
ವಿಐಪಿ ಸಂಸ್ಕೃತಿಗೆ ಕಡಿವಾಣ ಹಾಕಬೇಕು ಎನ್ನುವ ಮಾತು ಬಲು ಹಿಂದಿನಿಂದಲೂ ಕೇಳಿ ಬರುತ್ತಲೇ ಇದೆ. ಪ್ರಧಾನಿ, ಮುಖ್ಯಮಂತ್ರಿ ಸೇರಿದಂತೆ ಕೆಲವು ವಿಐಪಿಗಳಿಗೆ ಭಾರಿ ಭದ್ರತೆ ಅವಶ್ಯಕತೆ ಇರುವುದು ನಿಜವೇ. ಆದರೆ, ಸದ್ಯದ ಸ್ಥಿತಿ ಹೇಗಿದೆ ಎಂದರೆ ಯಾರೋ ಸಚಿವರು, ಶಾಸಕರು ಮನೆಯಿಂದಲೋ, ಕಚೇರಿಯೊಂದಲೋ ಹೊರಟರು ಎಂದರೆ, ಗಂಟೆಗಟ್ಟಲೆ ಟ್ರಾಫಿಕ್ ನಿಲ್ಲಿಸಲಾಗುತ್ತದೆ. ಅದರಲ್ಲಿ ಎಷ್ಟೋ ಬಾರಿ ತುರ್ತಾಗಿ ಕೆಲಸಕ್ಕೆ ಹೋಗುವವರು, ಆಸ್ಪತ್ರೆಗೆ ತೆರಳುತ್ತಿರುವವರು, ಗರ್ಭಿಣಿಯರು, ರೋಗಿಗಳು ಎಲ್ಲರೂ ಇದ್ದರೂ ಜನರಿಂದಲೇ ಆರಿಸಿ ಜನಪ್ರತಿನಿಧಿ ಆದ್ಮೇಲೆ ಮುಗಿಯಿತಲ್ವಾ, ಜನರು ಗಂಟೆಗಟ್ಟಲೆ ಜೀವ ಕೈಯಲ್ಲಿ ಹಿಡಿದು ಟ್ರಾಫಿಕ್ನಲ್ಲಿ ಕಾಯುತ್ತಿದ್ದರೂ, ಅವರಿಗೆ ಮಾತ್ರ ಸಿಗ್ನಲ್ ಫ್ರೀ ದಾರಿ ಬೇಕಲ್ಲವೆ, ದಿನನಿತ್ಯವೂ ಜನರ ಹಿಡಿಶಾಪ ಹಾಕಿಕೊಂಡೇ ಸಿಗ್ನಲ್ಫ್ರೀಯಾಗಿ ಓಡಾಡುತ್ತಿದ್ದಾರೆ ಜನಪ್ರತಿನಿಧಿಗಳು.
ಆದರೆ, ಪ್ರೊಟೋಕಾಲ್ ಪ್ರಕಾರ, ಪ್ರಧಾನಿ, ಮುಖ್ಯಮಂತ್ರಿಗಳಂತೆ ರಾಜ್ಯಪಾಲರಿಗೂ ಭಾರಿ ಭದ್ರತೆಯ ಅಗತ್ಯ ಇರುವ ಕಾರಣದಿಂದ ಅವರಿಗೆ ಸಿಗ್ನಲ್ಫ್ರೀ ಮಾಡುವುದು ಪೊಲೀಸರ ಕರ್ತವ್ಯ. ಇದೇ ಕಾರಣಕ್ಕೆ ಅರ್ಧ, ಮುಕ್ಕಾಲು ಗಂಟೆ ಸಿಗ್ನಲ್ನಲ್ಲಿಯೇ ವಾಹನಗಳನ್ನು ಪೊಲೀಸರು ತಡೆದು ನಿಲ್ಲಿಸುವುದು ಮಾತ್ರ ಹಲವರಿಗೆ ಅಸಹನೀಯ ಆಗುವುದು ಉಂಟು. ಏಕೆಂದರೆ ವಿಐಪಿಗಿಂತಲೂ ಮುಖ್ಯವಾದದ್ದು, ಜನರಿಗೆ ತಮ್ಮವರ ಜೀವ ಅಲ್ಲವೆ. ಅಂಥದ್ದೇ ಒಂದು ಘಟನೆ ಬೆಂಗಳೂರಿನಲ್ಲಿ ನಡೆದಿದೆ. ರಾಜ್ಯಪಾಲರು ಬರುವ ಕಾರಣದಿಂದ ವಿಐಪಿ ಬೆಂಗಾವಲು ಪಡೆಗಾಗಿ ಒಂದು ರಸ್ತೆಯನ್ನು ನಿರ್ಬಂಧಿಸಿದ್ದರಿಂದ ವ್ಯಕ್ತಿಯೊಬ್ಬ ರಸ್ತೆ ಮಧ್ಯೆ ಕುಳಿತು ಗಲಾಟೆ ಮಾಡಿರುವ ಘಟನೆ ನಡೆದಿದೆ.
