ಪ್ರವೀಣ್ ಹತ್ಯೆ ಆರೋಪಿಗಳ ಸುಳಿವು ಸಿಕ್ಕಿದೆ: ಸಚಿವ ಕೋಟ
ನಮ್ಮಲ್ಲಿ ಎಲ್ಲರೂ ಒಟ್ಟಾಗಿ ಹೋಗುತ್ತಿದ್ದೇವೆ. ಯಾವುದೇ ಗೊಂದಲವಿಲ್ಲ. ನಾಯಕತ್ವ ಬದಲಾವಣೆಯಿಲ್ಲ: ಕೋಟ
ಕಾರವಾರ(ಆ.06): ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಆರೋಪಿಗಳ ಬಗ್ಗೆ ಪ್ರಾಥಮಿಕ ಸುಳಿವು ಸಿಕ್ಕಿದೆ. ಶೀಘ್ರದಲ್ಲೇ ಪೊಲೀಸರು ತಪ್ಪಿತಸ್ಥರನ್ನು ಬಂಧಿಸುತ್ತಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ನಗರದಲ್ಲಿ ಶುಕ್ರವಾರ ಮಾಧ್ಯಮಗಳ ಜತೆ ಮಾತನಾಡಿದ ಅವರು, ಪ್ರಕರಣದ ತನಿಖೆ ದಿಕ್ಕು ತಪ್ಪಿಲ್ಲ. ಸರಿಯಾದ ದಿಕ್ಕಿನಲ್ಲೇ ನಡೆಯುತ್ತಿದೆ. ಶೀಘ್ರದಲ್ಲೇ ಆರೋಪಿಗಳ ಬಂಧನವಾಗುತ್ತದೆ. ಕಾಂಗ್ರೆಸ್ ನೇತೃತ್ವದ ಸರ್ಕಾರ ಇದ್ದಾಗ ಕೂಡ 23 ಕಾರ್ಯಕರ್ತರ ಹತ್ಯೆಯಾಗಿತ್ತು. ಆ ಸಂದರ್ಭದಲ್ಲಿ ಕೆಲ ಆರೋಪಿಗಳನ್ನು ಬಂಧಿಸದೇ ಇರುವುದರಿಂದ ಇಂತಹ ಅನಾಹುತಗಳು ಮುಂದುವರಿಯುತ್ತಿವೆ ಎಂದರು.
ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದಲ್ಲಿ ಆಂತರಿಕ ಭದ್ರತಾ (ಇಂಟಲಿಜೆನ್ಸಿ) ವ್ಯವಸ್ಥೆ ಸದೃಢವಾಗಿದೆ. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಮತ್ತಷ್ಟುಬಲಪಡಿಸಿದ್ದೇವೆ. ಕೆಲ ಘಟನೆಗಳು ಆಕಸ್ಮಿಕವಾಗಿ ಘಟಿಸುತ್ತವೆ ಎಂದರು.
ಕೇಂದ್ರದ ಗೃಹ ಸಚಿವ ಅಮಿತ್ ಶಾ ರಾಜ್ಯಕ್ಕೆ ಬಂದು ಹೋದ ಮೇಲೆ ಮುಖ್ಯಮಂತ್ರಿ ಬದಲಾಗುತ್ತಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಮ್ಮಲ್ಲಿ ಎಲ್ಲರೂ ಒಟ್ಟಾಗಿ ಹೋಗುತ್ತಿದ್ದೇವೆ. ಯಾವುದೇ ಗೊಂದಲವಿಲ್ಲ. ನಾಯಕತ್ವ ಬದಲಾವಣೆಯಿಲ್ಲ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಕಡೆಗಣಿಸುವ ಪ್ರಶ್ನೆಯೇ ಇಲ್ಲ. ಅವರ ನಾಯಕತ್ವದಲ್ಲಿ ನಮ್ಮ ಸರ್ಕಾರ ಬಂದಿದ್ದು, ಮುಂದೆಯೂ ಅವರ ನೇತೃತ್ವದಲ್ಲಿ ಬಿಜೆಪಿ ಚುನಾವಣೆಗೆ ಹೋಗಿ ಗೆಲವು ಸಾಧಿಸುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪ್ರವೀಣ್‌ನನ್ನ ಕೊಲೆ ಮಾಡಿದವರು ಕೇರಳದವರಲ್ಲ, ಸ್ಥಳೀಯರು: ಆರಗ ಜ್ಞಾನೇಂದ್ರ
ಸಿದ್ದರಾಮೋತ್ಸವ ನಂತರ ಬಿಜೆಪಿಯಿಂದ ಯಾವ ಉತ್ಸವದ ನಡೆಸಲು ಸಿದ್ಧತೆ ನಡೆದಿದೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಕೋಟ, ಸಿದ್ದರಾಮಯ್ಯ ಜನ್ಮದಿನ ಅವರ ವೈಯಕ್ತಿಕ ವಿಚಾರವಾಗಿದೆ. ಈ ಉತ್ಸವದಿಂದ ತಮ್ಮ ಪಕ್ಷಕ್ಕೆ ಯಾವುದೇ ಆತಂಕವಿಲ್ಲ, ನಷ್ಟವಾಗುವುದಿಲ್ಲ. ಬಿಜೆಪಿ ಬೂತ್ ಮಟ್ಟದಿಂದಲೂ ಗಟ್ಟಿಯಾಗಿದೆ ಎಂದು ಸ್ಪಷ್ಟಪಡಿಸಿದರು.