* ಆನೆಗೊಂದಿಯಲ್ಲಿ ಒಂದೇ ವೃಂದಾವನಕ್ಕೆ ಇಬ್ಬರು ಯತಿಗಳ ಹೆಸರು
* ಜಯತೀರ್ಥ ವೃಂದಾವನ ಎಂದು ಮಂತ್ರಾಲಯ ಮಠದವರ ವಾದ
* ರಘುವರ್ಯ ತೀರ್ಥರ ವೃಂದಾವನ ಎಂದು ಉತ್ತರಾದಿ ಮಠದವರ ತರ್ಕ
ರಾಮಮೂರ್ತಿ ನವಲಿ
ಗಂಗಾವತಿ(ಜೂ.28): ತಾಲೂಕಿನ ಆನೆಗೊಂದಿಯ ತುಂಗಭದ್ರಾ ನದಿಯ ನಡುಗಡ್ಡೆಯಲ್ಲಿರುವ ನವವೃಂದಾವನಗಡ್ಡೆ ಇದೀಗ ವಿವಾದದ ಕೇಂದ್ರವಾಗಿದ್ದು, ಒಂದೇ ವೃಂದಾವನಕ್ಕೆ ಇಬ್ಬರು ಯತಿಗಳ ಹೆಸರಿನ ನಾಮಫಲಕ ಹಾಕಿದ್ದು ವಿವಾದಕ್ಕೆ ಕಾರಣವಾಗಿದೆ.
9 ಯತಿವರಣೇಣ್ಯರ ವೃಂದಾವನಗಳಲ್ಲಿ ಒಂದು ವೃಂದಾವನಕ್ಕೆ ಮಂತ್ರಾಲಯ ಮಠವು ಜಯತೀರ್ಥರ ವೃಂದಾವನ ಎಂದು ಹೇಳಿ ಆರಾಧನೆಗೆ ಮುಂದಾಗಿದೆ. ಅದರಂತೆ ಇದು ಜಯತೀರ್ಥರ ವೃಂದಾವನ ಅಲ್ಲ, ರಘುವರ್ಯತೀರ್ಥರ ವೃಂದಾವನ ಎಂದು ಹೇಳಿ ಉತ್ತರಾದಿ ಮಠದವರು ಆರಾಧನಾ ಮಹೋತ್ಸವ ನೆರವೇರಿಸಿದ್ದಾರೆ.
ಕೊಪ್ಪಳ: ಗವಿಶ್ರೀ ಕಣ್ಣೀರಿಟ್ಟ ಬೆನ್ನಲ್ಲೇ ನೆರವಿನ ಮಹಾಪೂರ..!
ಏನಿದು ವಿವಾದ?:
ಆನೆಗೊಂದಿಯ ನವವೃಂದಾವನಗಡ್ಡೆಯಲ್ಲಿ 9 ಯತಿವರೇಣ್ಯರ ವೃಂದಾವನ ಇದ್ದು, ಅದರಲ್ಲಿರುವ ಒಂದೇ ವೃಂದಾವನಕ್ಕೆ ಇಬ್ಬರು ಯತಿಗಳ ಹೆಸರಿನ ನಾಮಫಲಕಗಳಿವೆ. ಮಂತ್ರಾಲಯ ಮಠದವರು ವೃಂದಾವನದ ಕೆಳಗೆ ಜಯತೀರ್ಥರು ಎಂಬ ನಾಮಫಲಕ ಹಾಕಿದ್ದರೆ, ಉತ್ತರಾದಿ ಮಠದವರು ಇದೇ ವೃಂದಾವನಕ್ಕೆ ರಘುವರ್ಯರ ವೃಂದಾವನ ಎಂಬ ನಾಮಫಲಕ ಹಾಕಿದ್ದಾರೆ.
