ಜಿಲ್ಲಾ ಕೇಂದ್ರವಾಗದ್ಯಾ ತಿಪಟೂರು..?

By Kannadaprabha NewsFirst Published Apr 4, 2023, 6:35 AM IST
Highlights

ವೀರಶೈವ ಲಿಂಗಾಯತ ಸಮುದಾಯಕ್ಕೆ ಹೆಚ್ಚಿನ ಗೌರವ ಮತ್ತು ಸ್ಥಾನಮಾನಗಳು ಏನಾದರೂ ದೊರೆತಿದ್ದರೆ ಕಾಂಗ್ರೆಸ್‌ ಪಕ್ಷದಿಂದ ಮಾತ್ರ ಎಂದು ತುಮಕೂರು ಜಿಲ್ಲಾ ಕಾಂಗ್ರೆಸ್‌ ನ ಪ್ರಚಾರ ಸಮಿತಿಯ ಅಧ್ಯಕ್ಷ ರಾಯಸಂದ್ರ ರವಿಕುಮಾರ್‌ ಹೇಳಿದರು.

  ತುರುವೇಕೆರೆ :  ವೀರಶೈವ ಲಿಂಗಾಯತ ಸಮುದಾಯಕ್ಕೆ ಹೆಚ್ಚಿನ ಗೌರವ ಮತ್ತು ಸ್ಥಾನಮಾನಗಳು ಏನಾದರೂ ದೊರೆತಿದ್ದರೆ ಕಾಂಗ್ರೆಸ್‌ ಪಕ್ಷದಿಂದ ಮಾತ್ರ ಎಂದು ತುಮಕೂರು ಜಿಲ್ಲಾ ಕಾಂಗ್ರೆಸ್‌ ನ ಪ್ರಚಾರ ಸಮಿತಿಯ ಅಧ್ಯಕ್ಷ ರಾಯಸಂದ್ರ ರವಿಕುಮಾರ್‌ ಹೇಳಿದರು.

ಪಟ್ಟಣದ ಶ್ರೀ ಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ನಡೆದ ದ ಸಮುದಾಯದ ಕಾಂಗ್ರೆಸ್‌ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದ ಅವರು, ಕಾಂಗ್ರೆಸ್‌ ಮೊದಲಿನಿಂದಲೂ ವೀರಶೈವ ಲಿಂಗಾಯತ ಸಮುದಾಯಕ್ಕೆ ಹೆಚ್ಚಿನ ಪ್ರಾಧನ್ಯತೆ ನೀಡುತ್ತಿದೆ. ಈ ಬಾರಿಯ ಚುನಾವಣೆಯಲ್ಲಿ 224 ಸ್ಥಾನಗಳ ಪೈಕಿ ಕನಿಷ್ಠ 75 ಸ್ಥಾನಗಳಿಗೆ ಲಿಂಗಾಯತ ಸಮುದಾಯದವರಿಗೆನೀಡುತ್ತಿದೆ. ಪಕ್ಷ ಸರ್ಕಾರ ನಡೆಸಿದ ದಿನದಲ್ಲೂ ಸಹ ವೀರಶೈವರಿಗೆ ಆದ್ಯತೆ ನೀಡಿ ಉತ್ತಮ ಖಾತೆಯನ್ನು ನೀಡಿ ಮಂತ್ರಿಗಳನ್ನಾಗಿಸಿತ್ತು. ಪಕ್ಷದಲ್ಲೂ ಸಹ ಉತ್ತಮ ಸ್ಥಾನಮಾನವನ್ನು ನೀಡಿದೆ ಎಂದು ಹೇಳಿದರು.

Latest Videos

ಮುಂಬರುವ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರದ ಚುಕ್ಕಾಣಿ ಹಿಡಿಯುವುದರಲ್ಲಿ ಸಂಶಯವಿಲ್ಲ. ನಮ್ಮ ವೀರಶೈವ ಸಮುದಾಯದ ಮುಖಂಡರೂ ಮತ್ತು ಮಾಜಿ ಮುಖ್ಯಮಂತ್ರಿಗಳಾಗಿದ್ದ ಬಿ.ಎಸ್‌ ಯಡಿಯೂರಪ್ಪನವರನ್ನು ತುಂಬಾ ಅವಮಾನಕರವಾಗಿ ಅಧಿಕಾರದಿಂದ ಕೆಳಗಿಳಿಸಲಾಯಿತು. ಯಡಿಯೂರಪ್ಪನವರು ಯಾವುದೋ ಕಾರಣಕ್ಕೆ ತಮಗಾಗಿರುವ ನೋವನ್ನು ಸಾರ್ವಜನಿಕವಾಗಿ ತೋಡಿಕೊಳ್ಳುತ್ತಿಲ್ಲ ಎಂದು ಸಂಶಯ ವ್ಯಕ್ತಪಡಿಸಿದರು.

