ಮಂಗಳೂರು- ಯುಎಇಯ ರಾಸ್ ಅಲ್ ಖೈಮಾ ಹೊಸ ಏರ್ ಇಂಡಿಯಾ ನೇರ ವಿಮಾನ ಸೇವೆ ಆರಂಭ, ಸಮಯ ಹೀಗಿದೆ....

Gowthami K   | Kannada Prabha
Published : Oct 27, 2026, 09:10 AM IST
Mangaluru UAE flights

ಸಾರಾಂಶ

ಮಂಗಳೂರು ವಿಮಾನ ನಿಲ್ದಾಣದಿಂದ ಯುಎಇ ದೇಶದ ರಸ್‌ ಅಲ್‌ ಖೈಮಾಗೆ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ನೇರ ವಿಮಾನ ಸೇವೆ ಆರಂಭಿಸಿದೆ. ರಸ್‌ ಅಲ್‌ ಖೈಮಾ ಪ್ರದೇಶವು ದುಬೈ ಮತ್ತು ಶಾರ್ಜಾಗೆ ಸಮೀಪದಲ್ಲಿದೆ ಈ ಸೇವೆ ಉಪಯೋಗವಾಗಲಿದೆ. ಐಎಕ್ಸ್‌ 871 ವಿಮಾನವು ಪ್ರತಿ ಸೋಮವಾರ ಮತ್ತು ಶನಿವಾರ ವಿಮಾನ ಸೇವೆ ಒದಗಿಸಲಿದೆ. ಮಂಗಳೂರಿನಿಂದ ಬೆಳಿಗ್ಗೆ 9.30ಕ್ಕೆ ವಿಮಾನ ಹೊರಡಲಿದ್ದು, ರಾಸ್ ಅಲ್ ಖೈಮಾದಿಂದ ಸಂಜೆ 6.25ಕ್ಕೆ ಮಂಗಳೂರು ತಲುಪಲಿದೆ.

ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಸೋಮವಾರದಿಂದ ಮಂಗಳೂರು ಮತ್ತು ಯುಎಇಯ ರಾಸ್ ಅಲ್ ಖೈಮಾ ನಡುವೆ ನೇರ ವಿಮಾನ ಸೇವೆ ಆರಂಭಿಸಿದೆ. ಕರಾವಳಿ ನಗರದಿಂದ ಆರಂಭಗೊಂಡಿರುವ ಹೊಸ ಅಂತಾರಾಷ್ಟ್ರೀಯ ವಿಮಾನ ಸಂಪರ್ಕ ಇದಾಗಿದೆ.

2026ರ ಚಳಿಗಾಲದ ವಿಮಾನ ವೇಳಾಪಟ್ಟಿ ಜಾರಿಯಾದ ಎರಡನೇ ದಿನವಾದ ಸೋಮವಾರ ಈ ಸೇವೆಗೆ ಚಾಲನೆ ನೀಡಲಾಗಿದೆ. ಕೈಗಾರಿಕಾ ಚಟುವಟಿಕೆಗಳಿಗೆ ಹೆಸರುವಾಸಿಯಾಗಿರುವ ರಾಸ್ ಅಲ್ ಖೈಮಾ, ಮಂಗಳೂರಿನಿಂದ ಸಂಪರ್ಕ ಕಲ್ಪಿಸಲಾದ ಹೊಸ ಅಂತಾರಾಷ್ಟ್ರೀಯ ತಾಣವಾಗಿದೆ. ಶಾರ್ಜಾ ಮತ್ತು ದುಬೈಗೆ ಸಮೀಪದಲ್ಲಿರುವುದರಿಂದ ಈ ಸೇವೆ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲ ಒದಗಿಸಲಿದೆ.

ಹೊಸ ಮಾರ್ಗದ ಮೊದಲ ಮಂಗಳೂರು-ರಾಸ್ ಅಲ್ ಖೈಮಾ ವಿಮಾನ IX 871 ಒಟ್ಟು 146 ಪ್ರಯಾಣಿಕರೊಂದಿಗೆ ಮಂಗಳೂರಿನಿಂದ ನಿರ್ಗಮಿಸಿತು. ರಾಸ್ ಅಲ್ ಖೈಮಾದಿಂದ ಮಂಗಳೂರಿಗೆ ಆಗಮಿಸಿದ IX 872 ವಿಮಾನದಲ್ಲಿ 36 ಪ್ರಯಾಣಿಕರಿದ್ದರು.

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ 2026ರ ಚಳಿಗಾಲದ ವೇಳಾಪಟ್ಟಿಯಲ್ಲಿ ವಾರಕ್ಕೆ ಒಟ್ಟು 58 ಅಂತಾರಾಷ್ಟ್ರೀಯ ವಿಮಾನಗಳ ಹಾರಾಟ ನಿಗದಿಯಾಗಿದೆ. ಇವುಗಳಲ್ಲಿ 38 ವಿಮಾನಗಳು ಯುಎಇಯ ದುಬೈಗೆ 20, ಅಬುಧಾಬಿಗೆ 16 ಹಾಗೂ ರಾಸ್ ಅಲ್ ಖೈಮಾಗೆ 2 ವಿಮಾನಗಳಂತೆ ಕಾರ್ಯಾಚರಣೆ ನಡೆಸಲಿವೆ. ಉಳಿದ ವಿಮಾನಗಳು ಮಧ್ಯಪ್ರಾಚ್ಯದ ಇತರ ಪ್ರಮುಖ ತಾಣಗಳಿಗೆ ಸಂಪರ್ಕ ಕಲ್ಪಿಸಲಿವೆ.

ಏರ್ ಇಂಡಿಯಾ ಎಕ್ಸ್‌ಪ್ರೆಸ್ ಈ ಮಾರ್ಗದಲ್ಲಿ ಪ್ರತಿ ಸೋಮವಾರ ಮತ್ತು ಶನಿವಾರ ವಿಮಾನ ಸೇವೆ ಒದಗಿಸಲಿದೆ. ಮಂಗಳೂರಿನಿಂದ ಬೆಳಿಗ್ಗೆ 9.30ಕ್ಕೆ IX 871 ವಿಮಾನ ಹೊರಡಲಿದ್ದು, ರಾಸ್ ಅಲ್ ಖೈಮಾದಿಂದ IX 872 ವಿಮಾನ ಸಂಜೆ 6.25ಕ್ಕೆ ಮಂಗಳೂರು ತಲುಪಲಿದೆ.

ರದ್ದಾದ ವಿಮಾನ ಟಿಕೆಟ್‌ ದರ ಜಿಎಸ್ಟಿ ಸಮೇತ ಪಾವತಿಸಿದರೆ ಕ್ಲೈಮ್‌ಗೆ ಅವಕಾಶ

ಒಂದು ವೇಳೆ ರದ್ದಾದ ವಿಮಾನ ಪ್ರಯಾಣದ ಟಿಕೆಟ್‌ ಅನ್ನು ಏರ್‌ಲೈನ್ಸ್‌ ಸಂಸ್ಥೆಯು ಜಿಎಸ್ಟಿ ಸಮೇತ ಪ್ರಯಾಣಿಕರಿಗೆ ಮರುಪಾವತಿಸಿದರೆ ಜಿಎಸ್ಟಿ ರೀಫಂಡ್‌ ಅನ್ನು ಕ್ಲೈಮ್‌ ಮಾಡಬಹುದಾಗಿದೆ. ಆದರೆ, ಇದನ್ನು ಸಾಬೀತುಪಡಿಸಲು ಸೂಕ್ತ ದಾಖಲೆಗಳಿರಬೇಕು ಎಂದು ಜಿಎಸ್ಟಿ ಮೇಲ್ಮನವಿ ನ್ಯಾಯಮಂಡಳಿ (ಜಿಎಸ್‌ಟಿಎಟಿ) ತಿಳಿಸಿದೆ.

ಸಿಂಗಾಪುರ ಏರ್‌ಲೈನ್ಸ್‌ ಲಿ. ಮತ್ತು ಸಿಜಿಎಸ್‌ಟಿ ಆ್ಯಂಡ್‌ ಸಿಇಯ ಕೊಚ್ಚಿ ಕಮಿಷನರ್‌ ನಡುವಿನ ಪ್ರಕರಣದಲ್ಲಿ ಜಿಎಸ್ಟಿ ಮೇಲ್ಮನವಿ ನ್ಯಾಯಮಂಡಳಿಯ ಎರ್ನಾಕುಲಂ ಬ್ರ್ಯಾಂಚ್‌ ಈ ನಿರ್ಧಾರ ತೆಗೆದುಕೊಂಡಿದೆ. ಸಿಂಗಾಪುರ ಏರ್‌ಲೈನ್ಸ್‌ ಕಂಪನಿ ರದ್ದಾದ ಪ್ರಯಾಣದ ಟಿಕೆಟ್‌ ದರವನ್ನು ಪ್ರಯಾಣಿಕರಿಗೆ ನೇರವಾಗಿ ಪಾವತಿಸಿದೆ. ಇಲ್ಲಿ ತೆರಿಗೆಯನ್ನು ಇನ್ನೊಬ್ಬರ ಮೇಲೆ ಹೊರಿಸಿಲ್ಲ ಎಂದು ಟ್ರಿಬ್ಯೂನಲ್‌ ಹೇಳಿದೆ.

ಈ ಹಿನ್ನೆಲೆಯಲ್ಲಿ ನ್ಯಾಯಮಂಡಳಿಯು ಕಂದಾಯ ಇಲಾಖೆಗೆ ಏರ್‌ಲೈನ್ಸ್‌ ಸಂಸ್ಥೆಯ ಜಿಎಸ್‌ಟಿ ಕ್ಲೈಮ್‌ ಪ್ರಕ್ರಿಯೆಯನ್ನು ಎರಡು ವಾರಗಳಲ್ಲಿ ಪೂರ್ಣಗೊಳಿಸಬೇಕು ಮತ್ತು ಬಡ್ಡಿ ಸಮೇತ ಪಾವತಿಸಬೇಕು ಎಂದು ಹೇಳಿದೆ.

2019 ಮತ್ತು ಮಾರ್ಚ್‌ 2021ರ ನಡುವಿನ ಸುಮಾರು 45.92 ಲಕ್ಷ ಮೌಲ್ಯದ ಎಂಟು ಜಿಎಸ್ಟಿ ರಿಫಂಡ್‌ ಕ್ಲೈಮ್‌ಗಳ ವಿಚಾರವಾಗಿ ಕೋರ್ಟ್ ನ್ಯಾಯಮಂಡಳಿ ಈ ತೀರ್ಪು ನೀಡಿದೆ. ಕೋವಿಡ್‌ ಸಂದರ್ಭದಲ್ಲಿ ಏರ್‌ಲೈನ್ಸ್ ಸಂಸ್ಥೆಯು ರದ್ದಾದ ಪ್ರಯಾಣದ ಟಿಕೆಟ್‌ ದರವನ್ನು ಜಿಎಸ್ಟಿ ಸಮೇತ ಮರುಪಾವತಿ ಮಾಡಿತ್ತು.

PREV
Read more Articles on
click me!

Recommended Stories

Gruhalakshmi Scheme New Rules: ಗೃಹಲಕ್ಷ್ಮೀ ಯೋಜನೆಗೆ ಹೊಸ ರೂಲ್ಸ್, ರಾಜ್ಯ ಸರ್ಕಾರದಿಂದ ಮಹತ್ವದ ಅಪ್‌ಡೇಟ್!
ಚಿತ್ರದುರ್ಗ: ಆಮೆ ಸಂಸ್ಕಾರಕ್ಕೆ ನೆಲ ಅಗೆಯುವಾಗ ಪುರಾತನ ಕಾಲದ ನಾಣ್ಯಗಳ ಕುಡಿಕೆ ಪತ್ತೆ!