
ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಫೆ.15): ಕೂಲಿ ಕಾರ್ಮಿಕರ ಇಬ್ಬರ ಜೀವಗಳನ್ನು ಬಲಿ ಪಡೆದಿದ್ದ ಪುಂಡಾನೆ ಅದು. ಮೊನ್ನೆ ಮೊನ್ನೆಯಷ್ಟೇ ಮಹಿಳೆಯೊಬ್ಬರನ್ನು ತುಳಿದು ಸಾಯಿಸಿದ್ದ ಆ ಆನೆ ಗ್ರಾಮಗಳ ವ್ಯಾಪ್ತಿಯನ್ನು ಬಿಟ್ಟು ಕದಲುತ್ತಲ್ಲೇ ಇರಲಿಲ್ಲ. ಹಾಗಾಗಿಯೇ ಅದು ಹಲವು ಗ್ರಾಮಗಳ ನೂರಾರು ಜನರಿಗೆ ಸಿಂಹ ಸ್ವಪ್ನವಾಗಿತ್ತು. ಅಂತಹ ಒಂಟಿ ಸಲಗವನ್ನು ಅರಣ್ಯ ಇಲಾಖೆ ಕೊನೆಗೂ ಸೆರೆ ಹಿಡಿದಿದೆ. ಇಬ್ಬರನ್ನು ಕೊಂದ ತಪ್ಪಿಗೆ ಇದೀಗ ಕ್ರಾಲ್ ನಲ್ಲಿ ಸೆರೆಯಾಗುವಂತೆ ಆಗಿದೆ. ಪುಂಡಾಟ ಮೆರೆದಿದ್ದ ಆ ಆನೆಗೆ ಇನ್ಮುಂದೆ ಸನ್ನಡತೆಯ ಪಾಠವಷ್ಟೆ. ಸಾಕಾನೆಗಳ ಮಧ್ಯೆ ಬಂಧಿಯಾಗಿ ಘೀಳಿಡುತ್ತಿರೋ ಸಲಗ. ನಾಲ್ಕು ಕಾಲುಗಳಿಗೂ ದಪ್ಪ ಹಗ್ಗ, ಚೈನುಗಳಿಂದ ಬಂಧಿ, ಅಲ್ಲಾಡಲಾಗುತ್ತಿಲ್ಲ.
ಒಂದು ಹೆಜ್ಜೆಯನ್ನೂ ಅತ್ತಿಂದಿತ್ತ ಹಿಡಲಾಗುತ್ತಿಲ್ಲ. ಅದೇ ಕೆಲವು ಕ್ಷಣಗಳ ಮೊದಲು ಇದೇ ಆನೆ ಹಲವು ಗ್ರಾಮಗಳಲ್ಲಿ ಸುತ್ತಾಡುತ್ತಾ ಜನರಲ್ಲಿ ಆತಂಕ ಸೃಷ್ಟಿಸಿತ್ತು. ಸಿಕ್ಕ ಸಿಕ್ಕವರ ಮೇಲೆ ದಾಳಿ ಮಾಡುತ್ತಿತ್ತು. ಊರಿನ ಜನ ಮನೆಯಿಂದ ಹೊರಗೆ ಬಂದರು ಅಂದ್ರೆ ಜೀವದ ಆಸೆ ಬಿಟ್ಟೇ ಬರಬೇಕಿತ್ತು. ಹೀಗೆ ಇಡೀ ಊರಿಗೆ ಮರಣ ಮೃದಂಗ ಭಾರಿಸಿದ್ದ ಈ ಒಂಟಿ ಸಲಗ ಇದೀಗ ಅರಣ್ಯ ಇಲಾಖೆಯ ಬಂಧನದಲ್ಲಿದೆ. ಹೌದು ಇದು ಕೊಡಗು ಜಿಲ್ಲೆ ಪೊನ್ನಂಪೇಟೆ ತಾಲ್ಲೂಕಿನ ಚೆನ್ನಂಗೊಲ್ಲಿ, ಭದ್ರಗೊಳ, ದೇವರಪುರ ವ್ಯಾಪ್ತಿಯಲ್ಲಿ ಕಳೆದ ಕೆಲವು ವರ್ಷಗಳಿಂದ ಅಡ್ಡಾಡುತ್ತಿದ್ದ ಕಾಡಾನೆ ಇದು.
ಮಗ್ಗುಲಲ್ಲೇ ಜಲಾಶಯವಿದ್ದರೂ ಬೇಸಿಗೆ ಬೆಳೆಗೆ ನೀರು ಹರಿಸದ ನೀರಾವರಿ ಇಲಾಖೆ
ಅಂದಾಜು 42 ವರ್ಷ ಪ್ರಾಯದ ಬೃಹತ್ ದಂತಗಳ ಒಂಟಿ ಸಲಗ ಕೆಲವು ತಿಂಗಳ ಹಿಂದೆ ಇದೇ ಭದ್ರಗೊಳ ಗ್ರಾಮದಲ್ಲಿ ಗೌರಿ ಎಂಬ ಮಹಿಳೆಯನ್ನ ಬಲಿ ಪಡೆದಿತ್ತು. ಅದಾದ ಬಳಿಕ ಎರಡು ದಿನಗಳ ಹಿಂದೆಯಷ್ಟೇ ಪೊನ್ನಂಪೇಟೆ ತಾಲ್ಲೂಕಿನ ಚೆನ್ನಂಗೊಲ್ಲಿ ಗ್ರಾಮದಲ್ಲಿ ಜಾನಕಿ ಎಂಬ ಮಹಿಳೆಯನ್ನ ತುಳಿದು ಸಾಯಿಸಿತ್ತು. ಅಷ್ಟೇ ಅಲ್ಲದೆ ಸುತ್ತ ಮುತ್ತಲಿನ ಜನರ ಮೇಲೆ ದಾಳಿ ಮಾಡಿ ಭೀತಿ ಹುಟ್ಟಿಸಿತ್ತು. ಹಾಗಾಗಿ ಈ ಆನೆಯನ್ನ ಸೆರೆ ಹಿಡಿಯಲೇಬೇಕೆಂದು ರಾಜ್ಯ ವನ್ಯ ಜೀವಿ ಮಂಡಳಿ ಸದಸ್ಯ ಸಂಕೇತ್ ಪೂವಯ್ಯ ಹಾಗೂ ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಮೂಲಕ ಅರಣ್ಯ ಸಚಿವರಿಗೆ ತೀವ್ರ ಒತ್ತಡ ಹೇರಿದ್ದರು.
ಈ ಹಿನ್ನೆಲೆಯಲ್ಲಿ ಅರಣ್ಯ ಸಚಿವ ಈಶ್ವರ್ ಖಂಡ್ರೆ ನಿನ್ನೆ ತಡ ರಾತ್ರಿ ಈ ಕಾಡಾನೆ ಸೆರೆಗೆ ಅನುಮತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಭದ್ರಗೊಳ ಗ್ರಾಮದಲ್ಲಿ ಇಂದು ಈ ಪುಂಡಾನೆಯನ್ನು ಸೆರೆ ಹಿಡಿಯಲಾಯಿತು. ಸದ್ಯ ಈ ಆನೆಯನ್ನು ವೇದ ಹೆಸರಿನಿಂದ ಗುರುತ್ತಿಸಲಾಗಿದ್ದು, ಇದೇ ಆನೆ ಮೊನ್ನೆ ಮಹಿಳೆ ಮೇಲೆ ದಾಳಿ ಮಾಡಿದ ಬಳಿಕ ಗ್ರಾಮದ ಸುತ್ತಮುತ್ತಲಿನ ಕಾಫಿ ತೋಟ, ದೇವರ ಕಾಡಿನಲ್ಲಿ ಅಡ್ಡಾಡುತ್ತಿತ್ತು. ಇದರ ಮೇಲೆ ಕಣ್ಣಿಟ್ಟಿದ ಅರಣ್ಯ ಇಲಾಖೆ ಸಿಬ್ಬಂದಿಅದರ ಸೆರೆಗೆ ಅನುಮತಿ ಸಿಕ್ಕ ಕೂಡಲೆ ಇಂದು ಕಾರ್ಯಾಚರಣೆ ನಡೆಸಿತ್ತು.
