ಮಲೆನಾಡಿನಲ್ಲಿ ಮುಂಗಾರಿನ ಆರ್ಭಟ ಮುಳಗೆಡೆ ಸೇತುವೆ ಮೇಲೆ ಸಾಗಿದ ಖಾಸಗಿ ಬಸ್. ತುಂಬಿ ಹರಿಯುತ್ತಿದೆ ನದಿ, ಹಳ್ಳ, ಕೊಳ್ಳ. ಹಲವೆಡೆ ಅನಾಹುತಗಳು ಸಂಭವಿಸಿದ್ದು, ಕೃಷಿ, ತೋಟಗಾರಿಕೆ ಚಟುವಟಿಕೆಗಳಿಗೆ ಅಡಚಣೆ ಉಂಟಾಗಿದೆ.
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು(ಆ.6): ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಮುಂಗಾರಿನ ಆರ್ಭಟ ಮುಂದುವರಿದಿದ್ದು, ನದಿ, ಹಳ್ಳ, ಕೊಳ್ಳಗಳು ಮತ್ತೆ ತುಂಬಿ ಹರಿಯುತ್ತಿವೆ. ಹಲವೆಡೆ ಅನಾಹುತಗಳು ಸಂಭವಿಸಿದ್ದು, ಕೃಷಿ, ತೋಟಗಾರಿಕೆ ಚಟುವಟಿಕೆಗಳಿಗೆ ಅಡಚಣೆ ಉಂಟಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲ್ಲೂಕಿನ ಕುದುರೆಮುಖ ಭಾಗದಲ್ಲಿ ಭಾರೀ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಭದ್ರಾ ನದಿ ನೀರಿನ ಹರಿಯುವಿಕೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಇಂದೂ ಸಹ ಕಳಸ-ಹೊರನಾಡು ಸಂಪರ್ಕಿಸುವ ಹೆಬ್ಬಾಳೆ ಸೇತುವೆ ಮುಳುಗಡೆಯಾಗಿದೆ.ಈ ಹಿನ್ನೆಲೆಯಲ್ಲಿ ಪರ್ಯಾಯವಾಗಿ ಹಳ್ಳುವಳ್ಳಿ ಮಾರ್ಗದಲ್ಲಿ ವಾಹನಗಳ ಸಂಚಾರಕ್ಕೆ ಅನುವುಮಾಡಿಕೊಡಲಾಗಿದೆ. ಈ ವರ್ಷದಲ್ಲಿ ಹೆಬ್ಬಾಳೆ ಸೇತುವೆ ಎರಡನೇ ಬಾರಿ ಮುಳುಗಡೆಯಾಗಿದೆ. ಮುಳುಗಡೆಯಾದ ಸೇತುವೆ ಮೇಲ್ಬಾಗದಲ್ಲಿ ಭದ್ರಾ ನದಿ ನೀರು ಹರಿಯುತ್ತಿದ್ದರು ಅಪಾಯವನ್ನು ಲೆಕ್ಕಿಸದೆ ಖಾಸಗಿ ಬಸ್ ಸಂಚಾರ ಮಾಡಿದೆ. ಬಸ್ ನಲ್ಲಿ ಪ್ರಯಾಣಿಕರು ಇದ್ದರು ಬಸ್ ಚಾಲಕ ಅಪಾಯದ ನಡುವೆ ಸಂಚಾರ ಮಾಡಿರುವುದು ಇದೀಗ ಆಕ್ರೋಶಕ್ಕೆ ಕಾರಣವಾಗಿದೆ.ಇನ್ನು ಸತತವಾಗಿ ಸೇತುವೆ ಮೇಲೆ ಭಾರೀ ಪ್ರಮಾಣದ ನೀರು ಹರಿದಿರುವುದರಿಂದ ಸೇತುವೆ ದುರ್ಬಲಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮಳೆಗಾಲ ಮುಗಿದ ಕೂಡಲೇ ಹೊಸದಾಗಿ ಇನ್ನಷ್ಟು ಎತ್ತರಿಸಿ ಸೇತುವೆ ನಿರ್ಮಿಸಬೇಕು ಎನ್ನುವ ಒತ್ತಾಯ ಕೇಳಿಬಂದಿದೆ.
ಮಳೆಯಿಂದ ರಸ್ತೆ ಅಪಘಾತ: ಕಾಫಿನಾಡಿನಾದ್ಯಂತ ಭಾರೀ ಮಳೆಗೆ ಸರಣಿ ಅಪಘಾತಗಳು ಸಂಭವಿಸುತ್ತಿದ್ದು ವಾಹನ ಸವಾರರು ರಸ್ತೆಯಲ್ಲಿ ಸಂಚರಿಸಲು ಆತಂಕ ಪಡುವ ಸ್ಥಿತಿ ನಿರ್ಮಾಣವಾಗಿದೆ.ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಸಮೀಪ ಟೆಂಪೊವೊಂದು ರಸ್ತೆಯ ಪಕ್ಕ ಪಲ್ಟಿಯಾಗಿದೆ. ಗಾಯಗೊಂಡಿದ್ದ ಚಾಲಕನನ್ನ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಎರಡು ದಿನಗಳಿಂದ ಜೋರು ಮಳೆಯ ಜೊತೆಗೆ ಬಿರುಸಾಗಿ ಗಾಳಿ ಬೀಸುತ್ತಿರುವುದರಿಂದ ವಾಹನಗಳು ನಿಯಂತ್ರಣಕ್ಕೆ ಸಿಗದೆ ಅಪಘಾತಕ್ಕೆ ಕಾರಣವಾಗುತ್ತಿದೆ.
