ಮುರುಘಾ ಶ್ರೀ ಜೈಲು ವಾಸ ಅನುಭವಿಸ್ತಿರೋ ಹಿನ್ನೆಲೆ ಮಠದ ಆಡಳಿತ ಹಾಗೂ ವಿದ್ಯಾಪೀಠದ ಆಡಳಿತ ವೈಖರಿ ಕುರಿತು ಸರ್ಕಾರ ಚಿತ್ರದುರ್ಗ ಜಿಲ್ಲಾಡಳಿತಕ್ಕೆ ವರದಿ ಕೇಳಿತ್ತು. ಅದರನ್ವಯ ಜಿಲ್ಲಾಧಿಕಾರಿಗಳು ಮುಚ್ಚಿದ ಲಕೋಟೆಯಲ್ಲಿ ವಾಸ್ತವಾಂಶ ವರದಿಯನ್ನು ಸಲ್ಲಿಸಿದ್ದಾರೆ.
ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿತ್ರದುರ್ಗ (ನ.15): ಪೋಕ್ಸೋ ಕೇಸಲ್ಲಿ ಮುರುಘಾ ಶ್ರೀ ಜೈಲು ವಾಸ ಅನುಭವಿಸ್ತಿರೋ ಹಿನ್ನೆಲೆ ಮಠದ ಆಡಳಿತ ಹಾಗೂ ವಿದ್ಯಾಪೀಠದ ಆಡಳಿತ ವೈಖರಿ ಕುರಿತು ಸರ್ಕಾರ ಜಿಲ್ಲಾಡಳಿತಕ್ಕೆ ವರದಿ ಕೇಳಿತ್ತು. ಅದರನ್ವಯ ಜಿಲ್ಲಾಧಿಕಾರಿಗಳು ಮುಚ್ಚಿದ ಲಕೋಟೆಯಲ್ಲಿ ವಾಸ್ತವಾಂಶ ವರದಿಯನ್ನು ಸಲ್ಲಿಸಿದ್ದಾರೆ. ಚಿತ್ರದುರ್ಗದ ಮುರುಘಾ ಮಠದ ಮುರುಘಾ ಶ್ರೀಗಳ ವಿರುದ್ದ ಪೋಕ್ಸೋ ಕೇಸ್ ದಾಖಲಾಗಿ ಬಂಧನವಾದ ಬೆನ್ನಲ್ಲೇ ಮಠದ ಆಡಳಿತ ವ್ಯವಸ್ಥೆ ಸರಿಯಾಗಿ ನಡೆಯುತ್ತಿಲ್ಲ ಎಂದು ಹಲವರು ಧ್ವನಿ ಎತ್ತಿದ್ದರು. ಅಲ್ಲದೇ ಕೂಡಲೇ ಮಠಕ್ಕೆ ನೂತನ ಪೀಠಾಧಿಪತಿ ಹಾಗೂ ಆಡಳಿತಾಧಿಕಾರಿ ನೇಮಿಸುವಂತೆ ಮಾಜಿ ಸಚಿವ ಹೆಚ್ ಏಕಾಂತಯ್ಯ ಸೇರಿದಂತೆ, ಹಲವು ವೀರಶೈವ ಮಹಾಸಭಾದ ಮುಖಂಡರು ಸಿಎಂ ಬೊಮ್ಮಾಯಿ ಹಾಗೂ ಮಾಜಿ ಸಿಎಂ ಬಿಎಸ್ ವೈ ಬಳಿಗೆ ತೆರಳಿ ಮನವಿ ಮಾಡಿದ್ರು. ಇದರನ್ವಯ ಸರ್ಕಾರ ನವೆಂಬರ್ 4 ರಂದು ಚಿತ್ರದುರ್ಗದ ಜಿಲ್ಲಾಧಿಕಾರಿಗೆ ಮುರುಘಾ ಮಠದ ಆಡಳಿತ ವ್ಯವಸ್ಥೆ ಹಾಗೂ SJM ವಿದ್ಯಾಪೀಠದ ಆಡಳಿತ ವೈಖರಿ ಕುರಿತು ಅಡಳಿತಾಧಿಕಾರಿ ನೇಮಿಸುವ ನಿಟ್ಟಿನಲ್ಲಿ ಸೂಕ್ತ ವರದಿ ಸಲ್ಲಿಸುವಂತೆ ಸೂಚನೆ ನೀಡಿತ್ತು. ಅದರ ಜಿಲ್ಲಾಧಿಕಾರಿಗಳು ಖುದ್ದು ಅವರೇ ಮುರುಘಾ ಮಠ ಹಾಗೂ ಎಸ್.ಜೆ.ಎಂ ವಿದ್ಯಾಪೀಠಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಸರ್ಕಾರ ಕೇಳಿದ್ದ ಮಾಹಿತಿಯನ್ನು ಕಲೆ ಹಾಕಿ, ಸುಮಾರು 75 ಪುಟಗಳ ದಾಖಲೆಗಳನ್ನು ಒಳಗೊಂಡು, 5 ಪುಟಗಳ ವರದಿಯನ್ನು ನವೆಂಬರ್ 10 ರಂದು ಸರ್ಕಾರಕ್ಕೆ ವಾಸ್ತವಾಂಶ ವರದಿ ಸಲ್ಲಿಕೆ ಮಾಡಿಲಾಗಿದೆ. ಮುಚ್ಚಿದ ಲಕೋಟೆಯಲ್ಲಿ ವರದಿ ಸಲ್ಲಿಸಿರುವ ಕಾರಣ, ವರದಿಯಲ್ಲಿ ಇರುವ ಅಂಶಗಳನ್ನು ಹೇಳಲು ಆಗಲ್ಲ ಎಂದು ತಿಳಿಸಿದರು.