ಈ ವ್ಯಕ್ತಿ ತನ್ನ ಗರ್ಭಿಣಿ ಪತ್ನಿಯೊಂದಿಗೆ ಪ್ರಯಾಣಿಸುತ್ತಿದ್ದ. ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರ ವಾಹನ ಬರಬೇಕಿದ್ದ ಕಾರಣದಿಂದ ಹಳೆಯ ವಿಮಾನ ನಿಲ್ದಾಣ ರಸ್ತೆಯಲ್ಲಿ ದೀರ್ಘಕಾಲದ ಟ್ರಾಫಿಕ್ ತಡೆಹಿಡಿಯಲಾಗಿತ್ತು. ಗರ್ಭಿಣಿ ಪತ್ನಿಯನ್ನು ತುರ್ತಾಗಿ ಆಸ್ಪತ್ರೆಗೆ ಸಾಗಿಸಬೇಕಿತ್ತು. ಆ ಸಮಯದಲ್ಲಿ ಆ ವ್ಯಕ್ತಿಯ ಸ್ಥಿತಿ ಹೇಗಿರಬೇಕು ಎನ್ನುವುದನ್ನು ಬೇರೆ ಹೇಳಬೇಕಾಗಿಲ್ಲ. ಆದರೆ ಏನು ಮಾಡಿದರೂ ರಾಜ್ಯಪಾಲರ ವಾಹನ ಬರಲಿಲ್ಲ. ಕಾದೂ ಕಾದೂ ಸುಸ್ತಾದ ವ್ಯಕ್ತಿ ರಸ್ತೆ ಮಧ್ಯೆ ಧರಣಿ ಕುಳಿತೇ ಬಿಟ್ಟ! ಧಿಕ್ಕಾರ ಕೂಗಿದ.
ಪೊಲೀಸರು ಮತ್ತು ಆ ವ್ಯಕ್ತಿಯ ನಡುವೆ ನಡೆದ ಸಂಭಾಷಣೆ ಹೀಗಿದೆ ನೋಡಿ.
ಸಂಚಾರ ಪೊಲೀಸರು: "ಪಕ್ಕಕ್ಕೆ ಸರಿಯಿರಿ. ಅಲ್ಲಿ ನಿಂತುಕೊಳ್ಳಿ."
ವ್ಯಕ್ತಿ: "ನನ್ನ ಹೆಂಡತಿ ಗರ್ಭಿಣಿ. ನಮಗೂ ಕೆಲಸವಿದೆ, ಅಲ್ಲವೇ?"
ಸಂಚಾರ ಪೊಲೀಸರು: ಹೌದು. ಆದರೆ ನಮಗೆ ಸಿಗ್ನಲ್ ನಿರ್ಬಂಧಿಸಲೇಬೇಕು.
ವ್ಯಕ್ತಿ: "ನನ್ನ ಹೆಂಡತಿ ಗರ್ಭಿಣಿ. ನೀವು ಸಿಗ್ನಲ್ ಅನ್ನು ಏಕೆ ನಿರ್ಬಂಧಿಸಿದ್ದೀರಿ? ರಾಜ್ಯಪಾಲರು ವಿಐಪಿ ಆಗಿದ್ದಾರೆ ನಿಜ, ನಾವು ಯಾರೂ ಅಲ್ಲವೇ?"
ಸಂಚಾರ ಪೊಲೀಸ್: "ನೀವೂ ಒಬ್ಬ ವಿಐಪಿ. ಈಗ ಎದ್ದು ಹೋಗಿ. ನೀವು ಎದ್ದೇಳುತ್ತೀರೋ ಇಲ್ಲವೋ?"
ವ್ಯಕ್ತಿ: "ಇಲ್ಲ."
ಸಂಚಾರ ಪೊಲೀಸ್: "ನೀವು ಎದ್ದೇಳುತ್ತೀರೋ ಇಲ್ಲವೋ?"
ವ್ಯಕ್ತಿ: "ಇಲ್ಲ."
ಇಷ್ಟು ವಿಡಿಯೋ ವೈರಲ್ ಆಗಿದೆ. ಆ ಬಳಿಕ ಆ ವ್ಯಕ್ತಿ ಎದ್ದು ಹೋದನೋ ಇಲ್ಲವೋ ಎನ್ನುವ ದೃಶ್ಯಗಳನ್ನು ಬಿಡುಗಡೆ ಮಾಡಲಾಗಿಲ್ಲ. ಆದರೆ, ವೈರಲ್ ವಿಡಿಯೋಗಳು ಬೆಂಗಾವಲು ವಾಹನವು ಅಂತಿಮವಾಗಿ ಜನದಟ್ಟಣೆಯ ರಸ್ತೆಬದಿಯನ್ನು ಹಾದುಹೋಗುತ್ತಿರುವುದನ್ನು ತೋರಿಸುತ್ತಿದೆ. ರಾಜ್ಯಪಾಲರಿಗೆ ಪ್ರೊಟೋಕಾಲ್ ಪ್ರಕಾರ, ಹೀಗೆ ಮಾಡುವುದು ಸರಿಯಾದರೂ, ಜನಪ್ರತಿನಿಧಿಗಳಿಗೂ ಇಂಥ ವ್ಯವಸ್ಥೆಯಿರುವ ಕಾರಣ ರೋಸಿ ಹೋಗಿರುವ ಜನರು, ವ್ಯಕ್ತಿಗೆ ಶ್ಲಾಘನೆಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.