
ಮೈಸೂರು: ವಿವಾದಿತ ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ಕೃತ್ಯಗಳು ಒಂದೊಂದಾಗಿಯೇ ಬಯಲಾಗುತ್ತಿದ್ದು, ಪೊಲೀಸ್ ಇಲಾಖೆಗೆ ತೀವ್ರ ಮುಜುಗರ ಉಂಟುಮಾಡಿದೆ. ವಿಚಾರಣೆ ನೆಪದಲ್ಲಿ ಠಾಣೆಗೆ ಕರೆಸಿ ಕ್ರಿಕೆಟ್ ಬ್ಯಾಟ್, ಮರದ ತುಂಡುಗಳಿಂದ ಅಮಾಯಕರ ಮೇಲೆ ಮನಬಂದಂತೆ ಹಲ್ಲೆ ನಡೆಸಿದ ಆರೋಪಗಳು ಸಾಕ್ಷಿ ಸಮೇತ ಹೊರ ಬರುತ್ತಿದ್ದರೆ, ಇತ್ತ ಅವರ ಕರಾಳ ಇತಿಹಾಸವೂ ಬೆಚ್ಚಿ ಬೀಳಿಸುತ್ತಿದೆ. ಇಷ್ಟೆಲ್ಲಾ ಆರೋಪಗಳಿದ್ದರೂ ಇನ್ಸ್‌ಪೆಕ್ಟರ್ ನಡೆಯನ್ನು ಸಚಿವ ಪ್ರಿಯಾಂಕ್ ಖರ್ಗೆ ಸಮರ್ಥಿಸಿಕೊಂಡಿದ್ದಾರೆ.
ಕಾನೂನು ರಕ್ಷಣೆ ಮಾಡಬೇಕಾದ ಅಧಿಕಾರಿಯೇ ಖಾಕಿ ದರ್ಪ ಮೆರೆದಿದ್ದಾರಾ ಅನ್ನೋ ಅನುಮಾನಕ್ಕೆ ಪುಷ್ಟಿ ನೀಡುವಂತಹ ಸಾಕ್ಷ್ಯಗಳು ಈಗ ಮುನ್ನೆಲೆಗೆ ಬಂದಿವೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಕೌಟುಂಬಿಕ ಕಲಹದ ವಿಚಾರವಾಗಿ ನಾಲ್ವರು ದಲಿತ ಯುವಕರನ್ನು ಠಾಣೆಗೆ ಕರೆಸಿದ್ದ ಇನ್ಸ್‌ಪೆಕ್ಟರ್ ಧನಂಜಯ್, ಕ್ರಿಕೆಟ್ ಬ್ಯಾಟ್ ಹಾಗೂ ವಿಕೆಟ್‌ಗಳಿಂದ ಮನಬಂದಂತೆ ಥಳಿಸಿದ್ದರು ಎಂಬ ಗಂಭೀರ ಆರೋಪವಿದೆ. ಈ ಬಗ್ಗೆ ನೊಂದ ಯುವಕರು ಅಂದಿನ ಸಿಎಂ ಸಿದ್ದರಾಮಯ್ಯ ಅವರಿಗೆ ದೂರು ಸಲ್ಲಿಸಿ, ದಲಿತ ಸಂಘಟನೆಗಳು ಪ್ರತಿಭಟನೆ ನಡೆಸಿದ್ದರೂ ಇನ್ಸ್‌ಪೆಕ್ಟರ್ ದರ್ಪ ಮಾತ್ರ ಕಡಿಮೆಯಾಗಿರಲಿಲ್ಲ. ವಿಚಾರಣೆಗೆ ಕರೆಸಿದವರನ್ನು ಹಿಗ್ಗಾಮುಗ್ಗಾ ಥಳಿಸಲೆಂದೇ ಠಾಣೆಯಲ್ಲಿ ವಿಶೇಷವಾಗಿ ಮಾಡಿಸಲಾಗಿದ್ದ ಬೆಲ್ಟ್ ರೂಪದ ಬ್ಯಾಟ್ ಹಾಗೂ ಮರದ ತುಂಡುಗಳ ಫೋಟೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿವೆ.