ಮಳೆಯಾಗಿ ನಾಲ್ಕು ದಿನವಾದ್ರೂ ಆರಂಭವಾಗದ ಸರ್ವೇ ಕಾರ್ಯ
ಭತ್ತದ ಗದ್ದೆಯಲ್ಲಿ ಭೂ ಕುಸಿತ: ನಾಟಿಗೆ ಸಜ್ಜಾಗಿದ್ದ ಭತ್ತದ ಗದ್ದೆಯಲ್ಲಿ ಭೂಕುಸಿತ ಸಂಭವಿಸಿರುವ ಘಟನೆ ಕಳಸ ತಾಲೂಕಿನ ನೆಲ್ಲಿಬೀಡು ಗ್ರಾಮದಲ್ಲಿ ನಡೆದಿದೆ. ಭತ್ತ ಗದ್ದೆಯಲ್ಲಿ ಭೂ ಕುಸಿತ ಉಂಟಾಗಿರುವುದರಿಂದ ರೈತರು ಆತಂಕಗೊಂಡಿದ್ದಾರೆ.ಮನೋಜ್ ಎಂಬುವರ ಗದ್ದೆಯನ್ನು ನಾಟಿಗೆ ಹದಗೊಳಿಸಲಾಗಿತ್ತು.ನಿನ್ನೆ ಸಂಜೆ ವೇಳೆಗೆ ದೊಡ್ಡ ಸದ್ದು ಕೇಳಿಬಂತು. ಗದ್ದೆಯ ಕಡೆ ಹೋಗಿ ನೋಡಿದಾಗ ಗದ್ದೆಯಲ್ಲಿ 60ರಿಂದ 70 ಅಡಿ ಅಗಲಕ್ಕೆ ಕಂದಕದಂತಹ ಪ್ರದೇಶ ನಿರ್ಮಾಣಆಗಿದೆ. ಗದ್ದೆ ಮಧ್ಯೆ ಭಾಗದಲ್ಲಿ ಭೂ ಕುಸಿತವಾಗಿರುವುದನ್ನು ಕಂಡು ರೈತ ಮನೋಜ್ ಆತಂಕವನ್ನ ಹೊರಹಾಕಿದ್ದಾರೆ.
ಮಳೆಗಾಲದ ತುರ್ತುಪರಿಸ್ಥಿತಿ ಸಮರ್ಪಕವಾಗಿ ನಿಭಾಯಿಸಿ: ಕೊಪ್ಪಳ ಜಿಲ್ಲಾಧಿಕಾರಿ ಸೂಚನೆ
ಕೃಷಿ ಚಟುವಟಿಕೆಗೆ ಮಳೆ ಅಡ್ಡಿ: ಸತತ ಮಳೆಯಿಂದಾಗಿ ತುಂಗಾ, ಭದ್ರಾ, ಹೇಮಾವತಿ ನದಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಭತ್ತದ ನಾಟಿ ಕಾರ್ಯಕ್ಕೆ ಅಡ್ಡಿಯಾಗಿದೆ. ಅಡಿಕೆ, ಕಾಳುಮೆಣಸು ಮತ್ತು ಕಾಫಿಗೆ ಕೊಳೆರೋಗದ ಭೀತಿ ಎದುರಾಗಿದ್ದು ತೋಟದ ಕೆಲಸಗಳು ಸಂಪೂಣವಾಗಿ ಸ್ಥಗಿತಗೊಂಡಿವೆ.ಇತ್ತ ಬಯಲು ಭಾಗದಲ್ಲೂ ನಿರಂತರ ಮಳೆಯಾಗುತ್ತಿರುವುದು ಕೃಷಿ ಕಾರ್ಯಗಳಿಗೆ ತೀವ್ರ ತೊಡಕುಂಟುಮಾಡಿದೆ. ಕೆಲವೆಡೆ ಗದ್ದೆಗಳಲ್ಲಿ ನೀರು ನಿಂತಿರುವುದರಿಂದ ಬೆಳೆದು ನಿಂತ ಬೆಳೆಗಳು ಹಾನಿಗೀಡಾಗುವ ಭೀತಿ ಎದುರಾಗಿದ್ದು, ಇಳುವರಿ ಕುಂಟಿತಗೊಳ್ಳುವ ಸಾಧ್ಯತೆ ಇರುತ್ತದೆ. ದ್ವಿದಳ ಧಾನ್ಯ, ಎಣ್ಣೆಕಾಳು ಹಾಗೂ ಈರುಳ್ಳಿ, ಆಲೂಗೆಡ್ಡೆಯಂತಹ ಬೆಳೆಗಳು ಹಾನಿಗೀಡಾಗುವ ಸಾಧ್ಯತೆಗಳು ಹೆಚ್ಚಿವೆ.