ಭಾರತದ ರಕ್ಷಣಾ ವಲಯಕ್ಕೆ ದೇಶೀ ತಂತ್ರಜ್ಞಾನ ಆಧಾರಿತ ಉತ್ಪನ್ನಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ರಕ್ಷಣಾ ಇಲಾಖೆಯು ನಗರದ ದೊಮ್ಮಲೂರು ಬಳಿಯ ಎಎಸ್‌ಸಿ (ಆರ್ಮಿ ಸವೀರ್ಸ್ ಕಾರ್ಫ್ಸ್) ಸೆಂಟರ್ ಮತ್ತು ಕಾಲೇಜು ಆವರಣದಲ್ಲಿ ‘ಪ್ರಾದೇಶಿಕ ತಂತ್ರಜ್ಞಾನ ಕೇಂದ್ರ- ಬೆಂಗಳೂರು’ (ಆರ್‌ಟಿಎನ್-ಬಿ) ಸ್ಥಾಪಿಸಿದೆ.
ಬೆಂಗಳೂರು (ನ.15): ಭಾರತದ ರಕ್ಷಣಾ ವಲಯಕ್ಕೆ ದೇಶೀ ತಂತ್ರಜ್ಞಾನ ಆಧಾರಿತ ಉತ್ಪನ್ನಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ರಕ್ಷಣಾ ಇಲಾಖೆಯು ನಗರದ ದೊಮ್ಮಲೂರು ಬಳಿಯ ಎಎಸ್‌ಸಿ (ಆರ್ಮಿ ಸವೀರ್ಸ್ ಕಾರ್ಫ್ಸ್) ಸೆಂಟರ್ ಮತ್ತು ಕಾಲೇಜು ಆವರಣದಲ್ಲಿ ‘ಪ್ರಾದೇಶಿಕ ತಂತ್ರಜ್ಞಾನ ಕೇಂದ್ರ- ಬೆಂಗಳೂರು’ (ಆರ್‌ಟಿಎನ್-ಬಿ) ಸ್ಥಾಪಿಸಿದೆ. ದಕ್ಷಿಣ ಭಾರತದಲ್ಲಿ ಸ್ಥಾಪನೆಯಾಗಿ ಮೊದಲ ಆರ್‌ಟಿಎನ್ ಇದಾಗಿದ್ದು, ಸೋಮವಾರ ರಕ್ಷಣಾ ಇಲಾಖೆಯ ವೈಸ್ ಚೀಫ್ ಆರ್ಮಿ ಸ್ಟಾಫ್ ಲೆಫ್ಟಿನೆಂಟ್ ಬಿ.ಎಸ್.ರಾಜು ಮತ್ತು ಸಚಿವ ಡಾ.ಕೆ.ಸುಧಾಕರ್ ಚಾಲನೆ ನೀಡಿದರು. ಈ ಕೇಂದ್ರವು ತಂತ್ರಜ್ಞಾನ ಹಬ್, ಸಿಲಿಕಾನ್ ಸಿಟಿ ಖ್ಯಾತಿಯ ಬೆಂಗಳೂರಿನಲ್ಲಿ ತಂತ್ರಜ್ಞಾನ ಮತ್ತು ರಕ್ಷಣಾ ವಲಯಕ್ಕೆ ಸಂಬಂಧಿಸಿದ ಉದ್ಯಮಗಳ ನಡುವೆ ಸಂಪರ್ಕ ಕೊಂಡಿಯಾಗಿ ಕಾರ್ಯನಿರ್ವಹಿಸಲಿದೆ.
ಕಾರ್ಯಕ್ರಮದಲ್ಲಿ ವೈಸ್ ಚೀಫ್ ಆರ್ಮಿ ಸ್ಟಾಫ್ ಲೆಫ್ಟಿನೆಂಟ್ ಬಿ.ಎಸ್.ರಾಜು ಮಾತನಾಡಿ, ‘ಕೇಂದ್ರ ಸರ್ಕಾರವು ರಕ್ಷಣಾ ಇಲಾಖೆಗೆ ಸಂಬಂಧಿಸಿದ 400 ಉತ್ಪನ್ನಗಳ ಆಮದು ಕೈಬಿಟ್ಟು ಆ ಎಲ್ಲ ಉತ್ಪನ್ನಗಳನ್ನು ಸ್ಥಳೀಯವಾಗಿ ಉತ್ಪಾದನೆ ಮಾಡಲು ನಿರ್ಧರಿಸಿದೆ. ಈ ನಿಟ್ಟಿನಲ್ಲಿ ಐಐಎಸ್ಸಿ, ಐಐಎಂನಂತಹ ಪ್ರತಿಷ್ಠಿತ ಸಂಶೋಧನಾ ಸಂಸ್ಥೆಗಳು, ಅತಿ ಉತ್ಕೃಷ್ಟಗುಣಮಟ್ಟದ ಅನೇಕ ಎಂಜಿನಿಯರಿಂಗ್ ಕಾಲೇಜುಗಳು, ಉದ್ಯಮ ಸ್ನೇಹಿ ವಾತಾವರಣವಿರುವ ಬೆಂಗಳೂರಿನಲ್ಲಿ ಆರ್‌ಟಿಎನ್ ಆರಂಭಿಸಲಾಗುತ್ತಿದೆ. ತಂತ್ರಜ್ಞಾನಾಧಾರಿತ ಉಪಕರಣ ತಯಾರಿಗೆ ಕೈಗಾರಿಕೋದ್ಯಮಿಗಳು, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು, ಪ್ರತಿಷ್ಠಿತ ಶಿಕ್ಷಣ, ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗಳು ವಿನೂತನ ತಂತ್ರಜ್ಞಾನ ಆಲೋಚನೆಗಳೊಂದಿಗೆ ಈ ಕೇಂದ್ರಕ್ಕೆ ಬಂದು ರಕ್ಷಣಾ ಇಲಾಖೆ ಜತೆ ಕೈಜೋಡಿಸಬಹುದು ಎಂದು ಆಹ್ವಾನ ನೀಡಿದರು.
