ಜೆಡಿಎಸ್‌- ಕಾಂಗ್ರೆಸ್‌ ನಡುವೆ ಮತ್ತೊಂದು ರೋಚಕ ಹೋರಾಟ

By Kannadaprabha News  |  First Published Apr 4, 2023, 7:17 AM IST

ಕಾವೇರಿ ನದಿಯ ಉಭಯ ದಂಡೆಗಳಲ್ಲಿ ವ್ಯಾಪಿಸಿಕೊಂಡಿರುವ ಕೃಷ್ಣರಾಜ ನಗರ ವಿಧಾನಸಭಾ ಕ್ಷೇತ್ರದಲ್ಲಿ ಸರಿಸುಮಾರು ನಾಲ್ಕೂವರೆ ದಶಕಗಳಿಂದಲೂ ಜನತಾ ಪರಿವಾರ ಹಾಗೂ ಕಾಂಗ್ರೆಸ್‌ ನಡುವೆ ಜಿದ್ದಾಜಿದ್ದಿನ ಹೋರಾಟ. ಇಲ್ಲಿ ಮೂರನೇಯವರಿಗೆ ಅವಕಾಶವೇ ಇಲ್ಲ. ಈ ಬಾರಿ ಕೂಡ ಪರಿಸ್ಥಿತಿ ಭಿನ್ನವಾಗಿ ಕಾಣಿಸುತ್ತಿಲ್ಲ.


 ಅಂಶಿ ಪ್ರಸನ್ನಕುಮಾರ್‌

 ಮೈಸೂರು :  ಕಾವೇರಿ ನದಿಯ ಉಭಯ ದಂಡೆಗಳಲ್ಲಿ ವ್ಯಾಪಿಸಿಕೊಂಡಿರುವ ಕೃಷ್ಣರಾಜ ನಗರ ವಿಧಾನಸಭಾ ಕ್ಷೇತ್ರದಲ್ಲಿ ಸರಿಸುಮಾರು ನಾಲ್ಕೂವರೆ ದಶಕಗಳಿಂದಲೂ ಜನತಾ ಪರಿವಾರ ಹಾಗೂ ಕಾಂಗ್ರೆಸ್‌ ನಡುವೆ ಜಿದ್ದಾಜಿದ್ದಿನ ಹೋರಾಟ. ಇಲ್ಲಿ ಮೂರನೇಯವರಿಗೆ ಅವಕಾಶವೇ ಇಲ್ಲ. ಈ ಬಾರಿ ಕೂಡ ಪರಿಸ್ಥಿತಿ ಭಿನ್ನವಾಗಿ ಕಾಣಿಸುತ್ತಿಲ್ಲ.

Latest Videos

undefined

2004 ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಸೋತಿದ್ದ ನಂತರ ಜೆಡಿಎಸ್‌ ಸೇರಿ 2008,2013,2018- ಹೀಗೆ ಸತತ ಮೂರು ಗೆಲವು ದಾಖಲಿಸುವ ಮೂಲಕ ಕ್ಷೇತ್ರದ ಮೊದಲ ಹ್ಯಾಟ್ರಿಕ್‌ವೀರ ಎನಿಸಿಕೊಂಡವರು. ಸಚಿವರಾಗಿಯೂ ಕೆಲಸ ಮಾಡಿರುವ ಅವರು ಈ ಬಾರಿಯೂ ಜೆಡಿಎಸ್‌ ಅಭ್ಯರ್ಥಿಯಾಗಿದ್ದು ತಮ್ಮ ಅಭಿವೃದ್ಧಿ ಕಾರ್ಯಗಳ ಮೂಲಕ ನಾಲ್ಕನೇ ಗೆಲವು ದಾಖಲಿಸುವ ತವಕದಲ್ಲಿದ್ದಾರೆ.

ಕಾಂಗ್ರೆಸ್‌ ಅಭ್ಯರ್ಥಿಯಾಗಿರುವ ಜಿಪಂ ಮಾಜಿ ಸದಸ್ಯ ಡಿ. ರವಿಶಂಕರ್‌ ಕಳೆದ ಬಾರಿ ತೀವ್ರ ಹೋರಾಟ ನಡೆಸಿ ಕಡಿಮೆ ಅಂತರದಲ್ಲಿ ಸೋತವರು. ಈ ಬಾರಿ ಶತಾಯಗತಾಯ ಗೆದ್ದು, ವಿಧಾನಸಭೆ ಪ್ರವೇಶಿಸಬೇಕು ಎಂದು ಹೋರಾಟ ನಡೆಸಿದ್ದಾರೆ. ಅವರ ಕುಟುಂಬಕ್ಕೆ ಇದು ಮೂರನೇ ಚುನಾವಣೆ. 2013 ರಲ್ಲಿ ರವಿಶಂಕರ್‌ ಅವರ ತಂದೆ ದೊಡ್ಡಸ್ವಾಮೇಗೌಡ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸೋತಿದ್ದರು.

