* ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ ಹುಟ್ಟೂರು ವಿಶ್ವದರ್ಜೆಯ ಪಾರಂಪರಿಕ ತಾಣ
* ಬಾನಂದೂರು ಗ್ರಾಮವನ್ನು ವಿಶ್ವದರ್ಜೆಯ ಪಾರಂಪರಿಕ ತಾಣವನ್ನಾಗಿ ಅಭಿವೃದ್ಧಿಪಡಿಸುವ ಯೋಜನೆಗೆ ಚಾಲನೆ
* ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರಿಂದ ಅವರು ಯೋಜನೆಗೆ ಭೂಮಿಪೂಜೆ
ರಾಮನಗರ, (ಜು.19): ಆದಿಚುಂಚಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷರಾಗಿದ್ದ ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ ಹುಟ್ಟೂರು ಬಾನಂದೂರು ಗ್ರಾಮವನ್ನು ವಿಶ್ವದರ್ಜೆಯ ಪಾರಂಪರಿಕ ತಾಣವನ್ನಾಗಿ ಅಭಿವೃದ್ಧಿಪಡಿಸುವ ಯೋಜನೆಗೆ ಸೋಮವಾರ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು.
ಬಾನಂದೂರು ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶ್ರೀ ನಿರ್ಮಲಾನಂದ ನಾಥ ಮಹಾಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ, ಅರಣ್ಯ ಮತ್ತು ಕನ್ನಡ-ಸಂಸ್ಕೃತಿ ಖಾತೆ ಸಚಿವ ಅರವಿಂದ ಲಿಂಬಾವಳಿ ಅವರು ಯೋಜನೆಗೆ ಭೂಮಿಪೂಜೆ ನೆರೆವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಉಪ ಮುಖ್ಯಮಂತ್ರಿಗಳು, "ಈ ಯೋಜನೆಯನ್ನು ಕಾರ್ಯಗತ ಮಾಡಲಿರುವ ಖಾಸಗಿ ಸಂಸ್ಥೆಯು 125 ಕೋಟಿ ರೂ. ವೆಚ್ಚದ ಸಮಗ್ರ ಯೋಜನಾ ವರದಿಯನ್ನು (ಡಿಪಿಆರ್) ತಯಾರಿಸಿದೆ. ಸರಕಾರ 2019-20ನೇ ಸಾಲಿನ ಮುಂಗಡ ಪತ್ರದಲ್ಲಿ ಈ ಯೋಜನೆಯನ್ನು ಘೋಷಿಸಿ 25 ಕೋಟಿ ರೂ. ಅನುದಾನವನ್ನೂ ನೀಡಿದೆ. ಸರಕಾರವೂ ಸೇರಿ ಎಲ್ಲರ ಸಹಕಾರದೊಂದಿಗೆ ಇಡೀ ಯೋಜನೆಯನ್ನು ಕಾರ್ಯಗತ ಮಾಡಲಾಗುವುದು" ಎಂದರು.
ಆಸ್ಪತ್ರೆ, ಧಾರ್ಮಿಕ ಮತ್ತು ಸಾಂಸ್ಕೃತಿಕ ಅಧ್ಯಯನ ಕೇಂದ್ರ, ಗೋಶಾಲೆ, ವಸ್ತು ಸಂಗ್ರಹಾಲಯ, ಗ್ರಂಥಾಲಯ ನಿರ್ಮಾಣ ಸೇರಿ ಹತ್ತು ಹಲವು ಯೋಜನೆಯಲ್ಲಿ ಅಡಕವಾಗಿದ್ದು, ಅತ್ಯಂತ ವೇಗವಾಗಿ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದು ಎಂದರು ಡಿಸಿಎಂ.
ಸಚಿವರಾದ ಅರವಿಂದ ಲಿಂಬಾವಳಿ ಮಾತನಾಡಿ, "ಜ್ಞಾನಕ್ಕೆ ಅತಿಹೆಚ್ಚು ಮಹತ್ವ ನೀಡುತ್ತಿದ್ದ ಶ್ರೀ ಬಾಲಗಂಗಾಧರ ನಾಥ ಮಹಾಸ್ವಾಮೀಜಿ ಅವರು, ಹಳ್ಳಿಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಿದ್ದರು. ಅವರ ಆಶಯಗಳು ನಮ್ಮನ್ನು ಮುನ್ನಡೆಸುತ್ತಿದ್ದು, ಸಶಕ್ತ ಸಮಾಜ ನಿರ್ಮಾಣಕ್ಕೆ ಶ್ರೀಗಳಲ್ಲಿದ್ದ ಪರಿಕಲ್ಪನೆಗಳೆಲ್ಲ ಇಲ್ಲಿ ಸಾಕಾರವಾಗಲಿವೆ ಎಂದು ಹೇಳಿದರು.
ಶ್ರೀ ಡಾ.ನಿರ್ಮಲಾನಂದ ನಾಥ ಮಹಾಸ್ವಾಮೀಜಿ ಅವರು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, "ಈ ಯೋಜನೆ ಗುರುಗಳ ಅನುಗ್ರಹದೊಂದಿಗೆ ನಿರ್ವಿಘ್ನವಾಗಿ ಸಂಪನ್ನವಾಗಲಿ" ಎಂದು ನುಡಿದರು.
ರಾಮನಗರದ ಆದಿಚುಂಚನಗಿರಿ ಶಾಖಾ ಮಠದ ಶ್ರಿ ಅನ್ನದಾನೇಶ್ವರ ಸ್ವಾಮೀಜಿಗಳು, ಶಾಸಕರಾದ ಮಂಜುನಾಥ್, ಸಿ.ಎಂ.ಲಿಂಗಪ್ಪ, ಎಸ್.ರವಿ, ಅ.ದೇವೇಗೌಡ, ಜಿಲ್ಲಾಧಿಕಾರಿ ರಾಕೇಶ್, ಜಿಪಂ ಸಿಇಒ ಇಕ್ರಂ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.