ಅಡಕೆ ಮಾರಾಟವಾಗಿ ಎರಡನೇ ದಿನಕ್ಕೆ ಬೆಲೆಯಲ್ಲಿ ದಿಢೀರ್ ಕುಸಿತ ಕಂಡಿದೆ. ಮೊದಲ ದಿನ ಉತ್ತಮ ಬೆಲೆಯೊಂದಿಗೆ ಮಾರುಕಟ್ಟೆ ಆರಂಭವಾಗಿತ್ತು. ಮಂಗಳವಾರ ಬೆಲೆ ಎಷ್ಟಿತ್ತು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
ಶಿವಮೊಗ್ಗ(ಮೇ.13): ಲಾಕ್‌ಡೌನ್ ಬಳಿಕ ಆರಂಭಗೊಂಡ ಅಡಕೆ ವ್ಯಾಪಾರ ಬೆಳೆಗಾರರಲ್ಲಿ ಮಂದಹಾಸ ಮಿನುಗಿಸುತ್ತದೆ ಎಂಬ ನಿರೀಕ್ಷೆಯ ಬೆನ್ನಲ್ಲೇ ಎರಡನೇ ದಿನವೇ ಕ್ವಿಂಟಲ್ ಒಂದಕ್ಕೆ ಸರಾಸರಿ 2 ಸಾವಿರ ಕುಸಿತ ಕಂಡಿದೆ.
ಮಾ. 23 ರಂದು ಲಾಕ್‌ಡೌನ್ ಘೋಷಣೆಯ ಬೆನ್ನಲ್ಲೇ ರಾಜ್ಯದಲ್ಲಿಯೇ ಪ್ರಮುಖ ಅಡಕೆ ಮಾರಾಟ ಕೇಂದ್ರಗಳಲ್ಲಿ ಒಂದಾದ ಶಿವಮೊಗ್ಗ ಅಡಕೆ ಮಾರುಕಟ್ಟೆಕೂಡ ಸ್ಥಗಿತಗೊಂಡಿತ್ತು. ಮೊದಲ ಲಾಕ್‌ಡೌನ್ ಬಳಿಕ ಕೇಂದ್ರ ಸರ್ಕಾರ ಅಡಕೆ ವಹಿವಾಟಿಗೆ ಅವಕಾಶ ನೀಡಿ ಆದೇಶ ನೀಡಿದರೂ, ಯಾರೊಬ್ಬ ವರ್ತಕರು ಮತ್ತು ಸಹಕಾರಿ ಸಂಸ್ಥೆಗಳು ವ್ಯವಹಾರ ಆರಂಭಿಸುವ ಗೋಜಿಗೆ ಹೋಗಿರಲಿಲ್ಲ.
ಈ ವೇಳೆಯಲ್ಲಿ ಕನ್ನಡಪ್ರಭ ರೈತರ ಮನವಿಯನ್ನು ಪ್ರಕಟಿಸಿ ಮಾರಾಟ ಆರಂಭಿಸುವಂತೆ ಒತ್ತಡ ಹೇರಿತ್ತು. ಹೀಗಾಗಿ ವರ್ತಕರು ಮತ್ತು ಸಹಕಾರಿ ಸಂಸ್ಥೆಗಳು ಮೇ 11 ರಿಂದ ತಮ್ಮ ವಹಿವಾಟು ಆರಂಭಿಸಿದ್ದವು. ಜೊತೆಗೆ ಧಾರಣೆ ಕುಸಿಯಲು ಯಾವ ಕಾರಣಕ್ಕೂ ಬಿಡುವುದಿಲ್ಲ ಎಂಬ ಆಶ್ವಾಸನೆ ನೀಡಿದ್ದವು. ಮೊದಲ ದಿನ ರೈತರು ಖುಷಿ ಪಡುವುದಾದಷ್ಟುಧಾರಣೆ ದಾಖಲಾಗಿದ್ದರಿಂದ ಸಹಜವಾಗಿಯೇ ಬೆಳೆಗಾರರಲ್ಲಿನ ಆತಂಕ ದೂರವಾಗಿತ್ತು. ಆದರೆ ಎರಡನೇ ದಿನವಾದ ಮಂಗಳವಾರ ಧಾರಣೆಯಲ್ಲಿ ಸರಾಸರಿ 2 ಸಾವಿರ ಕುಸಿತ ಕಂಡಿದ್ದು ಆತಂಕಕ್ಕೆ ಕಾರಣವಾಗಿದೆ. ಮಾರುಕಟ್ಟೆಯಲ್ಲಿ ಬೇಡಿಕೆ ಕಾಣದ ಹಿನ್ನೆಲೆಯಲ್ಲಿ ಖರೀದಿದಾರರು ಕಡಿಮೆ ಟೆಂಡರ್ ಬರೆಯುತ್ತಿದ್ದಾರೆ ಎನ್ನಲಾಗಿದೆ.