ಬಿಜೆಪಿಯಿಂದ ಮುಖಂಡ ಹೊಸಹಳ್ಳಿ ವೆಂಕಟೇಶ್‌ (ಇವರ ಪತ್ನಿ ವನಜಾಕ್ಷಿ ಜಿಪಂ ಸದಸ್ಯೆಯಾಗಿದ್ದರು), ಜಿಪಂ ಮಾಜಿ ಸದಸ್ಯ ಬಾಬು ಹನುಮಾನ್‌ (ಇವರ ತಂದೆ ಎಸ್‌.ಎ. ಗೋವಿಂದರಾಜು 1999 ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದರು), ಮುಖಂಡರಾದ ಮಿರ್ಲೆ ವರದರಾಜ್‌, ಎಚ್‌.ಪಿ. ಗೋಪಾಲ್‌ (ಇವರ ಪತ್ನಿ ಶ್ವೇತಾ ಕಳೆದ ಬಾರಿ ಬಿಜೆಪಿ ಅಭ್ಯರ್ಥಿಯಾಗಿದ್ದರು) ಮತ್ತಿತರರು ಆಕಾಂಕ್ಷಿತರು.

ಕ್ಷೇತ್ರದ ಇತಿಹಾಸ

ಕೆ.ಆರ್‌. ನಗರ ಕ್ಷೇತ್ರ 1952ರ ಮೊದಲ ಸಾರ್ವತ್ರಿಕ ಚುನಾವಣೆಯಿಂದಲೂ ಅಸ್ತಿತ್ವದಲ್ಲಿದೆ. ಮೊದಲ ಚುನಾವಣೆಯಲ್ಲಿ ಪಕ್ಷೇತರರಾದ ಸಾಲಿಗ್ರಾಮದ ಹನುಮಂತಗೌಡರ ತಮ್ಮಯ್ಯ ಅವರು ಕಾಂಗ್ರೆಸ್‌ನ ಎಂ.ಎಲ್‌. ನಂಜರಾಜೇ ಅರಸ್‌ ಅವರನ್ನು ಸೋಲಿಸಿ, ಆಯ್ಕೆಯಾಗಿದ್ದರು. ಎಸ್ಪಿಯಿಂದ ಕೆ.ಎಸ್‌. ಗೌಡಯ್ಯ, ಕೆಎಂಪಿಪಿಯಿಂದ ಬಿ. ಸಿದ್ದಲಿಂಗ ಶೆಟ್ಟಿಕಣದಲ್ಲಿದ್ದರು. 1957 ರಲ್ಲಿ ಕಾಂಗ್ರೆಸ್‌ನ ಎಚ್‌.ಎಂ. ಚನ್ನಬಸಪ್ಪ ಅವರು ಪಕ್ಷೇತರರಾದ ಕೆ.ಎಸ್‌. ಗೌಡಯ್ಯಅವರನ್ನು ಸೋಲಿಸಿ ಆಯ್ಕೆಯಾಗಿದ್ದರು. 1962 ರಲ್ಲಿ ನೇರ ಹಣಾಹಣಿಯಲ್ಲಿ ಪಕ್ಷೇತರರಾದ ಕೆ.ಎಸ್‌. ಗೌಡಯ್ಯ ಅವರು ಕಾಂಗ್ರೆಸ್‌ನ ಎಚ್‌.ಎಂ. ಚನ್ನಬಸಪ್ಪ ಅವರನ್ನು ಸೋಲಿಸಿ, ಆಯ್ಕೆಯಾಗಿದ್ದರು. 1967 ರಲ್ಲಿ ಪಕ್ಷೇತರರಾದ ಎಂ. ಬಸವರಾಜು ಅವರು ಪಕ್ಷೇತರರಾದ ಎಸ್‌.ಎಚ್‌.ಆರ್‌. ಗೌಡ ಹಾಗೂ ಕಾಂಗ್ರೆಸ್‌ನ ಕೆ.ಎಸ್‌. ಗೌಡಯ್ಯ ಅವರನ್ನು ಸೋಲಿಸಿ, ಆಯ್ಕೆಯಾಗಿದ್ದರು. ಭಾರತೀಯ ಜನಸಂಘದಿಂದ ವೈ.ಎಸ್‌. ಲಿಂಗಯ್ಯ, ಪಕ್ಷೇತರರಾಗಿ ಎಸ್‌.ಬಿ. ಬೋರಣ್ಣ, ಬಿ.ಗೌಡ ಸ್ಪರ್ಧಿಸಿದ್ದರು.