ಮುಂದಿನ ದಿನಗಳಲ್ಲಿ ಇನ್ನೂ 500 ಜನೌಷಧಿ ಮಳಿಗೆ ಸ್ಥಾಪನೆ: ಸಚಿವ ಸುಧಾಕರ್
ತಂತ್ರಜ್ಞಾನ ಅಭಿವೃದ್ಧಿಗೆ ಖಾಸಗಿ ವಲಯದ ಸಹಭಾಗಿತ್ವ ಕೂಡ ಅತ್ಯಗತ್ಯ ಎಂಬುದನ್ನು ಮನಗಂಡಿದೆ. ಇದಕ್ಕೆ ಪೂರಕವಾಗಿ ರಕ್ಷಣಾ ವಲಯದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದ ಶೇ.25ರಷ್ಟುಅನುದಾನವನ್ನು ಸ್ಥಳೀಯ ಉದ್ಯಮಗಳಿಗೆ ಮೀಸಲಿಟ್ಟಿದೆ. ಈ ಹಿನ್ನೆಲೆಯಲ್ಲಿ ತಂತ್ರಜ್ಞಾನ ಮತ್ತು ಪೂರಕ ಉದ್ಯಮಮಗಳಿಗೆ ವಿಪುಲ ಅವಕಾಶಗಳಿವೆ. ರಫ್ತಿಗೂ ಇಲ್ಲಿ ವೇದಿಕೆ ಸಿಗಲಿದೆ. ಒಟ್ಟಾರೆ ಉದ್ಯಮಿಗಳಿಗೆ ಪ್ರತಿ ಹಂತದಲ್ಲೂ ಅವಕಾಶಗಳನ್ನು ನೀಡಲಾಗುವುದು ಎಂದು ಭರವಸೆ ನೀಡಿದ ಅವರು ಕಂಪನಿಗಳು ಯುದ್ಧ ಸಂದರ್ಭದಲ್ಲಿಯೂ ಉತ್ಪಾದನೆ ನಡೆಸುವ, ಪ್ರತಿ ಹಂತದಲ್ಲಿಯೂ ಅಪ್ಡೇಟ್ ಆಗುವ ಸಾಮರ್ಥ್ಯ ಹೊಂದಿರಬೇಕು ಎಂದರು.
ಹೆಮ್ಮೆಯ ಸಂಗತಿ: ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಸಚಿವ ಡಾ. ಕೆ.ಸುಧಾಕರ್ ಮಾತನಾಡಿ, ಬೆಂಗಳೂರು ತಂತ್ರಜ್ಞಾನದ ರಾಜಧಾನಿ ಎಂಬ ಹೆಗ್ಗಳಿಕೆ ಹೊಂದಿದೆ. ಇಲ್ಲಿ ರಕ್ಷಣಾ ಇಲಾಖೆ ತಂತ್ರಜ್ಞಾನ ಕೇಂದ್ರ ಆರಂಭಿಸಿರುವುದು ಔಚಿತ್ಯಪೂರ್ಣವಾಗಿದೆ. ಆತ್ಮನಿರ್ಭರದ ಪರಿಕಲ್ಪನೆಗೆ ಅನುಗುಣವಾಗಿ ಸೇನೆಗೆ ಬೇಕಾದ ಉಪಕರಣಗಳು, ತಂತ್ರಜ್ಞಾನಗಳು, ಆವಿಷ್ಕಾರಗಳನ್ನು ಭಾರತೀಯರು ಭಾರತದಲ್ಲೇ ಅದರಲ್ಲೂ ಬೆಂಗಳೂರಿನಲ್ಲೇ ತಯಾರಿಸಲು ಮುಂದಾಗಿರುವುದು ಹೆಮ್ಮೆಯ ವಿಚಾರ. ಇದರಿಂದ ಇಲ್ಲಿನ ಸಾವಿರಾರು ಜನರಿಗೆ ಉದ್ಯೋಗಾವಕಾಶ ಸಿಗಲಿದೆ ಎಂದರು.
