ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಮುದೇನೂರ ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ| ಈ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹಣ ನೀಡಿ ಚಿಕಿತ್ಸೆ ಪಡೆಯಬೇಕು ಎಂಬ ದೂರು| ಕೂಡಲೇ ಆಸ್ಪತ್ರೆಯ ಸಿಬ್ಬಂದಿ ವಸೂಲಿ ದಂಧೆಗೆ ಕಡಿವಾಣ ಹಾಕದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದ ಗ್ರಾಮಸ್ಥರು|
ದೋಟಿಹಾಳ(ನ.13): ಕುಷ್ಟಗಿ ತಾಲೂಕಿನ ಮುದೇನೂರ ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆಗೆ ಬರುವ ರೋಗಿಗಳಿಂದ ಚಿಕಿತ್ಸೆಗಾಗಿ ಹಣ ವಸೂಲಿ ಮಾಡುತ್ತಿದ್ದು, ಕೂಡಲೇ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ದೋಟಿಹಾಳ ಸಮೀಪದ ಮುದೇನೂರ ಅಕ್ಕಪಕ್ಕದ ಹತ್ತಾರು ಹಳ್ಳಿಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡುವ ಮೂಲಕ ಸಾಕಷ್ಟು ಹೆಸರು ಮಾಡಿದ್ದ ಈ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹಣ ನೀಡಿ ಚಿಕಿತ್ಸೆ ಪಡೆಯಬೇಕು ಎನ್ನುವ ದೂರು ಸಾಕಷ್ಟು ಬಾರಿ ಕೇಳಿ ಬಂದಿದೆ. ಅಲ್ಲದೆ ಹೊರಗಡೆ ಹಣ ನೀಡಿ ಔಷಧಿ ತರಬೇಕಾದ ಪರಿಸ್ಥಿತಿ ಇದೆ ಎಂದು ರೋಗಿಯೊಬ್ಬರು ಅಳಲು ತೋಡಿಕೊಂಡಿದ್ದಾರೆ.
ಆಸ್ಪತ್ರೆಯ ಸಿಬ್ಬಂದಿ ಈ ವರ್ತನೆಗೆ ಬಡರೋಗಿಗಳು ರೋಸಿ ಹೋಗಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ ಹಣ ನೀಡಿದಂತೆ ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಹೆಚ್ಚಿಗೆ ಹಣ ನೀಡಬೇಕಿದೆ. ಹೆರಿಗೆಗೆ .4 ಸಾವಿರ ನೀಡಬೇಕು. ಈ ಆರೋಗ್ಯ ಕೇಂದ್ರಕ್ಕೆ ಹೆರಿಗೆಗೆಂದು ಆಗಮಿಸಿದ ಗರ್ಭಿಣಿಯರು ಕಡ್ಡಾಯವಾಗಿ .3ರಿಂದ .4 ಸಾವಿರ ನೀಡಬೇಕು. ಇಲ್ಲದಿದ್ದರೆ ಸಿಬ್ಬಂದಿ ಮನಬಂದಂತೆ ನಿಂದಿಸುತ್ತಾರೆ ಎಂದು ರೋಗಿಗಳ ಸಂಬಂಧಿಕರು ಆರೋಪಿಸುತ್ತಾರೆ.
ಪ್ರಾಥಮಿಕ ಕೇಂದ್ರದ ಸಿಬ್ಬಂದಿ ಹಣ ವಸೂಲಿ ತಡೆಗಟ್ಟುವಂತೆ ಆಗ್ರಹಿಸಿ ಈಗಾಗಲೇ ತಾಲೂಕು ವೈದ್ಯಾಧಿಕಾರಿಗೆ ಸುಭಾಷಚಂದ್ರ ಹೂಲಗೇರಿ, ದೊಡ್ಡಬಸವ ಗುರಿಕಾರ ದೂರು ನೀಡಿದ್ದಾರೆ. ಕೂಡಲೇ ಆಸ್ಪತ್ರೆಯ ಸಿಬ್ಬಂದಿ ವಸೂಲಿ ದಂಧೆಗೆ ಕಡಿವಾಣ ಹಾಕದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಗ್ರಾಮಸ್ಥರು ಎಚ್ಚರಿಸಿದ್ದಾರೆ.
ಕೊಪ್ಪಳ ಬಿಜೆಪಿ ಜಿಲ್ಲಾಧ್ಯಕ್ಷ ದೊಡ್ಡನಗೌಡ ಎಲ್ಲಿದ್ದಾರೆ? ಕಟೀಲ್ ಕೆಂಡಾಮಂಡಲ..!
ನಮ್ಮ ಆರೋಗ್ಯ ಕೇಂದ್ರದ ಸಿಬ್ಬಂದಿ ಹೆರಿಗೆಗೆ ಬಂದವರ ಹತ್ತಿರ ದುಡ್ಡು ಕೇಳುವುದು ಗಮನಕ್ಕೆ ಬಂದಿದ್ದು, ಇದರ ಕುರಿತು ಸಾಕಷ್ಟು ಬಾರಿ ಎಚ್ಚರಿಕೆ ನೀಡಲಾಗಿದೆ. ಒಂದು ವೇಳೆ ಈ ತರಹ ದುಡ್ಡ ಕೇಳುವುದು ಮರುಕಳಿಸಿದರೆ ಮೇಲಧಿಕಾರಿಗಳಿಗೆ ಕ್ರಮಕ್ಕೆ ವರದಿ ಸಲ್ಲಿಸಲಾಗುತ್ತದೆ ಎಂದು ಮುದೇನೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ನೀಲಪ್ಪ ಕಟ್ಟಿಮನಿ ತಿಳಿಸಿದ್ದಾರೆ.
ಮುದೇನೂರಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಇನ್ನೊಮ್ಮೆ ಇಂತಹ ಪ್ರಕರಣಗಳು ಮರುಕಳಿಸಬಾರದು ಎಂದು ಸಿಬ್ಬಂದಿಗೆ ನೊಟಿಸ್ ನೀಡಲಾಗಿದೆ. ಮರುಕಳಿಸಿದರೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಕುಷ್ಟಗಿ ತಾಲೂಕು ಆರೋಗ್ಯಾಧಿಕಾರಿ ಡಾ. ಆನಂದ ಗೋಟೂರ ತಿಳಿಸಿದ್ದಾರೆ.