1972 ರಲ್ಲಿ ಕಾಂಗ್ರೆಸ್‌ನ ಎಚ್‌.ಬಿ. ಕೆಂಚೇಗೌಡ ಅವರು ಸಂಸ್ಥಾ ಕಾಂಗ್ರೆಸ್‌ನ ಎಚ್‌.ಎಲ್‌. ತಿಮ್ಮೇಗೌಡರನ್ನು ಸೋಲಿಸಿ, ಆಯ್ಕೆಯಾದರು. ಎಂ. ಬಸವರಾಜು ಪಕ್ಷೇತರಾಗಿ ಸ್ಪರ್ಧಿಸಿದ್ದರು. 1978 ರಲ್ಲಿ ಇಂದಿರಾ ಕಾಂಗ್ರೆಸ್‌ನ ಎಚ್‌. ವಿಶ್ವನಾಥ್‌ ಅವರು ಜನತಾಪಕ್ಷದ ಎಸ್‌. ನಂಜಪ್ಪ ಅವರನ್ನು ಸೋಲಿಸಿ, ಆಯ್ಕೆಯಾದರು. ಎಸ್‌.ಬಿ. ಜವರೇಗೌಡ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದರು. 1983 ಹಾಗೂ 1985 ರಲ್ಲಿ ಜನತಾಪಕ್ಷದ ಎಸ್‌. ನಂಜಪ್ಪ ಅವರು ಕಾಂಗ್ರೆಸ್‌ನ ಎಚ್‌. ವಿಶ್ವನಾಥ್‌ ಅವರನ್ನು ಸೋಲಿಸಿ, ಸತತ ಎರಡು ಬಾರಿ ಆಯ್ಕೆಯಾದ ಹೆಗ್ಗಳಿಕೆ ಪಡೆದರು. 1989 ರಲ್ಲಿ ಕಾಂಗ್ರೆಸ್‌ನ ಎಚ್‌. ವಿಶ್ವನಾಥ್‌ ಅವರು ಸಜಪದ ಎಸ್‌. ನಂಜಪ್ಪ ಅವರನ್ನು ಸೋಲಿಸಿ, ಆಯ್ಕೆಯಾದರು.

1994 ರಲ್ಲಿ ಜನತಾದಳದ ಎಸ್‌. ನಂಜಪ್ಪ ಅವರು ಕಾಂಗ್ರೆಸ್‌ನ ಎಚ್‌. ವಿಶ್ವನಾಥ್‌ ಅವರನ್ನು ಸೋಲಿಸಿ, ಆಯ್ಕೆಯಾದರು. 1999 ರಲ್ಲಿ ಕಾಂಗ್ರೆಸ್‌ನ ಎಚ್‌. ವಿಶ್ವನಾಥ್‌ ಅವರು ಜೆಡಿಎಸ್‌ನ ಮಂಚನಹಳ್ಳಿ ಮಹದೇವ್‌ ಅವರನ್ನು ಸೋಲಿಸಿ, ಆಯ್ಕೆಯಾದರು. ಎಸ್‌.ಎ. ಗೋವಿಂದರಾಜು ಬಿಜೆಪಿ ಅಭ್ಯರ್ಥಿಯಾಗಿದ್ದರು.