ಮಂತ್ರಾಲಯ ಮಠ ವಾದ:
ನವವೃಂದಾವನ ಗಡ್ಡೆಯಲ್ಲಿರುವ ಜಯತೀರ್ಥರ ವೃಂದಾವನಕ್ಕೆ ಕಳೆದ 15 ವರ್ಷಗಳಿಂದ ಆರಾಧನೆ ನೆರವೇರಿಸುತ್ತಾ ಬಂದಿದ್ದೇವೆ. ಈ ಹಿಂದೆ ಮಂತ್ರಾಲಯ ಮಠಾಧೀಶರಾಗಿದ್ದ ಸುಶಮೀಂದ್ರತೀರ್ಥ ಶ್ರೀಪಾದಂಗಳವರು 1989ರಲ್ಲಿ ಜಯತೀರ್ಥರ ಮೂಲ ವೃಂದಾವನ ಇರುವುದು ನವವೃಂದಾವನ ಗಡ್ಡೆಯಲ್ಲೇ ಎಂದು ಘೋಷಿಸಿ, ಆರಾಧನೆ ನೆರವೇರಿಸಿದ್ದರು. ಅಲ್ಲದೇ 16ನೇ ಶತಮಾನದ ಗ್ರಂಥ ‘ಸೋದೆ ಮಠದ ವಾದಿರಾಜ ತೀರ್ಥ ಪ್ರಬಂಧ’ದಲ್ಲಿ ನವವೃಂದಾವನ ಗಡ್ಡೆಯಲ್ಲಿ ಜಯತೀರ್ಥರ ವೃಂದಾವನ ಎಂದು ಉಲ್ಲೇಖಿಸಿದ್ದಾರೆ. ಅಲ್ಲದೇ ದಾಸ ಪರಂಪರೆಯಲ್ಲಿರುವ ಜಗನ್ನಾಥ ದಾಸರ ಪುತ್ರ ದಾಮೋದ ದಾಸರು ಸಹ ರಘುವರ್ಯರ ವೃಂದಾವನ ಹಂಪಿಯಲ್ಲಿದೆ ಎಂದು ಉಲ್ಲೇಖಿಸಿದ್ದಾರೆ. ಹೀಗಿರುವಾಗ ಆನೆಗೊಂದಿ ನವವೃಂದಾವನ ಗಡ್ಡೆಯಲ್ಲಿರುವ ಜಯತೀರ್ಥರ ವೃಂದಾವನ ಎಂಬುದು ಮಂತ್ರಾಲಯ ಮಠದವರ ವಾದ.
ಉತ್ತರಾದಿಮಠ ವಾದ:
ನವವೃಂದಾವನ ಗಡ್ಡೆಯಲ್ಲಿರುವ ರಘುವರ್ಯ ತೀರ್ಥರ ವೃಂದಾವನಕ್ಕೆ ಕಳೆದ 5-6 ವರ್ಷಗಳಿಂದ ಉತ್ತರಾದಿ ಮಠದವರು ಆರಾಧನೆ ನೆರವೇರಿಸುತ್ತಾ ಬಂದಿದ್ದಾರೆ. 15 ದಿನಗಳ ಹಿಂದೆ ಮೂರು ದಿನಗಳ ಕಾಲ ರಘುವರ್ಯರ ಆರಾಧನೆ ನೆರವೇರಿಸಲಾಗಿದೆ. ಜಯತೀರ್ಥರ ಮೂಲ ವೃಂದಾವನ ಕಲಬುರಗಿ ಜಿಲ್ಲೆಯ ಮಳಖೇಡದಲ್ಲಿದೆ. ಇಲ್ಲಿರುವುದು ರಘುವರ್ಯರ ವೃಂದಾವನಾಗಿದೆ. ‘ಸತ್ಯಬೋಧತೀರ್ಥರು ಪೂರ್ಣಬೋಧ ವಂಶ ಕಥಾ ಕಲ್ಪತರು’ ಗ್ರಂಥದಲ್ಲಿ ರಘುವರ್ಯರು ಎಂದು ಉಲ್ಲೇಖಿಸಿದ್ದಾರೆ. ಜಗನ್ನಾಥ ದಾಸರು ಹಾಡಿದ ಆನಂದ ತೀರ್ಥ ಮತ ಉದ್ಧಾರಕರೆನಿಪ ಹಾಡಿನಲ್ಲಿ ರಘುವರ್ಯರ ಎಂಬ ಪದ ಬಳಸಿದ್ದಾರೆಂಬದು ಉತ್ತರಾದಿ ಮಠದವರ ವಾದ.
