ಯಾದಗಿರಿ: ನಕಲಿ ರಸಗೊಬ್ಬರ ಜಾಲ ಪತ್ತೆ, ಗೋಡೌನ್‌ ಮೇಲೆ ದಾಳಿ

By Kannadaprabha News  |  First Published Jul 28, 2022, 11:42 AM IST

ಕೃಷಿ ಇಲಾಖೆ ಮತ್ತು ಪೊಲೀಸ್‌ ಇಲಾಖೆಯ ಅ​ಕಾರಿಗಳು ಕಳಪೆ ಗೊಬ್ಬರ ವಿತರಿಸುವ ಜಾಲಗಳನ್ನು ಹೆಡಮುರಿಕಟ್ಟಲಾಗುವುದು: ಪಿಐ ಸುನೀಲಕುಮಾರ ಮೂಲಿಮನಿ 


ಸುರಪುರ(ಜು.28):  ಯಾದಗಿರಿ ಜಿಲ್ಲೆಯ ವಡಗೇರಾ, ಶಹಾಪುರ ತಾಲೂಕುಗಳಲ್ಲಿ ನಕಲಿ ರಸಗೊಬ್ಬರ ದಂಧೆಕೋರರ ಹಾವಳಿ ಇದೀಗ ಸುರಪುರ ಮತಕ್ಷೇತ್ರಕ್ಕೂ ಕಾಲಿಟ್ಟಿದೆ. ತಾಲೂಕಿನ ಸಮೀಪದ ಬಾದ್ಯಾಪುರದ ಮಂಜುನಾಥ ಕೃಷಿ ರಸಗೊಬ್ಬರ ಮಾರಾಟ ಅಂಗಡಿಯೊಂದರಲ್ಲಿ 312ಕ್ಕೂ ಹೆಚ್ಚು ಚೀಲ ನಕಲಿ ರಸಗೊಬ್ಬರ ದೊರೆತಿದೆ. ರೈತರೊಬ್ಬರು ಬಾದ್ಯಾಪುರದ ಗೊಬ್ಬರದಂಗಡಿಯಲ್ಲಿ ಗೊಬ್ಬರ ಖರೀದಿಸಿ ಹೊಲಕ್ಕೆ ಹಾಕಲು ಹೋದಾಗ ನಕಲಿ ಗೊಬ್ಬರವೆಂದು ತಿಳಿದ ತಕ್ಷಣವೇ ತಾಲೂಕು ಸಹಾಯಕ ಕೃಷಿ ನಿರ್ದೇಶಕ ಎಂ.ಬಿ. ಗುರುನಾಥ ಅವರಿಗೆ ದೂರು ನೀಡಿದ್ದಾರೆ. ರೈತರ ದೂರಿಗೆ ಸ್ಪಂದಿಸಿದ ಕೃಷಿ ಅಧಿ​ಕಾರಿಗಳು ಪೊಲೀಸರೊಂದಿಗೆ ಬುಧವಾರ ಬೆಳಗ್ಗೆ ರಸಗೊಬ್ಬರ ಮಾರಾಟ ಅಂಗಡಿಯ ಗೋಡೌನ್‌ ಮೇಲೆ ದಾಳಿ ನಡೆಸಿದಾಗ ಕಳಪೆ ಮಟ್ಟದ ರಸಗೊಬ್ಬರ ದೊರೆತಿದೆ.

