ಬೀದರ್-ಬೆಂಗಳೂರು ವಿಮಾನ ಸೇವೆ ಶೀಘ್ರವೇ ಪುನರಾರಂಭ, ಮತ್ತೆ ಜಿಲ್ಲೆಯ ಜನತೆಗೆ ಸಂತಸದ ಸುದ್ದಿ

Published : May 16, 2026, 05:54 PM IST
Bidar Airport

ಸಾರಾಂಶ

ಸ್ಥಗಿತಗೊಂಡಿದ್ದ ಬೀದರ್-ಬೆಂಗಳೂರು ನಾಗರಿಕ ವಿಮಾನಯಾನ ಸೇವೆ ಜೂನ್ 1 ರಿಂದ ಪುನರಾರಂಭಗೊಳ್ಳಲಿದೆ ಎಂದು ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ. ವಿಮಾನಯಾನ ಸಂಸ್ಥೆಗೆ ಆಗುವ ಆರ್ಥಿಕ ನಷ್ಟವನ್ನು ಸರ್ಕಾರವೇ ಭರಿಸಲಿದ್ದು, ಈ ನಿರ್ಧಾರದಿಂದ ಜಿಲ್ಲೆಯ ಪ್ರವಾಸೋದ್ಯಮ ಮತ್ತು ವ್ಯಾಪಾರಕ್ಕೆ ಉತ್ತೇಜನ ಸಿಗಲಿದೆ.

ಬೀದರ್ : ಕೆಲ ದಿನಗಳಿಂದ ಸ್ಥಗಿತಗೊಂಡಿದ್ದ ಬೀದರ್ ಮತ್ತು ಬೆಂಗಳೂರು ನಡುವಿನ ನಾಗರಿಕ ವಿಮಾನಯಾನ ಸೇವೆ ಬರುವ ಜೂನ್ 1ರಿಂದ ಪುನರಾರಂಭಗೊಳ್ಳಲಿದೆ ಎಂದು ಅರಣ್ಯ, ಪರಿಸರ ಹಾಗೂ ಜೀವಿಶಾಸ್ತ್ರ ಸಚಿವರಾದ ಜಿಲ್ಲಾ ಉಸ್ತುವಾರಿ ಮಂತ್ರಿ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.

ಈ ಕುರಿತಂತೆ ಮಾತನಾಡಿ, ಕಳೆದ ಒಂದು ವರ್ಷದಿಂದ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (KKRDB) ಅನುದಾನದ ಸಹಯೋಗದೊಂದಿಗೆ ಸ್ಟಾರ್ ಏರ್ ವಿಮಾನ ಸಂಸ್ಥೆಯು ಬೀದರ್-ಬೆಂಗಳೂರು ನಡುವೆ ಯಶಸ್ವಿಯಾಗಿ ಸೇವೆ ನೀಡುತ್ತಿತ್ತು. ಆದರೆ, ಮೇ 14ಕ್ಕೆ ಒಪ್ಪಂದದ ಅವಧಿ ಮುಕ್ತಾಯಗೊಂಡಿದ್ದರಿಂದ ವಿಮಾನಯಾನ ಸಂಸ್ಥೆಯು ತನ್ನ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತ್ತು.

ವಿಮಾನಯಾನ ಸಂಸ್ಥೆಗೆ ಆಗುವ ಆರ್ಥಿಕ ನಷ್ಟ ಸರ್ಕಾರದ ವತಿಯಿಂದಲೇ ಭರಿಸುವ ನಿರ್ಧಾರ

ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಜಿಲ್ಲೆಯ ಸಾರ್ವಜನಿಕರ ಹಿತದೃಷ್ಟಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಸಂಪುಟದ ಸಹೋದ್ಯೋಗಿಗಳೊಂದಿಗೆ ಚರ್ಚಿಸಿ ಮನವೊಲಿಸಲಾಗಿದೆ. ವಿಮಾನಯಾನ ಸಂಸ್ಥೆಗೆ ಆಗುವ ಆರ್ಥಿಕ ನಷ್ಟದ ಪಾಲನ್ನು (Viability Gap Funding) ಸರ್ಕಾರದ ವತಿಯಿಂದಲೇ ಭರಿಸುವ ಮೂಲಕ ಸೇವೆಯನ್ನು ಮತ್ತೆ ಮುಂದುವರಿಸಲು ನಿರ್ಧರಿಸಲಾಗಿದೆ ಎಂದಿದ್ದಾರೆ.