ವಿವಾದದ ಸುಳಿಯಲ್ಲಿ:
9 ಯತಿವರೇಣ್ಯರು ಇರುವ ಪುಣ್ಯ ಕ್ಷೇತ್ರ ನವವೃಂದಾವನಗಡ್ಡೆ ಈಗ ವಿವಾದದ ಸುಳಿಯಲ್ಲಿದೆ. ಪ್ರತಿವರ್ಷ ವೃಂದಾವನಗಳ ವಿಷಯದಲ್ಲಿ ಉಭಯ ಮಠಗಳ ಮಧ್ಯೆ ವಿವಾದ ನಡೆದಿದ್ದು, ನ್ಯಾಯಾಲಯದ ಕಟ್ಟೆಏರಿದೆ. ಇದೀಗÜ ಹೊಸದಾಗಿ ಜಯತೀರ್ಥರ ವೃಂದಾವನ ಎಂಬ ವಾದ ಮತ್ತು ರಘುವರ್ಯ ತೀರ್ಥರ ವೃಂದಾವನ ಎಂಬ ವಾದವು ವಿವಾದ ಸುಳಿಗೆ ಸಿಲುಕಿದೆ.
ಬಡ ಮಕ್ಕಳನ್ನ ಓದಿಸಲು ಗವಿಸಿದ್ಧ ನನ್ನ ಜೋಳಿಗೆಗೆ ಶಕ್ತಿ ಕೊಡಲಿ: ಕಣ್ಣೀರು ಹಾಕಿದ ಗವಿಮಠ ಶ್ರೀ
ಆನೆಗೊಂದಿಯ ನವವೃಂದಾವನ ಗಡ್ಡೆಯಲ್ಲಿರುವ ಜಯತೀರ್ಥರ ಆರಾಧನೆ ಜು. 17ರಿಂದ 19ರ ವರೆಗೆ ಮಂತ್ರಾಲಯ ಮಠದಿಂದ ಜರುಗುತ್ತದೆ. ಜಯತೀರ್ಥರ ಮೂಲ ವೃಂದಾವನ ಎನ್ನುವ ಬಗ್ಗೆ ಹಲವಾರು ಗ್ರಂಥಗಳಲ್ಲಿ ಉಲ್ಲೇಖವಾಗಿದೆ. ಅಲ್ಲದೆ ಆರಾಧನೆಯನ್ನು ನೆರವೇರಿಸುತ್ತಾ ಬಂದಿದ್ದೇವೆ. ಕಳೆದ 15 ವರ್ಷಗಳಿಂದ ಉತ್ತರಾದಿ ಮಠದವರು ಆಕ್ಷೇಪ ಮಾಡದೇ ಇದೀಗ ಆರಾಧನೆ ಸಂದರ್ಭದಲ್ಲಿ ಉದ್ದೇಶಪೂರ್ವಕವಾಗಿ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ ಅಂತ ಆನೆಗೊಂದಿ ರಾಘವೇಂದ್ರಸ್ವಾಮಿಗಳ ಮಠ ಸುಮಂತ ಕುಲಕರ್ಣಿ ಹೇಳಿದ್ದಾರೆ.
ಆನೆಗೊಂದಿಯ ನವವೃಂದಾವನ ಗಡ್ಡೆಯಲ್ಲಿರುವ ರಘುವರ್ಯ ತೀರ್ಥರ ವೃಂದಾವನ, ಜಯತೀರ್ಥರ ವೃಂದಾವನ ಇರುವುದು ಮಳಖೇಡದಲ್ಲಿ. ನವವೃಂದಾವನ ಗಡ್ಡೆಯಲ್ಲಿರುವ ರಘುವರ್ಯರ ವೃಂದಾವನದ ಬಗ್ಗೆ ಹಲವಾರು ಗ್ರಂಥಗಳಲ್ಲಿ ಉಲ್ಲೇಖವಾಗಿದೆ ಅಂತ ಆನೆಗೊಂದಿ ಉತ್ತರಾದಿ ಮಠ ವ್ಯವಸ್ಥಾಪಕ ಆನಂದತೀರ್ಥಚಾರ ಜೋಶಿ ತಿಳಿಸಿದ್ದಾರೆ.