ದ್ವೀಪವಾಗಿದೆ ಕಾಸರಗೋಡು, ಕೊರೋನಾ ಭೀತಿಗೆ ಮುಚ್ಚಿದೆ 'ಸ್ವರ್ಗ'ದ ಬಾಗಿಲು ..!

By Kannadaprabha NewsFirst Published Mar 22, 2020, 7:13 AM IST
Highlights

ಕೇರಳದ ಕಾಸರಗೋಡಿನಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೂ ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಕೇರಳ ಸಂಪರ್ಕಿಸುವ ಎಲ್ಲ ರಸ್ತೆಗಳಲ್ಲಿ ಶನಿವಾರ ಮಧ್ಯಾಹ್ನದಿಂದಲೇ ವಾಹನ ಸಂಚಾರಕ್ಕೆ ಸಂಪೂರ್ಣ ನಿರ್ಬಂಧ ಹೇರಲಾಗಿದೆ. ಕಾಸರಗೋಡು ಸಂಪರ್ಕಿಸುವ ಪ್ರಮುಖ ಚೆಕ್‌ಪೋಸ್ಟ್‌ಗಳಾಸ ಸ್ವರ್ಗ, ಸಾರಡ್ಕದಲ್ಲಿಯೂ ಸಂಪೂರ್ಣ ಗೇಟ್ ಹಾಕಿಬೀಗ ಜಡಿಯಲಾಗಿದೆ.

ಮಂಗಳೂರು(ಮಾ.22): ಕೇರಳದ ಕಾಸರಗೋಡಿನಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೂ ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಕೇರಳ ಸಂಪರ್ಕಿಸುವ ಎಲ್ಲ ರಸ್ತೆಗಳಲ್ಲಿ ಶನಿವಾರ ಮಧ್ಯಾಹ್ನದಿಂದಲೇ ವಾಹನ ಸಂಚಾರಕ್ಕೆ ಸಂಪೂರ್ಣ ನಿರ್ಬಂಧ ಹೇರಲಾಗಿದೆ. ಪೊಲೀಸ್‌ ಬಿಗಿ ಭದ್ರತೆಯಲ್ಲಿ ಎರಡೂ ರಾಜ್ಯಗಳು ಸಂಪೂರ್ಣವಾಗಿ ಸಂಚಾರ ಸ್ಥಗಿತಗೊಳಿಸುವಲ್ಲಿ ಯಶಸ್ವಿಯಾಗಿವೆ.

ಕೇರಳವನ್ನು ದಕ್ಷಿಣ ಕನ್ನಡಕ್ಕೆ ಸಂಪರ್ಕಿಸುವ ಒಟ್ಟು 17 ರಸ್ತೆಗಳಿದ್ದು, ಎಲ್ಲ ರಸ್ತೆಗಳನ್ನೂ ಸಂಪೂರ್ಣವಾಗಿ ಮುಚ್ಚಲಾಗಿದೆ. ಅತ್ಯಂತ ತುರ್ತು ಪರಿಸ್ಥಿತಿಗಳಲ್ಲಿ ಕೇವಲ ತಲಪಾಡಿ ಗೇಟ್‌ ಮೂಲಕ ಮಾತ್ರ ಸಂಚರಿಸಲು ಅವಕಾಶ ನೀಡಲಾಗಿದೆ. ಉಳಿದ ಯಾವುದೇ ಒಳರಸ್ತೆಗಳಲ್ಲಿ ಯಾವುದೇ ವಾಹನವನ್ನು ಬಿಡುತ್ತಿಲ್ಲ. ತಲಪಾಡಿಯಲ್ಲೂ ಸಂಪೂರ್ಣ ವಿಚಾರಣೆ ನಡೆಸಿ ಪೂರ್ವಾಪರ ತಿಳಿದುಕೊಂಡೇ ಬಿಡಲಾಗುತ್ತಿದೆ. ಹಾಗೆ ಬಿಡುವವರನ್ನೂ ಥರ್ಮಲ್‌ ಪರೀಕ್ಷೆಗೆ ಒಳಪಡಿಸಿಯೇ ಬಿಡಲಾಗುತ್ತಿದೆ.

ಕೊರೋನಾ ಭೀತಿಗೆ ಕೇರಳ-ದಕ್ಷಿಣ ಕನ್ನಡ ವಾಹನ ಸಂಚಾರ ಬಂದ್‌

ಪೊಲೀಸ್‌ ಪಹರೆ: ಒಳರಸ್ತೆಗಳಲ್ಲಿ ಅನೇಕರು ಪರಿ ಪರಿಯ ಮನವಿ ಮಾಡಿಕೊಂಡರೂ ಪೊಲೀಸರು ಮಾತ್ರ ಜಿಲ್ಲಾಡಳಿತದ ಆದೇಶವನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುತ್ತಿದ್ದಾರೆ. ತಲಪಾಡಿ ಹೊರತುಪಡಿಸಿ ಯಾವುದೇ ಒಳರಸ್ತೆಗಳಲ್ಲಿ ಒಂದು ವಾಹನಕ್ಕೂ ಗಡಿ ದಾಟಲು ಅವಕಾಶ ನಿರಾಕರಿಸಲಾಗಿರುವ ಕುರಿತು ಮಾಹಿತಿ ದೊರೆತಿದೆ. ಇತ್ತ ಕರ್ನಾಟಕ ಪೊಲೀಸ್‌ ಪಹರೆ ಇದ್ದರೆ, ಅತ್ತ ಕೇರಳ ಪೊಲೀಸರಿಂದಲೂ ಸಂಚಾರಕ್ಕೆ ತಡೆಯೊಡ್ಡಲಾಗುತ್ತಿದೆ.

