ಮಂಗನಕಾಯಿಲೆಗೆ ಮತ್ತೊಂದು ಬಲಿ : ಏರುತ್ತಿದೆ ಸಾವಿನ ಸಂಖ್ಯೆ

By Web DeskFirst Published Jan 19, 2019, 9:29 AM IST
Highlights

ಮಂಗನ ಕಾಯಿಲೆಯಿಂದ ಸಾಗರ ತಾಲೂಕಿನ ಅರಳಗೋಡು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಮತ್ತೊಂದು ಬಲಿಯಾಗಿದೆ.  ದೊಂಬೆಕೈ ಗ್ರಾಮದ ಲಕ್ಷ್ಮೇದೇವಿ ಎಂಬುವವರು ಶುಕ್ರವಾರ ಮಧ್ಯಾಹ್ನ ಮಣಿಪಾಲ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. 

ಸಾಗರ: ಮಂಗನ ಕಾಯಿಲೆ (ಕೆಎಫ್‌ಡಿ) ಯಿಂದ ತಾಲೂಕಿನ ಅರಳಗೋಡು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ದೊಂಬೆಕೈ ಗ್ರಾಮದ ಲಕ್ಷ್ಮೇದೇವಿ(82) ಎಂಬುವವರು ಶುಕ್ರವಾರ ಮಧ್ಯಾಹ್ನ ಮಣಿಪಾಲ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಇದರಿಂದ ಮಂಗನಕಾಯಿಲೆಯಿಂದ ಮೃತಪಟ್ಟವರ ಸಂಖ್ಯೆ 8ಕ್ಕೆ ಏರಿದಂತಾಗಿದೆ.

ಜನವರಿ ಮೊದಲ ವಾರದಲ್ಲಿ ಜ್ವರದಿಂದ ಬಳಲುತ್ತಿದ್ದ ಲಕ್ಷಿತ್ರ್ಮೕದೇವಿ ಅವರು ಮೊದಲು ಸಾಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ನಂತರ ಅರಳಗೋಡಿನಲ್ಲಿ ತಪಾಸಣೆಗೆ ಒಳಗಾಗಿ ಜ.14ರಂದು ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಮಧ್ಯಾಹ್ನ ಮೃತಪಟ್ಟಿದ್ದಾರೆ. ಕಳೆದ ಒಂದು ತಿಂಗಳಿನಿಂದ ಅರಳಗೋಡು ಭಾಗದಲ್ಲಿ ಮಂಗನಕಾಯಿಲೆ ವ್ಯಾಪಕವಾಗಿ ಹರಡುತ್ತಿದೆ. ಇದೀಗ ಮತ್ತೊಬ್ಬರು ಮೃತಪಟ್ಟಿರುವುದು ಈ ಭಾಗದ ಜನರನ್ನು ಮತ್ತಷ್ಟುಗಾಬರಿಗೊಳಿಸಿದೆ. ಆ ಭಾಗದಲ್ಲಿ ಈಗಲೂ ಸಾಕಷ್ಟುಜನರು ಕಾಯಿಲೆಯಿಂದ ಬಳಲುತ್ತಿದ್ದು ಪ್ರಸ್ತುತ ಮಣಿಪಾಲದಲ್ಲಿಯೇ ಹಲವರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಹೊಸನಗರ ಪಟ್ಟಣದಲ್ಲಿ ಮಂಗನ ಶವ ಪತ್ತೆ

ಪಟ್ಟಣದ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ ಹಾಗೂ ಹುಲಿಕಲ್‌ ಸಮೀಪದ ಖೈರುಗುಂದಾ ಗ್ರಾಮದಲ್ಲಿ ಬಳಿ ಮಂಗನ ಶವ ಶುಕ್ರವಾರ ಪತ್ತೆ ಆಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಸ್ಥಳಕ್ಕೆ ಪಶುವೈದ್ಯರು, ಅರಣ್ಯ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ತೆರಳಿ, ಪರಿಶೀಲನೆ ನಡೆಸಿ ಮಂಗನ ಶವ ದಹನ ಮಾಡಿದರು. ತಾಲೂಕಿನ ಸಂಪೆಕಟ್ಟೆಹಾಗೂ ಪುರಪ್ಪಮನೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ದೊಡ್ಡಬೆಳಗೋಡು ಗ್ರಾಮದಲ್ಲಿ ಕೆಎಫ್‌ಡಿ ಲಸಿಕಾ ಶಿಬಿರ ಶೀಘ್ರದಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ಆರೋಗ್ಯ ಇಲಾಖೆಯ ರಮೇಶ ಆಚಾರ್‌ ತಿಳಿಸಿದ್ದಾರೆ.

click me!