ನಿರ್ದೇಶಕರಿಲ್ಲದೇ ಕಲಾವಿದರು ಕಂಗಾಲಾಗಿದ್ದಾರೆ. ಅವರ ವ್ಯಥೆ ಕೇಳೊರಿಲ್ಲದಂತಾಗಿದೆ. ಏನಿದು ಗೋಳು ಇಲ್ಲಿದೆ ಮಾಹಿತಿ
ವರದಿ : ಕಾಗತಿ ನಾಗರಾಜಪ್ಪ
ಚಿಕ್ಕಬಳ್ಳಾಪುರ (ಸೆ.29): ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ವರ್ಷದಿಂದ ಕಾಯಂ ಸಹಾಯಕ ನಿರ್ದೇಶಕರಿಲ್ಲದೇ ನಿರ್ದೇಶಕರ ಕಚೇರಿ ಅನಾಥವಾಗಿದ್ದು, ಜಿಲ್ಲೆಯಲ್ಲಿ ಕಲೆಗಾಗಿ ಬದುಕುತ್ತಿರುವ ಬಡ ಕಲಾವಿದರ ಕಥೆ, ವ್ಯಥೆ ಕೇಳೋರಿಲ್ಲವಾಗಿದೆ.
ಆಂಧ್ರದ ಗಡಿಯಲ್ಲಿರುವ ಚಿಕ್ಕಬಳ್ಳಾಪುರ ಜಿಲ್ಲೆ ಸಾಂಸ್ಕೃತಿಕವಾಗಿ ರಾಜ್ಯಕ್ಕೆ ಸಾಕಷ್ಟುಕೊಡುಗೆ ನೀಡಿದೆ. ಚಿತ್ರ ಸಾಹಿತಿಗಳು, ಭರತನಾಟ್ಯ ಕಲಾವಿದರು, ಜನಪದ ಹಾಗೂ ಜಾನಪದ ಕಲಾವಿದರಿಗೆ ಕೊರತೆ ಇಲ್ಲ. ಅಲ್ಲದೇ ಹರಿಕಥೆ, ಬುರ್ರಕಥೆ, ಭಜನೆ ಹೀಗೆ ನಾನಾ ಪ್ರಕಾರಗಳಲ್ಲಿ ಕಲೆ ಪೋಷಣೆಯಲ್ಲಿ ತೊಡಗಿರುವ ಕಲಾವಿದರು ಸಾವಿರಾರು ಸಂಖ್ಯೆಯಲ್ಲಿದ್ದಾರೆ.
ಪ್ರಭಾರಿಗಳ ಕಾರುಬಾರು: ಆದರೆ ಕಲಾವಿದರ ಪೋಷಣೆ, ರಕ್ಷಣೆಗೆ ಕಾರ್ಯನಿರ್ವಹಿಸುತ್ತಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಜಿಲ್ಲೆಯಲ್ಲಿ ಕಾಯಂ ಸಹಾಯಕ ನಿರ್ದೇಶಕರು ಇಲ್ಲದೇ ಜಿಲ್ಲೆಯಲ್ಲಿನ ಕಲಾವಿದರು ಸರ್ಕಾರದ ಸೌಲಭ್ಯಗಳಿಂದ ವಂಚಿತವಾಗಿದೆ. ಕೋಲಾರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರನ್ನು ಇಲ್ಲಿಗೆ ಪ್ರಭಾರಿ ವಹಿಸಿದ್ದು, ಕಲಾವಿದರ ಪಾಲಿಗೆ ಅಪರೂಪವಾಗಿದ್ದಾರೆ. ಸಚಿವರು, ಸಂಸದರು ಸಭೆ, ಸಮಾರಂಭಗಳಲ್ಲಿ ಕಾಣಿಸಿಕೊಳ್ಳುವ ಪ್ರಭಾರಿ ಅಧಿಕಾರಿಗಳು ಇಲ್ಲಿ ಪೂರ್ಣ ಪ್ರಮಾಣದಲ್ಲಿ ಇಲ್ಲದ ಕಾರಣ ಸರ್ಕಾರದಿಂದ ಬಡ ಕಲಾವಿದರಿಗೆ ಸಿಗಬೇಕಾದ ಸೌಲಭ್ಯಗಳು ಸಮರ್ಪಕವಾಗಿ ದೊರೆಯುತ್ತಿಲ್ಲ ಅಸಮಾಧಾನ, ಸಿಟ್ಟು ಬಡ ಕಲಾವಿದರಲ್ಲಿ ಮಾರ್ದನಿಸುತ್ತಿದೆ.
ಗುಂಡ್ಲುಪೇಟೆ: ಗಾಯಗೊಂಡ ಗಂಡಾನೆ ಮರಿಯನ್ನೇ ಭಕ್ಷಿಸಿದ ಹುಲಿ! ..
