ನಂಗೆ ಜ್ಯೋತಿಷ್ಯ ಗೊತ್ತಿಲ್ಲ. ಆದರೆ, ಪರಿಸ್ಥಿತಿ ನೋಡಿದರೆ ಸರ್ಕಾರ ಬದಲಾಗುತ್ತೆ ಅನಿಸುತ್ತಿದೆ. ಬಿಜೆಪಿಯ ಹಲವರು ನಮ್ಮ ಪಕ್ಷಕ್ಕೆ ಬರುತ್ತಾರೆ. ಮತ್ತೊಂದು ಚುನಾವಣೆ ಸಹ ಬರಲಿದೆ ಎಂದು ಮಾಜಿ ಸಚಿವ ಎಚ್. ಡಿ. ರೇವಣ್ಣ ಭವಿಷ್ಯ ನುಡಿದಿದ್ದಾರೆ.
ಮೈಸೂರು(ಡಿ.01): ಉಪಚುನಾವಣೆ ಫಲಿತಾಂಶ ಬಂದು ಡಿ.9ರ ನಂತರ ರಾಜ್ಯದಲ್ಲಿ ಈಗಿನ ಸರ್ಕಾರ ಬದಲಾವಣೆಯಾಗುತ್ತದೆ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಭವಿಷ್ಯ ನುಡಿದಿದ್ದಾರೆ.
ಹುಣಸೂರಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನೇನು ಜ್ಯೋತಿಷಿ ಅಲ್ಲ, ನಂಗೆ ಜ್ಯೋತಿಷ್ಯ ಗೊತ್ತಿಲ್ಲ. ಆದರೆ, ಪರಿಸ್ಥಿತಿ ನೋಡಿದರೆ ಸರ್ಕಾರ ಬದಲಾಗುತ್ತೆ ಅನಿಸುತ್ತಿದೆ. ಬಿಜೆಪಿಯ ಹಲವರು ನಮ್ಮ ಪಕ್ಷಕ್ಕೆ ಬರುತ್ತಾರೆ. ಮತ್ತೊಂದು ಚುನಾವಣೆ ಸಹ ಬರಲಿದೆ. ನಮ್ಮ ಪಕ್ಷದಿಂದ ಯಾರೂ ಬಿಜೆಪಿಗೆ ಹೋಗಲ್ಲ. ಈಗ ಹೋಗಿರುವ ಅನರ್ಹರೆ ನನಗೆ ಫೋನ್ ಮಾಡಿ ಯಾಕಾದರೂ ಹೋದ್ವೋ, ಇದೆಲ್ಲ ನಮಗೆ ಬೇಕಿತ್ತಾ ಅನ್ನುತ್ತಿದ್ದಾರೆ ಎಂದರು.
ನಾವು ಒಳ ಒಪ್ಪಂದ ಮಾಡಿಕೊಂಡಿಲ್ಲ:
ಉಪಚುನಾವಣೆಯಲ್ಲಿ ಜೆಡಿಎಸ್ ಒಳಒಪ್ಪಂದ ಮಾಡಿಕೊಂಡಿಲ್ಲ. ಬಹುಷಃ ಬಿಜೆಪಿ ಕಾಂಗ್ರೆಸ್ ಒಳ ಒಪ್ಪಂದ ಮಾಡಿಕೊಂಡಿರಬೇಕು. ಉಪಚುನಾವಣೆಯಲ್ಲಿ ನಾವು ಏಕಾಂಗಿಯಾಗಿ ಹೋರಾಡುತ್ತಿದ್ದೇವೆ. ನಾವಂತೂ ಕಾಂಗ್ರೆಸ್ ಜೊತೆ ಒಳ ಒಪ್ಪಂದ ಮಾಡಿಕೊಂಡಿಲ್ಲ. ಲೋಕಸಭೆಯಲ್ಲಿ ಇದೆ ರೀತಿ ಒಳ ಒಪ್ಪಂದ ಮಾಡಿಕೊಂಡು ನಿಖಿಲ… ಹಾಗೂ ದೇವೇಗೌಡರನ್ನು ಸೋಲಿಸಿದ್ದಾರೆ. ಈಗಲೂ ಅದೇ ರೀತಿ ಒಪ್ಪಂದ ಮಾಡಿಕೊಂಡಿರಬೇಕು ಎಂದು ಮೂದಲಿಸಿದರು.