GBA ವಿರುದ್ಧ 1 ಕಿ.ಮೀ ಚಾಲೆಂಜ್ ಆರಂಭಿಸಿದ ಬೆಂಗಳೂರಿಗರು: ಫುಟ್‌ಪಾತ್‌ಗಾಗಿ ಹುಡುಕಾಟ

Published : Jun 01, 2026, 06:48 AM IST
Bengaluru

ಸಾರಾಂಶ

ಮಾಲಿನ್ಯ ಮತ್ತು ಟ್ರಾಫಿಕ್ ದಟ್ಟಣೆ ಕಡಿಮೆ ಮಾಡಲು ಜಿಬಿಎ ನೀಡಿದ 'ಒಂದು ಕಿ.ಮೀ ನಡಿಗೆ ಚಾಲೆಂಜ್'ಗೆ ಬೆಂಗಳೂರಿನ ನಾಗರಿಕರು ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ನಡೆಯಲು ಯೋಗ್ಯವಾದ ಫುಟ್‌ಪಾತ್‌ಗಳೇ ಇಲ್ಲದಿರುವಾಗ ಇಂತಹ ಸವಾಲುಗಳು ಅಸಂಬದ್ಧ ಎಂದು ಜಾಲತಾಣಗಳಲ್ಲಿ ಒತ್ತುವರಿಯಾದ ಮತ್ತು ಹದಗೆಟ್ಟ ಫುಟ್‌ಪಾತ್‌ಗಳ ಫೋಟೋಗಳೊಂದಿಗೆ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.

ಬೆಂಗಳೂರು: ಕಾರ್ಬನ್ ಡೈ ಆಕ್ಸೈಡ್ ಕಡಿಮೆ ಮಾಡಲು, ಆರೋಗ್ಯ ಉತ್ತಮಪಡಿಸಲು, ಟ್ರಾಫಿಕ್ ದಟ್ಟಣೆ ಕಡಿಮೆ ಮಾಡಲು ನಗರದ ಜನತೆಗೆ ಜಿಬಿಎ ‘ಒಂದು ಕಿ.ಮೀ ನಡಿಗೆ ಚಾಲೆಂಜ್’ ಆಹ್ವಾನಕ್ಕೆ ನಾಗರಿಕರು ನಡೆಯಲು ಫುಟ್‌ಪಾತ್‌ ಎಲ್ಲಿದೆ, ಜಾಗ ಎಲ್ಲಿದೆ ಎಂದು ಜಾಲತಾಣ ಎಕ್ಸ್‌ನಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ. ಒತ್ತುವರಿಯಾಗಿರುವ, ಕಿತ್ತು ಹೋದ ಫುಟ್‌ಪಾತ್‌ಗಳ ನೂರಾರು ಪೋಟೋಗಳನ್ನು ಪೋಸ್ಟ್ ಮಾಡಿ ಜಿಬಿಎ ಅನ್ನು ಟೀಕಿಸಿದ್ದಾರೆ.

1 ಕಿ.ಮೀ ಚಾಲೆಂಜ್

‘ನಗರದಲ್ಲಿ ಕೇವಲ 1 ಕಿ.ಮೀಗಿಂತ ಕಡಿಮೆ ದೂರದ ಪ್ರಯಾಣಕ್ಕೂ ಅನೇಕರು ಆಟೋ ಅಥವಾ ಸ್ವಂತ ವಾಹನಗಳನ್ನು ಅವಲಂಬಿಸುತ್ತಿದ್ದಾರೆ. ಮಾಲಿನ್ಯ ಮತ್ತು ದಟ್ಟಣೆ ಹೆಚ್ಚುತ್ತಿದೆ. ಈ ಸಮಸ್ಯೆಗೆ ಇತಿಶ್ರೀ ಹಾಡಲು ಜೂನ್‌ನಿಂದ 1 ಕಿ.ಮೀ ಚಾಲೆಂಜ್ ಆರಂಭಿಸಲಾಗಿದೆ ಎಂದು ಜಿಬಿಎ ಜಾಲತಾಣಗಳಲ್ಲಿ ಪೋಸ್ಟ್ ಮಾಡಲಾಗಿದೆ.

ಆದರೆ, ನಗರದಲ್ಲಿ ಸರಿಯಾಗಿ ನಡೆಯಲು 100 ಮೀ. ಫುಟ್‌ಪಾತ್ ಸಿಗುವುದಿಲ್ಲ. ನಾಗರಿಕರು ಓಡಾಡಲು ಪೂರಕವಾದ ವಾತಾವರಣ ಇಲ್ಲ. ಆದರೆ, ಇಂತಹ ನೈಜತೆಯ ಅರಿವು ಇಲ್ಲದ ಅಧಿಕಾರಿ ವರ್ಗದವರು ಇಂತಹ ಅಸಂಬದ್ದ ಚಾಲೆಂಜ್‌ಗಳನ್ನು ನೀಡಲು ಸಾಧ್ಯ ಎಂದು ನಾಗರಿಕರು ಟೀಕಿಸಿದ್ದಾರೆ.

ರಮೇಶ್ ಶ್ರೀವತ್ಸಾ ಎಂಬುವರು ಪ್ರತಿಕ್ರಿಯಿಸಿ, ‘ಸರಿ, ನಿಮ್ಮ ಸವಾಲನ್ನು ಸ್ವೀಕರಿಸಿ 1 ಕಿ.ಮೀ ನಡೆಯುವೆ. ಆದರೆ, ಎಲ್ಲಾದರೂ 1 ಕಿ.ಮೀ ಪುಟ್‌ಪಾತ್ ನಿರ್ಮಿಸಿ’ ಎಂದು ವ್ಯಂಗ್ಯವಾಡಿದ್ದಾರೆ.

