ಕೃಷಿ ಸಂಸ್ಕೃತಿ ನಾಶವಾಗುವ ಅಪಾಯ ಕಾದಿದೆ..!

By Suvarna NewsFirst Published Jul 22, 2020, 7:54 AM IST
Highlights

ಕರ್ನಾಟಕ ಸರ್ಕಾರ ರೈತವಿರೋಧಿ ಹಲವು ಕಾಯ್ದೆಗಳನ್ನು ಜಾರಿಗೆ ತಂದಿದೆ. ಕರ್ನಾಟಕ ಭೂಸುಧಾರಣಾ ಕಾಯ್ದೆ ತಿದ್ದುಪಡಿಯಂತೂ ರೈತರಿಗೆ ಮಾರಕವಾಗಿದೆ. ಬಂಡವಾಳಶಾಹಿ ವ್ಯವಸ್ಥೆ ಕಪಿಮುಷ್ಟಿಗೆ ಸಿಲುಕಿರುವ ರೈತರು ಭೂಹೀನರಾಗುವ ಎಲ್ಲ ಸಾಧ್ಯತೆ ನಿಚ್ಚಳವಾಗಿದೆ ಎಂದು ರೈತ ಸಂಘ ಆತಂಕ ವ್ಯಕ್ತಪಡಿಸಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಶಿವಮೊಗ್ಗ(ಜು.22): ಸರ್ಕಾರಗಳು ಜಾರಿಗೆ ತರುತ್ತಿರುವ ರೈತ ವಿರೋಧಿ ಕಾಯ್ದೆಗಳಿಂದಾಗಿ ಭಾರತದ ಕೃಷಿ ಸಂಸ್ಕೃತಿ ಸಂಪೂರ್ಣ ನಾಶವಾಗುವ ಆತಂಕ ಎದುರಾಗಿದೆ. ಜೊತೆಗೆ ಒಕ್ಕಲುತನವೇ ಮಾಯವಾಗುವ ಲಕ್ಷಣ ಗೋಚರಿಸುತ್ತಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡ ಕೆ.ಟಿ. ಗಂಗಾಧರ್‌ ಆತಂಕ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಮಂಗಳವಾರ ನಗರದ ಪತ್ರಿಕಾಭವನದಲ್ಲಿ ಆಯೋಜಿಸಿದ್ದ ನರಗುಂದ ರೈತ ಬಂಡಾಯ ಹುತಾತ್ಮರ ನೆನಪು ಮತ್ತು ರೈತ ಹೋರಾಟದ ಮುಂದಿನ ಹೆಜ್ಜೆ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದರು.

ಕರ್ನಾಟಕ ಸರ್ಕಾರ ರೈತವಿರೋಧಿ ಹಲವು ಕಾಯ್ದೆಗಳನ್ನು ಜಾರಿಗೆ ತಂದಿದೆ. ಕರ್ನಾಟಕ ಭೂಸುಧಾರಣಾ ಕಾಯ್ದೆ ತಿದ್ದುಪಡಿಯಂತೂ ರೈತರಿಗೆ ಮಾರಕವಾಗಿದೆ. ಬಂಡವಾಳಶಾಹಿ ವ್ಯವಸ್ಥೆ ಕಪಿಮುಷ್ಟಿಗೆ ಸಿಲುಕಿರುವ ರೈತರು ಭೂಹೀನರಾಗುವ ಎಲ್ಲ ಸಾಧ್ಯತೆ ನಿಚ್ಚಳವಾಗಿದೆ. ರೈತರಲ್ಲದವರು ಕೃಷಿ ಭೂಮಿ ಖರೀದಿಸಲು ಅವಕಾಶ ಮಾಡಿಕೊಟ್ಟಿರುವುದರಿಂದ ಉಳ್ಳವರು ಕೃಷಿಭೂಮಿ ಖರೀದಿಸಿ ಮಾರುಕಟ್ಟೆಸರಕನ್ನಾಗಿ ಮಾಡುತ್ತಾರೆ. ಒಕ್ಕಲುತನಕ್ಕೆ ಇದು ಮಾರಕವಾಗಲಿದೆ. ರೈತಾಪಿವರ್ಗ ಮುಂದೆ ಬಹುದೊಡ್ಡ ಸಂಕಷ್ಟಕ್ಕೆ ಈಡಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಕೇಂದ್ರದ ಯೋಜನೆ ಜನರಿಗೆ ತಲುಪಿಸಿ: ಸಂಸದ ರಾಘವೇಂದ್ರ

