ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು
ಚಿಕ್ಕಮಗಳೂರು(ಜ.23) : ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವಾಗಲೇ ರಸ್ತೆ ಸೇರಿದಂತೆ ಮೂಲಭೂತ ಸೌಲಭ್ಯ ಕಲ್ಪಿಸಲು ಮುಂದಾಗದಿರುವುದರಿಂದ ಈಗಾಗಲೇ ಕೆಲವು ಗ್ರಾಮಗಳು ಚುನಾವಣೆ ಬಹಿಷ್ಕರಿಸಲು ಮುಂದಾಗಿವೆ.
ಅಭಿವೃದ್ದಿ ಕಾರ್ಯಗಳಲ್ಲಿ ವಿಳಂಬ ಧೋರಣೆ ಸೇರಿದಂತೆ ಮೂಲಭೂತ ಸೌಲಭ್ಯಕ್ಕಾಗಿ ಗ್ರಾಮದ ಮುಂದೆ ಬಹಿಷ್ಕಾರದ ಬ್ಯಾನರ್ ಹಾಕಿ ಜನರು ಆಕ್ರೋಶ ಹೊರಹಾಕಿದ್ದಾರೆ. ರಸ್ತೆ ಕಾಮಗಾರಿಗೆ ಅನುದಾನ ಬಿಡುಗಡೆಯಾಗಿದ್ದರೂ ರಸ್ತೆ ಕಾಮಗಾರಿ ಪ್ರಾರಂಭಿಸಲು ಮೀನಾಮೇಷ ಎಣಿಸುತ್ತಿರುವುದನ್ನು ಖಂಡಿಸಿ ಗ್ರಾಮಸ್ಥರು ಚುನಾವಣೆ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ.
ನನ್ನನ್ನು ಟೀಕಿಸಿದ್ರೆ ಜನ ಕಾಂಗ್ರೆಸ್‌ಗೆ ಓಟ್ ಹಾಕೋದಿಲ್ಲ: ಸಿ.ಟಿ.ರವಿ
ಚಿಕ್ಕಮಗಳೂರು ಜಿಲ್ಲೆಯ, ಕಳಸ ತಾಲ್ಲೂಕಿನ ಶಂಕರಕೂಡಿಗೆ ಗ್ರಾಮಸ್ಥರ ನಿರ್ಧಾರ ಮಾಡಿದ್ದಾರೆ. ಶಂಕರಕೂಡಿಗೆ ರಸ್ತೆಗೆ ಕಾಂಕ್ರೀಟ್ ಹಾಕಲು ಸರ್ಕಾರದಿಂದ 70 ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ. ಆದರೆ ಗುತ್ತಿಗೆದಾರರು ರಸ್ತೆಯನ್ನು ಅಗೆದು ಹಾಕಿದ್ದು, ತಿಂಗಳುಗಳೇ ಕಳೆದರೂ ಇತ್ತ ತಲೆಹಾಕಿಲ್ಲ. ಗ್ರಾಮಸ್ಥರು ಅಗೆದುಹಾಕಿರುವ ರಸ್ತೆಯಲ್ಲಿ ಸಂಚರಿಸಲು ಸಾಧ್ಯವಾಗದೇ ಪರಿತಪಿಸುತ್ತಿದ್ದಾರೆ. ವಾಹನ ಚಾಲಕರ ಗೋಳು ಹೇಳತೀರದಾಗಿದೆ. ಎಷ್ಟೇ ಮನವಿ ಮಾಡಿದರು ಸ್ಪಂದನೆ ಸಿಗದ ಕಾರಣ ಇದೀಗ ಗ್ರಾಮಸ್ಥರು ಹೋರಾಟದ ಹಾದಿ ಹಿಡಿದಿದ್ದಾರೆ.
ಊರಿನ ಪ್ರವೇಶದ್ವಾರದಲ್ಲಿ ಬ್ಯಾನರ್ ಅಳವಡಿಸಿ ಚುನಾವಣೆ ಬಹಿಷ್ಕಾರದ ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ ತನುಡಿ ಗ್ರಾಮ ಶಂಕರಕುಡಿಗೆಯ ಬಸರಿಕಟ್ಟೆಯಿಂದ ಶಂಕರ್‌ಕುಡಿಗೆ ರಸ್ತೆ, ದುರಸ್ತಿಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಪ್ರತಿಭಟನಾ ಸ್ಥಳದಲ್ಲಿ ಚುನಾವಣಾ ಬಹಿಷ್ಕಾರದ ಬ್ಯಾನರ್ ಅಳವಡಿಸಿದ್ದ ಮುಷ್ಕರ ನಿರತರು, ನಡೆದಾಡಲು ಆಗದ ಸ್ಥಿತಿಗೆ ತಲುಪಿದ ರಸ್ತೆಯನ್ನು ಕೂಡಲೆ ದುರಸ್ತಿಗೂಳಿಸಬೇಕು, ಮೂಡಿಗೆರೆ ಶಾಸಕರ ಹಾಗೂ ಜಿಲ್ಲಾ ಪಂಚಾಯಿತಿಗಳ ಅಸಹಕಾರದಿಂದ ಕಾಮಗಾರಿ ಆರಂಭವಾಗದೆ ರೋಗಿಗಳು ಶಾಲಾ ಮಕ್ಕಳು ನಿತ್ಯವೂ ಬಸರಿಕಟ್ಟೆಗೆ ಬಂದು ಹೋಗಲು ಕಷ್ಟವಾಗುತ್ತಿದೆ ಎಂದು ಕಿಡಿಕಾರಿದರು.
