ಜಿಲ್ಲೆಯ ಜನತೆಗೆ ಬೇಸಿಗೆ ಶುರುವಾಗುತ್ತಿದ್ದಂತೆ ನಿಧಾನಕ್ಕೆ ಕರೆಂಟ್ ಕಟ್ ಕಿರಿಕಿರಿ ಶುರುವಾಗಿದೆ. ಹಲವು ತಿಂಗಳಿಂದ ವಿದ್ಯುತ್ ಅಭಾವದ ಅನುಭವ ಆಗದ ಜನತೆಗೆ ಈಗ ಬೇಸಿಗೆ ಬೆನ್ನಲೇ ಪದೇ ಪದೇ ವಿದ್ಯುತ್ ಕಡಿತ ಆಗುತ್ತಿರುವು ತೀವ್ರ ಸಂಕಟ ಅನುಭವಿಸುವಂತಾಗಿದೆ.
ಕಾಗತಿ ನಾಗರಾಜಪ್ಪ.
ಚಿಕ್ಕಬಳ್ಳಾಪುರ : ಜಿಲ್ಲೆಯ ಜನತೆಗೆ ಬೇಸಿಗೆ ಶುರುವಾಗುತ್ತಿದ್ದಂತೆ ನಿಧಾನಕ್ಕೆ ಕರೆಂಟ್ ಕಟ್ ಕಿರಿಕಿರಿ ಶುರುವಾಗಿದೆ. ಹಲವು ತಿಂಗಳಿಂದ ವಿದ್ಯುತ್ ಅಭಾವದ ಅನುಭವ ಆಗದ ಜನತೆಗೆ ಈಗ ಬೇಸಿಗೆ ಬೆನ್ನಲೇ ಪದೇ ಪದೇ ವಿದ್ಯುತ್ ಕಡಿತ ಆಗುತ್ತಿರುವು ತೀವ್ರ ಸಂಕಟ ಅನುಭವಿಸುವಂತಾಗಿದೆ.
ಜಿಲ್ಲೆಯಲ್ಲಿ ನಿರೀಕ್ಷೆಗೂ ಮೀರಿ ಉತ್ತಮ ಮಳೆ ಆಗಿದ್ದರಿಂದ ಕೊರತೆ ಉಂಟಾಗಿರಲ್ಲಿ. ಆದರೆ ಬೇಸಿಗೆ ಶುರುವಾಗಿರುವುದರಿಂದ ಸಹಜವಾಗಿಯೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಕಾಣುತ್ತಿದ್ದು ನಗರ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ವಿದ್ಯುತ್ ಕಣ್ಣಾಮುಚ್ಚಲೇಗೆ ನಾಗರಿಕರು ತೀವ್ರ ಹೈರಾಣಾಗುವಂತೆ ಮಾಡುತ್ತಿದೆ.
ವಿದ್ಯಾರ್ಥಿಗಳ ಅಧ್ಯಯನಕ್ಕೆ ತೊಂದರೆ
ಈಗ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಪರೀಕ್ಷಾ ಕಾಲ. ಇಂತಹ ಸಂದರ್ಭದಲ್ಲಿ ವೇಳೆ ವಿದ್ಯುತ್ ಕಡಿತ ಮಾಡುತ್ತಿರುವುದರಿಂದ ವಿದ್ಯಾರ್ಥಿಗಳ ಪರೀಕ್ಷಾ ಸಿದ್ಥತೆಗೆ ಅಡ್ಡಿಯಾಗಿದ್ದು, ವಿದ್ಯಾರ್ಥಿಗಳು ಮೇಣದ ಬತ್ತಿ, ದೀಪದ ಬೆಳಕಲ್ಲಿ ಓದುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದಾಗಿ ಮಕ್ಕಳ ಪೋಷಕರು ಬೆಸ್ಕಾಂಗೆ ಹಿಡಿಶಾಪ ಹಾಕುತ್ತಿದ್ದಾರೆ.