ಈ ಬಾರಿ ತುರುವೇಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿರುವ ಬೆಮಲ್‌ ಕಾಂತರಾಜ್‌ ರವರಿಗೆ ಕ್ಷೇತ್ರದಲ್ಲಿರುವ ವೀರಶೈವ ಲಿಂಗಾಯತ ಸಮುದಾಯ ಹೆಚ್ಚಿನ ಪ್ರಮಾಣದಲ್ಲಿ ಬೆಂಬಲ ನೀಡಲಿದ್ದಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

15 ವರ್ಷಗಳ ಕಾಲ ಶಾಸಕರಾಗಿದ್ದ ಜೆಡಿಎಸ್‌ ನ ಎಂ.ಟಿ.ಕೃಷ್ಣಪ್ಪನವರು ವೀರಶೈವ ಲಿಂಗಾಯತ ಸಮುದಾಯದವರು ವಾಸಿಸುವ ಪ್ರದೇಶವನ್ನು ಸಂಪೂರ್ಣವಾಗಿ ಕಡೆಗಣಿಸಿದರು. ಈಗ ತಮ್ಮದು ಕೊನೆ ಚುನಾವಣೆ ಎಂದು ಹೇಳಿ ಜನರನ್ನು ಮರಳು ಮಾಡಲು ಪ್ರಯತ್ನ ಮಾಡುತ್ತಿದ್ದಾರೆ. 15 ವರ್ಷಗಳ ಕಾಲ ನಮ್ಮ ಸಮುದಾಯದ ಜನರನ್ನು ಅಭಿವೃದ್ಧಿಯಿಂದ ದೂರ ಇರಿಸಿದ್ದ ಎಂ.ಟಿ.ಕೃಷ್ಣಪ್ಪನವರನ್ನು ನಾವೂ ಸಹ ದೂರವಿಡಬೇಕೆಂದು ಹೇಳಿದರು.

ಪರ್ಸೆಂಟೇಜ್‌ ಶಾಸಕರು:

ಹಾಲಿ ಶಾಸಕ ಮಸಾಲಾ ಜಯರಾಮ್‌ ಮಾಡಿರುವ ಕಾಮಗಾರಿಯಲ್ಲಿ ಪರ್ಸೆಂಟೇಜ್‌ ಪಡೆದು ಕಳಪೆ ಕಾಮಗಾರಿಯನ್ನು ಮಾಡಿಸಿದ್ದಾರೆ. ನಮ್ಮ ಸಮುದಾಯದವರಿಗೆ ಯಾವುದೇ ಆದ್ಯತೆ ನೀಡಲಿಲ್ಲ. ನಮ್ಮ ಸಮುದಾಯದ ಸಂಪೂರ್ಣ ಬೆಂಬಲ ಪಡೆದಿದ್ದ ಶಾಸಕರು ರಾಜಕೀಯವಾಗಿ ಯಾವುದೇ ಪ್ರಾಧಾನ್ಯತೆ ನೀಡದೇ ಎಲ್ಲಾ ಅಧಿಕಾರವನ್ನು ತಾವೇ ಅನುಭವಿಸಿದರು ಎಂದು ಕಿಡಿಕಾರಿದರು.

ಈಗಾಗಲೇ ಕ್ಷೇತ್ರದ ಜನರು ಜೆಡಿಎಸ್‌ ಮತ್ತು ಬಿಜೆಪಿಯ ಶಾಸಕರ ಸಾಧನೆಯನ್ನು ನೋಡಿದ್ದಾರೆ. ಈ ಬಾರಿ ಕಾಂಗ್ರೆಸ್‌ ನಿಂದ ಸ್ಪರ್ಧಿಸಿರುವ ಬೆಮಲ್‌ ಕಾಂತರಾಜ್‌ ರವರಿಗೊಂದು ಅವಕಾಶ ನೀಡಿ ಎಂದು ಮನವಿ ಮಾಡಿಕೊಂಡರು.

