DCC ಬ್ಯಾಂಕ್ ರಾಜಕೀಯಕ್ಕೆ ಮತ್ತೊಂದು ಟ್ವಿಸ್ಟ್: ಪುನಃ ಅಧಿಕಾರ ಸ್ವೀಕರಿಸಿದ ಮಂಜುನಾಥಗೌಡ

By Kannadaprabha NewsFirst Published Jul 31, 2020, 9:06 AM IST
Highlights

ಬ್ಯಾಂಕ್‌ನಿಂದ ಸಾಲ ನೀಡುವುದರಲ್ಲಿ ಅವ್ಯವಹಾರ ನಡೆದಿದೆ ಎಂಬ ಕಾರಣಕ್ಕೆ ಆರ್‌.ಎಂ.ಗೌಡರನ್ನು ಡಿಸಿಸಿ ಬ್ಯಾಂಕ್‌ ನಿರ್ದೇಶಕ ಸ್ಥಾನದಿಂದ ಸಹಕಾರಿ ಇಲಾಖೆಯ ಜಂಟಿ ನಿರ್ದೇಶಕರು ವಜಾಗೊಳಿಸಿದ್ದರು. ಜೊತೆಗೆ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ಸಹಕಾರ ಇಲಾಖೆಯ ಡಿ.ಆರ್‌. ನಾಗೇಶ್‌ ಡೋಂಗ್ರೆ ನೇಮಕ ಮಾಡಲಾಗಿತ್ತು. ಉಪಾಧ್ಯಕ್ಷ ಚನ್ನವೀರಪ್ಪಗೌಡರನ್ನು ಅಧ್ಯಕ್ಷ ಸ್ಥಾನದಲ್ಲಿ ಕೂರಿಸಿದ್ದರು. ಆದರೆ ಈ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಇದೀಗ ಮತ್ತೆ ಮಂಜುನಾಥಗೌಡ ಅಧಿಕಾರ ಸ್ವೀಕರಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಶಿವಮೊಗ್ಗ(ಜು.31):  ಡಿಸಿಸಿ ಬ್ಯಾಂಕ್‌ನಲ್ಲಿ ನಡೆಯುತ್ತಿರುವ ಅನಿರೀಕ್ಷಿತ ಬೆಳವಣಿಗೆಗೆ ಮತ್ತೊಂದು ಟ್ವಿಸ್ಟ್‌ ಸಿಕ್ಕಿದೆ. ಬ್ಯಾಂಕ್‌ ಅಧ್ಯಕ್ಷ ಆರ್‌. ಎಂ. ಮಂಜುನಾಥಗೌಡರ ಡಿಸಿಸಿ ಬ್ಯಾಂಕ್‌ ನಿರ್ದೇಶಕ ಸ್ಥಾನ ಅಮಾನತ್ತಿನೊಂದಿಗೆ ಹೊಸ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಬೇಕಾಗಿದ್ದ ಗುರುವಾರ ಬೇರೆಯದೇ ಬೆಳವಣಿಗೆ ನಡೆಯಿತು. ಹೈಕೋರ್ಟ್‌ ಮಧ್ಯಂತರ ಆದೇಶದ ಹಿನ್ನೆಲೆ ಆರ್‌. ಎಂ. ಮಂಜುನಾಥಗೌಡರೇ ಅಧ್ಯಕ್ಷರಾಗಿ ಮುಂದುವರೆದಿದ್ದಾರೆ.

ಹೈಕೋರ್ಟ್‌ ಮಧ್ಯಂತರ ಆದೇಶ ಹೊರಡಿಸಿ ಶಿವಮೊಗ್ಗ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಸ್ಥಾನಕ್ಕೆ ನಡೆಯಬೇಕಾಗಿದ್ದ ಚುನಾವಣೆ ರದ್ದುಗೊಳಿಸಿತಲ್ಲದೆ, ಗೌಡರ ನಿರ್ದೇಶಕ ಸ್ಥಾನ ರದ್ದು ಆದೇಶಕ್ಕೆ ಕೂಡ ತಡೆಯಾಜ್ಞೆ ನೀಡಿತು. ಹೀಗಾಗಿ ಚುನಾವಣೆ ರದ್ದಾಯಿತಲ್ಲದೆ, ಗೌಡರೇ ಅಧ್ಯಕ್ಷರಾಗಿ ಮುಂದುವರೆಯುವಂತಾಯಿತು.

ಬ್ಯಾಂಕ್‌ನಿಂದ ಸಾಲ ನೀಡುವುದರಲ್ಲಿ ಅವ್ಯವಹಾರ ನಡೆದಿದೆ ಎಂಬ ಕಾರಣಕ್ಕೆ ಆರ್‌.ಎಂ.ಗೌಡರನ್ನು ಡಿಸಿಸಿ ಬ್ಯಾಂಕ್‌ ನಿರ್ದೇಶಕ ಸ್ಥಾನದಿಂದ ಸಹಕಾರಿ ಇಲಾಖೆಯ ಜಂಟಿ ನಿರ್ದೇಶಕರು ವಜಾಗೊಳಿಸಿದ್ದರು. ಜೊತೆಗೆ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ಸಹಕಾರ ಇಲಾಖೆಯ ಡಿ.ಆರ್‌. ನಾಗೇಶ್‌ ಡೋಂಗ್ರೆ ನೇಮಕ ಮಾಡಲಾಗಿತ್ತು. ಉಪಾಧ್ಯಕ್ಷ ಚನ್ನವೀರಪ್ಪಗೌಡರನ್ನು ಅಧ್ಯಕ್ಷ ಸ್ಥಾನದಲ್ಲಿ ಕೂರಿಸಿದ್ದರು.

ಇದನ್ನು ಪ್ರಶ್ನಿಸಿ ಗೌಡರು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಮನವಿ ಪುರಸ್ಕರಿಸಿರುವ ಹೈಕೋರ್ಟ್‌ ಚುನಾವಣೆ ನಡೆಸದಂತೆ ಮತ್ತು ಗೌಡರ ನಿರ್ದೇಶಕ ಸ್ಥಾನ ರದ್ದುಗೊಳಿಸಿದ ಜಂಟಿ ನಿರ್ದೇಶಕರ ಆದೇಶಕ್ಕೂ ತಡೆಯಾಜ್ಞೆ ನೀಡಿದೆ. ಹೀಗಾಗಿ ಗುರುವಾರ ನಡೆಯಬೇಕಿದ್ದ ಚುನಾವಣೆ ಸದ್ಯಕ್ಕೆ ರದ್ದು ಗೊಂಡಿದೆ. ಚುನಾವಣೆಗಾಗಿ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಈ ರೀತಿಯ ತಡೆಯಾಜ್ಞೆ ಬರುವ ಯಾವುದೇ ನಿರೀಕ್ಷೆ ಇಲ್ಲದ ಅಧಿಕಾರಿಗಳು ಹೊಸ ಅಧ್ಯಕ್ಷರ ಆಯ್ಕೆಗೆಯಲ್ಲಿ ಬ್ಯುಸಿಯಾದ್ದರು. ಚುನಾವಣಾ ಅಧಿಕಾರಿಯಾಗಿದ್ದ ಡಾ. ನಾಗೇಂದ್ರ ಎಫ್‌. ಹೊನ್ನಳ್ಳಿ ಚುನಾವಣೆಗೆ ಸಿದ್ಧತೆ ನಡೆಸಿದ್ದರು.

ಆದರೆ ಕೊನೆ ಗಳಿಗೆಯಲ್ಲಿ ಬಂದ ತಡೆಯಾಜ್ಞೆ ಎಲ್ಲ ರಾಜಕೀಯ ಲೆಕ್ಕಾಚಾರವನ್ನು ತಲೆಕೆಳಗು ಮಾಡಿದೆ. ಹೀಗಾಗಿ ಡಿಸಿಸಿ ಬ್ಯಾಂಕ್‌ ಅಧ್ಯಕ್ಷರಾಗಿ ಮತ್ತೊಮ್ಮೆ ಆರ್‌.ಎಂ.ಗೌಡ ಅವರೇ ಮುಂದುವರೆಯುವಂತಾಗಿದೆ.

ಮಂಜುನಾಥಗೌಡ ಸದಸ್ಯತ್ವ ರದ್ಧತಿ ವಿರುದ್ಧ ಪ್ರತಿಭಟನೆ..!

