ಮಾ. 16 ರಂದು 2.17 ಲಕ್ಷ ಮೆಣಸಿನಕಾಯಿ ಚೀಲ ಮಾರುಕಟ್ಟೆಗೆ| ಮೊದಲ ಬಾರಿ 2 ಲಕ್ಷ ದಾಟಿದ ಆವಕ, ಮೆಣಸಿನಕಾಯಿ ದರದಲ್ಲಿ ಸ್ಥಿರ| ಮಾರುಕಟ್ಟೆ ಪ್ರವೇಶಿಸಿದ ಪ್ರತಿಯೊಬ್ಬರೂ ಕೆಮ್ಮದೇ ಹಾಗೆ ಹೋಗಲು ಸಾಧ್ಯವಿಲ್ಲ|
ಬ್ಯಾಡಗಿ(ಮಾ.19): ಸ್ಥಳೀಯ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕೊರೋನಾ ವೈರಸ್ ಭಯವನ್ನೂ ಲೆಕ್ಕಿಸದೇ ನಿರಾತಂಕವಾಗಿ ವ್ಯಾಪಾರ-ವಹಿವಾಟು ನಡೆಯಿತಲ್ಲದೇ ಮಾ. 16 ರಂದು ಮಾರುಕಟ್ಟೆಗೆ ಒಟ್ಟು 2.17 ಲಕ್ಷಕ್ಕೂ ಅಧಿಕ ಮೆಣಸಿನಕಾಯಿ ಚೀಲ ಆವಕಾಗುವ ಮೂಲಕ ಪ್ರಸಕ್ತ ವರ್ಷದಲ್ಲಿ ಮೊದಲ ಬಾರಿಗೆ 2 ಲಕ್ಷದ ಗಡಿದಾಟಿದಂತಾಗಿದೆ.
ವಿಕ್ಟೋರಿಯಾ ವೈದ್ಯರಿಗೆ ಕೊರೋನಾ ಸೋಂಕಿನ ಶಂಕೆ
undefined
ಕೊರೋನಾ ಭಯಕ್ಕೆ ನಲುಗಿರುವ ಸರ್ಕಾರ ರಾಜ್ಯದಲ್ಲಿನ ವ್ಯಾಪಾರಿ ಮಾಲ್‌ಗಳು ಸೇರಿದಂತೆ, ಸಿನಿಮಾ ಥಿಯೇಟರ್, ಮದುವೆ, ಸಭೆ, ಸಮಾರಂಭ ಹಾಗೂ ಶಾಲೆಗಳನ್ನು ಮಾ. 23ರ ವೆರಗೆ ಸ್ಥಗಿತಗೊಳಿಸಿ ಆದೇಶಿಸಿದೆ. ಆದರೆ, ಅತೀ ಹೆಚ್ಚು ಜನರು ಸೇರುವಂತಹ ಎಪಿಎಂಸಿ ವ್ಯಾಪಾರ ವಹಿವಾಟಿಗೆ ಅನುಮತಿ ನೀಡಿತ್ತು. ಕೊರೋನಾ ಭಯವನ್ನು ಲೆಕ್ಕಿಸದೇ ಸುಮಾರು 25 ಸಾವಿರಕ್ಕೂ ಜನರು ಒಂದೆಡೆ ಸೇರಿ ನಿರ್ಭಯವಾಗಿ ವ್ಯಾಪಾರ ವಹಿವಾಟು ನಡೆಸಿದರು.
2 ಲಕ್ಷ ಗಡಿ ದಾಟಿದ ವಹಿವಾಟು:
6 ವಾರಗಳಿಂದ 1 ಲಕ್ಷಕ್ಕೂ ಅಧಿಕ ಚೀಲಗಳಷ್ಟು ಆವಕವಾಗುತ್ತಾ ಬಂದಿದ್ದ ಮಾರುಕಟ್ಟೆಗೆ ಮಾ. 12ರಂದು 1,74,492 ರಷ್ಟು ಚೀಲಗಳು ಆವಕವಾಗಿತ್ತು. ಪ್ರಸಕ್ತ ವರ್ಷ ಇಲ್ಲಿಯವರೆಗಿನ ಅಧಿಕ ಆವಕವೆನಿಸಿತ್ತು. ಆದರೆ ಸೋಮವಾರ ಎರಡು ಲಕ್ಷ ಗಡಿ ದಾಟುವ ಮೂಲಕ ಪ್ರಸಕ್ತ ವರ್ಷದ ದಾಖಲೆಯಲ್ಲಿ ಚೇತರಿಸಿಕೊಂಡಿತು.
