
ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಮೇ.16): ಈ ಪರಿಸ್ಥಿತಿ ದೇಶಕ್ಕೆ ಬರುತ್ತದೆ ಎಂದು ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿಯವರು ವರ್ಷದ ಹಿಂದೆಯೇ ಹೇಳಿದ್ದರು ಎಂದು ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದೇಶದಲ್ಲಿ ಪೆಟ್ರೋಲ್ ಡೀಸೆಲ್ ಮತ್ತು ಇತರ ವಸ್ತುಗಳ ಬೆಲೆ ಹೆಚ್ಚಳ ಆಗಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು ದೇಶಥ ಆರ್ಥಿಕ ಪರಿಸ್ಥಿತಿ ಚಿಂತಾಜನಕವಾಗಿದೆ. ಇದರ ಬಗ್ಗೆ ಸರ್ವಪಕ್ಷಗಳ ಸಭೆ ಕರೆಯಿರಿ, ಪರಿಹಾರ ಕಂಡುಕೊಳ್ಳಿ ಎಂದು ರಾಹುಲ್ ಗಾಂಧಿ ಹೇಳಿದ್ದರು.
ಆರ್ಥಿಕ ಸಚಿವರು, ಅನೇಕ ಆರ್ಥಿಕ ತಜ್ಞರ ಸೇರಿಸಿ ಸಭೆ ನಡೆಸಿ ಅಂತ ಹೇಳಿದ್ದರು. ಆದರೆ ಪ್ರಧಾನಿ ಮೋದಿಯವರು ಯಾವುದನ್ನು ಪರಿಗಣಿಸಲಿಲ್ಲ. ರಾಜಕೀಯಕ್ಕೋಸ್ಕರ ಕೆಲವು ತೀರ್ಮಾನಗಳನ್ನು ತೆಗೆದುಕೊಂಡರು. ಪಂಚರಾಜ್ಯಗಳ ಚುನಾವಣೆ ಬಳಿಕ ಎಲ್ ಪಿ ಜಿ ರೇಟ್ ಜಾಸ್ತಿ ಮಾಡಿದರು. ಈಗ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಮಾಡಿದರು. ಇಂದು ಕಬ್ಬಿಣ, ಜಲ್ಲಿ, ಟಾರು ಪ್ರತಿಯೊಂದರ ಬೆಲೆ ನಾಲ್ಕರಷ್ಟು ಹೆಚ್ಚಳವಾಗಿದೆ. ಎಲ್ಲವುಗಳ ಬೆಲೆ ಹೆಚ್ಚಳವಾಗಿದೆ. ಯಾವುದೇ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ.
ಡಾಲರ್ ಬೆಲೆ 96 ರೂಪಾಯಿ ಆಗಿದ್ದು, ಇದು ದೇಶದ ಪರಿಸ್ಥಿತಿ ಆಗಿದೆ. ಅನೇಕ ತಜ್ಞರು ಇದ್ದಾರೆ ಅವರೆಲ್ಲರ ಸಭೆ ಕರೆಯಿರಿ ಎಂದು ಪೊನ್ನಣ್ಣ ಆಗ್ರಹಿಸಿದ್ದಾರೆ. ಕೆಲವರ ಕರೆಯಲು ನಿಮಗೆ ಇಷ್ಟವಿಲ್ಲದೆ ಇರಬಹುದು. ಆದರೆ ದೇಶದ ಹಿತದೃಷ್ಟಿಯಿಂದ ಸಭೆ ಕರೆಯುವುದು ಅಗತ್ಯ ಎಂದರು. ಮೊನ್ನೆ ಪ್ರಧಾನಿಯವರು ಸೂಚನೆ ನೀಡಿದರು, ಆದರೆ ಸಾರ್ವಜನಿಕರು ಪ್ರಧಾನಿ ಹೇಳದಿದ್ದರೂ ಪಾಲನೆ ಮಾಡುತ್ತಿದ್ದಾರೆ. ಕಾರಲ್ಲಿ ಓಡಾಡಬೇಡಿ ಎಂದಿದ್ದಾರೆ, ಆದರೆ ಎಲ್ಲಾ ರೇಟ್ ಜಾಸ್ತಿ ಆಗಿರುವುದರಿಂದ ಜನರೇ ಬಳಸಲು ಸಾಧ್ಯವಾಗುತ್ತಿಲ್ಲ.
