ಸಂತಾನ ಹರಣ ಶಸ್ತ್ರಚಿಕಿತ್ಸೆ ಮಾಡುವಾಗ ಬಾಣಂತಿ ಸಾವು| ಕಾರವಾರದ ಜಿಲ್ಲಾ ಆಸ್ಪತ್ರೆಯಲ್ಲಿ ನಡೆದ ಘಟನೆ| ಆಸ್ಪತ್ರೆಯ ಎದುರು ಪ್ರತಿಭಟನೆ ನಡೆಸಿದ ಕುಟುಂಬಸ್ಥರು|
ಕಾರವಾರ(ಸೆ.04): ಇಲ್ಲಿನ ಜಿಲ್ಲಾ ಆಸ್ಪತ್ರೆಯಲ್ಲಿ ಗುರುವಾರ ಸಂತಾನ ಹರಣ ಶಸ್ತ್ರಚಿಕಿತ್ಸೆ ಮಾಡುವಾಗ ಬಾಣಂತಿ ಮೃತಪಟ್ಟಿದ್ದು, ವೈದ್ಯರ ನಿರ್ಲಕ್ಷ್ಯಕ್ಕೆ ಮೃತಪಟ್ಟಿದ್ದಾಳೆ ಎಂದು ಕುಟುಂಬಸ್ಥರು ಆರೋಪಿಸಿ ಆಸ್ಪತ್ರೆಯ ಎದುರು ಪ್ರತಿಭಟನೆ ನಡೆಸಿದ್ದಾರೆ.
ಇಲ್ಲಿನ ಸರ್ವೋದಯನಗರದ ಗೀತಾ ಬಾನಾವಳಿ (28) ಮೃತಪಟ್ಟಿದ್ದು, ಅವರಿಗೆ 3 ದಿನಗಳ ಹಿಂದೆ ಹೆರಿಗೆಯಾಗಿತ್ತು. ಸಂತಾನಹರಣ ಚಿಕಿತ್ಸೆ ಮಾಡಿಸಲು ನಿರ್ಧರಿಸಿದ್ದ ದಂಪತಿ, ಈ ಕುರಿತು ವೈದ್ಯರ ಬಳಿ ಹೇಳಿದ್ದರು. ಗುರುವಾರ ಶಸ್ತ್ರಚಿಕಿತ್ಸೆ ಮಾಡಲು ವೈದ್ಯರು ತಯಾರಿ ನಡೆಸಿದ್ದರು. ಗೀತಾ ಅವರಿಗೆ ಶಸ್ತ್ರಚಿಕಿತ್ಸೆಗೂ ಮೊದಲು ಅರವಳಿಕೆ (ಅನಸ್ತೇಸಿಯಾ) ಚುಚ್ಚುಮದ್ದು ನೀಡಲಾಗಿದೆ. ಈ ವೇಳೆ ಅವರಿಗೆ ಹೃದಯಾಘಾತವಾಗಿದೆ. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪ್ರಾರಂಭಿಸಿದರೂ ಪ್ರಯೋಜನವಾಗಿಲ್ಲ.
ಮೊದಲನೆಯದ್ದು ಗಂಡು ಮಗುವಾಗಿದ್ದು, 2ನೇದ್ದು ಹೆಣ್ಣು ಮಗುವಾಗಿತ್ತು. ಬೆಳಗ್ಗೆ 11 ಗಂಟೆ ವೇಳೆಗೆ ಶಸ್ತ್ರಚಿಕಿತ್ಸೆ ಮಾಡಲು ವೈದ್ಯರು ಕರೆದುಕೊಂಡು ಹೋಗಿದ್ದು, ಅರವಳಿಕೆ ನೀಡಿದಾಗ ಹೃದಯಾಘಾತವಾದ ಕಾರಣ ತೀವ್ರ ನಿಗಾ ಘಟಕಕ್ಕೆ ದಾಖಲಿಸಲಾಗಿತ್ತು.
ಶಿರಸಿಗೂ ಉಗ್ರ ಸಂಘಟನೆಗೂ ಲಿಂಕ್, ಜೆಎಂಬಿ ಉಗ್ರರ ಚಟುವಟಿಕೆಗಳಿಗೆ ಮದರಸಾ ಟೀಚರ್ ಸಾಥ್?