ಜೂನ್ 1ರಿಂದ ಬೀದರ್-ಬೆಂಗಳೂರು ಹಾಗೂ ಬೆಂಗಳೂರು-ಬೀದರ್ ಮಧ್ಯೆ ಪ್ರತಿದಿನ ವಿಮಾನಯಾನ ಸೇವೆ ಲಭ್ಯವಿರಲಿದ್ದು, ಇದರಿಂದ ಜಿಲ್ಲೆಯ ಅಷ್ಟೇ ಅಲ್ಲದೆ ಸುತ್ತಮುತ್ತಲಿನ ಜಿಲ್ಲೆಗಳ ನಾಗರಿಕರಿಗೆ ಅನುಕೂಲವಾಗಲಿದೆ. ಈ ಭಾಗದ ಪ್ರವಾಸೋದ್ಯಮ ಮತ್ತು ವ್ಯಾಪಾರೋದ್ಯಮದ ವೃದ್ಧಿಗೂ ಇದು ಮತ್ತಷ್ಟು ವೇಗ ನೀಡಲಿದೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬೀದರ್ ಜಿಲ್ಲೆಯ ಜನರ ಬಹುದಿನಗಳ ಬೇಡಿಕೆಗೆ ತಕ್ಷಣ ಸ್ಪಂದಿಸಿ, ವಿಮಾನಯಾನ ಪುನರಾರಂಭಕ್ಕೆ ಸಂಪೂರ್ಣ ಸಹಕಾರ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಸಂಪುಟದ ಸಹೋದ್ಯೋಗಿಗಳಿಗೆ ಸಚಿವ ಈಶ್ವರ ಖಂಡ್ರೆ ಅವರು ಜಿಲ್ಲೆಯ ಜನತೆಯ ಪರವಾಗಿ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

KKRDB ಅಧ್ಯಕ್ಷ ಅಜಯ್ ಸಿಂಗ್ ಕೂಡ ಸ್ಪಷ್ಟನೆ

ಇನ್ನು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (KKRDB) ಅಧ್ಯಕ್ಷ ಅಜಯ್ ಸಿಂಗ್ ಅವರು ಕೂಡ ಬೀದರ್–ಬೆಂಗಳೂರು ನಾಗರಿಕ ವಿಮಾನ ಸೇವೆ ಒಂದು ತಿಂಗಳೊಳಗೆ ಪ್ರಾರಂಭವಾಗಲಿದೆ ಎಂದು ಘೋಷಿಸಿದ್ದಾರೆ. ಇದಕ್ಕಾಗಿ ಸರ್ಕಾರಕ್ಕೆ ಧನ್ಯವಾದ ತಿಳಿಸಿದ್ದಾರೆ.

PREV
Read more Articles on
click me!

Recommended Stories

ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆ ಕುರಿತು ನ್ಯಾಯಾಲಯದ ನಿರ್ದೇಶನದಲ್ಲಿ ತನಿಖೆ ನಡೆಯಲಿ: ಸಚಿವ ಶರಣಪ್ರಕಾಶ ಪಾಟೀಲ್
ಕೆಂಪೇಗೌಡ ಏರ್‌ಪೋರ್ಟ್ ನಲ್ಲಿ ಆಮೆಗಳ ಕಳ್ಳಸಾಗಾಟ, ವಿದೇಶದಿಂದ ಬೆಂಗಳೂರಿಗೆ ಬಂದ ಅಳಿವಿನಂಚಿನಲ್ಲಿರುವ ಆಮೆಗಳು!