ಚುನಾವಣೆ ರದ್ದಾಗುತ್ತಿದ್ದಂತೆ ಆರ್‌. ಎಂ. ಮಂಜುನಾಥಗೌಡ ಪುನಃ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಚುನಾವಣಾ ಅಧಿಕಾರಿ ನಾಗೇಂದ್ರ ಹೊನ್ನಾಳಿ, ಚುನಾವಣಾ ಪ್ರಕ್ರಿಯೆಗೆ ಎಲ್ಲ ಸಿದ್ದತೆ ಕೈಗೊಳ್ಳಲಾಗಿತ್ತು. ಬ್ಯಾಂಕಿನ ಎಲ್ಲಾ ನಿರ್ದೇಶಕರುಗಳಿಗೆ ವೇಳಾಪಟ್ಟಿಸಹ ಕಳಿಸಿಕೊಡಲಾಗಿತ್ತು. ಆದರೆ ಹೈಕೋರ್ಟ್‌ ನೀಡಿದ ಮಧ್ಯಂತರ ತೀರ್ಪನ್ನು ಸರ್ಕಾರಿ ವಕೀಲರು ತಮಗೆ ನೀಡಿದ್ದರಿಂದ ಚುನಾವಣಾ ಪ್ರಕ್ರಿಯೆ ಸ್ಥಗಿತಗೊಳಿಸಲಾಗಿದೆ ಎಂದು ಪ್ರತಿಕ್ರಿಯಿಸಿದರು.

ಬ್ಯಾಂಕ್‌ನ ಎಂ.ಡಿ ಮತ್ತು ಸಹಕಾರ ಸಂಘಗಳ ಉಪನಿಬಂಧಕ ನಾಗೇಶ್‌ ಡೋಂಗ್ರೆ ಮಾತನಾಡಿ, ಈ ಹಿಂದೆ ಜಂಟಿ ನಿರ್ದೇಶಕರು ನೀಡಿದ್ದ ಆದೇಶ ಪ್ರಶ್ನಿಸಿ ಬ್ಯಾಂಕ್‌ ಅಧ್ಯಕ್ಷರಾಗಿದ್ದ ಆರ್‌.ಎಂ. ಗೌಡರು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಮಧ್ಯಂತರ ಆದೇಶ ನೀಡಿರುವ ಹೈಕೋರ್ಟ್‌, ಇದೀಗ ತಡೆಯಾಜ್ಞೆ ನೀಡಿದೆ ಎಂದು ತಿಳಿಸಿದರು.

ಆರ್ಥಿಕ ಸಂಕಷ್ಟದಲ್ಲಿದ್ದ ಬ್ಯಾಂಕ್‌ನ್ನು ಸದೃಢಗೊಳಿಸಲು ಸಾಕಷ್ಟುಶ್ರಮಿಸಿದ್ದು, ಹಾಗೂ ಬ್ಯಾಂಕ್‌ ಅಭಿವೃದ್ಧಿಪಡಿಸಲು ಹಲವಾರು ಯೋಜನೆಗಳನ್ನು ಜಾರಿಗೆ ತರಲಾಗಿದೆ. ಡಿಸಿಸಿ ಬ್ಯಾಂಕ್‌ ರೈತರ ಕಷ್ಟಕ್ಕೆ ನೆರವಾಗಿದೆ. ಬ್ಯಾಂಕ್‌ ಇಂದು ಸದೃಢವಾಗಿದೆ. ಹೀಗಿರುವಾಗ ತಮ್ಮ ಮೇಲೆ ಇಲ್ಲಸಲ್ಲದ ಆರೋಪ ಹೊರಿಸಿರುವುದು ನಿಜಕ್ಕೂ ನೋವು ತಂದಿದೆ. ಹಿಂದೆ ಶ್ರೀ ಕೃಷ್ಣ ಪರಮಾತ್ಮನಿಗೂ ಸಂಕಷ್ಟಎದುರಾಗಿತ್ತು. ಕೊನೆಗೆ ಸತ್ಯಕ್ಕೆ ಜಯ ಲಭಿಸುತ್ತದೆ. -ಆರ್‌.ಎಂ. ಮಂಜುನಾಥಗೌಡ, ಡಿಸಿಸಿ ಬ್ಯಾಂಕ್‌ ಅಧ್ಯಕ್ಷ
 

click me!