ಹಲಸಿನ ಹಬ್ಬಕ್ಕೆ ಬಂದ್ರು 10 ಸಾವಿರಕ್ಕೂ ಹೆಚ್ಚು ಜನ

Published : Aug 06, 2019, 03:10 PM IST
ಹಲಸಿನ ಹಬ್ಬಕ್ಕೆ ಬಂದ್ರು 10 ಸಾವಿರಕ್ಕೂ ಹೆಚ್ಚು ಜನ

ಸಾರಾಂಶ

ಮೈಸೂರಿನ ನಂಜರಾಜ ಬಹದ್ದೂರ್‌ ಛತ್ರದಲ್ಲಿ ಆಯೋಜಿಸಿದ್ದ ಎರಡು ದಿನಗಳ ಹಲಸಿನ ಹಬ್ಬವು ಯಶಸ್ವಿಯಾಗಿದೆ. 2200 ಹಲಸಿನ ಸಸಿಗಳು ಮಾರಾಟವಾಗಿದ್ದು, 10 ಸಾವಿರಕ್ಕೂ ಹೆಚ್ಚಿನ ಜನ ಭೇಟಿ ನೀಡಿದ್ದರು. ರಾಜ್ಯದ ವಿವಿಧೆಡೆಯಿಂದ 18 ಹಲಸು ಬೆಳೆಗಾರರ ಗುಂಪುಗಳು ಭಾಗವಹಿಸಿತ್ತು.

ಮೈಸೂರು(ಆ.06): ಹಲಸಿನ ಮಹತ್ವವನ್ನು ಗ್ರಾಹಕರು ಹಾಗೂ ರೈತರಿಗೆ ತಿಳಿಕೊಡುವ ನಿಟ್ಟಿನಲ್ಲಿ ಸಹಜ ಸಮೃದ್ಧ ಸಂಸ್ಥೆ ಮತ್ತು ರೋಟರಿ ಕ್ಲಬ್‌ ಮೈಸೂರು ಪಶ್ಚಿಮ ಸಂಯುಕ್ತವಾಗಿ ಶನಿವಾರ ಮತ್ತು ಭಾನುವಾರ ಮೈಸೂರಿನ ನಂಜರಾಜ ಬಹದ್ದೂರ್‌ ಛತ್ರದಲ್ಲಿ ಆಯೋಜಿಸಿದ್ದ ಎರಡು ದಿನಗಳ ಹಲಸಿನ ಹಬ್ಬವು ಯಶಸ್ವಿಯಾಗಿದೆ.

ಇದೇ ಮೊದಲ ಬಾರಿಗೆ ಆಯೋಜಿಸಿದ್ದ ಹಲಸಿನ ಹಬ್ಬಕ್ಕೆ ನಿರೀಕ್ಷೆಗೂ ಮೀರಿ ಜನ ಬಂದಿದ್ದನ್ನು ಕಂಡು ಆಯೋಜಕರು ಸಹ ಆಶ್ಚರ್ಯದೊಂದಿಗೆ ಖುಷಿ ಪಟ್ಟಿದ್ದು, ಮುಂದಿನ ದಿನಗಳಲ್ಲಿ ಎರಡು ದಿನಗಳ ಮೇಳವನ್ನು ನಾಲ್ಕು ದಿನಕ್ಕೆ ವಿಸ್ತರಿಸಲು ಸಹಜ ಸಮೃದ್ಧಿ ಸಂಸ್ಥೆಯು ಚಿಂತಿಸಿದೆ.

18 ಹಲಸು ಬೆಳೆಗಾರರ ಗುಂಪು:

ಹಸಿದು ಹಲಸು ತಿನ್ನು ಎಂಬ ಮಾತಿದೆ. ಬರಗಾಲ ಎದುರಿಸಿ ನಿಲ್ಲುವ ಹಲಸು ರಾಸಾಯನಿಕ ಔಷಧಿ, ಗೊಬ್ಬರ ಕೇಳದ ಕಲ್ಪವೃಕ್ಷ. ರೈತರ ಜೇಬು ತುಂಬುವ ಆಪ್ತಮಿತ್ರ. ಬಡವರ ಹಣ್ಣು ಎಂದೇ ಜನಪ್ರಿಯವಾಗಿರುವ ಹಲಸು ಔಷಧೀಯ ಗುಣಗಳಿಂದ ಮುನ್ನಲೆಗೆ ಬರುತ್ತಿದೆ. ಇಂತಹ ಹಲಸಿನ ಹಬ್ಬಕ್ಕೆ ರಾಜ್ಯದ ವಿವಿಧೆಡೆಯಿಂದ 18 ಹಲಸು ಬೆಳೆಗಾರರ ಗುಂಪುಗಳು ಕೆಂಪು, ಬಿಳಿ, ಹಳದಿ ಮತ್ತು ಸಂಪಿಗೆ ಸೇರಿದಂತೆ ವಿವಿಧ ಬಗೆಯ ಹಲಸು, ತರಹೇವಾರಿ ಖಾದ್ಯಗಳೊಂದಿಗೆ ಆಗಮಿಸಿದ್ದರು.