2004 ರಲ್ಲಿ ಜೆಡಿಎಸ್‌ನ ಮಂಚನಹಳ್ಳಿ ಮಹದೇವ್‌ ಅವರು ಕಾಂಗ್ರೆಸ್‌ನ ಎಚ್‌. ವಿಶ್ವನಾಥ್‌ ಅವರನ್ನು ಸೋಲಿಸಿ, ಆಯ್ಕೆಯಾದರು. ಸಾ.ರಾ. ಮಹೇಶ್‌ ಬಿಜೆಪಿ ಅಭ್ಯರ್ಥಿಯಾಗಿದ್ದರು. 2008 ರಲ್ಲಿ ಜೆಡಿಎಸ್‌ನ ಸಾ.ರಾ. ಮಹೇಶ್‌ ಅವರು ಕಾಂಗ್ರೆಸ್‌ನ ಎಚ್‌. ವಿಶ್ವನಾಥ್‌ ಅವರನ್ನು ಸೋಲಿಸಿ, ಆಯ್ಕೆಯಾದರು. 2013 ರಲ್ಲಿ ಜೆಡಿಎಸ್‌ನ ಸಾ.ರಾ. ಮಹೇಶ್‌ ಕಾಂಗ್ರೆಸ್‌ನ ದೊಡ್ಡಸ್ವಾಮೇಗೌಡರನ್ನು ಸೋಲಿಸಿ, ಪುನಾರಾಯ್ಕೆಯಾದರು. ಆ ಮೂಲಕ ಎಸ್‌. ನಂಜಪ್ಪ ಅವರ ನಂತರ ಸತತ ಎರಡು ಗೆಲವು ಪಡೆದ ಹೆಗ್ಗಳಿಕೆಗೆ ಪಾತ್ರರಾದರು. 2018 ರಲ್ಲೂ ಗೆಲ್ಲುವ ಮೂಲಕ ಕ್ಷೇತ್ರದ ಮೊದಲ ಹ್ಯಾಟ್ರಿಕ್‌ ಶಾಸಕ ಎನಿಸಿಕೊಂಡರು. ಕಾಂಗ್ರೆಸ್‌ನಿಂದ ದೊಡ್ಡಸ್ವಾಮೇಗೌಡರ ಪುತ್ರ, ಜಿಪಂ ಸದಸ್ಯಡಿ. ರವಿಶಂಕರ್‌, ಬಿಜೆಪಿಯಿಂದ ಶ್ವೇತಾ ಗೋಪಾಲ್‌ ಸ್ಪರ್ಧಿಸಿದ್ದರು.

ಮತದಾರರ ವಿವರ

ಒಟ್ಟು ಮತದಾರರು- 2,10,376

ಪುರುಷರು- 1,05,046

ಮಹಿಳೆಯರು- 1,05,312

ಇತರರು- 18

ಮತಗಟ್ಟೆಗಳು- 250

2018ರ ಫಲಿತಾಂಶ

ಸಾ.ರಾ. ಮಹೇಶ್‌- ಜೆಡಿಎಸ್‌- 85,011

ರವಿಶಂಕರ್‌ ಡಿ- ಕಾಂಗ್ರೆಸ್‌- 83,232

ಎಚ್‌.ಜಿ. ಶ್ವೇತಾ ಗೋಪಾಲ್‌- ಬಿಜೆಪಿ- 2,716

(ಇದಲ್ಲದೇ ಇನ್ನೂ ಆರು ಮಂದಿ ಕಣದಲ್ಲಿದ್ದರು)

ಕ್ಷೇತ್ರದ ಸ್ವಾರಸ್ಯಗಳು

- 1957 ರಲ್ಲಿ ಪಕ್ಕದ ಪಿರಿಯಾಪಟ್ಟಣ ತಾಲೂಕಿನ ಎಚ್‌.ಎಂ. ಚನ್ನಬಸಪ್ಪ ಅವರು ಕಾಂಗ್ರೆಸ್‌ ಅಭ್ಯರ್ಥಿಯಾಗಿ ಪಕ್ಷೇತರರಾದ ಕೆ.ಎಸ್‌. ಗೌಡಯ್ಯ ಅವರನ್ನು ಸೋಲಿಸಿ, ಆಯ್ಕೆಯಾಗಿದ್ದರು. ಎಚ್‌.ಬಿ. ಕೆಂಚೇಗೌಡ ಕೂಡ ಕಣದಲ್ಲಿದ್ದರು.

- 1962 ರಲ್ಲಿ ಪಕ್ಷೇತರರಾದ ಕೆ.ಎಸ್‌. ಗೌಡಯ್ಯ ಹಾಗೂ ಕಾಂಗ್ರೆಸ್‌ನ ಎಚ್‌.ಎಂ. ಚನ್ನಬಸಪ್ಪ ಅವರ ನಡುವೆ ನೇರ ಹಣಾಹಣಿ. ಮೂರನೇ ಪ್ರಯತ್ನದಲ್ಲಿ ಗೌಡಯ್ಯ ಗೆದ್ದರು.

- 1978, 1989 ಹಾಗೂ 1999 ರಲ್ಲಿ ಎಚ್‌. ವಿಶ್ವನಾಥ್‌, 1983,1985, 1994 ರಲ್ಲಿ ಎಸ್‌. ನಂಜಪ್ಪ ಗೆದ್ದರು.