ಉತ್ತಮ ಧಾರಣೆಯೊಂದಿಗೆ ಅಡಿಕೆ ವ್ಯವಹಾರ ಆರಂಭ
ಖರೀದಿಗೆ ಮುಂದಾಗುತ್ತಿಲ್ಲ:
ಮಾರುಕಟ್ಟೆಯಲ್ಲಿ ಖರೀದಿದಾರರಲ್ಲಿ ಶೇ.10 ರಷ್ಟುವರ್ತಕರು ಕೂಡಾ ಭಾಗಿಯಾಗುತ್ತಿಲ್ಲ. ಮಾಮ್ಕೋಸ್ ಮಾತ್ರ ಸೋಮವಾರ ಉತ್ತಮ ಧಾರಣೆಯಲ್ಲಿ ಖರೀದಿಸಿತು. ಇನ್ನೊಂದೆಡೆ ಒಂದಿಬ್ಬರ ಹೊರತಾಗಿ ಬೇರೆ ವರ್ತಕರು ಮೇ 17 ರ ತನಕ ಖರೀದಿಗೆ ಮುಂದಾಗುವುದಿಲ್ಲ ಎಂದು ಮಾರುಕಟ್ಟೆಮೂಲಗಳಿಂದ ತಿಳಿದು ಬಂದಿದೆ.
ರೈತರಲ್ಲಿಯೂ ಮಾರಾಟಕ್ಕೆ ಉತ್ಸಾಹವಿಲ್ಲ:
ಇದರ ಜೊತೆಗೆ ರೈತರಲ್ಲಿಯೂ ಆಸಕ್ತಿ ಕಾಣಿಸುತ್ತಿಲ್ಲ. ಸೋಮವಾರ ಧಾರಣೆ ಇದ್ದರೂ, ಅಡಕೆ ಮಾರಿದ ರೈತರು ಬಹಳ ಕಡಿಮೆ. ಕೇವಲ ವ್ಯಾಪಾರಕ್ಕೆ ಬಿಟ್ಟು ಧಾರಣೆ ಎಷ್ಟೆಂದು ನೋಡುತ್ತಿದ್ದಾರೆಯೇ ಹೊರತು ಮಾರಾಟಕ್ಕೆ ಬಿಡುತ್ತಿಲ್ಲ ಎನ್ನಲಾಗಿದೆ. ಇನ್ನಷ್ಟು ಕಾದು ನೋಡುವ ತಂತ್ರದಲ್ಲಿದ್ದಂತೆ ಕಾಣುತ್ತಿದೆ. ಮೇ 17 ರವರೆಗೂ ಇದೇ ಸ್ಥಿತಿ ಮುಂದುವರೆಯಲಿದ್ದು, ನಂತರ ಚಿತ್ರಣ ಬೇರೆಯಾಗಲಿದೆ ಎನ್ನುತ್ತಾರೆ ವರ್ತಕರೊಬ್ಬರು.
ಸೋಮವಾರದ ಧಾರಣೆ:
ಸರಕು: ರು. 42125-68003
ಬೆಟ್ಟೆ ರು. 32519-39109
ರಾಶಿಇಡಿ ರು. 30169-36001
ಗೊರಬಲು ರು. 15499-21291
ಮಂಗಳವಾರದ ಧಾರಣೆ
ಸರಕು: ರು. 53436-53436
ಬೆಟ್ಟೆ ರು. 36009-36009
ರಾಶಿಇಡಿ ರು. 28019-28019
ಗೊರಬಲು ರು. 17319-20219