ಬೆಳೆಗೆ ನೀರು ಹರಿಸಲು ಪರದಾಟ
ಜಿಲ್ಲಾದ್ಯಂತ ಸಾಮಾನ್ಯವಾಗಿ ಬೇಸಿಗೆ ಶುರುವಾಗುವ ಸಮಯಕ್ಕೆ ಕೆರೆ, ಕುಂಟೆ, ಕೊಳವೆ ಬಾವಿಗಳಲ್ಲಿ ನೀರು ಖಾಲಿ ಆಗುತ್ತದೆ. ಆದರೆ ಜಿಲ್ಲಾದ್ಯಂತ ಸತತ ಎರಡು ಮೂರು ವರ್ಷದಿಂದ ಉತ್ತಮ ಮಳೆ ಬಿದ್ದಿರುವುದರಿಂದ ಕೊಳವೆ ಬಾವಿಗಳಲ್ಲಿ ನೀರಿಗೇನು ಬರ ಇಲ್ಲ. ಆದರೆ ಬೇಸಿಗೆಯಲ್ಲಿ ಬೆಸ್ಕಾಂ ಪದೇ ಪದೇ ವಿದ್ಯುತ್ ಕಡಿತ ಮಾಡುವುದರಿಂದ ಜಿಲ್ಲೆಯಲ್ಲಿ ರೈತರು ಬೆಳೆದಿರುವ ಅಪಾರ ಪ್ರಮಾಣದ ಬೆಳೆಗಳು ನೀರಿಲ್ಲದೇ ಒಣಗುವ ಸ್ಥಿತಿಗೆ ತಲುತ್ತವೆ. ಈಗಲೇ ಟೊಮೆಟೋ ಬಿಟ್ಟರೆ ಆಲೂಗಡ್ಡೆ ಮತ್ತಿತರ ಬೆಳೆಗಳಿಗೆ ಸಮರ್ಪಕ ಬೆಲೆ ಇಲ್ಲ. ಈಗ ವಿದ್ಯುತ್ ಕಡಿತ ಆಗುವುದರಿಂದ ಬೇಸಿಗೆಯಲ್ಲಿ ಸಮರ್ಪಕವಾಗಿ ಕೊಳವೆ ಬಾವಿಗಳು ಕಾರ್ಯನಿರ್ವಹಿಸದೇ ರೈತರು ಇಟ್ಟಿರುವ ಬೆಳೆಗಳು ಒಣಗುವ ಆತಂಕ ರೈತರದಾಗಿದೆ.
ವಿದ್ಯುತ್‌ನ್ನೆ ನಂಬಿ ಕೆಲಸ ಮಾಡುವ ಜಿಲ್ಲೆಯ ಅಕ್ಕಿಗಿರಣಿಗಳು ಹಾಗೂ ರಾಗಿ, ಭತ್ತ, ಅಕ್ಕಿ ಪ್ಲೋರ್‌ಮಿಲ್ ಮಾಲೀಕರಿಗೂ ವಿದ್ಯುತ್ ಕಣ್ಣಾಮುಚ್ಚಲೇಯ ಬಿಸಿ ತಟ್ಟುತ್ತಿದೆ. ಪದೇ ಪದೇ ವಿದ್ಯುತ್ ಕೈ ಕೊಡುತ್ತಿರುವುದರಿಂದ ಗ್ರಾಹಕರು ಗಂಟೆಗಟ್ಟಲೇ ಕಾಯುವುದರ ಜೊತೆಗೆ ಮಾಲೀಕರಿಗೆ ಸರಿಯಾಗಿ ವಹಿವಾಟು ನಡೆಯದೇ ನಷ್ಠ ಅನುಭವಿಸುವಂತಾಗಿದೆ. ಮೊದಲೇ ವಿದ್ಯುತ್ ದರ ಏರಿಕೆಯಿಂದ ಮಾಲೀಕರು ಕಂಗಾಲಾಗಿದ್ದಾರೆ. ಇದೀಗ ಅಕ್ಕಿ ಗಿರಣಿ ಹಾಗೂ ಪ್ಲೋರ್‌ಮಿಲ್‌ಗಳಿಗೆ ಸಮರ್ಪಕವಾಗಿ ಕರೆಂಟ್ ಪೂರೈಕೆ ಆಗದೇ ಗ್ರಾಹಕರು ತೊಂದರೆ ಅನುಭವಿಸುವಂತಾಗಿದೆ.
