ಸಿಗಂದೂರಿಗೆ ಬರುವ ಎಲ್ಲ ಸಂಪನ್ಮೂಲಗಳನ್ನು ರಾಮಪ್ಪ ಮತ್ತು ಶೇಷಗಿರಿ ಭಟ್ ಇಬ್ಬರೇ ಕಬಳಿಸುತ್ತಿದ್ದಾರೆ. ದೇವಸ್ಥಾನಕ್ಕೆ ಬರುವ ಆದಾಯವನ್ನು ಸಮೂಹದ ಒಳಿತಿಗೆ ಇಬ್ಬರೂ ಉಪಯೋಗಿಸುತ್ತಿಲ್ಲ. ರಾಮಪ್ಪ ಮತ್ತು ಶೇಷಗಿರಿ ಭಟ್ ಕೋಟ್ಯಾಂತರ ರೂಪಾಯಿ ಆಸ್ತಿ ಮಾಡಿದ್ದಾರೆ.ಹೀಗಾಗಿ ಎಲ್ಲ ಆಸ್ತಿಯನ್ನು ಸರ್ಕಾರ ಸುಪರ್ದಿಗೆ ಪಡೆದು ಮುಜರಾಯಿ ಇಲಾಖೆಗೆ ಸೇರಿಸಬೇಕು ಎನ್ನುವ ಆಗ್ರಹ ಕೇಳಿ ಬಂದಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಸಾಗರ(ಜು.31): ತಾಲೂಕಿನ ಪ್ರಸಿದ್ಧ ಸಿಗಂದೂರು ದೇವಸ್ಥಾನ ಮತ್ತು ಅಲ್ಲಿನ ಎಲ್ಲ ಆಸ್ತಿಯನ್ನು ಸರ್ಕಾರ ಸುಪರ್ದಿಗೆ ಪಡೆದು ಮುಜರಾಯಿ ಇಲಾಖೆಗೆ ಸೇರಿಸಿ, ಆಡಳಿತಾಧಿಕಾರಿಯನ್ನು ನೇಮಿಸಬೇಕು ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ಪರಮೇಶ್ವರ ದೂಗೂರು ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಗಂದೂರು ಚೌಡೇಶ್ವರಿ ದೇವಸ್ಥಾನ ಕಳೆದೊಂದು ದಶಕದಿಂದ ದೊಡ್ಡ ಸಮೂಹದಲ್ಲಿ ಭಕ್ತರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ. ಭಕ್ತಾದಿಗಳು ಕೊಡುವ ಕಾಣಿಕೆ, ದೇಣಿಗೆ ದೊಡ್ಡ ಪ್ರಮಾಣದಲ್ಲಿ ದೇವಸ್ಥಾನಕ್ಕೆ ಹರಿದು ಬರುತ್ತಿದೆ. ದೇವಸ್ಥಾನವನ್ನು ಸಿಗಂದೂರು ರಾಮಪ್ಪ ಅವರು ತಮ್ಮ ಸಂಸ್ಥಾನವಾಗಿ ಮಾಡಿಕೊಂಡು ಕುಟುಂಬದ ಟ್ರಸ್ಟ್ ರಚಿಸಿದ್ದಾರೆ ಎಂದು ಹೇಳಿದರು.
ದೇವಸ್ಥಾನದ ಪ್ರಧಾನ ಅರ್ಚಕ ಶೇಷಗಿರಿ ಭಟ್ ಇದರಲ್ಲಿ ಶಾಮೀಲಾಗಿದ್ದಾರೆ. ಸಿಗಂದೂರಿಗೆ ಬರುವ ಎಲ್ಲ ಸಂಪನ್ಮೂಲಗಳನ್ನು ರಾಮಪ್ಪ ಮತ್ತು ಶೇಷಗಿರಿ ಭಟ್ ಇಬ್ಬರೇ ಕಬಳಿಸುತ್ತಿದ್ದಾರೆ. ದೇವಸ್ಥಾನಕ್ಕೆ ಬರುವ ಆದಾಯವನ್ನು ಸಮೂಹದ ಒಳಿತಿಗೆ ಇಬ್ಬರೂ ಉಪಯೋಗಿಸುತ್ತಿಲ್ಲ. ರಾಮಪ್ಪ ಮತ್ತು ಶೇಷಗಿರಿ ಭಟ್ ಕೋಟ್ಯಾಂತರ ರೂಪಾಯಿ ಆಸ್ತಿ ಮಾಡಿದ್ದಾರೆ. ಇದು ಸಾರ್ವಜನಿಕ ದೇವಸ್ಥಾನವಾಗಿದ್ದು, ಬರುವ ಆದಾಯಕ್ಕೆ ಸೂಕ್ತ ಉತ್ತರದಾಯಿತ್ವ ಇಲ್ಲವಾಗಿದೆ ಎಂದು ದೂರಿದರು.
