ಅಡಕೆ ತೋಟಗಳು ಲೀಸ್‌ಗಿವೆ..! ಮಲೆನಾಡಲ್ಲಿ ಉದ್ಯೋಗ ಸೃಷ್ಟಿಗೆ ಹೊಸ ಕಲ್ಪನೆ

By Kannadaprabha NewsFirst Published Dec 6, 2019, 10:34 AM IST
Highlights

ಅಡಕೆ ತೋಟಗಳನ್ನು ಲೀಸ್‌ ಮೇಲೆ ಕೊಡುವ ಹೊಸ ಯೋಜನೆಯೊಂದನ್ನು ಮಲೆನಾಡಿನ ರೈತರು ರೂಪಿಸಿದ್ದಾರೆ. ಈ ಮೂಲಕ ಹಾಳು ಬೀಳುತ್ತಿರುವ ತೋಟಗಳಿಗೆ ಕಾಯಕಲ್ಪ ನೀಡುವುದು ಒಂದೆಡೆಯಾದರೆ, ಇನ್ನೊಂದೆಡೆ ಗ್ರಾಮೀಣ ಪ್ರದೇಶದಲ್ಲಿ ಸ್ವಯಂ ಉದ್ಯೋಗ ಸೃಷ್ಟಿಸುವ ಪ್ರಯತ್ನವೂ ಇಲ್ಲಿದೆ.

ಗೋಪಾಲ್‌ ಯಡಗೆರೆ

ಶಿವಮೊಗ್ಗ[ಡಿ.06]:  ವೃದ್ಧಾಶ್ರಮವಾಗುತ್ತಿರುವ ಮಲೆನಾಡಿನ ಕೌಟುಂಬಿಕ ಸ್ಥಿತಿಯಿಂದಾಗಿ ಅಲ್ಲಿನ ಅಡಕೆ ತೋಟಗಳು ಸಾಲು ಸಾಲು ಹಾಳು ಬೀಳುತ್ತಿವೆ. ಹಾಗೆಂದು ಬಹಳ ಮಂದಿಗೆ ಈ ತೋಟಗಳನ್ನು ಮಾರಾಟ ಮಾಡಲು ಮನಸ್ಸಿಲ್ಲ. ಇನ್ನೊಂದೆಡೆ ಮಾರಾಟ ಮಾಡಲು ಸಿದ್ಧವಾಗುತ್ತಿರುವ ಮಂದಿಯೂ ಇದ್ದಾರಾದರೂ, ಕೊಳ್ಳುವವರೇ ಇಲ್ಲ ಎನ್ನುವಂತಹ ಸ್ಥಿತಿ ನಿರ್ಮಾಣವಾಗುತ್ತಿದೆ. ಇಂತಹ ಹೊತ್ತಿನಲ್ಲಿಯೇ ಈ ತೋಟಗಳನ್ನು ಲೀಸ್‌ ಮೇಲೆ ಕೊಡುವ ಹೊಸ ಯೋಜನೆಯೊಂದನ್ನು ಮಲೆನಾಡಿನ ರೈತರು ರೂಪಿಸಿದ್ದಾರೆ. ಈ ಮೂಲಕ ಹಾಳು ಬೀಳುತ್ತಿರುವ ತೋಟಗಳಿಗೆ ಕಾಯಕಲ್ಪ ನೀಡುವುದು ಒಂದೆಡೆಯಾದರೆ, ಇನ್ನೊಂದೆಡೆ ಗ್ರಾಮೀಣ ಪ್ರದೇಶದಲ್ಲಿ ಸ್ವಯಂ ಉದ್ಯೋಗ ಸೃಷ್ಟಿಸುವ ಪ್ರಯತ್ನವೂ ಇಲ್ಲಿದೆ.

