ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಕಾಂಗ್ರೆಸ್‌ಗೆ ಸೇರ್ಪಡೆಯಾಗಲು ಅವರಿಗೆ ಮುಕ್ತ ಆಹ್ವಾನವಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ಕೆ.ಆರ್.ನಗರ : ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಕಾಂಗ್ರೆಸ್‌ಗೆ ಸೇರ್ಪಡೆಯಾಗಲು ಅವರಿಗೆ ಮುಕ್ತ ಆಹ್ವಾನವಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ಕ್ಷೇತ್ರದ ಸಾಲಿಗ್ರಾಮ ತಾಲೂಕು ಕೇಂದ್ರದಲ್ಲಿ ಪ್ರಜಾಧ್ವನಿ ಯಾತ್ರೆಗೆ ತೆರಳಲು ಕೆ.ಆರ್.ನಗರಕ್ಕೆ ಆಗಮಿಸಿದ ಸಂದರ್ಭದಲ್ಲಿ ಎಚ್.ವಿಶ್ವನಾಥ್ ಅವರ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಇಂದು ನಾನು ಅವರನ್ನು ಪಕ್ಷಕ್ಕೆ ಸೇರ್ಪಡೆಯಾಗುವಂತೆ ಆಹ್ವಾನಿಸಲು ಬಂದಿಲ್ಲ, ಆದರೆ ಅವರು ನಮಗೆ ತುಂಬಾ ಹಳೆಯ ಸ್ನೇಹಿತರು, ಹಾಗಾಗಿ ಆಹ್ವಾನದ ಮೇರೆಗೆ ಟೀ ಸೇವಿಸಿ ಉಭಯ ಕುಶಲೋಪರಿ ವಿಚಾರಿಸಲು ಬಂದಿದ್ದೇನೆ ಎಂದರು.
undefined
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ 141 ಸ್ಥಾನಗಳನ್ನು ಗೆದ್ದು, ಸ್ಪಷ್ಟಬಹುಮತದೊಂದಿಗೆ ಅಧಿಕಾರದ ಗದ್ದುಗೆ ಏರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಕೆ.ಆರ್.ನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಲಿರುವ ಡಿ.ರವಿಶಂಕರ್ 25 ಸಾವಿರ ಮತಗಳ ಅಂತರದಿಂದ ಜಯಶಾಲಿಯಾಗಲಿದ್ದಾರೆ ಎಂದು ಭವಿಷ್ಯ ನುಡಿದರು.
ಬೊಮ್ಮಾಯಿ, ಯಡಿಯೂರಪ್ಪ ಉತ್ತರಿಸಲಿ:
ಉನ್ನತ ಶಿಕ್ಷಣ ಸಚಿವ ಅಶ್ವಥ್‌ನಾರಾಯಣ್ ಅವರು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಟಿಪ್ಪು ಸುಲ್ತಾನ್ ಅವರನ್ನು ಹೊಡೆದಂತೆ ಹೊಡೆಯಿರಿ ಎಂದು ಹೇಳಿಕೆ ನೀಡಿರುವ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದ ಅವರು, ಸಚಿವರು ಈ ವಿಚಾರದಲ್ಲಿ ವಿಷಾದ ವ್ಯಕ್ತಪಡಿಸುವ ಬದಲು ಮುಖ್ಯಮಂತ್ರಿ ಎಸ್.ಆರ್. ಬೊಮ್ಮಾಯಿ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಉತ್ತರಿಸಬೇಕೆಂದರು.
ಉಪಮುಖ್ಯಮಂತ್ರಿಯನ್ನಾಗಿಯೂ ಮಾಡಿಕೊಂಡಿದ್ದ ಮುತ್ತು ರತ್ನ ಯಾವ ರೀತಿ ಹೊಳೆಯುತ್ತಿದೆ ಏನು ಮಾತನಾಡುತ್ತಿದೆ ಎಂಬ ಬಗ್ಗೆ ಬಿಜೆಪಿಯವರು ರಾಜ್ಯದ ಜನತೆಗೆ ಉತ್ತರ ನೀಡಬೇಕೆಂದು ಆಗ್ರಹಿಸಿದರು.
ಮೈಸೂರು ಜಿಲ್ಲೆಯಲ್ಲಿ 10 ಸ್ಥಾನ ಗೆಲವು:
ರಾಜ್ಯಾದ್ಯಂತ ನಡೆಯುತ್ತಿರುವ ಪ್ರಜಾಧ್ವನಿ ಯಾತ್ರೆಗೆ ಮತದಾರದಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಇದನ್ನು ಜನರು ಮಾಧ್ಯಮಗಳಲ್ಲಿಯೇ ನೋಡುತ್ತಿದ್ದಾರೆ ಎಂದರಲ್ಲದೆ, ಮೈಸೂರು ಜಿಲ್ಲೆಯಲ್ಲಿ ಕಾಂಗ್ರೆಸ್ ಕನಿಷ್ಠ 10 ಸ್ಥಾನಗಳನ್ನು ಗೆಲ್ಲಲಿದ್ದು, ಇತಿಹಾಸ ಸೃಷ್ಟಿಮಾಡಲಿದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಕೆಪಿಸಿಸಿ ಕಾರ್ಯಕಾರಿಣಿ ಸದಸ್ಯ ದೊಡ್ಡ ಸ್ವಾಮೇಗೌಡ, ಕ್ಷೇತ್ರದ ಕಾಂಗ್ರೆಸ್ ಮುಖಂಡ ಡಿ.ರವಿಶಂಕರ್, ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ…, ಮಾಜಿ ಸಚಿವರಾದ ಎಚ್.ಎಂ. ರೇವಣ್ಣ, ಡಾ. ಎಚ್.ಸಿ. ಮಹದೇವಪ್ಪ, ರಾಣಿ ಸತೀಶ್, ವಿಧಾನಪರಿಷತ್ ಸದಸ್ಯ ಡಾ.ಡಿ. ತಿಮ್ಮಯ್ಯ, ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್ ಅಧ್ಯಕ್ಷ ಡಾ. ಬಿ.ಜೆ.ವಿಜಯ ಕುಮಾರ್, ರಾಜ್ಯ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪ ಅಮರನಾಥ್, ಎಐಸಿಸಿ ಸಹ ವಕ್ತಾರೆ ಐಶ್ವರ್ಯ ಮಹದೇವ್, ಕಾಂಗ್ರೆಸ್ ಮುಖಂಡ ಹರೀಶ್‌ಗೌಡ ಇದ್ದರು.