ಚಿಕ್ಕಮಗಳೂರು/ಶಿವಮೊಗ್ಗ (ನ.16) : ‘ನನ್ನನ್ನು ಮತ್ತೆ ಸಿಎಂ ಮಾಡಬೇಕು, ಕಾಂಗ್ರೆಸ್‌ಗೆ ಮತ ಹಾಕಿ’ ಎಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಆದರೆ, ಸಿದ್ರಾಮಣ್ಣ ಅವರು ಮುಂದಿನ ಸಿಎಂ ಆಗಲು ಜನರ ಬೆಂಬಲ ಕೇಳುವುದಕ್ಕೂ ಮೊದಲು, ಡಿಕೆಶಿಯವರ ಬೆಂಬಲ ಕೇಳಲಿ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಕುಟುಕಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಕಡೂರು, ತರೀಕೆರೆ ಹಾಗೂ ಶಿವಮೊಗ್ಗ ಜಿಲ್ಲೆಯ ಆನವಟ್ಟಿಯಲ್ಲಿ ಮಂಗಳವಾರ ನಡೆದ ಬಿಜೆಪಿಯ ಜನ ಸಂಕಲ್ಪಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯ ವಿರುದ್ಧ ಟೀಕಾಪ್ರಹಾರ ನಡೆಸಿದರು. ಸಿದ್ದರಾಮುಯ್ಯನವರು ಹೋದ ಕಡೆಯಲ್ಲೆಲ್ಲಾ ‘ನನ್ನನ್ನು ಸಿಎಂ ಮಾಡಬೇಕು, ಕಾಂಗ್ರೆಸ್‌ಗೆ ಮತ ಹಾಕಿ’ ಎನ್ನುತ್ತಿದ್ದಾರೆ. ಆದರೆ, ಸಿದ್ದು ಅವರನ್ನು ಸಿಎಂ ಮಾಡಲು ಡಿಕೆಶಿಯವರು ಒಪ್ಪೋದಿಲ್ಲ. ಹೀಗಾಗಿ, ಸಿದ್ರಾಮಣ್ಣನವರು ಮೊದಲು ಡಿಕೆಶಿಯವರ ಬೆಂಬಲ ತೆಗೆದುಕೊಳ್ಳಬೇಕು ಎಂದು ವ್ಯಂಗ್ಯವಾಡಿದರು. ಸಿದ್ರಾಮಣ್ಣಗೆ ಮನಸ್ಸು ಇಲ್ಲ, ಮಾರ್ಗವೂ ಇಲ್ಲ. ಅವರದು ಹಳದಿ ಕಣ್ಣು, ಅವರು ಆತ್ಮವಂಚನೆಯ ಭಾಷಣ ಮಾಡುತ್ತಾರೆ ಎಂದು ಆರೋಪಿಸಿದರು.
BJP Janasankalpa Yatre: ಸಿಎಂ ನೇತೃತ್ವದಲ್ಲಿ ಕಡೂರು ತಾಲೂಕಿನಲ್ಲಿ ಜನ ಸಂಕಲ್ಪ ಸಮಾವೇಶ
ಸಿದ್ದರಾಮಯ್ಯನವರು 5 ವರ್ಷ ಮುಖ್ಯಮಂತ್ರಿ ಆಗಿದ್ದರು. ಆಗ ಅವರಿಗೆ ಕುರಿ, ಕುರಿಗಾಹಿಯ ನೆನಪೇ ಆಗಲಿಲ್ಲ. ಆದರೆ, ನಮ್ಮ ಬಿಜೆಪಿ ಸರ್ಕಾರ 20 ಕುರಿ, 1 ಮೇಕೆ ನೀಡುವ ಯೋಜನೆಗೆ ಅನುಮೋದನೆ ನೀಡಿದೆ. ಆ ಮೂಲಕ ಕುರಿಮಾಂಸವನ್ನು ವಿದೇಶಕ್ಕೆ ರಫ್ತು ಮಾಡುವ ಉದ್ದೇಶ ಹೊಂದಿದ್ದೇವೆ ಎಂದರು. ರಾಜ್ಯದಲ್ಲಿ ಬಿಜೆಪಿಯ ಸುನಾಮಿ ಎದ್ದಿದೆ. ನಿಮ್ಮೆಲ್ಲರ ಆಶೀರ್ವಾದದಿಂದ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರುತ್ತೇವೆ. ಜನಸ್ಪಂದನೆಯ ಸರ್ಕಾರ ಬರುವುದಕ್ಕೆ ನಿಮ್ಮೆಲ್ಲರ ಸಹಕಾರ ಬೇಕು ಎಂದರು.
ಕಾಂಗ್ರೆಸ್ ಮುಳುಗುವ ಹಡಗು: ಯಡಿಯೂರಪ್ಪ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಮಾತನಾಡಿ, ಕಾಂಗ್ರೆಸ್ ಮುಳುಗುವ ಹಡಗು. ಕಾಂಗ್ರೆಸ್ ಪಕ್ಷ ದೇಶದಲ್ಲಿ ಅಸ್ತಿತ್ವ ಕಳೆದುಕೊಂಡಿದೆ ಎಂದು ಟೀಕಿಸಿದರು.
ರಾಹುಲ್ ಗಾಂಧಿಯವರು ಭಾರತ್ ಜೋಡೋ ಯಾತ್ರೆ ಮಾಡುತ್ತಿದ್ದಾರೆ. ಕಾಂಗ್ರೆಸ್‌ನಲ್ಲಿ ನಾಯಕರು ಯಾರು? ರಾಹುಲ್ ಗಾಂಧಿನಾ?. ಈ ದೇಶದಲ್ಲಿ ನರೇಂದ್ರ ಮೋದಿ ಎದುರು ಯಾರೂ ನಾಯಕರಿಲ್ಲ. ಹಣ, ಹೆಂಡ, ಜಾತಿ, ತೋಳ್ಬಲದಿಂದ ಚುನಾವಣೆಯಲ್ಲಿ ಗೆಲ್ಲಬಹುದು ಎಂಬ ಭ್ರಮೆ ಈಗ ಉಳಿದಿಲ್ಲ. ಕಾಂಗ್ರೆಸ್‌ನ ನಾಯಕರು ತಬ್ಬಲಿಗಳಂತೆ ಅಲೆಯುತ್ತಿದ್ದಾರೆ. ಇಡೀ ದೇಶದಲ್ಲಿ 2 ರಾಜ್ಯಗಳಲ್ಲಿ ಮಾತ್ರ ಕಾಂಗ್ರೆಸ್ ಇದೆ. ಮುಂದೆ ಆ ರಾಜ್ಯಗಳಲ್ಲಿಯೂ ಕಾಂಗ್ರೆಸ್‌ನವರು ಮನೆ ಸೇರಿಕೊಳ್ಳಲಿದ್ದಾರೆ ಎಂದರು.
ಸಿದ್ದುಗೆ ಪಾಕಿಸ್ತಾನ ಸೇಫ್ ಜಾಗ: ಸಿ.ಟಿ.ರವಿ
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮಾತನಾಡಿ, ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಪಾಕಿಸ್ತಾನ ಸೇಫ್ ಜಾಗ. ಕರ್ನಾಟಕದಲ್ಲಿ ಮಾತ್ರವಲ್ಲ, ಭಾರತದಲ್ಲೇ ಚುನಾವಣೆಯಲ್ಲಿ ಸ್ಪರ್ಧಿಸಲು ಅವರಿಗೆ ಜಾಗ ಇಲ್ಲ. ಇವರ ಬಂಡವಾಳ ಪಾಕಿಸ್ತಾನದವರಿಗೆ ಗೊತ್ತಾದ್ರೆ ಅಲ್ಲೂ ಅವರು ಡಿಪಾಜಿಟ್ ಕಳೆದುಕೊಳ್ಳುತ್ತಾರೆ ಎಂದು ವ್ಯಂಗ್ಯವಾಡಿದರು.
ರಾಜಕಾರಣಕ್ಕಾಗಿ ಧರ್ಮ ನಿಂದಿಸುವ ಕೀಳುಮಟ್ಟಕ್ಕಿದ ಕಾಂಗ್ರೆಸ್: ಸಿಎಂ ಬೊಮ್ಮಾಯಿ
ಕಾಂಗ್ರೆಸ್‌ನ ಕ್ಯಾಪ್ಟನ್‌ಗೆ ಎಲ್ಲಿ ನಿಲ್ಲಬೇಕು ಎಂಬುದೇ ಗೊತ್ತಿಲ್ಲ. ಈ ಕಾರಣಕ್ಕಾಗಿಯೇ ಅವರು ಓಲೈಕೆ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್, ತರೀಕೆರೆ ಶಾಸಕ ಡಿ.ಎಸ್. ಸುರೇಶ್, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸಿಎಂ ರಾಜಕೀಯ ಕಾರ್ಯದರ್ಶಿ ಡಿ.ಎನ್.ಜೀವರಾಜ್ ಹಾಗೂ ಇತರ ನಾಯಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.