ಇಷ್ಟೇ ಅಲ್ಲ, ಧನಂಜಯ್ ಇತಿಹಾಸ ಕೆದಕಿದಷ್ಟು ಕರಾಳ ಅಧ್ಯಾಯಗಳು ತೆರೆದುಕೊಳ್ಳುತ್ತಿವೆ. ಸುಮಾರು 12 ವರ್ಷಗಳ ಹಿಂದೆ, ಅಂದರೆ 2014ರಲ್ಲಿ ಬೆಂಗಳೂರಿನ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಸಬ್ ಇನ್ಸ್‌ಪೆಕ್ಟರ್ ಆಗಿದ್ದ ವೇಳೆ ಇವರ ಮೇಲೆ ಅ*ಚಾರ ಪ್ರಕರಣ ದಾಖಲಾಗಿತ್ತು. ಪಬ್‌ವೊಂದರಲ್ಲಿ ಪರಿಚಯವಾದ ದೆಹಲಿ ಮೂಲದ ಯುವತಿಗೆ ತನಗೆ ಮದುವೆಯಾಗಿರುವ ವಿಚಾರ ಮುಚ್ಚಿಟ್ಟು ಸಂಬಂಧ ಬೆಳೆಸಿದ್ದರು ಎನ್ನಲಾಗಿದೆ. ಸತ್ಯ ತಿಳಿದು ಯುವತಿ ದೆಹಲಿ ನ್ಯಾಯಾಲಯದ ಮೊರೆ ಹೋದಾಗ, ಕೋರ್ಟ್ ಆದೇಶದಂತೆ ಮಾಲವೀಯ ನಗರ ಠಾಣೆಯಲ್ಲಿ ಅ*ಚಾರ ಕೇಸ್ ದಾಖಲಾಗಿತ್ತು. ಅಚ್ಚರಿಯೆಂದರೆ, ಈ ಕೇಸ್ ದಾಖಲಾಗುತ್ತಿದ್ದಂತೆ ಧನಂಜಯ್ ತಮ್ಮ ಸರ್ವಿಸ್ ರಿವಾಲ್ವರ್ ಹಾಗೂ ವಾಕಿಟಾಕಿ ಸಮೇತ ಬರೋಬ್ಬರಿ 8 ದಿನಗಳ ಕಾಲ ನಾಪತ್ತೆಯಾಗಿದ್ದರು.
ಇಂತಹ ಗಂಭೀರ ಹಿನ್ನೆಲೆಯುಳ್ಳ ಇನ್ಸ್‌ಪೆಕ್ಟರ್ ಧನಂಜಯ್ ಅಮಾನತಿಗೆ ಬಿಜೆಪಿ ಪಕ್ಷ ಸರ್ಕಾರಕ್ಕೆ ಗಡುವು ನೀಡಿ ಆಕ್ರೋಶ ಹೊರಹಾಕಿದೆ. ಆದರೆ, ಬಿಜೆಪಿಯ ಈ ಎಚ್ಚರಿಕೆಗೆ ಸಚಿವ ಪ್ರಿಯಾಂಕ್ ಖರ್ಗೆ ನೇರವಾಗಿಯೇ ಸಡ್ಡು ಹೊಡೆದಿದ್ದಾರೆ. ಬಿಜೆಪಿಯವರು ಹೇಳಿದಂತೆ ಕೇಳಲು ಆಡಳಿತ ನಡೆಸಲು ನಾವು ಕೂತಿಲ್ಲ. ಅಶೋಕ್ ಗೃಹ ಸಚಿವರಾಗಿದ್ದಾಗ ನಿಯಮಗಳು ಇರಲಿಲ್ವಾ? ಮೈಸೂರಿನ ನಿರುದ್ಯೋಗಿ ರಾಜಕಾರಣಿಗೆ ಕೆಲಸವಿಲ್ಲದೆ ಠಾಣೆಗೆ ನುಗ್ಗುತ್ತೇನೆ ಎನ್ನುತ್ತಿದ್ದಾರೆ. ಎಸ್‌ಪಿ ವರದಿ ನೀಡಿದ ಬಳಿಕವಷ್ಟೇ ಕ್ರಮ ಕೈಗೊಳ್ಳಲಾಗುತ್ತದೆ ಹೊರತು, ಬಿಜೆಪಿ ಹೇಳಿದ ತಕ್ಷಣ ಅಮಾನತು ಮಾಡಲು ಸಾಧ್ಯವಿಲ್ಲ ಹೇಳಿದ್ದಾರೆ.
ಒಂದೆಡೆ ಪೊಲೀಸ್ ದೌರ್ಜನ್ಯ ಹಾಗೂ ಹಳೆಯ ಅಪರಾಧ ಕೃತ್ಯಗಳ ಸಾಕ್ಷ್ಯಗಳು ಹೊರಬರುತ್ತಿದ್ದರೆ, ಮತ್ತೊಂದೆಡೆ ಇನ್ಸ್‌ಪೆಕ್ಟರ್ ರಕ್ಷಣೆಗೆ ಸರ್ಕಾರ ನಿಂತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಸದ್ಯ ಎಸ್‌ಪಿ ನೀಡಲಿರುವ ತನಿಖಾ ವರದಿ ಇನ್ಸ್‌ಪೆಕ್ಟರ್ ಭವಿಷ್ಯವನ್ನು ನಿರ್ಧರಿಸಲಿದೆಯಾ ಕಾದು ನೋಡಬೇಕು. (ವರದಿ: ಮಧು.ಎಂ.ಚಿನಕುರಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಮೈಸೂರು)