Latest Videos

ಹುಬ್ಬಳ್ಳಿ- ಅಂಕೋಲಾ ಮಾರ್ಗಕ್ಕೆ ಪೂರಕವಾಗಿ ಅಂಕೋಲಾ ರೈಲ್ವೆ ನಿಲ್ದಾಣನ ರೂಪುರೇಷೆ ಸಿದ್ಧ

By Kannadaprabha NewsFirst Published Jun 30, 2024, 6:42 PM IST
Highlights

ಹುಬ್ಬಳ್ಳಿ- ಅಂಕೋಲಾ ಮಾರ್ಗಕ್ಕೆ ಪೂರಕವಾಗಿ ಅಂಕೋಲಾ ರೈಲ್ವೆ ನಿಲ್ದಾಣನ ರೂಪುರೇಷೆ ಸಿದ್ಧವಾಗಿದೆ.  ಡಿಸೆಂಬರ್ ವೇಳೆಗೆ ಅಂತಿಮ ಸಮೀಕ್ಷಾ ವರದಿ

ವಸಂತಕುಮಾರ ಕತಗಾಲ

ಕಾರವಾರ (ಜೂ 30): ಹುಬ್ಬಳ್ಳಿ -ಅಂಕೋಲಾ ರೈಲ್ವೆ ಮಾರ್ಗದ ಸಮೀಕ್ಷೆ ಡಿಸೆಂಬರ್ ವೇಳೆಗೆ ಪೂರ್ಣಗೊಳ್ಳುವ ಸಾಧ್ಯತೆ ಇದ್ದು, ಯೋಜನೆಗೆ ಸಂಬಂಧಿಸಿದಂತೆ ಅಂಕೋಲಾ ರೈಲ್ವೆ ನಿಲ್ದಾಣ ವಿನ್ಯಾಸದ ನಕ್ಷೆಯನ್ನು ಸಿದ್ಧಪಡಿಸಿ, ಅನುಮೋದನೆಗಾಗಿ ನೈಋತ್ಯ ರೈಲ್ವೆ ಕೊಂಕಣ ರೈಲ್ವೆ ನಿಗಮಕ್ಕೆ ಪತ್ರ ಬರೆದಿದೆ. ಇದರೊಂದಿಗೆ ಹುಬ್ಬಳ್ಳಿ -ಅಂಕೋಲಾ ರೈಲ್ವೆ ಮಾರ್ಗದ ನಿರ್ಮಾಣದ ಆಸೆ ಗರಿಗೆದರಿದಂತಾಗಿದೆ.

ನೈಋತ್ಯ ರೈಲ್ವೆಯ ಡೆಪ್ಯುಟಿ ಚೀಫ್ ಎಂಜಿನೀಯರ್ ವಿನಾಯಕ ಪಡಾಲ್ಕರ್ ಕೊಂಕಣ ರೈಲ್ವೆ ನಿಗಮಕ್ಕೆ ಈ ಕುರಿತು ಪತ್ರ ಬರೆದು ರೈಲ್ವೆ ನಿಲ್ದಾಣದ ವಿನ್ಯಾಸದ ನಕ್ಷೆಯನ್ನೂ ಕಳುಹಿಸಿದ್ದಾರೆ.

ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕ್ಲಾಸ್‌ಮೆಟ್‌ಗಳಿಗೆ ಭಾರತೀಯ ಸೇನೆಯ ಪ್ರತಿಷ್ಠಿತ ಹುದ್ದೆ!

ಉದ್ದೇಶಿತ ಹುಬ್ಬಳ್ಳಿ -ಅಂಕೋಲಾ ರೈಲು ಮಾರ್ಗ ನೈಋತ್ಯ ರೇಲ್ವೆ ಅಡಿಯಲ್ಲಿ ಬರಲಿದೆ. ಆದರೆ, ಅಂಕೋಲಾದಲ್ಲಿ ನಿರ್ಮಾಣವಾಗಲಿರುವ ನಿಲ್ದಾಣ ಕೊಂಕಣ ರೈಲ್ವೆಗೆ ಸಂಬಂಧಿಸಿದ್ದಾಗಿದೆ. ಹೀಗಾಗಿ, ನೈಋತ್ಯ ರೈಲ್ವೆ ಅಂಕೋಲಾ ರೈಲು ನಿಲ್ದಾಣದ ರೂಪುರೇಷೆಯ ನಕ್ಷೆ ಸಿದ್ಧಪಡಿಸಿ ಅನುಮೋದನೆಗಾಗಿ ಕೊಂಕಣ ರೈಲ್ವೆಗೆ ಪತ್ರ ಬರೆದಿದೆ.

