‘ಅಗ್ನಿಪಥ್‌’ ಆರೆಸ್ಸೆಸ್‌ ವಿಭಾಗವಾಗಲಿದೆ: ರಾಮಚಂದ್ರನ್‌

By Kannadaprabha NewsFirst Published Aug 4, 2022, 8:01 AM IST
Highlights

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಸರ್ವಾಧಿಕಾರಿ ಧೋರಣೆ ದೇಶಕ್ಕೆ ಅಪಾಯ ತರಲಿದ್ದು, ಬಿಜೆಪಿ ಸೋಲಿಸಲು ಎಡಶಕ್ತಿಗಳು ಒಂದಾಗಬೇಕು ಎಂದು ಸಿಪಿಐ (ಎಂಎಲ್‌) ರೆಡ್‌ ಸ್ಟಾರ್‌ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ.ಎನ್‌.ರಾಮಚಂದ್ರನ್‌ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಸರ್ವಾಧಿಕಾರಿ ಧೋರಣೆ ದೇಶಕ್ಕೆ ಅಪಾಯ ತರಲಿದ್ದು, ಬಿಜೆಪಿ ಸೋಲಿಸಲು ಎಡಶಕ್ತಿಗಳು ಒಂದಾಗಬೇಕು ಎಂದು ಸಿಪಿಐ (ಎಂಎಲ್‌) ರೆಡ್‌ ಸ್ಟಾರ್‌ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ.ಎನ್‌.ರಾಮಚಂದ್ರನ್‌ ಅಭಿಪ್ರಾಯಪಟ್ಟರು. ಶಿಕ್ಷಕರ ಸದನದಲ್ಲಿ ಬುಧವಾರ ಏರ್ಪಡಿಸಿದ್ದ ಪಕ್ಷದ 11ನೇ ರಾಜ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದು ಬಂಡವಾಳಶಾಹಿಗಳ ಪರವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದರು.

‘ಅಗ್ನಿಪಥ್‌’ ಹೆಸರಿನಲ್ಲಿ ಕೇಂದ್ರ ಸರ್ಕಾರ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರನ್ನು ಸೇನೆಗೆ ಸೇರಿಸಿ ಕೇಸರೀಕರಣ ಮಾಡುವ ಷಡ್ಯಂತ್ರ ನಡೆಸುತ್ತಿದೆ. ಭವಿಷ್ಯದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌(ಎಬಿವಿಪಿ), ಭಾರತೀಯ ಮಜ್ದೂರ್‌ ಸಂಘ(ಬಿಎಂಎಸ್‌) ರೀತಿಯಲ್ಲಿ ಸೇನೆ ಸಹ ಆರ್‌ಎಸ್‌ಎಸ್‌ ವಿಭಾಗ ಆಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ನೀವು ವೀರ್‌ ಆಗಿರಬಹುದು, ಅಗ್ನಿವೀರ್‌ ಅಲ್ಲ, ವಿಚಾರಣೆ ವೇಳೆ ವಕೀಲರಿಗೆ ಹೇಳಿದ ಸುಪ್ರೀಂ ಕೋರ್ಟ್‌!

ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳದ ಆರ್‌ಎಸ್‌ಎಸ್‌ ಅಣತಿಯಂತೆ ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾತಂತ್ರ್ಯ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಪ್ರತಿ ಮನೆಯ ಮೇಲೂ ತ್ರಿವರ್ಣ ಧ್ವಜ ಹಾರಿಸಲು ಕರೆ ನೀಡಿದ್ದಾರೆ. ಆದ್ದರಿಂದ ಫ್ಯಾಸಿಸಂ ಶಕ್ತಿಗಳನ್ನು ಸೋಲಿಸದಿದ್ದರೆ ಶ್ರೀಲಂಕಾದಲ್ಲಿ ಉಂಟಾದಂತೆ ದೇಶದಲ್ಲೂ ಆರ್ಥಿಕ ಬಿಕ್ಕಟ್ಟು ಉಂಟಾಗಬಹುದು. ಆದ್ದರಿಂದ ನಾವೆಲ್ಲಾ ಒಗ್ಗಟ್ಟಾಗಿ ಹೋರಾಟ ನಡೆಸಬೇಕು ಎಂದು ಕರೆ ನೀಡಿದರು.