- 2004 ರಲ್ಲಿ ವಿಶ್ವನಾಥ್‌ ಅವರನ್ನು ಜೆಡಿಎಸ್‌ನ ಮಂಚನಹಳ್ಳಿ ಮಹದೇವ್‌, 2008 ರಲ್ಲಿ ಜೆಡಿಎಸ್‌ನ ಸಾ.ರಾ. ಮಹೇಶ್‌ ಸೋಲಿಸಿದರು.

- 2013 ರಲ್ಲಿ ಸಾ.ರಾ. ಮಹೇಶ್‌ ಕಾಂಗ್ರೆಸ್‌ನ ದೊಡ್ಡಸ್ವಾಮೆಗೌಡ, 2018 ರಲ್ಲಿ ದೊಡ್ಡಸ್ವಾಮೇಗೌಡರ ಪುತ್ರ ಡಿ. ರವಿಶಂಕರ್‌ ಅವರನ್ನು ಸೋಲಿಸಿದರು.

- ಎಚ್‌. ವಿಶ್ವನಾಥ್‌, ಎಸ್‌. ನಂಜಪ್ಪ , ಸಾ.ರಾ. ಮಹೇಶ್‌ ಮಂತ್ರಿಗಳಾಗಿದ್ದರು.

-ನಂಜಪ್ಪ ಅವರು ಹಿಂದೆ ಶಾಸಕರಾಗಿದ್ದ ಕೆ.ಎಸ್‌. ಗೌಡಯ್ಯ ಅವರ ಸಹೋದರರು. ಗೌಡಯ್ಯ ಅವರ ಪುತ್ರ ಜಿ. ಪ್ರಕಾಶ್‌, ನಂಜಪ್ಪ ಕೆ.ಎನ್‌. ಬಸಂತ್‌ ಇಲ್ಲಿಂದ ಸ್ಪರ್ಧಿಸಿ, ಸೋತಿದ್ದಾರೆ.

- ವಿಧಾನ ಪರಿಷತ್‌ ಮಾಜಿ ಸದಸ್ಯ ಕೆ.ಸಿ. ಪುಟ್ಟಸಿದ್ದಶೆಟ್ಟಿಅವರು ಬಿಜೆಪಿ, ಡಾ.ಎಸ್‌.ಪಿ. ಯೋಗಣ್ಣ ಬಿಎಸ್ಪಿ ಅಭ್ಯರ್ಥಿಯಾಗಿ ಸೋತಿದ್ದಾರೆ.

ಎಚ್‌.ಎಂ.ಚನ್ನಬಸಪ್ಪ. ಡಾ.ಕೆ.ಎಸ್‌. ಗೌಡಯ್ಯ, ಎಚ್‌.ಬಿ. ಕೆಂಚೇಗೌಡ, ಎಚ್‌. ವಿಶ್ವನಾಥ್‌, ಎಸ್‌. ನಂಜಪ್ಪ, ಮಂಚನಹಳ್ಳಿ ಮಹದೇವ್‌, ಸಾ.ರಾ. ಮಹೇಶ್‌

1952- ಎಸ್‌.ಎಚ್‌. ತಮ್ಮಯ್ಯ (ಪಕ್ಷೇತರ)

1957- ಎಚ್‌.ಎಂ. ಚನ್ನಬಸಪ್ಪ (ಕಾಂಗ್ರೆಸ್‌)

1962- ಡಾ.ಕೆ.ಎಸ್‌. ಗೌಡಯ್ಯ (ಪಕ್ಷೇತರ)

1967- ಎಂ. ಬಸವರಾಜು (ಪಕ್ಷೇತರ)

1972- ಎಚ್‌.ಬಿ. ಕೆಂಚೇಗೌಡ (ಕಾಂಗ್ರೆಸ್‌)

1978- ಎಚ್‌. ವಿಶ್ವನಾಥ್‌ (ಕಾಂಗ್ರೆಸ್‌)

1983, 1985- ಎಸ್‌. ನಂಜಪ್ಪ (ಜನತಾಪಕ್ಷ)

1989- ಎಚ್‌. ವಿಶ್ವನಾಥ್‌ (ಕಾಂಗ್ರೆಸ್‌)

1994- ಎಸ್‌. ನಂಜಪ್ಪ (ಜನತಾದಳ)

1999- ಎಚ್‌. ವಿಶ್ವನಾಥ್‌ (ಕಾಂಗ್ರೆಸ್‌)

2004- ಮಂಚನಹಳ್ಳಿ ಮಹದೇವ (ಜೆಡಿಎಸ್‌)

2008, 2013, 2018- ಸಾ.ರಾ. ಮಹೇಶ್‌ (ಜೆಡಿಎಸ್‌)

click me!