ಕೃಷಿಯಲ್ಲಿ ಆಸಕ್ತಿ ಇದ್ದು, ಭೂಮಿ ಕೊಂಡುಕೊಳ್ಳಲು ಬಂಡವಾಳವಿಲ್ಲದ ಮಂದಿಗೆ ಈ ಯೋಜನೆ ಇದೀಗ ಇತ್ತ ಸೆಳೆಯುವಂತೆ ಮಾಡಿದೆ. ತಾವೂ ತಾತ್ಕಾಲಿಕವಾಗಿ ತೋಟದ ಮಾಲೀಕರಾಗುವ ಅವಕಾಶ ಇದಾಗಿದೆ. ಇತ್ತೀಚಿನ ದಿನಗಳಲ್ಲಿ ಭೂಮಿಯ ಬೆಲೆ ಗಗನಕ್ಕೆ ಏರುತ್ತಿದ್ದು, ಎಕರ ಅಡಕೆ ತೋಟಕ್ಕೆ 15 ಲಕ್ಷದಿಂದ 30 ಲಕ್ಷದವರೆಗೂ ಬೆಲೆ ಇದ್ದು, ಇಂತಹ ತೋಟವನ್ನು ಕೊಳ್ಳುವುದು ಸುಲಭದ ಮಾತಲ್ಲ. ಬಹಳ ಮಂದಿಗೆ ಸಾಧ್ಯವೂ ಇಲ್ಲ. ಆದರೆ ಬಯಕೆ ಮಾತ್ರ ಹಾಗೆಯೇ ಉಳಿದಿದೆ. ತೋಟ ಮಾಡುವ ಕನಸು, ಕೃಷಿಯ ಕಸುವು, ಜ್ಞಾನ ಎಲ್ಲವೂ ಇದ್ದರೂ ಭೂಮಿ ಇಲ್ಲದೆ ಏನೂ ಸಾಧ್ಯವಾಗದೆ ಇರುವ ಮಂದಿಗೆ ಇದೀಗ ಅವಕಾಶವೊಂದು ಎದುರಾಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಮಲೆನಾಡಿನ ಅನೇಕ ಹಳ್ಳಿಗಳು ಈಗ ವೃದ್ದಾಶ್ರಮವಾಗುತ್ತಿವೆ. ಇರುವ ಒಬ್ಬಿಬ್ಬರು ಮಕ್ಕಳು ಓದಿಕೊಂಡು ನಗರಕ್ಕೆ ಮುಖ ಮಾಡಿರುವಾಗ ವೃದ್ಧ ದಂಪತಿಗಳೇ ಈ ತೋಟ ಕಾಯುವ ಮಂದಿಯಾಗಿದ್ದಾರೆ. ದೇಹದಲ್ಲಿ ಕಸುವಿಲ್ಲ, ಆಳುಗಳು ಸಿಗುತ್ತಿಲ್ಲ ಎನ್ನುವ ಸ್ಥಿತಿಯಲ್ಲಿ ತೋಟಗಳು ದಿನದಿಂದ ದಿನಕ್ಕೆ ಹಾಳು ಬೀಳುತ್ತಿವೆ. ಹಾಗೆಂದು ಊರ ತೋಟ ಕೊಟ್ಟು ಪೇಟೆ ಸೇರುವ ಮನಸ್ಸಿಲ್ಲ. ಕೆಲವರಿಗೆ ಮಾರಾಟ ಮಾಡುವ ಅನಿವಾರ್ಯತೆ ಎದುರಾಗಿದ್ದರೂ, ಸರಿಯಾದ ಬೆಲೆ ಕೊಟ್ಟು ಕೊಳ್ಳುವವರಿಲ್ಲ ಎನ್ನುವ ಸ್ಥಿತಿ. ಇಂತಹ ಎಲ್ಲ ಸಮಸ್ಯೆಗಳಿಗೆ ಇದೀಗ ಪರಿಹಾರವೊಂದನ್ನು ಮಲೆನಾಡ ರೈತರು ರೂಪಿಸಿದ್ದಾರೆ.

ಗುತ್ತಿಗೆ ಆಧಾರದ ಮೇಲೆ ಭೂಮಿ:

ಇದೇ ಗುತ್ತಿಗೆಯ ಮೇಲೆ ಭೂಮಿಯನ್ನು ಆಸಕ್ತರಿಗೆ ನೀಡುವುದು. ಕೃಷಿ ಭೂಮಿ ಕೊಳ್ಳಲು ಶಕ್ತಿ ಇಲ್ಲದೆ ಇರುವ ಆಸಕ್ತ ರೈತರಿಗೆ ಕೃಷಿ ಭೂಮಿ ಹೊಂದುವ ಅವಕಾಶ ಇಲ್ಲಿದೆ. ಜೊತೆಗೆ ಇದರಲ್ಲಿ ಸಾಕಷ್ಟುಹಣ ಸಂಪಾದನೆಯನ್ನೂ ಮಾಡಬಹುದಾಗಿದೆ.

