* ಏರೋಬ್ರಿಜ್ ಸೌಲಭ್ಯ ಇಲ್ಲದ ಏರ್‌ಪೋರ್ಟಲ್ಲಿ ಬಳಕೆ
* ಅಂಗವಿಕಲರು ಸುಲಭವಾಗಿ ವಿಮಾನ ಏರಲು ಅನುಕೂಲ
* ಈ ಪ್ರತಿ ಸಾಧನಕ್ಕೆ 63 ಲಕ್ಷ ರು. ಖರ್ಚು
ನವದೆಹಲಿ(ಏ.14): ಅಂಗವಿಕಲರು(Disabled) ಹಾಗೂ ನಡೆದಾಡಲು ಆಗದವರು ಸುಲಭವಾಗಿ ವಿಮಾನ(Flight) ಏರುವುದಕ್ಕೆ ಅನುಕೂಲ ಕಲ್ಪಿಸಲು ಕರ್ನಾಟಕದ(Karnataka) ಬೆಳಗಾವಿ, ಹುಬ್ಬಳ್ಳಿ ಸೇರಿ ದೇಶದ 14 ವಿಮಾನ ನಿಲ್ದಾಣಗಳಲ್ಲಿ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ ‘ಆ್ಯಂಬುಲಿಫ್ಟ್ಸ್’(Ambulifts) ಸೇವೆಯನ್ನು ಕಲ್ಪಿಸಿದೆ.
ಸ್ವದೇಶಿ ನಿರ್ಮಿತ ಯಂತ್ರಗಳು ಇವಾಗಿದ್ದು, ಏರೋಬ್ರಿಜ್ ಸೌಲಭ್ಯ ಹೊಂದಿಲ್ಲದ ವಿಮಾನ ನಿಲ್ದಾಣಗಳಲ್ಲಿ ಬಳಕೆ ಮಾಡಲಾಗುತ್ತದೆ. ಬೆಳಗಾವಿ(Belagavi), ಹುಬ್ಬಳ್ಳಿ(Hubballi) ಮಾತ್ರವಲ್ಲದೆ ಡೆಹ್ರಾಡೂನ್, ಗೋರಖ್‌ಪುರ, ಪಟನಾ, ಬಾಗ್ಡೋಗ್ರಾ, ದರ್ಭಾಂಗ, ಇಂಫಾಲ್, ವಿಜಯವಾಡ, ಪೋರ್ಚ್‌ಬ್ಲೇರ್, ಜೋಧಪುರ, ಸಿಲ್ಚರ್, ಝಾರ್ಸುಗುಡ, ರಾಜಕೋಟ್ ನಿಲ್ದಾಣಗಳಲ್ಲಿ ಬಳಕೆ ಮಾಡಲಾಗುತ್ತದೆ. ಮಾಸಾಂತ್ಯದ ವೇಳೆಗೆ ಇನ್ನೂ 6 ನಿಲ್ದಾಣಗಳಿಗೆ ನಿಯೋಜಿಸಲಾಗುತ್ತದೆ ಎಂದು ಪ್ರಾಧಿಕಾರ ತಿಳಿಸಿದೆ.
Aviation Training Center: ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಚಾಲನಾ ತರಬೇತಿ ಕೇಂದ್ರ
ಏನಿದು ಆ್ಯಂಬುಲಿಫ್ಟ್ಸ್?:
ಮಿನಿ ಟ್ರಕ್‌ನಂತಹ ವಾಹನ ಇವಾಗಿದ್ದು, ಒಮ್ಮೆಲೆ 6 ಗಾಲಿ ಚಕ್ರಗಳು ಹಾಗೂ 2 ಸ್ಟ್ರೆಚರ್‌ಗಳನ್ನು ಬಳಸುವಷ್ಟು ಸೌಕರ್ಯ ಇದರಲ್ಲಿರಲಿದೆ. ಜತೆಗೆ ಒಬ್ಬರು ಪರಿಚಾರಕರು ಇರುತ್ತಾರೆ. ಸೂಕ್ತ ಹವಾನಿಯಂತ್ರಿತ ವ್ಯವಸ್ಥೆಯನ್ನು ಹೊಂದಿರುತ್ತದೆ. ಈ ವಾಹನಗಳಿಗೆ ಗಾಲಿ ಚಕ್ರ ಸಮೇತ ಅಂಗವಿಕಲರು ಭೂ ಮಟ್ಟದಿಂದ ಏರಬಹುದು. ನಂತರ ಇದು ವಿಮಾನದ ಎತ್ತರಕ್ಕೆ ಮೇಲೆ ಹೋಗುತ್ತದೆ. ಅಂಗವಿಕಲರು ವಿಮಾನದ ಬಾಗಿಲಿನ ಮೂಲಕ ವಿಮಾನವನ್ನು ಸುಲಭವಾಗಿ ಪ್ರವೇಶಿಸಬಹುದಾಗಿರುತ್ತದೆ. ಈ ಪ್ರತಿ ಸಾಧನಕ್ಕೆ 63 ಲಕ್ಷ ರು. ಖರ್ಚಾಗಿದೆ. ಸಾಂಕೇತಿಕ ಮೊತ್ತಕ್ಕೆ ವಿಮಾನಯಾನ ಸಂಸ್ಥೆಗಳಿಗೆ ಇದನ್ನು ಒದಗಿಸಲಾಗುತ್ತದೆ ಎಂದು ಪ್ರಾಧಿಕಾರ ತಿಳಿಸಿದೆ.