'ಮನೆಯಲ್ಲೇ ದೀಪ ಬೆಳಗಿ, ಅಯೋಧ್ಯೆಗೆ ಬರಬೇಡಿ'
ಸಿಗಂದೂರು ದೇವಸ್ಥಾನವನ್ನು ಶರಾವತಿ ಅಭಯಾರಣ್ಯದ ಜಾಗದಲ್ಲಿ ಕಟ್ಟಿದ್ದಾರೆ. ಕಂದಾಯ ಇಲಾಖೆ ಅಧಿಕಾರಿಗಳು ಬರೀ ನೋಟಿಸ್ ಕೊಟ್ಟು ಸುಮ್ಮನಿದ್ದಾರೆಯೆ ಹೊರತು ತೆರವುಗೊಳಿಸುವ ಕೆಲಸ ಮಾಡಿಲ್ಲ. ಸಾಗರದ ಉಪವಿಭಾಗಾಧಿಕಾರಿಗಳು ಪಟ್ಟಿಮಾಡಿರುವ ಸಿಗಂದೂರು ದೇವಾಲಯ ಮತ್ತು ಸುತ್ತಮುತ್ತಲಿನ ಸುಮಾರು 14 ಕಟ್ಟಡಗಳು ಯಾವುದೇ ದೈವ ಅಥವಾ ಟ್ರಸ್ಟ್, ಸಮಿತಿಯ ಹೆಸರಿನಲ್ಲಿ ಇಲ್ಲ. ಈ ಕಟ್ಟಡಗಳು ಧರ್ಮದರ್ಶಿ ರಾಮಪ್ಪ ಮತ್ತು ಅವರ ಪುತ್ರ ರವಿ ಹೆಸರಿನಲ್ಲಿದೆ. ಕಟ್ಟಡ ನಿರ್ಮಾಣದ ಜಾಗಕ್ಕೆ ಮಂಜೂರಾತಿ ಪಡೆದುಕೊಳ್ಳದೆ ಗ್ರಾಮ ಪಂಚಾಯ್ತಿಯಿಂದ ಅಕ್ರಮವಾಗಿ ನಿರಾಪೇಕ್ಷಣಾ ಪತ್ರ ಪಡೆದಿದ್ದಾರೆ. ಈ ಕಾನೂನು ಬಾಹಿರ ನಿರ್ಮಾಣ ಕುರಿತು ಸೂಕ್ತ ತನಿಖೆ ನಡೆಸಪಡಿಸಬೇಕು ಎಂದು ಒತ್ತಾಯಿಸಿದರು.
ರಾಮಪ್ಪ ಮತ್ತು ಶೇಷಗಿರಿ ಭಟ್ ಅವರು ಅಕ್ರಮವಾಗಿ ಸಂಗ್ರಹಿಸಿಟ್ಟುಕೊಂಡಿರುವ, ಸಂಗ್ರಹಿಸುತ್ತಿರುವ ಅಪಾರ ಪ್ರಮಾಣದ ಆಸ್ತಿಪಾಸ್ತಿಗಳ ಕುರಿತು ಉನ್ನತ ಮಟ್ಟದ ತನಿಖೆ ನಡೆಸಬೇಕು. ಅದನ್ನು ಸರ್ಕಾರ ವಶಪಡಿಸಿಕೊಳ್ಳಬೇಕು. ಶರಾವತಿ ಅಭಯಾರಣ್ಯ ಹಾಗೂ ಕಂದಾಯ ಇಲಾಖೆ ಜಾಗ ಮತ್ತು ಸ್ಥಳಗಳನ್ನು ಅತಿಕ್ರಮಿಸಿ, ಒತ್ತುವರಿ ಮಾಡಿಕೊಂಡು ನಿರ್ಮಿಸಲಾಗಿರುವ ಎಲ್ಲ ಕಟ್ಟಡಗಳನ್ನು ತೆರವುಗೊಳಿಸಿ ಸರ್ಕಾರದ ವಶಕ್ಕೆ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು. ಎ.ಶೇಕ್, ಧರ್ಮಪ್ಪ, ಸುನೀಲ್, ಪ್ರಭಾಕರ್ ಇದ್ದರು.