ಎಲ್ಲೆಲ್ಲೂ ಕೆಂಪು:
ಆವಕ 2 ಲಕ್ಷದ ಗಡಿದಾಟಿದ ಹಿನ್ನೆಲೆಯಲ್ಲಿ ಮಾರುಕಟ್ಟೆಯ ಕೆಲ ದಲಾಲರ ಅಂಡಿಗಳಲ್ಲಿನ ಚೀಲಗಳು ರಸ್ತೆಗೆ ಬಂದಿದ್ದು ಕಂಡುಬಂದಿತು, ಆವರಣದಲ್ಲಿ ಜಾಗ ಕೊರತೆಯಾದ ಕಾರಣ ರಸ್ತೆ ಮೇಲೆ ಸಿಡಿಗಳ ಮೇಲೆ ಮೆಣಸಿನಕಾಯಿ ಚೀಲಗಳನ್ನು ಇಟ್ಟು ವ್ಯಾಪಾರ ಮಾಡುತ್ತಿದ್ದ ದೃಶ್ಯಗಳು ಕಂಡುಬಂದವು.
ಅವಧಿಯಲ್ಲಿ ಹೆಚ್ಚಳ:
ಮಾರುಕಟ್ಟೆಯಲ್ಲಿನ ಒಟ್ಟು 247 ಪೇಟೆ ಕಾರ್ಯಕರ್ತರ ಅಂಗಡಿಗಳಲ್ಲಿ ಮೆಣಸಿನಕಾಯಿ ಮಾರಾಟಕ್ಕಿಡಲಾಗಿದ್ದು ಟೆಂಡರ್ ಹಾಕಲು ನಿಗದಿತ ಅವಧಿಗಿಂತ ಒಂದು ಗಂಟೆ ಹೆಚ್ಚಿನ ಕಾಲಾವಕಾಶ ನೀಡಲಾಗಿದ್ದು, ಖರೀದಿ ಪ್ರಕ್ರಿಯೆಯಲ್ಲಿ ಒಟ್ಟು 333 ವ್ಯಾಪಾರಸ್ಥರು ಭಾಗವಹಿಸಿದ್ದರು. ವ್ಯಾಪಾರಕ್ಕಿಟ್ಟಿದ್ದ ಒಟ್ಟು 16,488 ಲಾಟ್‌ಗಳ ಪೈಕಿ ಗುಣ ಮಟ್ಟವಿಲ್ಲದ ಮತ್ತು ಹಸಿಯಿಂದ ಕೂಡಿದ್ದ 256 ಲಾಟ್‌ಗಳಿಗೆ ವ್ಯಾಪಾರಸ್ಥರು ಯಾವುದೇ ದರಗಳನ್ನು ನೀಡಲಿಲ್ಲ.
ದರದಲ್ಲಿ ಸ್ಥಿರತೆ:
ಇಳುವರಿ ಹಾಗೂ ಆವಕದ ಕೊರತೆಯಿಂದಾಗಿ ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಬ್ಯಾಡಗಿ ಮಾರುಕಟ್ಟೆಯಲ್ಲಿ ಮೆಣಸಿನಕಾಯಿಗೆ ಬಂಗಾರದ ಬೆಲೆ ದೊರೆತಿದೆ. ಹೀಗಾಗಿ ರಾಜ್ಯದ ಬಳ್ಳಾರಿ, ರಾಯಚೂರು, ಕಲಬುರಗಿ, ಧಾರವಾಡ ಜಿಲ್ಲೆಗಳು ಸೇರಿದಂತೆ ನೆರೆಯ ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳಿಂದ ಆದೋನಿ, ಕರ್ನೂಲ, ಪ್ರಕಾಶಂ ಗುಂಟೂರು ಜಿಲ್ಲೆಗಳಿಂದಲೂ ರೈತರು ಮೆಣಸಿನಕಾಯಿ ಮಾರಾಟಕ್ಕೆ ಆಗಮಿಸಿದ್ದನ್ನು ಸ್ಮರಿಸಿಕೊಳ್ಳಬಹುದು.
