ಬೆಳೆ ವಿಮೆ ಪರಿಹಾರದಲ್ಲಿ ಲೋಪ ಆರೋಪ

By Kannadaprabha News  |  First Published Jul 19, 2023, 9:12 PM IST

ಶೇ. 95ರಷ್ಟು ರೈತರು ಬೆಳೆ ವಿಮೆ ಮಾಡಿಸಿದ್ದು, ದೇಶದಲ್ಲೇ ಬೀದರ್‌ ಅಗ್ರ, ಆರೋಪ ಮುಕ್ತರಾಗಲು ಎಲ್ಲರೂ ಸರಿಯಾದ ರೀತಿಯಲ್ಲಿ ಕೆಲಸ ಮಾಡಿ, ಬೆಳೆ ಕಟಾವು ಪ್ರಯೋಗದಲ್ಲಿ ತಪ್ಪೆಸಗಿದರೆ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ, ರೈತರ ಸಮಸ್ಯೆಗಳನ್ನು ಸರಿಪಡಿಸುವ ಜವಾಬ್ದಾರಿ ನಮ್ಮ ಮೇಲಿದೆ: ಡಿಸಿ ಗೋವಿಂದರೆಡ್ಡಿ 


ಬೀದರ್‌(ಜು.19): ಜಿಲ್ಲೆಯ ಶೇ. 95ರಷ್ಟು ರೈತರು ಬೆಳೆ ವಿಮೆ ಮಾಡಿಸಿದ್ದು ನಮ್ಮ ಜಿಲ್ಲೆಯು ದೇಶದಲ್ಲಿಯೇ ಮೊದಲ ಸ್ಥಾನದಲ್ಲಿದೆ ಆದರೆ ಪರಿಹಾರ ಸರಿಯಾದ ರೀತಿಯಲ್ಲಿ ಬರುತ್ತಿಲ್ಲ ಎಂಬ ದೂರುಗಳಿವೆ ಇದನ್ನು ಸರಿಪಡಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಹೇಳಿದರು.

ಅವರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬೆಳೆ ಕಟಾವು ಪ್ರಯೋಗ, ಬೆಳೆ ಸಮೀಕ್ಷೆ ಹಾಗೂ ಬೆಳೆ ವಿಮೆಯ ಕುರಿತು ಕಂದಾಯ ಇಲಾಖೆ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್‌ ಮೂಲಕ ನಡೆದ ಮೊದಲ ತ್ರೈಮಾಸಿಕ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

Latest Videos

undefined

ಕೆಡಿಪಿ ಸಭೆಗೆ ಅಧಿಕಾರಿಗಳ ಗೈರು: ಹೊರನಡೆದ ಶಾಸಕ ಪ್ರಭು ಚವ್ಹಾಣ್‌

ಬೆಳೆ ಕಟಾವು ಪ್ರಯೋಗ ಮಾಡುವ ಸಿಬ್ಬಂದಿ ಸರಿಯಾದ ರೀತಿಯಲ್ಲಿ ಕೆಲಸ ಮಾಡುತ್ತಿಲ್ಲ. ವಿಮಾ ಕಂಪನಿಯವರಿಗೆ ಲಾಭ ಮಾಡುವ ರೀತಿಯಲ್ಲಿ ಕೆಲಸ ಮಾಡುತ್ತಿದ್ದು, ಸರಿಯಾದ ದತ್ತಾಂಶವನ್ನು ಅಪಲೋಡ್‌ ಮಾಡುತ್ತಿಲ್ಲ. ಅಧಿಕಾರಿ, ಸಿಬ್ಬಂದಿ ವಿಮಾ ಕಂಪನಿಯವರಿಗೆ ಅನೂಕೂಲ ಮಾಡುವ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂಬ ಹಲವಾರು ದೂರುಗಳು ರೈತರಿಂದ ಬರುತ್ತಿವೆ. ಈ ಆರೋಪದಿಂದ ಮುಕ್ತರಾಗಬೇಕಾದರೆ ಎಲ್ಲರೂ ಕೆಲಸ ಸರಿಯಾದ ರೀತಿಯಲ್ಲಿ ಮಾಡಬೇಕು ಎಂದರು.

ಬೆಳೆ ಕಟಾವು ಪ್ರಯೋಗ ಮಾಡುವಾಗ ತಪ್ಪೆಸಗಿದರೆ ಅಂತಹ ಸಿಬ್ಬಂದಿ ವಿರುದ್ಧ ಮುಲಾಜಿಲ್ಲದೇ ಕ್ರಮ ತೆಗೆದುಕೊಳ್ಳಲಾಗುವುದು. ಬೆಳೆ ಸಮೀಕ್ಷೆ ಮಾಡುವಾಗ ರೈತರ ಗದ್ದೆಗಳಲ್ಲಿ ವಿವಿಧ ಬೆಳೆಗಳಿದ್ದಾಗ ಕೇವಲ ಏಕ ಬೆಳೆಯನ್ನು ಪರಿಗಣಿಸದೆ ಎಲ್ಲಾ ಬೆಳೆಗಳನ್ನು ಪರಿಗಣಿಸಬೇಕು ಇದಕ್ಕಾಗಿ ಸಮೀಕ್ಷೆ ನಡೆಸುವವರಿಗೆ ಸಂಬಂಧಿಸಿದ ಇಲಾಖೆಯಿಂದ ಸರಿಯಾದ ತರಬೇತಿ ನೀಡಬೇಕು ಎಂದರು.
ಹೆಚ್ಚಿನ ಪರಿಣಿತಿಗಾಗಿ ಸಾಂಖ್ಯಿಕ ಇಲಾಖೆಯಿಂದ ತಮಗೆ ತರಬೇತಿ ನೀಡಲಾಗುವುದು. ವಿಮಾ ಕಂಪನಿಯವರು ಸಹ ತಾಲೂಕಿಗೆ 10 ಜನರಂತೆ ತಮ್ಮ ಸಿಬ್ಬಂದಿ ಸಂಖ್ಯೆಯನ್ನು ಹೆಚ್ಚಿಸಬೇಕು ಎಂದು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ತಿಳಿಸಿದರು.

ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯದ ಅಪರ ನಿರ್ದೇಶಕ ಬಸವರಾಜ ಎಸ್‌. ಮಾತನಾಡಿ, ಜಿಲ್ಲೆಯಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ ಬಿಮಾ ಯೋಜನೆಯಡಿ ಜಿಲ್ಲೆಯಲ್ಲಿ 3118 ಬೆಳೆ ಕಟಾವು ಪ್ರಯೋಗ ಹಂಚಿಕೆಯಾಗಿದ್ದು, ಈ ಬೆಳೆ ಕಟಾವು ಪ್ರಯೋಗವನ್ನು ಅಚ್ಚುಕಟ್ಟಾಗಿ ಮಾಡಬೇಕು ಎಂದು ಹೇಳಿದರು.

2016ರಿಂದ ಮೊಬೈಲ್‌ ಆ್ಯಪ್‌ ತಂತ್ರಾಂಶದ ಮೂಲಕ ಬೆಳೆ ಕಟಾವು ಪ್ರಯೋಗ ನಡೆಸಲಾಗುತ್ತಿದೆ. ಈ ಪ್ರಯೋಗ ನೆಡಸುವಾಗ ಸಬಂಧಿತ ಇಲಾಖೆಯ ಸಿಬ್ಬಂದಿ, ಹೊಲದ ಮಾಲೀಕರು, ಬೆಳೆ ವಿಮೆ ಕಂಪನಿಯ ಸಿಬ್ಬಂದಿ ಹಾಗೂ ಸೂಪರವೈಸರ್‌ ಹಾಜರಿ ಇರತಕ್ಕದ್ದು. ತಂತ್ರಾಂಶದಲ್ಲಿ ಅಪ್ಲೋಡ್‌ ಮಾಡಿದ ಫೋಟೊ ಹಾಗೂ ವಿಡಿಯೋದಲ್ಲಿ ಈ ನಾಲ್ವರೂ ಇರಬೇಕು ಎಂದರು.

ರೇಬಿಸ್‌ ಪತ್ತೆಗೆ ಬೀದರ್‌, ಹಾಸನದಲ್ಲಿ ಪ್ರಯೋಗಾಲಯ ಶುರು

ಜಿಲ್ಲೆಯಲ್ಲಿ ಬೆಳೆ ಸಮೀಕ್ಷೆ ಸರಿಯಾದ ರೀತಿಯಲ್ಲಿ ಮಾಡಬೇಕು. ಕಳೆದ ಮೂರ್ನಾಲ್ಕು ವರ್ಷದ ಬೆಳೆಗಳ ಪ್ರಮಾಣದಲ್ಲಿ ಏರು ಪೇರುಗಳಾದರೆ ಸಂಬಂಧಿತ ಇಲಾಖೆಯೊಂದಿಗೆ ಸಮಾಲೋಚಿಸಿ ದತ್ತಾಂಶವನ್ನು ಸರಿಪಡಿಸಬೇಕು, ಇಲ್ಲದಿದ್ದರೆ ಸರ್ಕಾರದ ಯೋಜನೆಗಳು ಪೋಲಾಗುತ್ತವೆ ಎಂಬ ಭಾವನೆ ಬರುತ್ತದೆ ಎಂದು ಬಸವರಾಜ ಎಸ್‌. ತಿಳಿಸಿದರು.

ಸಭೆಯಲ್ಲಿ ಬೀದರ್‌ ಸಹಾಯಕ ಆಯುಕ್ತ ಲವೀಶ ಓರ್ಡಿಯಾ, ಬಸವಕಲ್ಯಾಣ ಸಹಾಯಕ ಆಯುಕ್ತ ರಮೇಶ ಕೋಲಾರ, ಬೀದರ್‌ ತಾಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಾಣಿಕರಾವ್‌ ಪಾಟೀಲ್‌, ಜಿಲ್ಲಾ ಸಾಂಖ್ಯಿಕ ಅಧಿಕಾರಿ ಸುವರ್ಣಾ ಯದಲಾಪೂರೆ, ಜಿಲ್ಲೆಯ ತಾಲೂಕಿನ ತಹಸೀಲ್ದಾರರು ಸೇರಿದಂತೆ ಕಂದಾಯ ಇಲಾಖೆ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್‌ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

click me!