
ಬೆಂಗಳೂರು (ನ.14) ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ, ಸಲ್ಲಿಸಿದ ಯೋಧರು ದೇಶದ ಯೋಧರು. ಇಲ್ಲಿ ಧರ್ಮ, ಜಾತಿಗಳಿಗೆ ಪ್ರಾಶಸ್ತ್ಯವಿಲ್ಲ. ಸೇನೆಯ ಪ್ರತಿಯೊಬ್ಬರು ಧರ್ಮದ ಆಧಾರದಲ್ಲಿ ಗುರುತಿಸಲ್ಪಡುವುದಿಲ್ಲ ಬದಲಾಗಿ ಭಾರತೀಯ ಯೋಧ ಎಂದೇ ಗುರುತಿಸಿಕೊಳ್ಳುತ್ತಾನೆ. ಇದೀಗ ರಾಜ್ಯ ಸರ್ಕಾರದ ಅಲ್ಪಸಂಖ್ಯಾತ ನಿರ್ದೇಶನಾಲಯ ಹೊರಡಿಸಿದ ಟೆಂಡರ್, ವಿಶ್ವ ಹಿಂದೂ ಪರಿಷತ್ ಸೇರಿದಂತೆ ಹಿಂದೂ ಸಂಘಟನೆಗಳ ಆಕೋಶಕ್ಕೆ ಗುರಿಯಾಗಿದೆ. ಅಲ್ಪಸಂಖ್ಯಾತರಿಗೆ 60 ದಿನದ ಸೇನಾ ತರಬೇತಿ ನೀಡುವ ಯೋಜನೆಗೆ ಟೆಂಡರ್ ಆಹ್ವಾನಿಸಲಾಗಿದೆ. ಈ ಯೋಜನೆಗೆ ಭಾರಿ ವಿರೋಧ ವ್ಯಕ್ತವಾಗಿದೆ. ಇದರ ಉದ್ದೇಶ ಸ್ಪಷ್ಟಪಡಿಸಿ ಎಂದು ವಿಶ್ವ ಹಿಂದೂ ಪರಿಷತ್ ಆಗ್ರಹಿಸಿದೆ.
2026-27ನೇ ಸಾಲಿನಲ್ಲಿ ತರಬೇತಿ ಕಾರ್ಯಕ್ರಮ ಆಯೋಜಿಸಲು ಅಲ್ಪಸಂಖ್ಯಾತರ ನಿರ್ದೇಶನಾಲಯದಿಂದ ಟೆಂಡರ್ ಆಹ್ವಾನಿಸಿದೆ. ಅಲ್ಪಸಂಖ್ಯಾತರಿಗೆ 60 ದಿನಗಳ ಸೇನಾ ತರಬೇತಿ ನೀಡುವ ಯೋಜನೆ ಇದಾಗಿದೆ. ಸೇನಾ ತರಬೇತಿಯಂಥ ರಾಷ್ಟ್ರೀಯ ಮಹತ್ವದ ಕಾರ್ಯಕ್ರಮಕ್ಕೆ ಧರ್ಮದ ಆಧಾರದ ಮೇಲೆ ಅರ್ಹತೆ ನಿಗದಿ ಮಾಡಿರುವುದಕ್ಕೆ ವಿಶ್ವ ಹಿಂದೂ ಪರಿಷತ್ ಆಕ್ಷೇಪ ವ್ಯಕ್ತಪಡಿಸಿದೆ. ಕೇವಲ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಮಾತ್ರ ಈ ಅವಕಾಶ ಯಾಕೆ, ಹಿಂದೂ ಸೇರಿದಂತೆ ಇತರ ಸಮುದಾಯಗಳ ವಿದ್ಯಾರ್ಥಿಗಳಿಗೆ ಯಾಕೆ ಅವಕಾಶ ನೀಡಿಲ್ಲ ಎಂದು ವಿಶ್ವ ಹಿಂದೂ ಪರಿಷತ್ ಪ್ರಶ್ನಿಸಿದೆ. ಧರ್ಮದ ಆಧಾರದ ಮೇಲೆ ಸೇನಾ ತರಬೇತಿಯನ್ನು ವಿಹೆಚ್‌ಪಿ ವಿರೋಧಿಸಿದೆ.
60 ದಿನಗಳ ತರಬೇತಿಯ ಉದ್ದೇಶವೇನು ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ತರಬೇತಿಯ ಪಠ್ಯಕ್ರಮ, ಫಲಾನುಭವಿಗಳ ಸಂಖ್ಯೆ, ಆಯ್ಕೆ ಪ್ರಕ್ರಿಯೆ ಮತ್ತು ಒಟ್ಟು ವೆಚ್ಚದ ವಿವರ ಪ್ರಕಟವಾಗಿಲ್ಲ ಎಂಬ ಗಂಭೀರ ಪ್ರಶ್ನೆಗಳನ್ನು ವಿಶ್ವ ಹಿಂದೂ ಪರಿಷತ್ ಕೇಳಿದೆ. ಸಾರ್ವಜನಿಕ ತೆರಿಗೆ ಹಣದಲ್ಲಿ ನಡೆಯುವ ಯೋಜನೆಯ ಅರ್ಹತಾ ಮಾನದಂಡಗಳ ಬಗ್ಗೆ ಪ್ರಶ್ನೆ ಮಾಡಿದೆ. ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಧರ್ಮದ ಬೇಧವಿಲ್ಲದೆ ಅವಕಾಶ ನೀಡಲು ವಿಶ್ವ ಹಿಂದೂ ಪರಿಷತ್ ಒತ್ತಾಯಿಸಿದೆ.
ರಾಷ್ಟ್ರೀಯ ಏಕತೆ, ಶಿಸ್ತು ಮತ್ತು ದೇಶಸೇವೆಯ ತರಬೇತಿ ಎಲ್ಲ ಅರ್ಹ ವಿದ್ಯಾರ್ಥಿಗಳಿಗೂ ಸಿಗಬೇಕೆಂಬ ಆಗ್ರಹವನ್ನು ವಿಶ್ವಹಿಂದೂ ಪರಿಷತ್ ಮುಂದಿಟ್ಟಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರ ಯೋಜನೆಯ ಉದ್ದೇಶ ಮತ್ತು ಅರ್ಹತಾ ಮಾನದಂಡಗಳನ್ನು ಸ್ಪಷ್ಟಪಡಿಸಬೇಕೆಂಬ ಒತ್ತಾಯಿಸಿದೆ. ಅಲ್ಪಸಂಖ್ಯಾತರಿಗೆ ಮಾತ್ರ ಸೇನಾ ತರಬೇತಿ ನೀಡುವ ನಿರ್ಧಾರದ ಬಗ್ಗೆ ಸರ್ಕಾರದ ಸ್ಪಷ್ಟನೆಗೆ ಆಗ್ರಹಿಸಿದೆ.