ಮಾರ್ಕ್ಸ್‌ವಾದಿ, ಅಂಬೇಡ್ಕರ್‌ವಾದಿಗಳ ಬಿಕ್ಕಟ್ಟು ಬಗೆಹರಿಯಲಿ:

ಕರ್ನಾಟಕ ಜನಶಕ್ತಿಯ ರಾಜ್ಯ ಸಮಿತಿ ಅಧ್ಯಕ್ಷ ನೂರ್‌ ಶ್ರೀಧರ್‌ ಮಾತನಾಡಿ, ಆಂತರಿಕ ವಾದ-ವಿವಾದಗಳಿಗೆ ವಿರಾಮ ಹಾಕಬೇಕು. ಮಾರ್ಕ್ಸ್ವಾದಿಗಳು ಮತ್ತು ಅಂಬೇಡ್ಕರ್‌ವಾದಿಗಳ ನಡುವಿನ ಬಿಕ್ಕಟ್ಟು ಬಗೆಹರಿಯಬೇಕು. ಇದಕ್ಕಾಗಿ ಸಂವಾದ ನಡೆಯಬೇಕಿದೆ ಎಂದು ಸಲಹೆ ನೀಡಿದರು.

ಕ್ರಾಂತಿಕಾರಿ ಶಕ್ತಿಗಳನ್ನು ಒಗ್ಗೂಡಿಸಿ ಫ್ಯಾಸಿಸಂ ಸೋಲಿಸಬೇಕು. ಇದಕ್ಕಾಗಿ ಕಟಿಬದ್ಧವಾಗಿರುವ ಶಕ್ತಿಗಳೊಂದಿಗೆ ಸಂವಾದ ನಡೆಸಿ ಒಗ್ಗೂಡಿಸಬೇಕು. ದೇಶಪ್ರೇಮಿ ಕ್ರಾಂತಿಕಾರಿಗಳು ನಾಲ್ಕೈದು ಅಂಶಗಳ ಆಧಾರದಲ್ಲಿ ಹೋರಾಟ ನಡೆಸಿ ಜನರಿಗೆ ಶಕ್ತಿ ನೀಡಬೇಕು. ಸೆಪ್ಟೆಂಬರ್‌ನಲ್ಲಿ ಕೇರಳದಲ್ಲಿ ನಡೆಯಲಿರುವ 12ನೇ ಮಹಾಧಿವೇಶನದಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಅಗ್ನಿಪಥ್‌ ಬಗ್ಗೆ ಪ್ರತಿಭಟನೆ ಆರಂಭವಾದಷ್ಟೇ ವೇಗದಲ್ಲಿ ಕಾವು ಕಳೆದುಕೊಂಡಿದೆ: ವಾಯುಪಡೆ ಅಧಿಕಾರಿ

ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್‌, ವಕೀಲ ಎಸ್‌.ಬಾಲನ್‌, ಮುಖಂಡರಾದ ಎಂ.ಡಿ.ಅಮಿರ ಅಲಿ, ಡಿ.ಎಚ್‌.ಪೂಜಾರ್‌, ಡಿ.ಎಸ್‌.ನಿರ್ವಾಣಪ್ಪ, ಪೂರ್ಣಿಮಾ ಮತ್ತಿತರರು ಹಾಜರಿದ್ದರು.

ಸಿಪಿಐ(ಎಂಎಲ್‌) ರೆಡ್‌ ಸ್ಟಾರ್‌ ಪಕ್ಷದ 11 ನೇ ರಾಜ್ಯ ಸಮ್ಮೇಳನದಲ್ಲಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ.ಎನ್‌.ರಾಮಚಂದ್ರನ್‌, ಕರ್ನಾಟಕ ಜನಶಕ್ತಿಯ ರಾಜ್ಯ ಸಮಿತಿ ಅಧ್ಯಕ್ಷ ನೂರ್‌ ಶ್ರೀಧರ್‌, ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್‌ ಮತ್ತಿತರರು ಪಾಲ್ಗೊಂಡಿದ್ದರು.

click me!