ಬೆತ್ತಲಕೊಳಲು ಗ್ರಾಮದಲ್ಲೂ ಬಹಿಷ್ಕಾರ ಬ್ಯಾನರ್
ಚುನಾಯಿತ ಪ್ರತಿನಿಧಿಗಳು ಹಾಗೂ ಆಡಳಿತದಲ್ಲಿರುವ ಸರ್ಕಾರಗಳು ಜನರ ಮೂಲಭೂತ ಸೌಕರ್ಯವನ್ನು ನಿರ್ಲಕ್ಷಿಸುತ್ತಿದ್ದು, ಈ ಬಾರಿ ಮತ್ತೆ ಅನೇಕ ಗ್ರಾಮಗಳಲ್ಲಿ ಚುನಾವಣಾ ಬಹಿಷ್ಕಾರ ಮಾಡುತ್ತಿದ್ದಾರೆ. ಕೊಪ್ಪ ತಾಲೂಕು ಮೇಗುಂದಾ ಹೋಬಳಿ ಅತ್ತಿಕುಡಿಗೆ ಗ್ರಾಮ ಪಂಚಾಯಿತಿಯ ಬೆತ್ತದಕೊಳಲು ಹಾಗೂ ದೊಡ್ಡಬಿಳಾಲು ಗ್ರಾಮಸ್ಥರು ಮುಂದಿನ ಚುನಾವಣೆ ಬಹಿಷ್ಕರಿಸಿ ಊರಿನಲ್ಲಿ ಬ್ಯಾನರ್ ಹಾಕಿದ್ದಾರೆ.
ಮೂಲಭೂತ ಸೌಕರ್ಯಗಳಾದ ರಸ್ತೆಯು ಅನೇಕ ವರ್ಷಗಳಿಂದ ಹಾಳಾಗಿದ್ದು, ಅಂದಿನಿಂದ ಇಂದಿನವರೆಗೂ ಎಲ್ಲಾ ಚುನಾಯಿತ ಪ್ರತಿನಿಧಿಗಳಿಗೆ ತಿಳಿಸಿದ್ದರೂ ಯಾರು ಇದರ ಬಗ್ಗೆ ಗಮನ ಹರಿಸದಿದ್ದ ಕಾರಣ ಈ ಬಾರಿಯ ಚುನಾವಣೆಯನ್ನು ಬಹಿಷ್ಕರಿಸುತ್ತಿದ್ದೇವೆಂದು ಗ್ರಾಮಸ್ಥರು ತಿಳಿಸಿದ್ದಾರೆ.
ನಾನು ನಿಮ್ಮವನೆ ನನಗೂ ಒಂದು ಚಾನ್ಸ್ ಕೊಡಿ: ಡಿ.ಕೆ. ಶಿವಕುಮಾರ್
ಬೆತ್ತದಕೊಳಲು ವ್ಯಾಪ್ತಿಯ ಬಿಜೆಪಿ ಬೆಂಬಲಿತ ಅಭ್ಯರ್ಥಿ ಎರಡು ಬಾರಿ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಜಯಗಳಿಸಿದ್ದು, ಮೊದಲ ಅವಧಿಯಲ್ಲಿ ಅತ್ತಿಕುಡಿಗೆ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿ, ಎರಡನೇ ಅವಧಿಯಲ್ಲಿ ಉಪಾಧ್ಯಕ್ಷರಾಗಿ ಅಧಿಕಾರ ಹೊಂದಿದ್ದು, ತಮ್ಮ ಊರಿನ ಅಭಿವೃದ್ಧಿ ಬಗ್ಗೆ ಗಮನಹರಿಸದೆ ಇರುವುದು ದುರದೃಷ್ಟಕರವಾಗಿದೆ ಎಂದು ಜನರು ಆರೋಪಿಸಿದ್ದಾರೆ