ಹಾಲಿ ಉಸ್ತುವಾರಿ ಬಸವಪ್ರಭು ಶ್ರೀ ಹೇಳಿದ್ದೇನು?: ಇನ್ನೂ ಜಿಲ್ಲಾಡಳಿತದ ವತಿಯಿಂದ ವರದಿ ಸಲ್ಲಿಕೆ ಅಗಿರುವ ಬೆನ್ನಲ್ಲೇ ಈ ವಿಚಾರದ ಕುರಿತು, ಮುರುಘಾ ಮಠದ ಹಾಲಿ ಉಸ್ತುವಾರಿ ಶ್ರೀಗಳಾಗಿರುವ ಬಸವಪ್ರಭು ಶ್ರೀಗಳನ್ನು (Basavaprabhu Seer) ಕೇಳಿದಾಗ, ಚಿತ್ರದುರ್ಗ ಡಿಸಿ ಕೇಳಿದ ಎಲ್ಲಾ ದಾಖಲೆಗಳನ್ನು ನಾವು ನೀಡಿದ್ದೇವೆ. ಮಠದ ಉಸ್ತುವಾರಿಯಾಗಿ ನಮಗೆ ಮುರುಘಾಶ್ರೀ ಜಿಪಿಎ ನೀಡಿದ್ದಾರೆ. SJM ವಿದ್ಯಾಪೀಠದ ಕಾರ್ಯದರ್ಶಿ SB ವಸ್ತ್ರದಮಠ್ ಗೂ ಜಿಪಿಎ ನೀಡಿದ್ದಾರೆ. ಮಠದ ಆಡಳಿತ, ವಿದ್ಯಾಪೀಠದ ಆಡಳಿತ ಸುಗಮವಾಗಿ ಸಾಗಿದೆ. ಮಠದ ದಾಸೋಹ ಯಥಾಸ್ಥಿತಿ, ವಿದ್ಯಾಪೀಠದ ಸಿಬ್ಬಂದಿ ಸಂಬಳವೂ ಸುಗಮವಾಗಿದೆ. ಈ ವೇಳೆ ಸರ್ಕಾರದಿಂದ ಆಡಳಿತಾಧಿಕಾರಿ ನೇಮಕ ಅನಗತ್ಯ ಎಂದರು. ಸರ್ಕಾರಕ್ಕೆ ನಾವು ಮತ್ತು ಮಠದ ಭಕ್ತರಿಂದ ಮನವಿ ಮಾಡ್ತೇವೆ. ಸರ್ಕಾರ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಿ ಎಂದರು.
Murugha Shree POCSO Case: ಮಠದ ಆಡಳಿತದ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಕೆ: ಜಿಲ್ಲಾಧಿಕಾರಿ ದಿವ್ಯಪ್ರಭು
ಒಟ್ಟಾರೆ ಸರ್ಕಾರ ಮುರುಘಾ ಮಠಕ್ಕೆ (Murugha Mutt) ನೂತನ ಆಡಳಿತಾಧಿಕಾರಿ ನೇಮಿಸುವಂತೆ ಸಮುದಾಯದ ಮುಖಂಡರು ಒತ್ತಡ ಹಾಕಿದ ಪರಿಣಾಮ ವರದಿ ಸಲ್ಲಿಸಲು ಅಧಿಕಾರಿಗಳಿಗೆ ಸರ್ಕಾರ ಚಾಟಿ ಬೀಸಿತ್ತು. ಆದ್ರೆ ಸದ್ಯ ವರದಿ ಸರ್ಕಾರ ಕಂದಾಯ ಇಲಾಖೆ ಕಾರ್ಯದರ್ಶಿ ಕೈ ಸೇರಿರುವಂತದ್ದು. ಆದ್ರೆ ಮುಚ್ಚಿದ ಲಕೋಟೆಯಲ್ಲಿರುವ ವರದಿಯಲ್ಲಿ ಏನೆಲ್ಲಾ ಅಂಶಗಳು ಉಲ್ಲೇಖವಾಗಿವೆ. ಸರ್ಕಾರ ಮುಂದಿನ ಕ್ರಮ ಯಾವ ರೀತಿ ಇರಲಿದೆ ಎಂಬುದೇ ಕುತೂಹಲವಾಗಿದೆ.