ಸಹಾಯಕ ಕೃಷಿ ನಿರ್ದೇಶಕ ಗುರುನಾಥ ಮತ್ತು ಪೊಲೀಸ್‌ ಇನ್ಸ್‌ಪೆಕ್ಟರ್‌ ಸುನೀಲಕುಮಾರ ಮೂಲಿಮನಿಯವರು ಬಾದ್ಯಾಪುರದ ಗೊಬ್ಬರ ದಾಸ್ತಾನು ಮಾಡಿದ್ದ ಗೋಡೌನ್‌ ಸಂಪೂರ್ಣವಾಗಿ ಪರಿಶೀಲಿಸಿದರು. ಈ ವೇಳೆ ಬೀಜ, ಗೊಬ್ಬರ, ಕೀಟನಾಶಕ ಪರವಾನಗಿ ಪಡೆದಿದ್ದು, ಗೋಡೌನ್‌ ಪರವಾನಗಿ ಪಡೆದಿಲ್ಲ ಎಂಬ ವಿಷಯ ಬೆಳಕಿಗೆ ಬಂದಿತು. ಕಾನೂನು ಬಾಹಿರವಾಗಿ ಗೊಬ್ಬರ ಮತ್ತು ಔಷಧ, ಬೀಜ ಮಾರಾಟ ಮಾಡಿದ್ದಾರೆ ಎಂಬುದನ್ನು ತನಿಖೆಯ ಬಳಿಕ ತಿಳಿಯಲಿದೆ.
ಗೋಡೌನ್‌ನಲ್ಲಿದ್ದ ಗೊಬ್ಬರದ ಚೀಲಗಳಲ್ಲಿ ನಕಲಿ ಗೊಬ್ಬರ ಬಂದಿದೆ. ಅಂಗಡಿ ಮಾಲೀಕರನ್ನು ಕೇಳಿದಾಗ ಉತ್ತರ ನೀಡದೆ ಮೌನಕ್ಕೆ ಶರಣಾಗಿದ್ದಾರೆ. ಮಳೆಗಾಲ ಆರಂಭವಾದಗಿನಿಂದಲೂ ಈ ಅಂಗಡಿಯಿಂದ ಗೊಬ್ಬರ ತೆಗೆದುಕೊಂಡು ಹೋದ ರೈತರ ಗತಿಯೇನು? ನಿಮ್ಮಂತ ಮಾಲೀಕರಿಂದ ರೈತರು ಬೆಳೆ ನಷ್ಟಅನುಭವಿಸುವಂತಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಎಂ.ಬಿ. ಗುರುನಾಥ ಬೇಸರ ವ್ಯಕ್ತಪಡಿಸಿದ್ದಾರೆ.

Latest Videos

undefined

PSI RECRUITMENT SCAM: ಯಾದಗಿರಿ ಪೊಲೀಸ್‌ ಕ್ವಾಟ್ರಸ್‌ನಲ್ಲೇ ಬ್ಲೂಟೂತ್‌ ಟ್ರೇನಿಂಗ್‌..!

ತಾಲೂಕಿನ ರೈತರು ಉತ್ತಮ ಬೆಳೆ ಬೆಳೆಯಲು ಗುಣಮಟ್ಟದ ಗೊಬ್ಬರ ಒದಗಿಸಬೇಕು. ಕಳಪೆ ಗುಣಮಟ್ಟದ ಗೊಬ್ಬರ ನೀಡಿ ಮುಗ್ದ ರೈತರನ್ನು ವಂಚಿಸುತ್ತಿದ್ದಾರೆ. ಕೃಷಿ ಇಲಾಖೆ ಮತ್ತು ಪೊಲೀಸ್‌ ಇಲಾಖೆಯ ಅ​ಕಾರಿಗಳು ಕಳಪೆ ಗೊಬ್ಬರ ವಿತರಿಸುವ ಜಾಲಗಳನ್ನು ಹೆಡಮುರಿಕಟ್ಟಲಾಗುವುದು. ಕಳಪೆ ಗೊಬ್ಬರ ಮಾರಿ ಸಿಕ್ಕಿ ಬಿದ್ದರೆ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ಪಿಐ ಸುನೀಲಕುಮಾರ ಮೂಲಿಮನಿ ತಿಳಿಸಿದ್ದಾರೆ.

ಬಾದ್ಯಾಪುರ ಗ್ರಾಮದಲ್ಲಿರುವ ಮಂಜುನಾಥ ಕೃಷಿ ರಸಗೊಬ್ಬರ ಮಾರಾಟಗಾರರ ಅಂಗಡಿಯಲ್ಲಿ ಸುಮಾರು 400ಕ್ಕೂ ಹೆಚ್ಚು ಎನ್‌ಪಿಕೆ 10:26:26, ಮತ್ತು 17:17:26 ಕಳಪೆ ಗೊಬ್ಬರ ಚೀಲಗಳು ದೊರೆತಿವೆ. ರೈತರನ್ನು ವಂಚಿಸುತ್ತಿರುವ ಗೊಬ್ಬರದಂಗಡಿ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಬೇಕು. ಕಳಪೆ ಗೊಬ್ಬರ ಪೂರೈಸುತ್ತಿರುವ ಕಳ್ಳಜಾಲಗಳನ್ನು ಪತ್ತೆ ಹಚ್ಚಿ ರೈತರ ಹಿತಕಾಪಾಡಬೇಕು ಅಂತ ಸುರಪುರ ಕರವೇ ತಾಲೂಕಾಧ್ಯಕ್ಷ ವೆಂಕಟೇಶ ನಾಯಕ ಭೈರಿಮಡ್ಡಿ ತಿಳಿಸಿದ್ದಾರೆ. 

click me!