ಸೋಮವಾರ ಮಾರುಕಟ್ಟೆ ದರ:
ಸ್ಥಳೀಯ ಮಾರುಕಟ್ಟೆಗೆ ಸೋಮವಾರ ಒಟ್ಟು 2.17.643 ಚೀಲ ಆವಕವಾಗಿದ್ದು, ಬ್ಯಾಡಗಿ ಕಡ್ಡಿತಳಿ ಪ್ರತಿ ಕ್ವಿಂಟಲ್‌ಗೆ ಕನಿಷ್ಠ 2,169 ಗರಿಷ್ಠ 25,089 ಸರಾಸರಿ 18,009 ದರಗಳಿಗೆ ಮಾರಾಟವಾದರೇ, ಡಬ್ಬಿತಳಿ ಕನಿಷ್ಠ 2009 ಗರಿಷ್ಠ ₹ 31,145 ಸರಾಸರಿ 22,089 ಹಾಗೂ ಗುಂಟೂರ ತಳಿ ಕನಿಷ್ಠ 765 ಗರಿಷ್ಠ 11,089 ಸರಾ ಸರಿ 8,699 ಗಳಿಗೆ ಮಾರಾಟವಾಯಿತು.
ಕೊರೋನಾ ವೈರಸ್ ಕಾಟಕ್ಕೆ ನೆಲಕಚ್ಚಿದ ಕೋಳಿ ಫಾರಂ ಉದ್ಯಮ
ಇಲ್ಲಿ ಕೆಮ್ಮೋದು ಸಹಜ ಸ್ಥಳೀಯ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಮೆಣಸಿನಕಾಯಿ ವಹಿವಾಟು ನಡೆಯುವುದರಿಂದ ಕೆಮ್ಮದೇ ವಿಧಿಯಿಲ್ಲ. ಮಾರುಕಟ್ಟೆ ಪ್ರವೇಶಿಸಿದ ಪ್ರತಿಯೊಬ್ಬರೂ ಕೆಮ್ಮದೇ ಹಾಗೆ ಹೋಗಲು ಸಾಧ್ಯವಿಲ್ಲ. ಆದರೆ, ಕೊರೋನಾ ಕುರಿತು ಮುಂಜಾಗ್ರತಿ ಮಾತ್ರ ಕೆಲ ವ್ಯಾಪಾರಸ್ಥರಲ್ಲಿ ಪ್ರಭಾವ ಬೀರಿದ್ದರಿಂದ ಕೆಲ ರೈತರು, ಕಚೇರಿ ಸಿಬ್ಬಂದಿ ಹಾಗೂ ವ್ಯಾಪಾರಸ್ಥರು ಮುಖಕ್ಕೆ ಮಾಸ್ಕ ಹಾಕಿಕೊಂಡು ಕೆಲಸ ಮಾಡುತ್ತಿದ್ದ ದೃಶ್ಯಗಳು ಕಂಡುಬಂದವು.
ಇಂದು ಮಾರುಕಟ್ಟೆಗೆ ರಜೆ
ಆವಕಿನಲ್ಲಿ ಹೆಚ್ಚಳವಾದ ಹಿನ್ನೆಲೆಯಲ್ಲಿ ಸೋಮವಾರ ಸಭೆ ನಡೆಸಿದ ಬ್ಯಾಡಗಿ ಕೃಷಿ ಉತ್ಪನ್ನ ಮಾರುಕಟ್ಟೆಯ ಆಡಳಿತ ಮಂಡಳಿಯು ಬರುವ ಗುರುವಾರ ರಜೆ ಘೋಷಿಸುವ ಕುರಿತು ಒಮ್ಮತದ ನಿರ್ಧಾರಕ್ಕೆ ಬಂದಿದ್ದು, ಹೀಗಾಗಿ ಮಾ. 19ರಂದು ಮಾರುಕಟ್ಟೆಯಲ್ಲಿ ಯಾವುದೇ ವ್ಯಾಪಾರ-ವಹಿವಾಟುಗಳು ಗುರುವಾರ ನಡೆಯುವುದಿಲ್ಲ.