ವೈದ್ಯರು ನಿರ್ಲಕ್ಷ್ಯದಿಂದ ಅನಸ್ತೇಶಿಯಾ ಓವರ್ ಡೋಸ್ ನೀಡಿದ್ದು, ಗೀತಾ ಸಾವಿಗೆ ಕಾರಣವಾಗಿದೆ ಎಂದು ಕುಟುಂಬಸ್ಥರು, ಸಂಬಂಧಿಕರು ಆರೋಪಿಸಿ ಆಸ್ಪತ್ರೆಯ ವೈದ್ಯಾಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದರು. ಗೀತಾ ಮೃತಪಟ್ಟಿದ್ದಾಳೆ ಎಂದು ಸಂಜೆ ವೈದ್ಯರು ತಿಳಿಸಿದಾಗ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಪತಿ ಆಸ್ಪತ್ರೆಯ ಒಂದು ಮೂಲೆಯಲ್ಲಿ ಹೋಗಿ ರೋಧಿಸುತ್ತಿದ್ದರೆ, ತಾಯಿ, ಅಜ್ಜಿ ಆಸ್ಪತ್ರೆಯಲ್ಲೇ ಬಿದ್ದು ಹೊರಳಾಡಿದರು. ಸ್ಥಳಕ್ಕಾಗಮಿಸಿದ ಪೊಲೀಸರು ಎಲ್ಲರನ್ನೂ ಸಮಾಧಾನಪಡಿಸಿ ದೂರು ದಾಖಲಿಸಿಕೊಳ್ಳುವುದಾಗಿ ತಿಳಿಸಿದರು.
ಮೃತ ಗೀತಾಳಿಗೆ ತಜ್ಞ ವೈದ್ಯರ ಬಳಿಯೇ ಅನಸ್ತೇಸಿಯಾ ಕೊಡಿಸಲಾಗಿದೆ. ಆದರೆ ಕೆಲವೊಬ್ಬರಿಗೆ ಇದು ಹೃದಯಾಘಾತ ಆಗುತ್ತದೆ. ಅದೇ ರೀತಿ ಆಗಿದೆ. ವೈದ್ಯರು ನಿರ್ಲಕ್ಷ್ಯ ಮಾಡಿಲ್ಲ. ಆಕೆಯ ಜೀವ ಉಳಿಸಲು 3 ತಾಸು ಪ್ರಯತ್ನಿಸಲಾಗಿದೆ. ಆದರೆ ಸಾಧ್ಯವಾಗಿಲ್ಲ ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಶಿವಾನಂದ ಕುಡ್ತರಕರ್ ಅವರು ತಿಳಿಸಿದ್ದಾರೆ.
ಮೊದಲು ವೈದ್ಯರು ಏನು ಹೇಳಲಿಲ್ಲ. ಈಗ ನೆಪ ಹೇಳುತ್ತಿದ್ದಾರೆ. ಗೀತಾ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಸದೃಢವಾಗಿ ಇಲ್ಲದಿದ್ದಲ್ಲಿ ಆ ಕುರಿತು ಹೇಳಬಹುದಿತ್ತು. ಅವಳ ಪರೀಕ್ಷೆ ಮಾಡಿ ಆರೋಗ್ಯವಾಗಿ ಇರುವುದು ಖಚಿತಪಡಿಸಿಕೊಂಡೇ ವೈದ್ಯರು ಶಸ್ತ್ರಚಿಕಿತ್ಸೆ ಮಾಡಬಹುದು ಎಂದಿದ್ದಾರೆ. ಓವರ್ ಡೋಸ್ ಅನಸ್ತೇಶಿಯಾ ನೀಡಿದ್ದಕ್ಕೆ ಸಾವಾಗಿದೆ ಎಂದು ಮೃತ ಗೀತಾಳ ಅತ್ತಿಗೆ ಕಲ್ಪನಾ ಅವರು ತಿಳಿಸಿದ್ದಾರೆ.