ಕಾಂಗ್ರೆಸ್‌ ಅಭ್ಯರ್ಥಿ ಬೆಮಲ್‌ ಕಾಂತರಾಜ್‌ ಮಾತನಾಡಿ, ತಾಲೂಕು ಅಭಿವೃದ್ಧಿಯಲ್ಲಿ ಇಪ್ಪತ್ತು ವರ್ಷಗಳ ಹಿಂದಕ್ಕೆ ಹೋಗಿದೆ. 15 ವರ್ಷ ಆಡಳಿತ ಮಾಡಿದ ಜೆಡಿಎಸ್‌ ನ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪನವರ ದುರಹಂಕಾರದ ಆಡಳಿತ ನೋಡಿಯಾಗಿದೆ. ವೀರಶೈವ ಸಮುದಾಯದವರನ್ನು ಕಡೆಗಣಿಸಿದ್ದರು. ಹಾಗಾಗಿ ಅವರಿಂದ ಏನನ್ನೂ ನೀವು ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಜೆಡಿಎಸ್‌ ಗೆ ಮತ ಹಾಕಿದರೆ ಅದು ವೇಸ್ಟ್‌ ಆದಂತೆ. ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಸಾಧ್ಯವೇ ಇಲ್ಲ. ಇನ್ನು ಹಾಲಿ ಶಾಸಕ ಮಸಾಲಾ ಜಯರಾಮ್‌ ರವರು ವೀರಶೈವ ಲಿಂಗಾಯತ ಸಮುದಾಯವರನ್ನು ಅಧಿಕಾರದ ದಾಳವನ್ನಾಗಿ ಬಳಸಿಕೊಂಡರು. ಬಿಜೆಪಿಯಲ್ಲಿ ಲಿಂಗಾಯತ ಸಮುದಾಯದವರನ್ನು ಬೆಳೆಸುತ್ತಿಲ್ಲ. ಹಾಗಾಗಿ ತಮ್ಮನ್ನು ತಾವೆಲ್ಲರೂ ಆಶೀರ್ವದಿಸಬೇಕೆಂದು ಮನವಿ ಮಾಡಿಕೊಂಡರು.

ಬ್ಲಾಕ್‌ ಅಧ್ಯಕ್ಷರುಗಳಾದ ನಾಗೇಶ್‌, ಪ್ರಸನ್ನ ಕುಮಾರ್‌, ದೇವರಾಜ್‌, ಬೇವಿನಹಳ್ಳಿ ಬಸವರಾಜ್‌, ಕಲ್ಲಳ್ಳಿ ಮಹಾಲಿಂಗಪ್ಪ, ಪ.ಪಂ. ಸದಸ್ಯರಾದ ಯಜಮಾನ್‌ ಮಹೇಶ್‌, ನದೀಂ, ರೇಣುಕಾ, ತ್ರೈಲೋಕಿ, ದೇವರಾಜ್‌ ಸೇರಿದಂತೆ ಅನೇಕರಿದ್ದರು.

ಸಚಿವನಾಗಿ ಜಿಲ್ಲೆ ಮಾಡುವೆ

ತಿಪಟೂರಿನ ಮಾಜಿ ಶಾಸಕ ಹಾಗೂ ಕಾಂಗ್ರೆಸ್‌ ನ ಅಭ್ಯರ್ಥಿ ಕೆ.ಷಡಕ್ಷರಿ ಮಾತನಾಡಿ, ಮುಂಬರುವ ದಿನಗಳಲ್ಲಿ ನಡೆಯುವ ಚುನಾವಣೆಯಲ್ಲಿ ತಿಪಟೂರಿನ ಜನತೆ ಆಶೀರ್ವದಿಸಿ ಶಾಸಕರನ್ನಾಗಿ ಮಾಡುವರು. ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರುವುದು ನಿಶ್ಚಿತ. ಹಾಗೆಯೇ ತಾವೂ ಸಹ ಸರ್ಕಾರದಲ್ಲಿ ಮಂತ್ರಿಯಾಗುವುದೂ ಸಹ ಖಚಿತ. ತಾವು ಮಂತ್ರಿಯಾದ ತರುವಾಯ ತಿಪಟೂರನ್ನು ಜಿಲ್ಲಾ ಕೇಂದ್ರವಾಗಿಸುವ ಗುರಿಯನ್ನು ಹೊಂದಿರುವುದಾಗಿ ಹೇಳಿದರು. ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ತಪ್ಪಿದರೆ ತುರುವೇಕೆರೆ ತಾಲೂಕಿನ ಅಮ್ಮಸಂದ್ರವನ್ನು ತಾಲೂಕು ಕೇಂದ್ರವನ್ನಾಗಿಸುವ ಆಶಯ ಇದೆ. ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾಗಿದ್ದ ಸಂಧರ್ಭದಲ್ಲಿ ತಮಗೆ ಮಂತ್ರಿ ಪದವಿ ಸಿಗುವ ಹಂತ ಇತ್ತು. ಕೊನೇ ಕ್ಷಣದಲ್ಲಿ ಕೈ ತಪ್ಪಿ ಹೋಯಿತು ಎಂದು ರಾಯಸಂದ್ರ ರವಿಕುಮಾರ್‌ ಹೇಳಿದರು.

click me!