ಭಾರತ ಕೃಷಿ ಪ್ರಧಾನ ದೇಶ. ಇಲ್ಲಿನ ಸರ್ಕಾರಗಳು ರೈತಪರ ಕಾನೂನು ಜಾರಿಗೊಳಿಸಬೇಕು. ಕೃಷಿ ಚಟುವಟಿಕೆಗೆ ಹೆಚ್ಚಿನ ಪ್ರೋತ್ಸಾಹ, ಉತ್ತೇಜನ ನೀಡಬೇಕು. ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸಬೇಕು. ರೈತ ವಿರೋಧಿ ನೀತಿಗಳನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

ಸಾಹಿತಿ ಹಾಗೂ ಪ್ರಗತಿಪರ ಚಿಂತಕ ರಾಜೇಂದ್ರಚೆನ್ನಿ ಮಾತನಾಡಿ, ಭೂಸುಧಾರಣಾ ತಿದ್ದುಪಡಿ ಕಾಯ್ದೆ, ವಿದ್ಯುಚ್ಚಕ್ತಿ ಖಾಸಗೀಕರಣ ಕಾಯ್ದೆ, ಎಪಿಎಂಸಿ ಕಾಯ್ದೆ ತಿದ್ದುಪಡಿ, ಕೃಷಿ ಭೂಮಿ ತಿದ್ದುಪಡಿ ಕಾಯ್ದೆಗಳು ಖಾಸಗಿ ಮಾರುಕಟ್ಟೆತೆರೆಯಲು ಅನುಕೂಲ ಮಾಡಿಕೊಟ್ಟಿವೆ. ಬಹುರಾಷ್ಟ್ರೀಯ ಕಂಪನಿಗಳು ಸುಲಭವಾಗಿ ದೇಶದ ಕೃಷಿ ಉತ್ಪನ್ನ ಮಾರುಕಟ್ಟೆಮೇಲೆ ಹಿಡಿತ ಸಾಧಿಸುವುದರಿಂದ ರೈತರು ಶೋಷಣೆಗೆ ಒಳಗಾಗುತ್ತಾರೆ. ಇದರ ವಿರುದ್ಧ ರೈತ ಸಂಘಟನೆಗಳು ರೈತರಲ್ಲಿ ಜಾಗೃತಿ ಮೂಡಿಸುವ ಕಾರ್ಯ ನಡೆಸಬೇಕು. ರೈತ ವಿರೋಧಿ ನೀತಿಗಳ ವಿರುದ್ಧ ಹೋರಾಟಕ್ಕೆ ಸಜ್ಜಾಗಬೇಕು ಎಂದು ಕರೆ ನೀಡಿದರು.

ಇದೇ ಸಂದರ್ಭದಲ್ಲಿ ನರಗುಂದ ರೈತ ಬಂಡಾಯ ಹುತಾತ್ಮ ರೈತರಿಗೆ ನಮನ ಸಲ್ಲಿಸಲಾಯಿತು ಮತ್ತು ಕೃಷಿ ಭೂಮಿ ಮಾರಾಟದ ಸರಕಲ್ಲ ಎಂಬ ಕರಪತ್ರ ಬಿಡುಗಡೆ ಮಾಡಲಾಯಿತು. ಪ್ರಗತಿಪರ ಚಿಂತಕ ಪ್ರೊ. ರಾಜಪ್ಪ ಮಾಸ್ತರ್‌ ಕಾರ್ಯಕ್ರಮ ಉದ್ಘಾಟಿಸಿದರು. ಜಿ.ಎಸ್‌. ರಾಜೇಂದ್ರ ತೀರ್ಥಹಳ್ಳಿ, ಜಿಲ್ಲಾ ರೈತ ಸಂಘದ ಅಧ್ಯಕ್ಷ ಜಯಪ್ಪಗೌಡ ಮತ್ತಿತರರು ಉಪಸ್ಥಿತರಿದ್ದರು.

ಒತ್ತಾಯ

1) ಭಾರತ ಕೃಷಿ ಪ್ರಧಾನ ದೇಶವಾಗಿದ್ದು, ಸರ್ಕಾರಗಳು ರೈತಪರ ಕಾನೂನು ಜಾರಿಗೊಳಿಸಬೇಕು

2) ಕೃಷಿ ಚಟುವಟಿಕೆಗೆ ಹೆಚ್ಚಿನ ಪ್ರೋತ್ಸಾಹ ಹಾಗೂ ಉತ್ತೇಜನ ನೀಡಬೇಕು

3) ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸಬೇಕು

4) ಕೇಂದ್ರ - ರಾಜ್ಯ ಸರ್ಕಾರಗಳು ರೈತ ವಿರೋಧಿ ನೀತಿಗಳನ್ನು ನಿಲ್ಲಿಸಬೇಕು
 

click me!