‘ಇಂತಹ ಜೋಕ್‌ಗಳನ್ನು ನಿಲ್ಲಿಸಿ. ನಾನು ಮೆಜೆಸ್ಟಿಕ್‌ಗೆ ಬಸ್‌, ಮೆಟ್ರೋದಲ್ಲಿ ಬಂದು ಶಿವಾನಂದ ಸರ್ಕಲ್‌ಗೆ 1.5 ಕಿ.ಮೀ ನಡೆಯುತ್ತಿದೆ. ಆದರೆ, ಫುಟ್‌ಪಾತ್‌ಗಳ ಸ್ಥಿತಿ ಕೆಟ್ಟದಾಗಿದೆ. ಗಾಂಧಿ ನಗರದಲ್ಲಿ ವ್ಯಾಪಾರಿಗಳು ಆಕ್ರಮಿಸಿಕೊಂಡಿದ್ದಾರೆ. ಮುರಿದ ಸ್ಲ್ಯಾಬ್‌ಗಳು, ಮಲ ಮೂತ್ರ ಮತ್ತು ಗಲೀಜು ಬಿದ್ದಿರುತ್ತದೆ. ಬ್ಯಾರಿಕೇಡ್‌ಗಳು, ತ್ಯಾಜ್ಯ ಸೇರಿದಂತೆ ಅನೇಕ ವಸ್ತುಗಳು ಅಡ್ಡಾದಿಡ್ಡಿ ಬಿದ್ದಿರುತ್ತವೆ’ ಎಂದು ವೈದ್ಯರಾಗಿರುವ ಶಿವು ಎಂಬುವರು ಟೀಕಿಸಿದ್ದಾರೆ.

ಚಾಲೆಂಜ್‌ಗೆ ಬೆಂಬಲ: ಜಿಬಿಎ ಚಾಲೆಂಜ್‌ಗೆ ಕೆಲವರು ಬೆಂಬಲಿಸಿದ್ದಾರೆ. ನಗರದಲ್ಲಿ ಒಳ್ಳೆಯ ಫುಟ್‌ಪಾತ್‌ಗಳಿವೆ. ಆದರೆ, ಅವುಗಳನ್ನು ನಾಗರಿಕರು ಶುಚಿಯಾಗಿ ಇಟ್ಟುಕೊಳ್ಳಬೇಕು ಎಂದು ವಿವೇಕ ಎಂಬುವರು ಸಲಹೆ ನೀಡಿದ್ದಾರೆ.

ಫುಟ್‌ಪಾತ್‌ನಲ್ಲಿ ಓಡಾಡಲು ಆಗುವುದಿಲ್ಲವೇಕೆ?

ನಗರದ ಬಹುತೇಕ ಫುಟ್‌ಪಾತ್‌ಗಳ ಕಿತ್ತು ಹೋಗಿದ್ದು, ನಡೆಯಲು ಯೋಗ್ಯವಾಗಿಲ್ಲ. ಬಹುತೇಕ ಫುಟ್‌ಪಾತ್ ಅನ್ನು ವ್ಯಾಪಾರಿಗಳು ಆಕ್ರಮಿಸಿರುತ್ತಾರೆ. ವಾಹನಗಳು ನಿಂತಿರುತ್ತವೆ. ಫುಟ್‌ಪಾತ್ ಸ್ಲ್ಯಾಬ್‌ಗಳು ಮುರಿದು ಹೋಗಿರುತ್ತವೆ. ಗುಂಡಿ, ತಗ್ಗು, ದಿಣ್ಣೆಗಳಿರುತ್ತವೆ. ಕಟ್ಟಡ ಕಟ್ಟುವವರು ತಮ್ಮ ಸಾಮಗ್ರಿ ಸುರಿದಿರುತ್ತಾರೆ. ತ್ಯಾಜ್ಯ ಬಿದ್ದಿರುವುದಂತು ಸರ್ವೇ ಸಾಮಾನ್ಯ. ಅನೇಕ ಸ್ಥಳಗಳಲ್ಲಿ ಮಲ, ಮೂತ್ರ, ಗಲೀಜು ಇರುತ್ತದೆ. ದನಗಳನ್ನು ಕಟ್ಟಿರುತ್ತಾರೆ. ಹೀಗಾಗಿ, ನಗರದ ಫುಟ್‌ಪಾತ್‌ಗಳು ನಡೆಯಲು ಯೋಗ್ಯವಿಲ್ಲ ಎಂದು ನಾಗರಿಕರು ಜಿಬಿಎಗೆ ತರಾಟೆಗೆ ತೆಗೆದುಕೊಂಡಿದ್ದಾರೆ.

PREV
Read more Articles on
click me!

Recommended Stories

ಹಾಲಿನ ಕಲಬೆರಕೆ, ಕಬಾಬ್‌ಗೆ ವಿಷಕಾರಿ ಬಣ್ಣ ಬಳಸುವವರಿಗೆ ಆರೋಗ್ಯ ಸಚಿವ ಖಾದರ್ ಖಡಕ್ ವಾರ್ನಿಂಗ್!
World Yoga day 2026: ನಿಮ್ಮೊಳಗೆ ನಿಮ್ಮನ್ನು ಸಂಪರ್ಕಿಸುವುದೇ ಯೋಗ! | ಗುರುದೇವ ಶ್ರೀ ಶ್ರೀ ರವಿ ಶಂಕರ್‌