ಮೈಸೂರು (ಸೆ.22): ಕೋವಿಡ್ ಹಾಗೂ ಲಾಕ್‌ಡೌನ್‌ನಿಂದ ಚಿತ್ರಪ್ರದರ್ಶನ ಅವಕಾಶವಿಲ್ಲದೆ ಕಳೆದ ಒಂದೂವರೆ ವರ್ಷದಿಂದ ಮುಚ್ಚಿದ್ದ ಮೈಸೂರಿನ ಸರಸ್ವತಿ ಚಿತ್ರಮಂದಿರವು ಇನ್ನೂ ಶಾಶ್ವತವಾಗಿ ಬಂದ್ ಆಗಲಿದೆ.
ಕಳೆದ ಮೂರು ದಶಕಗಳಿಂದ ಚಿತ್ರಪ್ರೇಮಿಗಳಿಗೆ ಸದಭಿರುಚಿಯ ಚಿತ್ರಗಳ ಪ್ರದರ್ಶನ ಮೂಲಕ ಮೈಸೂರು ಭಾಗದಲ್ಲಿ ಹೆಸರುವಾಸಿಯಾಗಿದ್ದ ಸರಸ್ವತಿಪುರಂನಲ್ಲಿರುವ ಸರಸ್ವತಿ ಚಿತ್ರಮಂದಿರವು ಇನ್ನೂ ಇತಿಹಾಸ ಪುಟವನ್ನು ಸೇರಲಿದೆ. ಈ ಚಿತ್ರಮಂದಿರಕ್ಕೂ ರಾಜ್‌ಕುಮಾರ್ ಕುಟುಂಬಕ್ಕೂ ಅವಿನಾಭಾವ ಸಂಬಂಧ ಇತ್ತು.
ಅಕ್ಟೋಬರ್‌ನಿಂದ ಸ್ಯಾಂಡಲ್‌ವುಡ್‌ನಲ್ಲಿ ಸಿನಿಮಾ ಸುಗ್ಗಿ!
ಕೊರೋನಾ ಸೋಂಕು ಹಾಗೂ ಲಾಕ್‌ಡೌನ್‌ನಿಂದಾಗಿ ತೀವ್ರ ನಷ್ಟಕ್ಕೊಳಗಾಗಿರುವ ಸರಸ್ವತಿ ಚಿತ್ರಮಂದಿರದ ಮಾಲೀಕರಾದ ನಾರಾಯಣ ಅವರು ಚಿತ್ರಮಂದಿರವನ್ನು ಬಂದ್ ಮಾಡಲು ನಿರ್ಧರಿಸಿದ್ದಾರೆ. ಕಳೆದ ಒಂದು ವರ್ಷ ಅವಧಿಯಲ್ಲಿ ಮೈಸೂರಿನ ಶಾಂತಲಾ, ಲಕ್ಷ್ಮಿ ಚಿತ್ರಮಂದಿರ ಬಂದ್ ಆಗಿದ್ದು, ಇದರ ಸಾಲಿಗೆ ಈಗ ಸರಸ್ವತಿ ಚಿತ್ರಮಂದಿರವು ಸೇರಿಕೊಂಡಿದೆ. ಇದು ಮೈಸೂರಿನ ಸಿನಿ ರಸಿಕರಿಗೆ ಬೇಸರ ಮೂಡಿಸಿದೆ.
ಕಳೆದ 30 ವರ್ಷಗಳಿಂದ ಸರಸ್ವತಿ ಚಿತ್ರಮಂದಿರದಲ್ಲಿ ಚಿತ್ರಪ್ರದರ್ಶನಗಳು ನಡೆಯುತ್ತಿತ್ತು. ಕೋವಿಡ್, ಲಾಕ್‌ಡೌನ್‌ನಿಂದ ಕಳೆದ ಒಂದೂವರೆ ವರ್ಷದಿಂದ ಯಾವುದೇ ಚಿತ್ರಗಳ ಪ್ರದರ್ಶನವಾಗಿಲ್ಲ. ರಾಬರ್ಟ್ ಚಿತ್ರವೇ ಕೊನೆಯದಾಗಿ ಪ್ರದರ್ಶಿಸಲಾಗಿತ್ತು. ತುಂಬಾ ನಷ್ಟವಾಗಿರುವ ಕಾರಣ ಮುಚ್ಚಲು ನಿರ್ಧರಿಸಿದ್ದು, ಮುಂದೇನು ಮಾಡಬೇಕೆಂಬುದು ಗೊತ್ತಿಲ್ಲ ಎಂದು ಸರಸ್ವತಿ ಚಿತ್ರಮಂದಿರದ ಮಾಲೀಕ ನಾರಾಯಣ್ ಬೇಸರ ತೊಡಿಕೊಂಡಿದ್ದಾರೆ.