ಜಿಲ್ಲೆಯಲ್ಲಿ 1500ಕ್ಕೂ ಹೆಚ್ಚು ಕಲಾವಿದರ ಸಂಘಗಳು ಇವೆ. ಒಂದಲ್ಲ ಒಂದು ರೀತಿಯಲ್ಲಿ ಜಿಲ್ಲೆಯ ಸಾಂಸ್ಕೃತಿಕ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡು ಕಲಾ ಪೋಷಣೆಯಲ್ಲಿ ತೊಡಗಿದ್ದಾರೆ. ಆದರೆ ಬಡ ಕಲಾವಿದರಿಗೆ ಸರ್ಕಾರದ ಸೌಲಭ್ಯ, ಪಿಂಚಣಿ ಸಕಾಲದಲ್ಲಿ ಕಲ್ಪಿಸುವುದರ ಜೊತೆಗೆ ಜಿಲ್ಲೆಯ ಕಲಾ ಪ್ರಕಾರಗಳನ್ನು ಉಳಿಸಿ, ಬೆಳೆಸುವ ದಿಕ್ಕಿನಲ್ಲಿ ಸಾಗಬೇಕಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಿಲ್ಲೆಯ ಪಾಲಿಗೆ ಆಟಕ್ಕಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಾಗಿದೆ.
ಮೊದಲೇ ಆಂಧ್ರದ ಗಡಿಯಲ್ಲಿರುವ ಜಿಲ್ಲೆಯು ತೆಲುಗು ಪ್ರಾಬಲ್ಯ ಹೆಚ್ಚಿದೆ. ಆದರೆ ಗಡಿಯಲ್ಲಿ ತಮ್ಮ ಕಲೆ, ಸಂಸ್ಕೃತಿ ಪೋಷಣೆ ಜೊತೆಗೆ ಕನ್ನಡದ ಕಂಪು ಪಸರಿಬೇಕಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹೆಸರಿಗಷ್ಟೇ ಇದ್ದು ಸರ್ಕಾರ ಘೋಷಿಸಿರುವ ಜಯಂತಿಗಳ ಆಚರಣೆಗೆ ಸೀಮಿತವಾಗಿ ನೈಜ ಸ್ಥಿತಿಯಲ್ಲಿ ಜಿಲ್ಲೆಯ ಸಂಸ್ಕೃತಿ, ಪರಂಪರೆ, ಕಲಾ ಪ್ರಕಾರಗಳನ್ನು ಉಳಿಸುವ ಹಾದಿಯಲ್ಲಿ ಹೆಜ್ಜೆ ಇಡುತ್ತಿಲ್ಲ
ಇಲಾಖೆಯಿಂದ ನೇರವಾಗಿ ಕಲಾವಿದರಿಗೆ ಪಿಂಚಣಿ
ಇತ್ತೀಚಿನವರೆಗೂ ಕಲಾವಿದರಿಗೆ ಸರ್ಕಾರದಿಂದ ನೇರವಾಗಿ ಖಜಾನೆ ಮೂಲಕ ಪಿಂಚಣಿ ತಲುಪುತ್ತಿತ್ತು. ಆದರೆ ಸರ್ಕಾರ ಇಲಾಖೆಗಳ ಮೂಲಕವೇ ಕಲಾವಿದರಿಗೆ ಆಯಾ ತಿಂಗಳು ಪಿಂಚಣಿ ವಿತರಿಸಲು ಮುಂದಾಗಿದೆ. ಜಿಲ್ಲೆಯಲ್ಲಿ ಒಟ್ಟು 253 ಮಂದಿ ಕಲಾವಿದರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಪಿಂಚಣಿ ನಡೆಯುತ್ತಿದ್ದಾರೆ. ಆದರೆ ಸಹಾಯಕ ನಿರ್ದೇಶಕರಿಲ್ಲದೇ ಜಿಲ್ಲೆಯ ಬಡ ಕಲಾವಿದರಿಗೆ ಸಕಾಲದಲ್ಲಿ ಪಿಂಚಣಿ ಕೈ ಸೇರುವುದು ಕಷ್ಟವಾಗಿದೆಯೆಂದು ಜಿಲ್ಲೆಯ ಕಲಾವಿದರು ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ.
ಜಿಲ್ಲೆಯಲ್ಲಿ ಸಾಕಷ್ಟುಮಂದಿ ಕಲಾವಿದರು ಇದ್ದು ಜಿಲ್ಲೆಗೆ ಸಹಾಯಕ ನಿರ್ದೇಶಕರು ಇದ್ದರೆ ಕಲಾವಿದರಿಗೆ ಹೆಚ್ಚಿನ ಅನುಕೂಲ. ದೂರದ ಗ್ರಾಮೀಣ ಭಾಗಗಳಿಂದ ಸೌಲಭ್ಯ, ಪಿಂಚಣಿ ಪಡೆಯಲು ಬರುವ ಕಲಾವಿದರಿಗೆ ಒಮ್ಮೆ ಸಹಾಯಕ ನಿರ್ದೇಶಕರು ಕಚೇರಿಯಲ್ಲಿ ಸಿಗದೇ ತುಂಬ ಸಮಸ್ಯೆ ಎದುರಿಸಬೇಕಾಗಿದೆ.
ನಾಡೋಜ ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪ, ಖ್ಯಾತ ತಮಟೆ ಕಲಾವಿದ