ಎಕರೆಗೆ ₹25 ಸಾವಿರ ಬರ ಪರಿಹಾರ ಘೋಷಿಸಿ: ರಾಜ್ಯ ಸರ್ಕಾರಕ್ಕೆ ಕುರಬೂರು ಶಾಂತಕುಮಾರ್ ಒತ್ತಾಯ

By Kannadaprabha NewsFirst Published Dec 8, 2023, 11:59 PM IST
Highlights

ಸಂದಿಗ್ಧ ಪರಿಸ್ಥಿತಿಯಲ್ಲಿ ಸರ್ಕಾರ ಕೇವಲ 2000 ರು. ಬರ ಪರಹಾರ ನೀಡುವುದು ಸರಿಯಲ್ಲ. ಕೂಡಲೇ ಎಕರೆಗೆ 25 ಸಾವಿರ ರು. ಪರಿಹಾರವನ್ನು ಘೋಷಣೆ ಮಾಡಬೇಕು ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರಬೂರು ಶಾಂತಕುಮಾರ್ ಒತ್ತಾಯಿಸಿದರು.

ಶಿವಮೊಗ್ಗ (ಡಿ.08): ಕಳೆದ ಎರಡು ವರ್ಷದಿಂದ ಅತಿವೃಷ್ಟಿ ಹಾಗೂ ಈ ಬಾರಿ ಉಂಟಾಗಿರುವ ಬರಗಾಲಕ್ಕೆ ರೈತರ ಬದುಕು ದುಸ್ತರವಾಗಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಸರ್ಕಾರ ಕೇವಲ 2000 ರು. ಬರ ಪರಹಾರ ನೀಡುವುದು ಸರಿಯಲ್ಲ. ಕೂಡಲೇ ಎಕರೆಗೆ 25 ಸಾವಿರ ರು. ಪರಿಹಾರವನ್ನು ಘೋಷಣೆ ಮಾಡಬೇಕು ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರಬೂರು ಶಾಂತಕುಮಾರ್ ಒತ್ತಾಯಿಸಿದರು.

ಇಲ್ಲಿನ ಪ್ರೆಸ್‌ಟ್ರಸ್ಟ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಕೃಷಿ ಸಾಲ ಪಡೆದ ರೈತರು ಬೆಳೆ ಬೆಳೆಯಲು ಹೂಡಿಕೆ ಮಾಡಿದ್ದು, ಬೆಳೆ ನಾಶವಾಗಿವೆ. ರೈತ ಸಂಕಷ್ಟಕ್ಕೆ ಸಿಲುಕಿದ್ದಾನೆ. ಕೈಗಾರಿಕೆ, ಉದ್ಯಮಿಗಳಿಗೆ ಸಂಕಷ್ಟ ನೆರವು ಸಾಲಮನ್ನಾ 12 ಲಕ್ಷ ಕೋಟಿ ರುಪಾಯಿ ಮಾಡಿರುವ ರೀತಿ ರೈತರ ಸಾಲಮನ್ನಾ ಮಾಡಬೇಕು. ರೈತರು ಬರಗಾಲದ ಸಂಕಷ್ಟದಿಂದ ನರಳುತ್ತಿದ್ದಾರೆ. ಯಾವುದೇ ಪರಿಹಾರ ಕ್ರಮಗಳನ್ನು ಸರ್ಕಾರಗಳು ಕೈಗೊಳ್ಳುತ್ತಿಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ ಬದುಕಿನಲ್ಲಿ ಚೆಲ್ಲಾಟವಾಡುತ್ತಿವೆ ಎಂದು ಆರೋಪಿಸಿದರು.