ಕೊಡಗಿನ ಮೂರು ಸಾಕಾನೆ ಶಿಬಿರಗಳಾದ ದುಬಾರೆ, ಮತ್ತಿಗೋಡು ಮತ್ತು ಹಾರಂಗಿ ಸಾಕಾನೆ ಶಿಬಿರದ ಏಳು ಸಾಕಾನೆಗಳು ಮತ್ತು 90 ಕ್ಕೂ ಅಧಿಕ ಅರಣ್ಯ ಇಲಾಖೆ ಸಿಬ್ಬಂದಿ ಭಾಗಿಯಾಗಿ ಕಾರ್ಯಾಚರಣೆ ನಡೆಸಿದ್ರು. ದೇವರ ಕಾಡಿನಲ್ಲಿ ಅಡ್ಡಾಡುತ್ತಿದ್ದ ಕಾಡಾನೆಗೆ ಅರವಳಿಕೆ ತಜ್ಞ ಡಾ ರಮೇಶ್ ಅರವಳಿಕೆ ಇಂಜೆಕ್ಷನ್ ಶೂಟ್ ಮಾಡಿದ್ರು. ಇಷ್ಟು ದಿನ ರಾಜನಂತೆ ವಿಹರಿಸುತ್ತಾ ಪುಂಡಾಟವಾಡುತ್ತಿದ್ದ ವೇದ ಕೊನೆಗೂ ಸೆರೆಯಾಯಿತು. ಸೆರೆಯಾದ ಬಳಿಕ ಹೆಚ್ಚೇನು ತಕರಾರು ಮಾಡದೆ ಕ್ರೇನ್ ಸಹಾಯದಿಂದ ಲಾರಿ ಏರಿತು.
ಕಟ್ಟೆಮಾಡು ಮಹಾಮೃತ್ಯುಂಜಯ ದೇವಾಲಯದ ಸಾಂಪ್ರದಾಯಿಕ ವಸ್ತ್ರ ನಿರ್ಬಂಧಕ್ಕೆ ಹೈಕೋರ್ಟ್ ತಡೆ
ಸದ್ಯ ವೇದನನ್ನ ದುಬಾರೆ ಸಾಕಾನೆ ಶಿಬಿರಕ್ಕೆ ಕರೆದೊಯ್ಯಲಾಗಿದ್ದು ಅಲ್ಲಿ ಕ್ರಾಲ್ನಲ್ಲಿ ಹಾಕಿ ಸನ್ನಡತೆಯ ಪಾಠ ಹೇಳಲಾಗುತ್ತದೆ. ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಸಂಕೇತ್ ಪೂವಯ್ಯ ಅವರ ಸತತ ಪರಿಶ್ರಮದಿಂದ ಪುಂಡಾನೆಯನ್ನ ಅರಣ್ಯ ಇಲಾಖೆ ಯಶಸ್ವಿಯಾಗಿ ಸೆರೆಹಿಡಿದಿದೆ. ಈ ಮೂಲಕ ಆತಂಕದಲ್ಲಿದ್ದ ಹಲವು ಗ್ರಾಮಗಳ ಜನರು ಕೂಡ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಆದ್ರೆ ಇದೇ ಗ್ರಾಮದಲ್ಲಿ ಇನ್ನೂ ಎರಡು ಕಾಡಾನೆಗಳು ಅಡ್ಡಾಡುತ್ತಿದ್ದು ಅವುಗಳನ್ನು ಸೆರೆಹಿಡಿದು ಸ್ಥಳಾಂತರಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.