ಕೇರಳ ಗಡಿ ಪ್ರದೇಶ ಬೆರಿಪದವಿನಲ್ಲಿ ಪೊಲೀಸ್‌ ವಾಹನವನ್ನು ರಸ್ತೆಯಲ್ಲಿ ಇಟ್ಟು ಸಂಚಾರಕ್ಕೆ ಬ್ರೇಕ್‌ ಹಾಕಿದ್ದರೆ, ಚೆಕ್‌ಪೋಸ್ಟ್‌ ಇರುವ ಕಡೆಗಳಲ್ಲಿ ಕಬ್ಬಿಣದ ಗೇಟ್‌ ಅಡ್ಡಲಾಗಿಟ್ಟು ಸಂಚಾರ ನಿರ್ಬಂಧಿಸಲಾಗಿದೆ. ಮಾ.21ರ ಮಧ್ಯಾಹ್ನ 2 ಗಂಟೆಯಿಂದ ಜಾರಿಯಾದ ಸಂಚಾರ ನಿಷೇಧ ಆದೇಶ ಮಾ.31ರವರೆಗೂ ಜಾರಿಯಲ್ಲಿರುತ್ತದೆ.

3ನೇ ಹಂತದ ಡೇಂಜರ್‌ ಝೋನತ್ತ ಭಾರತ, ಸೋಂಕು ದಿಢೀರ್‌ ಹೆಚ್ಚಳ!

ಕೆಲಸಕ್ಕೆ ಹೋಗುವವರಿಗೂ ಅವಕಾಶವಿಲ್ಲ: ಕಾಸರಗೋಡಿನಿಂದ ಮಂಗಳೂರಿಗೆ ನಿತ್ಯ ಕೆಲಸಕ್ಕೆ ಬರುವವರನ್ನೂ ಶನಿವಾರ ಮಧ್ಯಾಹ್ನದಿಂದ ಪೊಲೀಸರು ಬಿಟ್ಟಿಲ್ಲ. ಅದೇ ರೀತಿ ಮಂಗಳೂರಿನಿಂದ ಕಾಸರಗೋಡಿಗೆ ಹೋಗುವವರಿಗೂ ಅವಕಾಶವಿಲ್ಲದಂತಾಗಿದೆ. ದಿನನಿತ್ಯ ಕಾಸರಗೋಡು- ಮಂಗಳೂರು ನಡುವೆ 15 ಸಾವಿರಕ್ಕೂ ಹೆಚ್ಚು ಮಂದಿ ಪ್ರಯಾಣಿಸುತ್ತಾರೆ. ಈಗ ಸಂಚಾರ ನಿರ್ಬಂಧವಾಗಿರುವುದರಿಂದ ಎರಡೂ ಜಿಲ್ಲೆಗಳ ವಹಿವಾಟಿನ ಮೇಲೆ ತೀವ್ರ ಹೊಡೆತ ಬಿದ್ದಿದ್ದರೂ, ಕೊರೋನಾ ಯುದ್ಧ ಗೆಲ್ಲಲು ಇದು ಅನಿವಾರ್ಯ ಎನ್ನುವ ಮನಸ್ಥಿತಿ ಜನರಲ್ಲೂ ಇದೆ.

ಪ್ಯಾಸೆಂಜರ್‌ ನಾವೆಗಳಿಗೂ ನಿರ್ಬಂಧ

ದಕ್ಷಿಣ ಕನ್ನಡ- ಕಾಸರಗೋಡು ನಡುವೆ ಎಲ್ಲ ರೀತಿಯ ವಾಹನ ಸಂಚಾರ ನಿರ್ಬಂಧಿಸಿ ಶುಕ್ರವಾರ ರಾತ್ರಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರು. ಶನಿವಾರ ಈ ಆದೇಶದಲ್ಲಿ ಅಲ್ಪ ಬದಲಾವಣೆ ಮಾಡಿ ಪರಿಷ್ಕೃತ ಆದೇಶ ಹೊರಡಿಸಿದ್ದಾರೆ. ಅದರಂತೆ ತುರ್ತು ಸೇವೆಗಳ ವಾಹನಗಳು ಮತ್ತು ಅವಶ್ಯಕ ವಸ್ತುಗಳ ಸಾಗಾಟದ ವಾಹನಗಳನ್ನು ಮಾತ್ರ ತಲಪಾಡಿ ಚೆಕ್‌ಪೋಸ್ಟ್‌ ಮೂಲಕ ಸಂಚರಿಸಲು ಅವಕಾಶ ನೀಡಲಾಗಿದೆ. ಅದೇ ರೀತಿ, ಮಂಗಳೂರು ಹಳೆ ಬಂದರಿಗೆ ಆಗಮಿಸುವ ಎಲ್ಲ ರೀತಿಯ ಪ್ಯಾಸೆಂಜರ್‌ ನಾವೆಗಳ ಆಗಮನ ಮತ್ತು ನಿರ್ಗಮನವನ್ನು ಮಾ.31ರ ಮಧ್ಯರಾತ್ರಿ 12 ಗಂಟೆಯವರೆಗೆ ನಿರ್ಬಂಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

click me!