ಹುಬ್ಬಳ್ಳಿಯ ವಿಮಾನ ನಿಲ್ದಾಣಕ್ಕೆ ವಿಂಗ್ಸ್ ಇಂಡಿಯಾ- 2022 ಪ್ರಶಸ್ತಿ.!
ಉತ್ತರ ಕರ್ನಾಟಕ ಹೆಬ್ಬಾಗಿಲು ಎಂದೇ ಖ್ಯಾತಿ ಪಡೆದ ಹುಬ್ಬಳ್ಳಿಯಲ್ಲಿ ರೈಲು ಹಾಗೂ ಸಾರಿಗೆ ಸೇವೆ ಜನಪ್ರಿಯತೆ ಪಡೆದಿರುವಂತೆ ವಿಮಾನ ಸೇವೆ ಕೂಡ ಸಾಕಷ್ಟು ಜನಪ್ರಿಯತೆ ಪಡೆದುಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಉತ್ತಮ ಸೇವೆ ಹಾಗೂ ಸಂಪರ್ಕದ ಮೂಲಕ ಹುಬ್ಬಳ್ಳಿಯ ವಿಮಾನ ನಿಲ್ದಾಣ ವಿಂಗ್ಸ್ ಇಂಡಿಯಾ-2022 ಅತ್ಯುತ್ತಮ ವಿಮಾನ ನಿಲ್ದಾಣ ಎಂಬ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿತ್ತು.
Air Taxi Service: ಹುಬ್ಬಳ್ಳಿಯಲ್ಲಿ ‘ಏರ್ ಟ್ಯಾಕ್ಸಿ’ ಸೇವೆ ಶೀಘ್ರ
ಹುಬ್ಬಳ್ಳಿಯ ವಿಮಾನ ನಿಲ್ದಾಣಕ್ಕೆ ವಿಂಗ್ಸ್ ಇಂಡಿಯಾ 2022 ಅವರ ಪ್ರಾದೇಶಿಕ ಸಂಪರ್ಕದ ವಿಭಾಗದಲ್ಲಿ ಅತ್ಯುತ್ತಮ ವಿಮಾನ ನಿಲ್ದಾಣ ಪ್ರಶಸ್ತಿ ದೊರಕಿದ್ದು, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಟ್ವಿಟರ್ ಮೂಲಕ ಅಭಿನಂದನೆ ಸಲ್ಲಿಸಿದ್ದರು.
ಕೋವಿಡ್ ನಂತರದಲ್ಲಿ ಚೇತರಿಕೆ ಕಂಡಿರುವ ಹುಬ್ಬಳ್ಳಿ ವಿಮಾನ ನಿಲ್ದಾಣ ಇತ್ತಿಚೆಗೆ ಕಾರ್ಗೋ ಸೇವೆಯ ಮೂಲಕ ಸರಕು ಸಾಗಾಣಿಕೆಯಲ್ಲಿಯೂ ಸಾಧನೆ ಮಾಡುತ್ತಿದ್ದು, ಪ್ರಯಾಣಿಕರ ಮೆಚ್ಚುಗೆಗೆ ಪಾತ್ರವಾಗಿರುವ ವಿಮಾನ ನಿಲ್ದಾಣವಾಗಿದೆ.
ಒಟ್ಟಿನಲ್ಲಿ ಸ್ವಚ್ಚತೆ, ವ್ಯವಸ್ಥಿತ ಪರಿಸರ ಹೀಗೆ ಹಲವಾರು ವಿಷಯ ವಸ್ತಗಳ ಮಾನದಂಡವನ್ನು ಆಧರಿಸಿ ಅತ್ಯುತ್ತಮ ವಿಮಾನ ನಿಲ್ದಾಣ ಎಂಬುವಂತ ಪ್ರಶಸ್ತಿಗೆ ಹುಬ್ಬಳ್ಳಿಯ ವಿಮಾನ ನಿಲ್ದಾಣ ಭಾಜನವಾಗಿರುವುದು ಹುಬ್ಬಳ್ಳಿಯ ಹೆಮ್ಮೆ ವಿಷಯವಾಗಿದೆ.