ದೇಶದ ವೈಮಾನಿಕ ಕ್ಷೇತ್ರದ ರಫ್ತಿನಲ್ಲಿ ರಾಜ್ಯದ ಪಾಲು ಶೇ.65ರಷ್ಟಿದೆ. ಬೆಂಗಳೂರಿನಲ್ಲೇ ಅತಿ ಹೆಚ್ಚು ಸಾರ್ವಜನಿಕ ವಲಯದ ಸಂಶೋಧನಾ ಸಂಸ್ಥೆಗಳು ಇವೆ. ರಾಜ್ಯವು ಕೈಗಾರಿಕಾ ಸ್ನೇಹಿಯೂ ಆಗಿದ್ದರಿಂದ ಈಚೆಗೆ ನಡೆದ ಹೂಡಿಕೆದಾರರ ಸಮಾವೇಶದಲ್ಲಿ 9.5 ಲಕ್ಷ ಕೋಟಿ ಬಂಡವಾಳ ಹರಿದುಬಂದಿದೆ. ಅದಕ್ಕೂ ಮೊದಲೇ 2.8 ಬಿಲಿಯನ್ ಅಮೆರಿಕ ಡಾಲರ್‌ನಷ್ಟುಬಂಡವಾಳ ಇಲ್ಲಿಗೆ ಬಂದಿತ್ತು ಎಂದು ತಿಳಿಸಿದರು. ಲೆಫ್ಟಿನೆಂಟ್ ಜನರಲ್ ಬಿ.ಕೆ.ರೆಸ್ವಾಲ್, ಮೇಜರ್ ಜನರಲ್ ವಿ.ಎಂ.ಚಂದ್ರನ್, ಬ್ರಿಗೇಡಿಯರ್ ಸಾಹುಕಾರಿ ಚಕ್ರವರ್ತಿ ಉಪಸ್ಥಿತರಿದ್ದರು.
ದೇಶದ ಎರಡನೇ ಕೇಂದ್ರ: ಈಗಾಗಲೇ ಪುಣೆಯಲ್ಲಿ ಪ್ರಾದೇಶಿಕ ತಂತ್ರಜ್ಞಾನ ಕೇಂದ್ರ ಕಾರ್ಯನಿರ್ವಹಿಸುತ್ತಿದೆ. ಸದ್ಯ ದಕ್ಷಿಣ ಭಾರತದಲ್ಲಿಯೇ ಮೊದಲು ಬೆಂಗಳೂರು ಎಎಸ್‌ಸಿಯಲ್ಲಿ ಎರಡನೆಯ ಕೇಂದ್ರ ತಲೆಯೆತ್ತಿದೆ. ಇವೆರಡೂ ಭಾರತೀಯ ಸೇನಾ ವಿನ್ಯಾಸ ಶಾಖೆಯಡಿ (ಎಡಿಬಿ) ಕಾರ್ಯನಿರ್ವಹಿಸಲಿವೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಒತ್ತುಕೊಟ್ಟು ಕಾರ್ಯನಿರ್ವಹಿಸುತ್ತಿರುವ ಕೈಗಾರಿಕೆಗಳು, ವ್ಯಾಪಾರೋದ್ಯಮಗಳು, ಶೈಕ್ಷಣಿಕ ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸಿ, ಭಾರತೀಯ ಸೇನೆಗೆ ಅನುಕೂಲವಾಗುವಂತಹ ಸುಧಾರಿತ ತಂತ್ರಜ್ಞಾನಗಳ ಸಂಶೋಧನೆ ಮತ್ತು ಅಭಿವೃದ್ಧಿಗೆ ಉತ್ತೇಜನ ನೀಡಲಿದೆ ಎಂದು ರಕ್ಷಣಾ ಅಧಿಕಾರಿಗಳು ಮಾಹಿತಿ ನೀಡಿದರು.
8 ತಿಂಗಳು ಕೋಮಾದಲ್ಲಿದ್ದ ರೋಗಿ ಗುಣಮುಖ: ವೈದ್ಯರ ಕಾರ್ಯಕ್ಕೆ ಸುಧಾಕರ್ ಶ್ಲಾಘನೆ
ರಾಜ್ಯದಲ್ಲಿ ಈ ಮೊದಲೇ ರಕ್ಷಣಾ ವಲಯದ ಉದ್ಯಮದ ಬೆಳವಣಿಗೆಗೆ ಪೂರಕ ವಾತಾವರಣ ಇದೆ. ಈಗ ಆರ್‌ಟಿಎನ್‌ನಿಂದ ಮತ್ತಷ್ಟು ವೇಗವಾದ ಪ್ರಗತಿಗೆ ಅನುಕೂಲ ಆಗಲಿದೆ. ಉದ್ಯಮಗಳು ಆಲೋಚನೆಯೊಂದಿಗೆ ಬಂದು ಈ ಆರ್‌ಟಿಎನ್ ಜತೆಗೆ ಕೈಜೋಡಿಸಬೇಕು. ಆ ಮೂಲಕ ಸೇನೆಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲು ನೆರವಾಗಬೇಕು.
-ಲೆಫ್ಟಿನೆಂಟ್ ಬಿ.ಎಸ್.ರಾಜು, ವೈಸ್ ಚೀಫ್ ಆರ್ಮಿ ಸ್ಟಾಫ್.