ಚುನಾವಣೆ : ಬಿಜೆಪಿ ಬೆಂಬಲಕ್ಕೆ ನಿಂತ ಅಣ್ಣಾ ಡಿಎಂಕೆ

By Kannadaprabha NewsFirst Published Apr 24, 2021, 3:54 PM IST
Highlights

ಚುನಾವಣೆಗೆ ಇದೀಗ ಬಿಜೆಪಿ ಬೆಂಬಲಕ್ಕೆ ತಮಿಳುನಾಡಿನ ಜಯಲಲಿತಾ ಅವರ ಪಕ್ಷ ಎಐಎಡಿಎಂಕೆ ಬೆಂಬಲವಾಗಿ ನಿಂತಿದೆ. ಭದ್ರಾವತಿ ನಗರಸಭಾ ಚುನಾವಣೆಗೆ ಬೆಂಬಲ ಘೋಷಣೆಯಾಗಿದೆ. 

ಭದ್ರಾವತಿ (ಏ.24):  ಭದ್ರಾವತಿಯನ್ನು ಭಯಮುಕ್ತ ನಗರವನ್ನಾಗಿಸುವುದು ಭಾರತೀಯ ಜನತಾ ಪಕ್ಷದ ಗುರಿಯಾಗಿದೆ ಎಂದು ಸಚಿವ ಕೆ.ಎಸ್‌. ಈಶ್ವರಪ್ಪ ಹೇಳಿದರು.

ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಹಿಂದೆ ನಗರಸಭೆಯಲ್ಲಿ ಕೇವಲ 2 ಜನ ಬಿಜೆಪಿ ಸದಸ್ಯರಿದ್ದರು. ಆದರೆ, ಈ ಬಾರಿ ಸಂಪೂರ್ಣ ಬಹುಮತ ಪಡೆಯುವ ನಿಟ್ಟಿನಲ್ಲಿ ಹೆಚ್ಚಿನ ಗಮನ ಹರಿಸಲಾಗಿದೆ. ನನ್ನನ್ನು ಒಳಗೊಂಡಂತೆ ಸಂಸದ ಬಿ.ವೈ. ರಾಘವೇಂದ್ರ, ಜಿಲ್ಲಾಧ್ಯಕ್ಷ ಡಿ.ಟಿ. ಮೇಘರಾಜ್‌, ವಿಧಾನಸಭೆ ಸದಸ್ಯ ಕೆ.ಬಿ. ಅಶೋಕ್‌ ನಾಯ್‌್ಕ, ವಿಧಾನ ಪರಿಷತ್ತು ಸದಸ್ಯ ಆಯನೂರು ಮಂಜುನಾಥ್‌, ಎಸ್‌.ದತ್ತಾತ್ರಿ, ಗಿರೀಶ್‌ ಪಟೇಲ್‌ ಸೇರಿದಂತೆ ಇನ್ನಿತರನ್ನು ಒಳಗೊಂಡಿರುವ ತಂಡ ಈ ಬಾರಿ ಚುನಾವಣೆಯನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ ಎಂದರು.

ಕೊರೋನಾ ಹೆಚ್ಚಳ: ಜಿಪಂ, ತಾಪಂ ಚುನಾವಣೆ ಮುಂದೂಡಿಕೆಯಾಗುತ್ತಾ? ...

ಎಲ್ಲ ವಾರ್ಡ್‌ಗಳಿಗೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿದೆ. ಕಳೆದ 40 ದಿನಗಳಿಂದ ನಿರಂತರವಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಳ್ಳಲಾಗಿದೆ. ಎದುರಾಳಿಗಳು ಅವರ ರಾಜಕಾರಣ ಅವರು ಮಾಡಲಿ. ಇಲ್ಲಿನ ರಾಜಕಾರಣಿಗಳು ನಗರವನ್ನು ಭಯಭೀತರನ್ನಾಗಿಸಿದ್ದಾರೆ. ಇಲ್ಲಿನ ಜನರಿಗೆ ಶಾಂತಿ ನೆಮ್ಮದಿ ಕಲ್ಪಿಸಿಕೊಡುವುದು ಬಿಜೆಪಿ ಗುರಿಯಾಗಿದೆ. ಈ ಹಿನ್ನೆಲೆ ನಮ್ಮದೇ ರೀತಿಯಲ್ಲಿ ರಾಜಕಾರಣ ನಾವು ಮಾಡುತ್ತೇವೆ. ಇಲ್ಲಿನ ಜನರು ಬಿಜೆಪಿ ಅಭ್ಯರ್ಥಿಗಳನ್ನು ಬೆಂಬಲಿಸುವ ವಿಶ್ವಾಸವಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಅಭಿವೃದ್ಧಿ ಕಾರ್ಯಗಳು ನಮ್ಮ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಕಾರಣವಾಗಲಿವೆ. ಈ ಹಿನ್ನೆಲೆಯಲ್ಲಿ ಈ ಬಾರಿ ಸಂಪೂರ್ಣ ಬಹುಮತ ಪಡೆಯುವ ವಿಶ್ವಾಸವಿದೆ ಎಂದರು.
 
ಅಣ್ಣಾ ಡಿಎಂಕೆ ಬೆಂಬಲ:  ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತ ನೇತೃತ್ವದ ಅಣ್ಣಾ ಡಿಎಂಕೆ ಪಕ್ಷ ಈ ಬಾರಿ ನಗರಸಭೆ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಸುವುದಾಗಿ ಘೋಷಿಸಿದೆ. ಬಿಜೆಪಿ ಬೆಂಬಲಿಸುವ ದೃಢೀಕರಣ ಪತ್ರವನ್ನು ಕೆ.ಎಸ್‌ ಈಶ್ವರಪ್ಪ ಅವರಿಗೆ ಪಕ್ಷದ ತಾಲೂಕು ಪ್ರಧಾನ ಕಾರ್ಯದರ್ಶಿ ವೇಲಾಯುದನ್‌ ನೀಡುವ ಮೂಲಕ ಪಕ್ಷದ ಅಧ್ಯಕ್ಷರ ಆದೇಶದ ಮೇರೆಗೆ ಬೆಂಬಲ ಘೋಷಿಸಲಾಗುತ್ತಿದೆ ಎಂದರು. ಬಿಜೆಪಿಗೆ ಬೆಂಬಲಿಸುತ್ತಿರುವುದಕ್ಕೆ ಕೃತಜ್ಞತೆ ಸಲ್ಲಿಸುವುದಾಗಿ ಈಶ್ವರಪ್ಪ ತಿಳಿಸಿದರು.

click me!