ಹಲಸಿನ ಹಲವು ಖಾದ್ಯಗಳು:

ಹಲಸಿನ ಐಸ್‌ ಕ್ರೀಂ, ಚಿಫ್ಸ್‌, ಚಾಕೋಲೇಟ್‌, ಹಪ್ಪಳ, ಹಲ್ವಾ, ಕಬಾಬ್‌, ಹೋಳಿಗೆ, ವಡೆ, ದೋಸೆ, ಪಲ್ಯ, ಪಾಯಸ, ಪಲಾವ್‌ ಸೇರಿದಂತೆ ಹಲಸಿನಿಂದ ತಯಾರಿಸಿದ್ದ ವಿವಿಧ ತಿನಿಸುಗಳನ್ನು ಗ್ರಾಹಕರು ಸವಿದರು. ಹಲಸಿನ ಬೀಜದ ಪೇಯ ಜಾಫಿ ರುಚಿಯನ್ನು ಸಹ ನೋಡಿದರು. 26 ಬಗೆಯ ಹಲಸಿನ ತಳಿಗಳ ಹಣ್ಣುಗಳನ್ನು ಪ್ರದರ್ಶನ ಮತ್ತು ಮಾರಾಟಕ್ಕೆ ಇರಿಸಲಾಗಿತ್ತು. ಜೊತೆಗೆ ಹಲಸಿನ ಸಾಗುವಳಿ ಮತ್ತು ಮೌಲ್ಯವರ್ಧನೆ ಕುರಿತ ಪುಸ್ತಕಗಳು, ಹಲಸು ಹಚ್ಚುವ ಯಂತ್ರಗಳು ಸಹ ಇದ್ದವು.

ಹಸನಾದ ಬದುಕಿಗೆ ಆಧಾರವಾದ ಹಲಸು: ಈ ಚಾಕ್ಲೇಟ್ ರುಚಿ ನೋಡಿ ಬಾಸು!

10 ಸಾವಿರಕ್ಕೂ ಹೆಚ್ಚು ಜನ ಭಾಗಿ:

ಎರಡು ದಿನಗಳ ಮೇಲಕ್ಕೆ 10 ಸಾವಿರಕ್ಕೂ ಹೆಚ್ಚಿನ ಜನ ಭೇಟಿ ನೀಡಿದ್ದರು. ಕೆಂಪು ಹಲಸಿನ ಹಣ್ಣಿಗೆ ಬೇಡಿಕೆ ಹೆಚ್ಚಿದ್ದು, ಮೊದಲ ದಿನವೇ ಖಾಲಿಯಾಯಿತು. 2ನೇ ದಿನ ಪ್ರದರ್ಶನಕ್ಕೆ ಮಾತ್ರ ಕೆಂಪು ಹಲಸು ಮೀಸಲಾಗಿತ್ತು. ತೂಬಿನಕೆರೆ ಹಲಸು ಬೆಳೆಗಾರರು 3 ಟನ್‌ ಹಲಸು ತಂದಿದ್ದು, ಸಂಪೂರ್ಣ ಮಾರಾಟವಾಯಿತು.

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹಲಸಿನ ಸಸಿಗಳಿಗೂ ಬೇಡಿಕೆ:

ಕೆಂಪು ಹಲಸು, ಸಿಂಧೂ, ಹೆಜ್ಜೇನು, ಅಂಟುರಹಿತ, ಬೈರ, ವಿಯಟ್ನಾಂ ಸೂಪರ್‌ ಅರ್ಲಿ, ಬೆಂಗ್‌ ಸೂರ್ಯ, ನಾಗಚಂದ್ರ, ರಾಮಚಂದ್ರ, ಕಾಚಳ್ಳಿ ಹಸಲು, ಲಾಲ್‌ಬಾಗ್‌ ಮಧುರ, ಸಿಂಗಾಪುರ ಹಲಸು, ಜೇನು ಬೊಕ್ಕೆ, ಸರ್ವ ಋುತು ಹಲಸು, ರುದ್ರಾಕ್ಷಿ ಬೊಕ್ಕೆ, ಈ-11, ಜೆ-33 ಮೊದಲಾದ ತಳಿಯ ಹಲಸಿನ ಸಸಿಗಳನ್ನು ಮಾರಾಟಕ್ಕೆ ಇರಿಸಲಾಗಿತ್ತು. 2200 ಹಲಸಿನ ಸಸಿಗಳು ಮಾರಾಟವಾಗಿದ್ದು ವಿಶೇಷ.

-ಬಿ. ಶೇಖರ್‌ ಗೋಪಿನಾಥಂ ಮೈಸೂರು

PREV
click me!

Recommended Stories

ರಾಮನಗರದ ರೇವಣಸಿದ್ದೇಶ್ವರ ಬೆಟ್ಟದಲ್ಲಿ ದುರಂತ: ದೇವರ ದರ್ಶನಕ್ಕೂ ಮುನ್ನವೇ ಕಂದಕ ಸೇರಿದ ಭಕ್ತ!
Bengaluru: ಬೆಂಗಳೂರಿನಲ್ಲಿ 7ನೇ ಕ್ಲಾಸ್ ವಿದ್ಯಾರ್ಥಿ ಕಪಾಳಕ್ಕೆ ಹೊಡೆದ ಶಿಕ್ಷಕನ ಬಂಧನ