ಪ್ರಾಣಿಗಳು ಹೆಚ್ಚಿದಾಗ ಬೇಟೆಗೆ ಅವಕಾಶ ನೀಡಿ: ಶಾಸಕ ಆರಗ ಜ್ಞಾನೇಂದ್ರ

ಸ್ವಾಮಿನಾಥನ್ ಆಯೋಗದ ವರದಿಯಂತೆ ಕನಿಷ್ಠ ಬೆಂಬಲ ಬೆಲೆ ನಿಗದಿಯಾಗಬೇಕು, ಪ್ರಧಾನಿಯವರು ರೈತರಿಗೆ ಭರವಸೆ ನೀಡಿದಂತೆ ಕೂಡಲೇ ಜಾರಿ ಮಾಡಬೇಕು. ಕಬ್ಬಿನ ಉತ್ಪಾದನಾ ವೆಚ್ಚ ಏರಿಕೆಯಾಗಿದೆ. ಪ್ರತಿ ಟನ್ ಕಬ್ಬಿನ ಉತ್ಪಾದನಾ ವೆಚ್ಚ 3580, ಕೇಂದ್ರ ಸರ್ಕಾರ ನಿಗದಿ ಮಾಡಿರುವ ದರ 3150 ರು. ಆಗಿದ್ದು, ಇದು ಅವೈಜ್ಞಾನಿಕವಾಗಿದೆ. ರಾಜ್ಯ ಸರ್ಕಾರ ಕಬ್ಬು ಬೇಸಾಯ ಕೂಲಿ ಕಾರ್ಮಿಕರ ಸಮಸ್ಯೆ ತಪ್ಪಿಸಲು ಎನ್ಆರ್‌ಇಜಿ ಯೋಜನೆಯನ್ನು ಲಿಂಕ್ ಮಾಡಬೇಕು ಎಂದು ಆಗ್ರಹಿಸಿದರು.

60 ವರ್ಷ ಪೂರೈಸಿದ ರೈತರಿಗೆ ತಿಂಗಳಿಗೆ ಕನಿಷ್ಠ 5000 ರು. ಪಿಂಚಣಿ ನೀಡುವ ಯೋಜನೆ ಜಾರಿಗೆ ತರಬೇಕು. ಕೃಷಿ ಪಂಪ್ ಸೆಟ್‍ಗಳಿಗೆ ನೀಡುವ ಉಚಿತ ವಿದ್ಯುತ್ ತಪ್ಪಿಸಲು ವಿದ್ಯುತ್ ಖಾಸಗೀಕರಣ ನೀತಿಯನ್ನು ಕೇಂದ್ರ ಸರ್ಕಾರ ಕೈಬಿಡಬೇಕು. ರಾಜ್ಯ ಸರ್ಕಾರ ಕೃಷಿ ಪಂಪ್ ಸೆಟ್‍ಗಳಿಗೆ ಹಗಲು ವೇಳೆ ನಿರಂತರ 10 ಗಂಟೆಗಳ ವಿದ್ಯುತ್ ನೀಡಬೇಕು ಎಂದು ಒತ್ತಾಯಿಸಿದರು.

ಶಾಸಕ ಯತ್ನಾಳ್ ಮಹಾ ಸುಳ್ಳುಗಾರ: ಸಿಎಂ ಸಿದ್ದರಾಮಯ್ಯ ಹೀಗೆ ಹೇಳಿದ್ಯಾಕೆ?

23ಕ್ಕೆ ರೈತರ ಮಹಾ ಅಧಿವೇಶನ: ಮೂರು ವರ್ಷಗಳಿಂದ ಅತಿವೃಷ್ಟಿ, ಪ್ರವಾಹ ಹಾನಿ, ಮಳೆಹಾನಿ, ಬರಗಾಲಕ್ಕೆ ತುತ್ತಾಗಿರುವ ರಾಜ್ಯದ ಎಲ್ಲಾ ರೈತರ ಕೃಷಿ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು. ಎಲ್ಲಾ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿ ಕಾನೂನು ಜಾರಿ ಆಗಬೇಕು. ಕಬ್ಬಿನ ದರ ಟನ್‌ಗೆ ಕನಿಷ್ಠ 4000 ರು. ನಿಗದಿ ಮಾಡಬೇಕು. ಹಿಂದಿನ ಹೆಚ್ಚುವರಿ ಕಬ್ಬಿನ ಬಾಕಿ ಹಣ 150 ರು. ಕೊಡಿಸಬೇಕು ಎಂಬ ಮೊದಲಾದ ಬೇಡಿಕೆಗಳನ್ನು ಮುಂದಿಟ್ಟು ವಿಶ್ವ ರೈತದಿನವಾದ ಡಿ. 23ರಂದು ಬೆಳಗ್ಗೆ 11ಕ್ಕೆ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಸಂಯುಕ್ತ ಕಿಸಾನ್‌ ಮೋರ್ಚಾ, ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರರ ಸಂಘದ ಸಹಯೋಗದಲ್ಲಿ ರೈತರ ಮಹಾ ಅಧಿವೇಶನ ನಡೆಯಲಿದೆ ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ರೈತ ಮುಖಂಡ ದೇವಕುಮಾರ್ ಮತ್ತಿತರರು ಇದ್ದರು.

click me!