ಕಲಾವಿದರ ಕೈಚಳಕ: ಪೆನ್ಸಿಲ್ ಮೊನೆಯಲ್ಲಿ ಅಶ್ವತ್ಥ ಎಲೆಯಲ್ಲಿ ಮೂಡಿದ ಗಣಪ

By Suvarna News  |  First Published Aug 30, 2022, 3:32 PM IST

ಉಡುಪಿಯ ಮಾರುತಿ ವಿಥಿಕಾ ಸಾರ್ವಜನಿಕ ಗಣೇಶೋತ್ಸವದಲ್ಲಿ ಅಪರೂಪದ ಗಣೇಶ ಕಲಾಕೃತಿಯನ್ನು ಜನ ವೀಕ್ಷಿಸಬಹುದು. ಗಣೇಶನ ಮುಖವನ್ನು ಪೆನ್ಸಿಲ್ ನ ಮೊನೆಯಲ್ಲಿ ಮೂಡಿಸಿ ಅಚ್ಚರಿ ಹುಟ್ಟಿಸಿದ ಕಲಾವಿದನೊಬ್ಬನ ಕಲಾಕೃತಿ ಇಲ್ಲಿದೆ.


ವರದಿ: ಶಶಿಧರ ಮಾಸ್ತಿಬೈಲು, ಏಷಿಯಾನೆಟ್ ಸುವರ್ಣ ನ್ಯೂಸ್
ಉಡುಪಿ:ಗಣೇಶನೆಂದರೆ ಕಲಾವಿದರಿಗೆ ಸ್ಪೂರ್ತಿ. ಮಣ್ಣಿನಿಂದ ತಯಾರಿಸುವ ಗಣೇಶ ವಿಗ್ರಹವನ್ನು ಪೂಜಿಸಿ ಅರ್ಚಿಸಿ ಜಲಸ್ತಂಭನಗೊಳಿಸಿ ಹಬ್ಬ ಆಚರಿಸುವುದು ಒಂದು ಬಗೆಯಾದರೆ, ಕಲಾವಿದರು ತಮಗೆ ತೋಚಿದ ರೀತಿಯಲ್ಲಿ ಹಬ್ಬದ ವೇಳೆ ನಾನಾರೂಪಗಳಲ್ಲಿ ಗಣೇಶನ್ನು  ಸೃಷ್ಟಿಸುತ್ತಾರೆ. 

ಪ್ರತಿ ವರ್ಷ ಚೌತಿ ಬಂದಾಗ ಉಡುಪಿಯ ಕಲಾವಿದರು ಗಣೇಶನ ಅಪರೂಪದ ಕಲಾಕೃತಿಗಳನ್ನು ರಚಿಸುತ್ತಾರೆ. ಸಾರ್ವಜನಿಕ ಗಣೇಶೋತ್ಸವಗಳಲ್ಲಿ ಆರಾಧಿಸಲ್ಪಡುವ ಮಣ್ಣಿನ ಗಣಪನ ನಾನಾ ರೂಪಗಳ ಆಕರ್ಷಣೆ ಒಂದು ಬಗೆಯಾದರೆ, ಕಲಾವಿದರು ತಮ್ಮದೇ ಕಲ್ಪನೆಯಿಂದ ರಚಿಸುವ ಅನೇಕ ಗಣಪನ ರೂಪಗಳ ಪ್ರದರ್ಶನ ಹಬ್ಬದ ದಿನ ಕಾಣಬಹುದು. ಉಡುಪಿಯ ಮಾರುತಿ ವಿಥಿಕಾ ಸಾರ್ವಜನಿಕ ಗಣೇಶೋತ್ಸವದಲ್ಲಿ ಅಪರೂಪದ ಗಣೇಶ ಕಲಾಕೃತಿಯನ್ನು ಜನ ವೀಕ್ಷಿಸಬಹುದು. ಗಣೇಶನ ಮುಖವನ್ನು ಪೆನ್ಸಿಲ್ ನ ಮೊನೆಯಲ್ಲಿ ಮೂಡಿಸಿ ಅಚ್ಚರಿ ಹುಟ್ಟಿಸಿದ ಕಲಾವಿದನೊಬ್ಬನ ಕಲಾಕೃತಿ ಇಲ್ಲಿ ನೋಡಬಹುದು.

