ಒಂದು ಫೋಟೋ, ಸಾವಿರ ಮೆಸೇಜ್; ಮೋದಿ-ಡಿಕೆಶಿ ನಗುವಿನ ಹಿಂದಿದೆ ದೊಡ್ಡ ಪಾಠ

Published : Nov 14, 2026, 06:15 PM IST
Narendra Modi and DK Shivakumar smile

ಸಾರಾಂಶ

ಪ್ರಧಾನಿ ಮೋದಿ ಮತ್ತು ಸಿಎಂ ಡಿಕೆ ಶಿವಕುಮಾರ್ ನಡುವಿನ ಮೆಟ್ರೋ ಉದ್ಘಾಟನಾ ಸಮಾರಂಭದ ಆತ್ಮೀಯ ದೃಶ್ಯಗಳು ರಾಜಕೀಯದಲ್ಲಿ ಸೌಹಾರ್ದತೆಯ ಪಾಠ ಕಲಿಸುತ್ತವೆ. ಕಾರ್ಯಕರ್ತರು ವೈಯಕ್ತಿಕ ದ್ವೇಷ ಬಿಟ್ಟು ಇದನ್ನು ಅರ್ಥಮಾಡಿಕೊಳ್ಳಬೇಕಿದೆ.

ಬೆಂಗಳೂರು: ರಾಜಕೀಯದಲ್ಲಿ ಚುನಾವಣೆ, ವಾದ-ಪ್ರತಿವಾದ-ವಿವಾದ ಮತ್ತು ರಾಜಕೀಯ ಭಿನ್ನಾಭಿಪ್ರಾಯಗಳು ತೀರಾ ಸಹಜ. ಆದರೆ ವಿರೋಧ ಎನ್ನುವುದು ಕೇವಲ ಸಿದ್ಧಾಂತ ಮತ್ತು ಭಾಷಣದ ವೇದಿಕೆಗೆ ಮಾತ್ರ ಸೀಮಿತವಾಗಿರಬೇಕು. ಅದನ್ನು ಹೊರತುಪಡಿಸಿ ವೈಯಕ್ತಿಕ ದ್ವೇಷವಾಗಿ ಬದಲಾಗಬಾರದು! ನಿನ್ನೆ ಬೆಂಗಳೂರಿನಲ್ಲಿ ಪ್ರಧಾನಿ ಮೋದಿ ಹಾಗೂ ಸಿಎಂ ಡಿಕೆ ಶಿವಕುಮಾರ್ ನಡುವೆ ನಡೆದ ಹೃದಯಸ್ಪರ್ಷಿ ದೃಶ್ಯಗಳನ್ನ ನೋಡಿ ಅವರ ಕಾರ್ಯಕರ್ತರು ಹಾಗೂ ಬೆಂಬಲಿಗರು ಕಲಿಯಬೇಕಾಗಿರೋದು ತುಂಬಾ ಇದೆ.

ಪ್ರಧಾನಿ ಮೋದಿ ನಿನ್ನೆ ಬೆಂಗಳೂರು ಹಾಗೂ ಮೈಸೂರಿಗೆ ಭೇಟಿ ನೀಡಿದ್ದರು. ನಮ್ಮ ಮೆಟ್ರೋದ ಬಹುನಿರೀಕ್ಷಿತ ಪಿಂಕ್ ಲೈನ್ (ಕಾಳೇನ ಅಗ್ರಹಾರದಿಂದ ತಾವರೆಕೆರೆ, ಎಸ್.ಜಿ. ಪಾಳ್ಯ ಮಾರ್ಗ) ಸೇರಿದಂತೆ ಹಲವು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದರು. ಮೋದಿ ಅವರ ಕರ್ನಾಟಕ ಪ್ರವಾಸದಲ್ಲಿ ರಾಜ್ಯದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಸಾಥ್ ನೀಡಿದ್ದರು.

ಗಮನ ಸೆಳೆದ ನಗು

ರಾಷ್ಟ್ರ ಮತ್ತು ರಾಜ್ಯ ರಾಜಕಾರಣದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಎದುರಾಳಿ ಪಕ್ಷಗಳು. ನಿನ್ನೆಯ ಕಾರ್ಯಕ್ರಮದಲ್ಲಿ ಮೋದಿ, ಡಿ.ಕೆ. ಶಿವಕುಮಾರ್ ಮತ್ತು ಕೃಷ್ಣ ಬೈರೇಗೌಡರ ನಡುವೆ ಕಂಡುಬಂದ ಆತ್ಮೀಯತೆ ಎಲ್ಲರ ಗಮನ ಸೆಳೆಯಿತು. ಮೆಟ್ರೋ ಉದ್ಘಾಟನೆಯ ವೇಳೆ ಸ್ವಲ್ಪ ದೂರದಲ್ಲಿ ನಿಂತಿದ್ದ ಡಿ.ಕೆ.ಶಿವಕುಮಾರ್ ಅವರ ಕೈ ಹಿಡಿದು ಮೋದಿ ತಮ್ಮ ಪಕ್ಕಕ್ಕೆ ಕರೆದುಕೊಂಡು ಜೊತೆಯಾಗಿ ಹಸಿರು ನಿಶಾನೆ ತೋರಿಸಿ ರೈಲಿಗೆ ಚಾಲನೆ ನೀಡಿದರು.

ನಂತರ ತಾವರೆಕೆರೆಯಿಂದ ಐಐಎಂ ಬೆಂಗಳೂರು ನಿಲ್ದಾಣದವರೆಗೆ ಮೆಟ್ರೋದಲ್ಲಿ ಪ್ರಯಾಣಿಸುವಾಗಲೂ ಉಭಯ ನಾಯಕರು ಆತ್ಮೀಯವಾಗಿ ಕಾಣಿಸಿಕೊಂಡರು. ತಾವಿದ್ದ ಅಮೂಲ್ಯ ಸಮಯದಲ್ಲಿ ಮನಸಾರೆ ನಗುತ್ತಾ ಸಮಯ ಕಳೆದರು. ವೇದಿಕೆಯ ಮೇಲೆ ಡಿ.ಕೆ. ಶಿವಕುಮಾರ್ ರಾಜ್ಯದ ಮೆಟ್ರೋ ಅನುದಾನದ ಹಂಚಿಕೆ ಕುರಿತು ತಮ್ಮ ಸರ್ಕಾರದ ನಿಲುವನ್ನು ಸ್ಪಷ್ಟವಾಗಿ ಮಂಡಿಸಿದರೂ ವೈಯಕ್ತಿಕವಾಗಿ ನಾಯಕರ ನಡುವೆ ಯಾವುದೇ ಕಹಿ ಅಥವಾ ದ್ವೇಷ ಕಂಡುಬರಲಿಲ್ಲ.

ಬೆಂಬಲಿಗರು ಕಲಿಯಬೇಕಾಗಿದ್ದು ಏನು?

ಈ ದೃಶ್ಯಗಳನ್ನು ನೋಡಿದಾಗ ಸಾಮಾನ್ಯ ಜನರಿಗೆ ಮತ್ತು ರಾಜಕೀಯ ಕಾರ್ಯಕರ್ತರಿಗೆ ಒಂದು ಮುಖ್ಯವಾದ ವಿಚಾರ ಅರ್ಥವಾಗಬೇಕು. ಗಣ್ಯ ನಾಯಕರೆನಿಸಿಕೊಂಡವರು ಸಾರ್ವಜನಿಕವಾಗಿ ಪರಸ್ಪರ ಎಷ್ಟೇ ಟೀಕೆ-ಟಿಪ್ಪಣಿಗಳನ್ನು ಮಾಡಿಕೊಂಡರೂ, ಎದುರು ಬದುರಾದಾಗ ಎಲ್ಲವನ್ನೂ ಬದಿಗಿಟ್ಟು ನಗುತ್ತಾ ಕೈಕುಲುಕುತ್ತಾರೆ. ಅವರು ಯಾವತ್ತೂ ವೈಯಕ್ತಿಕ ದ್ವೇಷವನ್ನು ಸಾಧಿಸುವುದಿಲ್ಲ.