5-7 ವರ್ಷಗಳವರೆಗೆ ಅಡಕೆ ತೋಟವನ್ನು ಗುತ್ತಿಗೆಯ ಮೇಲೆ ನೀಡುವುದು. ತೋಟದ ಮೂಲ ಉತ್ಪತ್ತಿ ಮಾತ್ರ ಮಾಲೀಕರಿಗೆ ಸಿಗುತ್ತದೆ. ಉಳಿದಂತೆ ತೋಟದಲ್ಲಿನ ಉಪ ಉತ್ಪನ್ನಗಳಾದ ಕಾಳು ಮೆಣಸು, ಬಾಳೆ, ಏಲಕ್ಕಿ ಇತ್ಯಾದಿ ಬೆಳೆಗಳು ಗುತ್ತಿಗೆ ಪಡೆದವರಿಗೆ. ಜೊತೆಗೆ ತೋಟದಲ್ಲಿ ಇರುವ ಜಾಗವನ್ನು ಬಳಸಿಕೊಂಡು ಡೈರಿ ಫಾರಂ ಸ್ಥಾಪನೆ, ಎರೆ ಗೊಬ್ಬರ ಉತ್ಪಾದನೆಯನ್ನು ಕೂಡ ಮಾಡಿ ಹಣ ಸಂಪಾದಿಸಬಹುದು.

ಶಿರಸಿಯ ನರಸಿಂಹಮೂರ್ತಿ ಆಶೀಸರ ಮತ್ತವರ ರೈತ ಗೆಳೆಯರು ಸೇರಿಕೊಂಡು ಇಂತಹ ವ್ಯವಸ್ಥೆಯೊಂದನ್ನು ರೂಪಿಸಿದ್ದಾರೆ. ಸಾಮಾಜಿಕ ಜಾಲತಾಣವನ್ನು ಬಳಸಿಕೊಂಡು ಈ ವ್ಯವಸ್ಥೆಯ ಬಗ್ಗೆ ಪ್ರಚಾರ ಮಾಡುತ್ತಿದ್ದಾರೆ. ಈಗಾಗಲೇ ಹಲವಾರು ಆಸಕ್ತ ಕೃಷಿಕರು ತಮ್ಮನ್ನು ಸಂಪರ್ಕಿಸಿದ್ದಾರೆ ಎನ್ನುತ್ತಾರೆ ನರಸಿಂಹಮೂರ್ತಿಯವರು. ಈ ಸಂಬಂಧ ಫೇಸ್‌ಬುಕ್‌ ಪೇಜ್‌ ಒಂದನ್ನು ಆರಂಭಿಸಲು ಸಿದ್ಧತೆ ನಡೆಸಿದ್ದಾರೆ. ಕೃಷಿಯಲ್ಲಿ ಆಸಕ್ತಿ ಇರುವ ಮಂದಿ ಮತ್ತು ತೋಟವನ್ನು ಲೀಸ್‌ ಮೇಲೆ ಕೊಡ ಬಯಸುವವರಿಗೆ ವೇದಿಕೆಯೊಂದನ್ನು ಕಲ್ಪಿಸಿಕೊಡುವ ಪ್ರಯತ್ನ ಇದಾಗಿದೆ.

ಹೇಗಿರುತ್ತೆ ಗುತ್ತಿಗೆ?:

ಗುತ್ತಿಗೆ ಪಡೆಯುವವರು ಮತ್ತು ಕೊಡುವವರ ಮಧ್ಯೆ ಕರಡು ಒಪ್ಪಂದ ಒಂದು ನಡೆಯುತ್ತದೆ. ಇದು ದಾಖಲಾಗುತ್ತದೆ ಕೂಡ. ಸದ್ಯದ ಚಿಂತನೆಯ ಪ್ರಕಾರ ಗರಿಷ್ಠ 7 ವರ್ಷ ಗುತ್ತಿಗೆ ನೀಡಬಹುದು. ಆದರೆ ಪ್ರತಿ ವರ್ಷ ಗುತ್ತಿಗೆ ನವೀಕರಣವಾಗಬೇಕು. ಗುತ್ತಿಗೆ ಪಡೆಯುವ ತೋಟದಲ್ಲಿ ಸಂಪೂರ್ಣ ಸಾವಯವ ಕೃಷಿ ಚಟುವಟಿಕೆ ನಡೆಸಬೇಕು. ರಾಸಾಯನಿಕ ಸುರಿಯುವಂತಿಲ್ಲ. ಇವೆಲ್ಲ ಪ್ರಾರಂಭಿಕ ಚಿಂತನೆಗಳು. ಈ ವ್ಯವಸ್ಥೆ ಜಾರಿಗೆ ಬಂದಲ್ಲಿ ಮತ್ತು ಹೆಚ್ಚು ಹೆಚ್ಚು ಜನ ಆಸಕ್ತಿ ತೋರಿದಂತೆಲ್ಲ ಇದಕ್ಕೊಂದು ವ್ಯವಸ್ಥಿತ ಚೌಕಟ್ಟು ತನ್ನಿಂತಾನೆ ರೂಪಿತವಾಗಬಹುದು ಎನ್ನುತ್ತಾರೆ ಕೃಷಿಕ ನಾರಾಯಣಮೂರ್ತಿ.