ಡಾಲರ್ ರೇಟ್ 100 ರೂಪಾಯಿಗೆ ಹೋಗುವಂತೆ ಆಗಿದೆ. ಮತ್ತೆ ಜನರು ವಿದೇಶಿ ಪ್ರವಾಸ ಮಾಡಲು ಹೇಗೆ ಸಾಧ್ಯ, ಅವರು ಹೇಳುತ್ತಿರುವುದನ್ನು ಬಡವರು ಮಧ್ಯಮ ವರ್ಗದ ಜನರು ಅನಿವಾರ್ಯವಾಗಿ ಪಾಲನೆ ಮಾಡುತ್ತಿದ್ದಾರೆ. ಪ್ರವಚನ ರೂಪದ ಈ ಸಲಹೆ ಸೂಚನೆಗಳನ್ನು ಅದಾನಿ, ಅಂಬಾನಿಯವರಿಗೆ ಹೇಳಲಿ. ದೊಡ್ಡ ದೊಡ್ಡ ಉದ್ಯಮಿಗಳಿಗೆ ಹೇಳಲಿ. ಯಾರು ದೇಶದ ಸಂಪತ್ತನ್ನು ಪೂರ್ಣವಾಗಿ ವಶದಲ್ಲಿ ಇಟ್ಟುಕೊಂಡಿದ್ದಾರೋ, ಅದನ್ನೆಲ್ಲಾ ವಾಪಸ್ ಪಡೆದು ಜನ ಸಾಮಾನ್ಯರ ನೆರವಿಗೆ ಬರಬೇಕು. ಈ ಕೆಲಸ ಮಾಡಿದರೆ ಮಾತ್ರ ದೇಶದ ಆರ್ಥಿಕ ಪರಿಸ್ಥಿತಿ ಸರಿಯಾಗುತ್ತೆ. ಇಲ್ಲದಿದ್ದರೆ ಪ್ರವಚನದಿಂದ ಯಾವುದೂ ಸರಿಯಾಗಲ್ಲ ಎಂದು ಪೊನ್ನಣ್ಣ ಹೇಳಿದ್ದಾರೆ.
ಇದರ ಬಳಿಕ ಕೊಡಗು ಗೌಡ ಯುವ ವೇದಿಕೆ ವತಿಯಿಂದ ನಡೆದ ಕುಟುಂಬ 2026 ಕ್ರೀಡಾ ಹಬ್ಬ ಪೊನ್ನಣ್ಣ ಚಾಲನೆ ನೀಡಿದರು. ಮಡಿಕೇರಿಯಲ್ಲಿ ಇರುವ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆದ ಕ್ರೀಡಾ ಕೂಟದ ಕ್ರಿಕೆಟ್ ಪಂದ್ಯಾಟದ ಅಂತಿಮ ಪಂದ್ಯಾಟಕ್ಕೆ ಶಾಸಕ ಎ.ಎಸ್. ಪೊನ್ನಣ್ಣ ಬ್ಯಾಟ್ ಬೀಸುವ ಮೂಲಕ ಚಾಲನೆ ನೀಡಿದರು. ಕರ್ನಾಟಕ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಅರುಣ್ ಮಾಚಯ್ಯ ಅವರು ಬೌಲಿಂಗ್ ಮಾಡಿದರು. ಬಳಿಕ ವೇದಿಕೆ ಸಭಾ ಕಾರ್ಯಕ್ರಮ ನಡೆಯಿತು.