Tap to resize

Latest Videos

ಮುಗಿಲೆತ್ತರದ ಗಣೇಶ ವಿಗ್ರಹಗಳನ್ನು ನಾವು ನೋಡಿದ್ದೇವೆ, ಆದರೆ ಇದು ಕೇವಲ 7 ಮಿಲಿ ಮೀಟರ್ ಉದ್ದ ಮತ್ತು 2 ಮಿಲಿ ಮೀಟರ್ ದಪ್ಪದ ಪೆನ್ಸಿಲ್ (ಲೆಡ್)ಮೊನೆಯಲ್ಲಿ ರಚನೆಯಾದ ಬಲಮುರಿ ಗಣೇಶನ ಸೂಕ್ಷ್ಮ ಕಲಾಕೃತಿ ಇದಾಗಿದೆ. 4 ದಿನ ಸುಮಾರು 8ಗಂಟೆಗಳ ಪರಿಶ್ರಮದಿಂದ ಈ ಕಲಾಕೃತಿ ರಚಿತವಾಗಿದೆ. ಕಾರ್ಕಳದ ಯುವ ಕಲಾವಿದ ಕೆಪಿಟಿಸಿ ಎಲ್ ಕಂಪನಿಯ ಸಬ್ ಸ್ಟೇಷನ್‌ನಲ್ಲಿ ಗುತ್ತಿಗೆ ಆಧಾರದ  ನೌಕರಿ ಮಾಡುವ, ಸುರೇಂದ್ರ ಈ ಅಪರೂಪದ ಕಲಾಕೃತಿಯ ನಿರ್ಮಾತೃ. ಸುರೇಂದ್ರ ಅವರ ಹೆಗ್ಗಳಿಕೆ ಏನಪ್ಪಾ ಅಂದ್ರೆ, ಪಾಕಿಸ್ತಾನದ ಕಲಾವಿದರೊಬ್ಬರ ಹೆಸರಲ್ಲಿದ್ದ ಸೂಕ್ಷ್ಮ ಕಲಾಕೃತಿ ರಚನೆಯ ದಾಖಲೆಯನ್ನು ಇವರು ಮುರಿದು ಹಾಕಿದ್ದಾರೆ. 

ಪೆನ್ಸಿಲ್ ಲೆಡ್ಡ್ ನ 50 ಸರಪಳಿ ಮುರಿದು 58 ಪೆನ್ಸಿಲ್ ಲೆಡ್ ಸರಪಳಿ ನಿರ್ಮಿಸಿ  ಗಿನ್ನಿಸ್ ದಾಖಲೆ ಮಾಡಿದ್ದಾರೆ. ತೆರೆಮರೆಯಲ್ಲಿರುವ ಈ‌ ಕಲಾವಿದ  ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ. ಸುರೇಂದ್ರ ರವರ ಕೈ ಚಳಕದಿಂದ ರಚಿತವಾದ ಕಲಾಕೃತಿ ಬಲಮುರಿ ಗಣಪತಿ ಪ್ರದರ್ಶನಗೊಳ್ಳುತ್ತಿದ್ದು, ಚೌತಿಯ ದಿನದಂದು ಬೆಳಗ್ಗಿನಿಂದ ಸಂಜೆಯ ತನಕ ಮಾರುತಿ ವಿಥಿಕಾದ ಪೆಂಡಾಲಿನಲ್ಲಿ ಪ್ರದರ್ಶನಕ್ಕೆ ಇಡಲಾಗುತ್ತಿದೆ. 

ಅಶ್ವತ್ಥದ ಎಲೆಯಲ್ಲಿ ಪ್ರತ್ಯಕ್ಷನಾದ ಗಣಪ

ಉಡುಪಿಯ ಮಹೇಶ ಮರ್ಣೆ ಮತ್ತೊಬ್ಬ ಅಪರೂಪದ ಕಲಾವಿದರಾಗಿದ್ದು, ಇವರು ಅಶ್ವತ್ಥದ ಎಲೆಯಲ್ಲಿ ನಾನಾ ವ್ಯಕ್ತಿಗಳು, ದೇವರ ಮುಖ ಮೂಡಿಸುವುದರಲ್ಲಿ  ನಿಷ್ಣಾತರು. ಅಶ್ವತ್ಥದ ಎಲೆಯನ್ನು ಬಳಸಿ ಇವರು ಮೂಡಿಸಿದ ಚಿತ್ರಗಳು ಈಗಾಗಲೇ ಪ್ರಸಿದ್ಧಿ ಪಡೆದಿವೆ. ಹಬ್ಬ ಹರಿ ದಿನಗಳು ಬಂದಾಗ ಇವರು ರಚಿಸುವ ಕಲಾಕೃತಿಗಳು ಜನ ಮೆಚ್ಚುಗೆ ಪಡೆದಿವೆ. ಇದೀಗ  ಅಪರೂಪದ ಗಣಪನ ಚಿತ್ರವನ್ನು ಇವರು ಅಶ್ವತ್ಥ ಎಲೆಯಲ್ಲಿ ಮೂಡಿಸಿದ್ದಾರೆ. ಅಪರೂಪದ ಕಲಾಕೃತಿಯನ್ನು ಆಕಾಶಕ್ಕೆ ಹಿಡಿಯುತ್ತಿದ್ದಂತೆ ಸ್ವತಃ ಗಣಪನೇ ಧರೆಗಿಳಿದಂತೆ ಭಾಸವಾಗುತ್ತದೆ. ಮಹೇಶ್ ಮರ್ಣೆ ರಚಿಸಿರುವ ಈ ಅಪರೂಪದ ಕಲಾಕೃತಿ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಿದ್ದಿ ಪಡೆದಿದೆ.
 

click me!