ಪ್ರತಿ ಎಕರೆ ತೋಟದಲ್ಲಿ ಅಡಕೆಯನ್ನು ಹೊರತು ಪಡಿಸಿ 2-3 ಲಕ್ಷ ರು. ದುಡಿಯಬಹುದು ಎನ್ನುತ್ತಾರೆ ತಜ್ಞ ಕೃಷಿಕರು. ಆದರೆ ಈ ಕೃಷಿ ಶ್ರಮವನ್ನು ಬೇಡುತ್ತದೆ. ತೋಟದಲ್ಲಿಯೇ ಇದ್ದು ಸರಿಯಾಗಿ ಕೆಲಸ ಮಾಡಿದರೆ ಇಷ್ಟುಲಾಭ ಗಳಿಸಬಹುದು. ಕೆಲವೊಮ್ಮೆ ಹೆಚ್ಚು ಕೂಡ ಗಳಿಸಬಹುದು. ಎಲ್ಲವೂ ಅವರವರ ಪ್ರಯತ್ನದ ಮೇಲೆ ನಿಂತಿರುತ್ತದೆ ಎನ್ನುತ್ತಾರೆ.

ಒಟ್ಟಾರೆ ಮಲೆನಾಡಿನ ವೃದ್ದಾಶ್ರಮಗಳ ನಡುವೆ ಅಡಕೆ ತೋಟಗಳಲ್ಲಿ ಪುನಃ ಕಲರಸ ಸೃಷ್ಟಿಸುವ ಪ್ರಯತ್ನವೊಂದು ಸಾಗಿದೆ. ಈ ಮೂಲಕ ಗ್ರಾಮೀಣ ಪ್ರದೇಶದಲ್ಲಿಯೂ ಸ್ವಯಂ ಉದ್ಯೋಗ ಸೃಷ್ಟಿಸುವ ಪ್ರಯತ್ನ ಇದಾಗಿದೆ.

ಮಲೆನಾಡು ವೃದ್ದಾಶ್ರಮವಾಗುತ್ತಿದೆ. ತೋಟಗಳು ಹಾಳು ಬೀಳುತ್ತಿವೆ. ಮಾರಾಟ ಮಾಡಲು ಮನಸ್ಸಿಲ್ಲ. ಹಾಗೆಂದು ಉಳಿಸಿಕೊಳ್ಳಲು ಕಷ್ಟವಾಗುತ್ತಿದೆ. ಹೀಗಾಗಿ ನಾವು ಕೆಲವು ಕೃಷಿ ಸ್ನೇಹಿತರು ಸೇರಿಕೊಂಡು ಇಂತಹ ಚಿಂತನೆಯೊಂದನ್ನು ರೂಪಿಸಿದ್ದೇವೆ. ಈಗಾಗಲೇ ಹಲವಾರು ಮಂದಿ ಸಂಪರ್ಕ ಮಾಡುತ್ತಿದ್ದಾರೆ. ಪ್ರಚಾರ ಹೆಚ್ಚಾದಂತೆಲ್ಲಾ ಆಸಕ್ತರು ಹೆಚ್ಚು ಸಂಪರ್ಕ ಮಾಡಬಹುದು. ತೋಟಗಳನ್ನು ಉಳಿಸಿಕೊಂಡು, ಗ್ರಾಮೀಣ ಭಾಗದಲ್ಲಿ ಸ್ವಯಂ ಉದ್ಯೋಗ ಸೃಷ್ಟಿಗೆ ಇದೊಂದು ಮಹತ್ವದ ಪ್ರಯತ್ನ.

-ನರಸಿಂಹಮೂರ್ತಿ ಆಶೀಸರ.

click me!