ಆದರೆ.. ತಳಮಟ್ಟದಲ್ಲಿ ಪರಿಸ್ಥಿತಿ ಹೇಗಿದೆ? ‘ನಮ್ಮ ನಾಯಕ, ನಮ್ಮ ಪಕ್ಷ’ ಎಂದು ಹೇಳಿಕೊಂಡು ಸಾಮಾನ್ಯ ಕಾರ್ಯಕರ್ತರು ಮತ್ತು ಅಭಿಮಾನಿಗಳು ಬೀದಿಗೆ ಇಳಿದು ಹೋರಾಟ ಮಾಡುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿ ಪರಸ್ಪರ ಅಸಭ್ಯವಾಗಿ ನಿಂದಿಸಿಕೊಳ್ಳುತ್ತಾರೆ. ಬೀದಿಗಳಲ್ಲಿ ಗಲಾಟೆ ಮಾಡಿಕೊಂಡು ಹೊಡೆದಾಡುತ್ತಾರೆ. ಕೆಲವೊಮ್ಮೆ ಈ ರಾಜಕೀಯ ದ್ವೇಷ ವಿಕೋಪಕ್ಕೆ ತಿರುಗಿ ಪೊಲೀಸ್ ಕೇಸುಗಳು ದಾಖಲಾಗುತ್ತವೆ. ಪರಿಸ್ಥಿತಿ ಮಿತಿ ಮೀರಿ ಹೋದಾಗ ಜೀವಗಳೇ ಹೋದ ಉದಾಹರಣೆಗಳೂ ಇವೆ.

ಗಣ್ಯ ನಾಯಕರು ರಾಜಕೀಯವನ್ನು ತಮ್ಮ ವೃತ್ತಿ ಮತ್ತು ಸಿದ್ಧಾಂತಕ್ಕೆ ಸೀಮಿತವಾಗಿಟ್ಟುಕೊಂಡು, ವೈಯಕ್ತಿಕವಾಗಿ ತುಂಬಾ ಚೆನ್ನಾಗಿರುತ್ತಾರೆ. ಆದರೆ.. ಅವರನ್ನು ಕುರುಡಾಗಿ ಹಿಂಬಾಲಿಸುವ ಕೆಲವು ಕಾರ್ಯಕರ್ತರು ಮಾತ್ರ ತಮ್ಮ ನೆಮ್ಮದಿ, ಸಂಬಂಧ ಮತ್ತು ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಾರೆ. ರಾಜಕೀಯ ಸಿದ್ಧಾಂತಗಳ ನಡುವೆಯೂ ವೈಯಕ್ತಿಕ ಸೌಹಾರ್ದತೆಯನ್ನು ಕಾಪಾಡಿಕೊಳ್ಳುವುದು ಹೇಗೆ ಎಂಬುದನ್ನು ತಮ್ಮ ನಾಯಕರಿಂದಲೇ ಅವರ ಅಭಿಮಾನಿಗಳು ಕಲಿಯಬೇಕಾದದ್ದು ತುಂಬಾನೇ ಇದೆ. ರಾಜಕೀಯದಲ್ಲಿ ಅಭಿಮಾನ ಮತ್ತು ಬೆಂಬಲ ಇರಲಿ. ಆದರೆ ಅದು ದ್ವೇಷ ಅಥವಾ ಹಿಂಸೆಗೆ ದಾರಿಯಾಗದಿರಲಿ ಎಂಬುದೇ ಮೋದಿ ಮತ್ತು ಡಿಕೆಶಿ ನಡುವಿನ ನಗು ಸಂದೇಶ ನೀಡ್ತಿದೆ.

PREV
Read more Articles on
click me!

Recommended Stories

ಬೆಂಗಳೂರಿನ ಕಸದಿಂದ ಶುದ್ಧ ಇಂಧನ ಮತ್ತು ಸಾವಯವ ಗೊಬ್ಬರ: ₹123 ಕೋಟಿ ವೆಚ್ಚದಲ್ಲಿ ಬೃಹತ್ ಬಯೋಗ್ಯಾಸ್ ಘಟಕ ಸ್ಥಾಪನೆಗೆ ಗೇಲ್ ಪ್ರಸ್ತಾಪ
ವಾಯು ಮಾಲಿನ್ಯಕ್ಕೆ ಬೆಂಗಳೂರು ಟೆಕ್ಕಿಯ ಸ್ಮಾರ್ಟ್ ಪರಿಹಾರ; 15 ಲಕ್ಷ ಜನರ ಉಸಿರಾಟಕ್ಕೆ ಆಸರೆಯಾದ ಹೊಸ ತಂತ್ರಜ್ಞಾನ