ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ.
ಸುಚಿತ್ರಾ, ಕಮಲಾಕರ್ ಭಟ್ ಜೊತೆ ಐಷಾರಾಮಿ ಜೀವನ ನಡೆಸುತ್ತಿದ್ದಳು ಎನ್ನುವುದು ತನಿಖೆಯಿಂದ ದೃಢವಾಗಿದೆ. ದುಬಾರಿ ವಾಹನಗಳು, ಆರಾಮದಾಯಕ ವಾಸ, ವೈಭವದ ದಿನಚರಿ ಎಲ್ಲವೂ ಆಕೆಯ ಜೀವನ ಶೈಲಿಯ ಭಾಗವಾಗಿತ್ತು. ಈ ಐಷಾರಾಮಿ ಬದುಕಿಗೆ ಮೂಲವಾದ ಹಣಕಾಸಿನ ಹರಿವುಗಳ ಕುರಿತು ಆಕೆಗೆ ಜ್ಯೋತಿಷಿ ಭಟ್ಟನಿಂದಲೇ ಸಿಗುತ್ತಿತ್ತು.
ಇನ್ನು ಮಹತ್ವದ ಸಂಗತಿಯೆಂದರೆ, ಜ್ಯೋತಿಷಿ ಕಮಲಾಕರ್ ಭಟ್ ನಡೆಸುತ್ತಿದ್ದ ‘ಕನಸು ಎಂಟರ್ಪ್ರೈಸಸ್’ ಎಂಬ ಹೆಸರಿನ ಕಾಲ್ ಸೆಂಟರ್ (ಬಿಪಿಒ) ಸಂಸ್ಥೆಯ ಜವಾಬ್ದಾರಿಯನ್ನು ಸುಚಿತ್ರಾಳೇ ವಹಿಸಿಕೊಂಡಿದ್ದಳು . ದಿನನಿತ್ಯದ ಕಾರ್ಯಾಚರಣೆ, ಸಿಬ್ಬಂದಿ ನಿರ್ವಹಣೆ ಹಾಗೂ ಹಣಕಾಸು ವ್ಯವಹಾರಗಳಲ್ಲಿ ಸುಚಿತ್ರಾಳ ಪಾತ್ರ ಪ್ರಮುಖವಾಗಿತ್ತು ಎಂದು ವರದಿ ತಿಳಿಸಿದೆ.