ಲೋಡ್ ಶೆಡ್ಡಿಂಗ್ ಬಗ್ಗೆ ತುಟಿ ಬಿಚ್ಚಿತ್ತಿಲ್ಲ
ಇತ್ತೀಚಿನ ಹಲವು ದಿನಗಳಿಂದ ಬೆಳಗ್ಗೆ, ಸಂಜೆ, ಮಧ್ಯಾಹ್ನ ಹೊತ್ತಿನಲ್ಲಿ ಗ್ರಾಹಕರಿಗೆ ಯಾವುದೇ ಮನ್ಸೂಚನೆ ಇಲ್ಲದೇ ವಿದ್ಯುತ್ ಕಡಿತ ಆಗುತ್ತಿದ್ದು ಗ್ರಾಹಕರು ಬೆಸ್ಕಾಂಗೆ ಹಿಡಿಶಾಪ ಹಾಕುತ್ತಿದ್ದಾರೆ. ಆದರೆ ಬೆಸ್ಕಾಂ ಅಧಿಕಾರಿಗಳು ಕರೆಂಟ್ ಕಟ್ ಏಕೆ ಆಗುತ್ತಿದೆ ಎಂಬುದರ ಬಗ್ಗೆ ತುಟಿ ಬಿಚ್ಚುತ್ತಿಲ್ಲ. ಲೋಡ್‌ಶೆಡ್ಡಿಂಗ್‌ನಿಂದ ಕರೆಟ್ ತೆರೆಯಲಾಗುತ್ತಿದೆಯೆಂಬ ಮಾತು ಕೇಳಿ ಬರುತ್ತಿದ್ದರೂ ಬೆಸ್ಕಾಂ ಅಧಿಕಾರಿಗಳು ಮಾತ್ರ ವಿದ್ಯುತ್ ಕಟ್‌ಗೆ ದುರಸ್ತಿ ನೆಪ ಹೇಳುತ್ತಿದ್ದಾರೆ.
ಕುಡಿಯುವ ನೀರಿಗೂ ಪರದಾಟ
ಕರೆಂಟ್ ಕಾಟ ಶುರುವಾಗುತ್ತಿದ್ದಂತೆ ಗ್ರಾಮಾಂತರ ಪ್ರದೇಶದಲ್ಲಿ ಕುಡಿಯುವ ನೀರಿಗಾಗಿ ಜನ ಪರದಾಡುವಂತಾಗಿದೆ. ಈ ಮೊದಲು ಬರಗಾಲದ ಪರಿಣಾಮ ಕೊಳವೆ ಬಾವಿಗಳಲ್ಲಿ ನೀರಿಲ್ಲದೇ ಬೇಸಿಗೆ ಅವಧಿಯಲ್ಲಿ ಜನ ಕುಡಿಯುವ ನೀರು ಸೇರಿದಂತೆ ಜಾನುವಾರುಗಳಿಗೆ ನೀರು ಪೂರೈಸಲು ಪರದಾಡಬೇಕಿತ್ತು. ಆದರೆ ಇದೀಗ ವಿದ್ಯುತ್ ಪದೇ ಪದೇ ಕೈ ಕೊಡುತ್ತಿರುವ ಪರಿಣಾಮ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿದೆ. ಗ್ರಾಮಾಂತರ ಪ್ರದೇಶದಲ್ಲಿ ಅಂತೂ ಕುಡಿಯುವ ನೀರಿಗಾಗಿ ಗಂಟೆಗಟ್ಟಲೇ ಕಾಯುವ ಸ್ಥಿತಿ ನಿರ್ಮಾಣವಾಗಿದೆ.