ಹುಬ್ಬಳ್ಳಿ -ಅಂಕೋಲಾ ರೈಲು ಮಾರ್ಗದ ಕನಸು ಎರಡು ದಶಕಗಳಿಗೂ ಹೆಚ್ಚು ಕಾಲದಿಂದ ನನೆಗುದಿಗೆ ಬಿದ್ದಿದೆ. ನ್ಯಾಯಾಲಯ, ಹಸಿರುಪೀಠದಲ್ಲಿ ತಡೆಯಾಜ್ಞೆಯಿಂದಾಗಿ ಈ ಯೋಜನೆ ಮುಂದುವರಿಯಲೇ ಇಲ್ಲ. ಈಗಲೂ ಹಸಿರುಪೀಠದ ಸಮ್ಮತಿ ದೊರೆಯಬೇಕಾಗಿದೆ. ಹಸಿರು ಪೀಠದ ಸಮ್ಮತಿ ದೊರೆಯುವ ನಿರೀಕ್ಷೆಯಲ್ಲಿ ರೈಲ್ವೆ ಮಾರ್ಗ ನಿರ್ಮಾಣದ ಪೂರ್ವಭಾವಿ ಸಿದ್ಧತೆಗಳನ್ನು ಕೈಗೊಳ್ಳಲು ನೈಋತ್ಯ ರೈಲ್ವೆ ಮುಂದಾಗಿದೆ.

ಫೇವರಿಟ್ ಅಂತ ತಿಂದ್ರೆ ರೋಗ ಕಟ್ಟಿಟ್ಟ ಬುತ್ತಿ, ರಾಜ್ಯಾದ್ಯಂತ ಶವರ್ಮಾದಲ್ಲಿ ಬ್ಯಾಕ್ಟೀರಿಯಾ, ಈಸ್ಟ್‌ ಪತ್ತೆ!

ಈ ನಡುವೆ ಹುಬ್ಬಳ್ಳಿ- ಅಂಕೋಲಾ ಮಾರ್ಗ ಮರು ಸಮೀಕ್ಷೆ ಕಾರ್ಯ ಬಹುತೇಕ ಅಂತಿಮ ಹಂತಕ್ಕೆ ಬಂದಿದೆ. ಈ ಹಿಂದಿನ ಸಮೀಕ್ಷಾ ವರದಿಯನ್ನು ವನ್ಯಜೀವಿ ಮಂಡಳಿ ತಿರಸ್ಕರಿಸಿತ್ತು. ಕಾಳಿ ಹುಲಿ ಸಂರಕ್ಷಿತ ಪ್ರದೇಶ ಮತ್ತು ಹೆಚ್ಚು ಅರಣ್ಯ ಹಾನಿ ಇಲ್ಲದಂತೆ ಮರು ಸಮೀಕ್ಷೆಗೆ ಸೂಚಿಸಲಾಗಿತ್ತು.

ಮರು ಸಮೀಕ್ಷೆ ವರದಿಯನ್ನು ಆಗಸ್ಟ್ ವೇಳೆಗೆ ರಾಷ್ಟ್ರೀಯ ವನ್ಯಜೀವಿ ಮಂಡಳಿಗೆ ಸಲ್ಲಿಕೆಯಾಗಲಿದೆ. ವನ್ಯಜೀವಿ ಮಂಡಳಿಯ ಅನುಮೋದನೆಯ ನಂತರ ಡಿಸೆಂಬರ್ ವೇಳೆಗೆ ವಿಸ್ತೃತ ಯೋಜನಾ ವರದಿ (ಡಿಪಿಆರ್) ಕೇಂದ್ರ ಸರ್ಕಾರಕ್ಕೆ ಸಲ್ಲಿಕೆಯಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಹುಬ್ಬಳ್ಳಿ ಅಂಕೋಲಾ ರೈಲು ಮಾರ್ಗಕ್ಕೆ ಸತತ ಹೋರಾಟ ನಡೆಯುತ್ತಿದೆ. ಕರಾವಳಿಯನ್ನು ವಾಣಿಜ್ಯ ನಗರ ಹುಬ್ಬಳ್ಳಿ ಮೂಲಕ ರಾಜಧಾನಿಯನ್ನು ಸಂಪರ್ಕಿಸುವ ರೈಲು ಮಾರ್ಗಕ್ಕಾಗಿ 2-3 ದಶಕಗಳಿಂದ ಹೋರಾಟ ನಡೆಯುತ್ತಿದೆ. ಈಗ ಈ ಮಾರ್ಗ ನಿರ್ಮಾಣಕ್ಕಾಗಿ ಪೂರ್ವಭಾವಿ ಸಿದ್ಧತೆಗಳು ಆರಂಭವಾಗಿದೆ. ಹಸಿರು ನ್ಯಾಯಪೀಠದ ಸಮ್ಮತಿ ದೊರಕಿದ ತಕ್ಷಣ ರೈಲು ಮಾರ್ಗ ನಿರ್ಮಾಣ ಕಾಮಗಾರಿ ಆರಂಭವಾಗುವ ಸಾಧ್ಯತೆ ಇದೆ.

click me!