ದಾವಣಗೆರೆ (ಜೂ.12): ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಅರಬಗಟ್ಟೆ ಕೋವಿಡ್ ಕೇರ್ ಸೆಂಟರ್ ನಲ್ಲಿ ನಿಯಮ ಮೀರಿ ಹೋಮ ಮಾಡಿದ್ದಕ್ಕೆ ಸಿಎಂ ರಾಜಕೀಯ ಕಾರ್ಯದರ್ಶಿ ಹಾಗೂ ಹೊನ್ನಾಳಿ ಶಾಸಕ ರೇಣುಕಾಚಾರ್ಯ ವಿರುದ್ಧ ತಹಸೀಲ್ದಾರ್ ಬಸನಗೌಡ ಕೋಟೂರು ಪ್ರಕರಣ ದಾಖಲಿಸಲು ಮುಂದಾಗಿದ್ದಾರೆ.
ರೇಣುಕಾಚಾರ್ಯ ವಿರುದ್ಧ ಪ್ರಕರಣ ದಾಖಲಿಸಲು ಮುಂದಾದ ತಹಸೀಲ್ದಾರ್ ವಿರುದ್ಧ ಅರಬಗಟ್ಟೆ ಕೋವಿಡ್ ಕೇರ್ ಸೆಂಟರ್ ನಲ್ಲಿನ ಸೋಂಕಿತರು ಆಕ್ರೋಶ ವ್ಯಕ್ತಪಡಿಸಿದ್ದು, ಕೋವಿಡ್ ಕೇರ್ ಸೆಂಟರ್ ಮುಂದೆಯೇ ಆಹಾರ ತ್ಯಜಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಕೋವಿಡ್ ಕೇರ್ ಸೆಂಟರ್‌ನಲ್ಲಿ ರಸಮಂಜರಿ, ರೇಣುಕಾಚಾರ್ಯ ಮಸ್ತ್ ಡ್ಯಾನ್ಸ್ ..
ತಹಶೀಲ್ದಾರ್ ವಿರುದ್ಧ ಘೋಷಣೆ ಕೂಗಿ ಸ್ಥಳಕ್ಕೆ ಬರುವಂತೆ ಪಟ್ಟು ಇಲ್ಲಿನ ಸೋಂಕಿತರು ಪಟ್ಟು ಹಿಡಿದಿದ್ದು, ತಹಸೀಲ್ದಾರ್ ಬರುವವರೆಗೂ ಬೆಳಗ್ಗೆ ಉಪಹಾರ ಸೇವಿಸುವುದಿಲ್ಲ. ಇಲ್ಲಿ ಸಮಸ್ಯೆಗಳು ಇದ್ದಾಗ ಯಾವುದೇ ಅಧಿಕಾರಿಗಳು ಸ್ಥಳಕ್ಕೆ ಬರಲಿಲ್ಲ. ಶಾಸಕ ರೇಣುಕಾಚಾರ್ಯ ಇಲ್ಲಿಗೆ ಬಂದು ಕುಡಿಯುವ ನೀರು ಮತ್ತು ಊಟದ ವ್ಯವಸ್ಥೆ ಮಾಡಿದ್ದಾರೆ. ಆದರೆ, ಈಗ ಅವರ ಮೇಲೆಯೇ ಕೇಸ್ ಹಾಕಲು ಮುಂದಾಗಿದ್ದಾರೆ. ಇದು ಸರಿಯಲ್ಲ ತಹಸೀಲ್ದಾರ್ ಸ್ಥಳಕ್ಕೆ ಬರಲಿ ಎಂದು ಆಗ್ರಹಿಸಿದರು.
ಹೋಮ ಮಾಡಿದ್ದಕ್ಕಾಗಿ ಪ್ರಕರಣ ದಾಖಲಿಸಲು ಮುಂದಾದ ತಹಸೀಲ್ದಾರ್ ಬಸನಗೌಡ ಕೋಟೂರ ಹಾಗೂ ಸಿಪಿಐ ದೇವರಾಜ್ ವಿರುದ್ಧ ಶಾಸಕ ರೇಣುಕಾಚಾರ್ಯ ಗರಂ ಆಗಿದ್ದಾರೆ. ನನ್ನ ಮೇಲೆ ಕೇಸ್ ಹಾಕಲಿ, ನನ್ನನ್ನು ಅರೆಸ್ಟ್ ಮಾಡಲಿ. ಇಂತಹ ಕೇಸ್ ಗಳನ್ನು ನಾನು ಬಹಳ ನೋಡಿದ್ದೇನೆ, ಎರಡು ಬಾರಿ ಜೈಲಿಗೆ ಹೋಗಿ ಬಂದಿದ್ದೇನೆ. ಇದು ಮುಂದೆ ಏನಾಗತ್ತೋ ನೋಡೋಣ, ಎಲ್ಲಿಗೇ ಬೇಕಾದರೂ ಹೋಗಲಿ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಮಾಜಿ ಶಾಸಕರು ಕೇಸ್ ಹಾಕು ಎಂದು ಹೇಳಿದ್ದಾರಂತೆ ಹಾಕಲಿ ನೋಡೊಣ. ಇಲ್ಲಿ ರಾಜಕಿಯ ಮಾಡುತ್ತಿದ್ದಾರೆ. ಮುಂದೆ ಏನೇ ಆಗಲಿ ನಾನು ನೋಡಿಕೊಳ್ಳುತ್ತೇನೆ. ಯಾರು ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ. ಜನರ ಒಳಿತಿಗಾಗಿ ನಾನು ಹೋಮ ಮಾಡಿದ್ದೇನೆ. ಅದರಿಂದ ಏನು ಸಮಸ್ಯೆಯಾಗಿದೆ. ಯಾರದ್ದೋ ಮಾತು ಕೇಳಿ ಈಗ ಕೇಸ್ ದಾಖಲಿಸಲು ಮುಂದಾಗಿದ್ದಾರೆ. ನನ್ನ ಮೇಲೆ ಕೇಸ್ ಹಾಕಲಿ ನೋಡೊಣ ಎಂದು ರೇಣುಕಾಚಾರ್ಯ ಅಧಿಕಾರಿಗಳ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.