ಧಾರವಾಡ: ಸೋಂಕಿತರಿಗೆ ಡಿಮ್ಹಾನ್ಸ್‌ನಲ್ಲಿ ಟೆಲಿಫೋನಿಕ್‌ ಸೈಕೋ ಥೆರಪಿ

By Kannadaprabha News  |  First Published May 5, 2021, 12:35 PM IST

ಸೋಂಕಿತರಲ್ಲಿ ಆತ್ಮವಿಶ್ವಾಸ, ಮನೋಧೈರ್ಯ ಹೆಚ್ಚಿಸಲು ಡಿಮ್ಹಾನ್ಸ್‌ನಲ್ಲಿ ಟೆಲಿಫೋನಿಕ್‌ ಸೈಕೋ ಥೆರಪಿ ಸೆಂಟರ್‌ ಆರಂಭ| ಕಳೆದ ವರ್ಷ ಸುಮಾರು 3 ತಿಂಗಳ ಕಾಲ ಕಾರ್ಯನಿರ್ವಹಿಸಿದ್ದ ಸೈಕೋ ಥೆರಪಿ ಸೆಂಟರ್‌| ಪ್ರತಿದಿನ ಬೆಳಿಗ್ಗೆ ನಾಲ್ಕು ಗಂಟೆ ಹಾಗೂ ಸಂಜೆ 3 ಗಂಟೆ ಈ ರೀತಿ ಟೆಲಿಫೋನಿಕ್‌ ಸೈಕೋ ಥೆರಪಿ ನಡೆಸಲು ಡಿಮ್ಹಾನ್ಸ್‌ ನಿರ್ಧಾರ| 
 


ಶಿವಾನಂದ ಗೊಂಬಿ

ಹುಬ್ಬಳ್ಳಿ(ಮೇ.05): ಕೊರೋನಾ ಸೋಂಕಿತರು ಹಾಗೂ ಕುಟುಂಬಸ್ಥರಲ್ಲಿ ಮನೋಧೈರ್ಯ ಹೆಚ್ಚಿಸಲು ಕಳೆದ ವರ್ಷ ‘ಟೆಲಿಫೋನಿಕ್‌ ಸೈಕೋ ಥೆರಪಿ’ ಪ್ರಯೋಗ ಮಾಡಿ ಯಶಸ್ವಿಯಾಗಿದ್ದ ಡಿಮ್ಹಾನ್ಸ್‌ ಇದೀಗ ಮತ್ತೆ ಸೈಕೋ ಥೆರಪಿ ಪ್ರಾರಂಭಿಸಲಿದೆ. ಇದಕ್ಕಾಗಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿರುವ ಡಿಮ್ಹಾನ್ಸ್‌ (ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ)ನಲ್ಲಿ ಈ ಸೆಂಟರ್‌ ಆರಂಭವಾಗಲಿದೆ.

Tap to resize

Latest Videos

undefined

ಏನಿದು?:

ಕೊರೋನಾ ಸೋಂಕು ತಗುಲಿದೆ ಎಂದರೆ ಜನತೆ ಗಾಬರಿಯಾಗುತ್ತಿದ್ದಾರೆ. ಭಯದಿಂದಲೇ ತಮ್ಮಲ್ಲಿರುವ ಆತ್ಮವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ. ಇದರಿಂದ ರೋಗ ನಿರೋಧಕ ಶಕ್ತಿಯೂ ಕಡಿಮೆಯಾಗುತ್ತದೆ. ಹೀಗಾಗಿ ಸಾವು- ನೋವು ಸಂಭವಿಸುವ ಪ್ರಕರಣಗಳು ಜಾಸ್ತಿಯಾಗುತ್ತಿವೆ. ಇನ್ನು ಕೆಲವರಂತೂ ಕೊರೋನಾ ಸೋಂಕು ತಗುಲಿದೆ ಎಂದು ಆತ್ಮಹತ್ಯೆ ಮಾಡಿಕೊಂಡಿದ್ದುಂಟು. ಇದನ್ನೆಲ್ಲ ತಪ್ಪಿಸಬೇಕು. ಸೋಂಕಿತರಲ್ಲಿ ಆತ್ಮವಿಶ್ವಾಸ, ಮನೋಧೈರ್ಯ ಹೆಚ್ಚಿಸುವಂತಾಗಬೇಕು ಎಂಬ ಉದ್ದೇಶದಿಂದ ಡಿಮ್ಹಾನ್ಸ್‌ ಟೆಲಿಫೋನಿಕ್‌ ಸೈಕೋ ಥೆರಪಿ ಸೆಂಟರ್‌ ತೆರೆಯಲಿದೆ.

"

ಏನಿದರ ಕೆಲಸ:

ಸದ್ಯ ಆಸ್ಪತ್ರೆಗಳಲ್ಲಿ ದಾಖಲಾಗಿರುವ ಸೋಂಕಿತರಿಗೆ ಟೆಲಿಫೋನ್‌ ಅಥವಾ ವಿಡಿಯೋ ಕಾಲ್‌ ಮೂಲಕ ಕೌನ್ಸೆಲಿಂಗ್‌ ಮಾಡುವುದು. ಇದಕ್ಕಾಗಿ ಆಯಾ ನೋಡಲ್‌ ಆಫೀಸರ್‌ಗಳ ಬಳಿಯಿಂದ ಮೊಬೈಲ್‌ ಹೊಂದಿರುವ ಸೋಂಕಿತರ ನಂಬರ್‌ ಇಸಿದುಕೊಳ್ಳುವುದು. ಅವರಿಗೆ ಕರೆ ಮಾಡಿ ಕೌನ್ಸೆಲಿಂಗ್‌ ಮಾಡುವುದು. ಸೋಂಕು ತಗುಲಿದಾಗ ಯಾವ ರೀತಿ ಇರಬೇಕು. ಯಾವ ರೀತಿ ಸೋಂಕು ಮುಕ್ತರಾಗಬಹುದು. ಯಾವ್ಯಾವ ಲಘು ವ್ಯಾಯಾಮ ಮಾಡಬಹುದು. ಬ್ರಿಥಿಂಗ್‌ ಎಕ್ಸ್‌ಸೈಜ್‌ಗಳನ್ನು ಯಾವ ರೀತಿ ಮಾಡಬಹುದು. ಧ್ಯಾನ ಮಾಡುವುದು. ಆಕ್ಸಿಜನ್‌ ಲೇವಲ್‌ ಕಡಿಮೆಯಾದರೆ ತತಕ್ಷಣವೇ ಏನು ಮಾಡಬೇಕು. ಮನಸನ್ನು ಯಾವ ರೀತಿ ನಿಯಂತ್ರಣದಲ್ಲಿಟ್ಟುಕೊಳ್ಳಬೇಕು ಎಂಬುದನ್ನು ಸೋಂಕಿತರಲ್ಲಿ ಮನದಟ್ಟು ಮಾಡುವುದು.

ಕೊರೋನಾ ಸೋಂಕಿತರಿಗೆ ‘ಸೈಕೋಥೆರಪಿ’!

ಮೊದಲು ಕಿಮ್ಸ್‌, ಜಿಲ್ಲಾಸ್ಪತ್ರೆ ಸೇರಿದಂತೆ ಸರ್ಕಾರಿ ಆಸ್ಪತ್ರೆಗಳಲ್ಲಿನ ಸೋಂಕಿತರನ್ನು ಸಂಪರ್ಕಿಸಿ ಕೌನ್ಸೆಲಿಂಗ್‌ ಮಾಡುವುದು. ನಂತರ ಖಾಸಗಿ ಆಸ್ಪತ್ರೆ ಹಾಗೂ ಹೋಂ ಐಸೋಲೇಷನ್‌ ಗಳಲ್ಲಿರುವ ಸೋಂಕಿತರನ್ನು ಸಂಪರ್ಕಿಸಿ ಅವರಿಗೆ ಕೌನ್ಸೆಲಿಂಗ್‌ ಮಾಡುವುದು. ಇನ್ನೂ ಕೆಲ ಸೋಂಕಿತರ ಮನೆಯವರು ಗಾಬರಿಯಾಗಿರುತ್ತಾರೆ. ಅಂತಹವರನ್ನು ಸೋಂಕಿತರ ಬಳಿಯೇ ನಂಬರ್‌ ಪಡೆದು ಕುಟುಂಬಸ್ಥರನ್ನು ಸಂಪರ್ಕಿಸಿ ಅವರಿಗೂ ಧೈರ್ಯ ಹೇಳುವ ಕೆಲಸ ಈ ಸೆಂಟರ್‌ ಮಾಡಲಿದೆ.

ಏನೇನು ತಯಾರಿ?:

ಸೈಕೋ ಥೆರಪಿ ಸೆಂಟರ್‌ಗಾಗಿ ನಾಲ್ಕು ಲ್ಯಾಂಡ್‌ಲೈನ್‌ ದೂರವಾಣಿಗಳನ್ನು ಈಗಾಗಲೇ ಅಳವಡಿಸಲಾಗಿದೆ. ಇನ್ನೂ ಒಂದು ವಿಡಿಯೋ ಕಾಲ್‌ಗೆ ಮೊಬೈಲ್‌ ವ್ಯವಸ್ಥೆ ಮಾಡಲಾಗಿದೆ. ಬಹುತೇಕ ತಯಾರಿಯೆಲ್ಲ ಮುಗಿದಿದ್ದು ಇನ್ನೆರಡು ದಿನಗಳಲ್ಲಿ ಈ ಸೆಂಟರ್‌ ಕಾರ್ಯಾರಂಭಿಸಲಿದೆ. ಇದಕ್ಕಾಗಿ ಡಿಮ್ಹಾನ್ಸ್‌ 6 ಜನರ ತಂಡವನ್ನು ರಚಿಸಿದ್ದು, ಕೌನ್ಸೆಲಿಂಗ್‌ನಲ್ಲಿ ಪರಿಣಿತಿ ಹೊಂದಿದವರೇ ಈ ತಂಡದಲ್ಲಿದ್ದಾರೆ. ಪ್ರತಿದಿನ ಬೆಳಿಗ್ಗೆ ನಾಲ್ಕು ಗಂಟೆ ಹಾಗೂ ಸಂಜೆ 3 ಗಂಟೆ ಈ ರೀತಿ ಟೆಲಿಫೋನಿಕ್‌ ಸೈಕೋ ಥೆರಪಿ ನಡೆಸಲು ಡಿಮ್ಹಾನ್ಸ್‌ ನಿರ್ಧರಿಸಿದೆ.

ಇದೇ ರೀತಿ ಕಳೆದ ವರ್ಷ ಕೂಡ ಸೈಕೋ ಥೆರಪಿ ಸೆಂಟರ್‌ ತೆರೆಯಲಾಗಿತ್ತು. ಸುಮಾರು 3 ತಿಂಗಳ ಕಾಲ ಈ ಸೆಂಟರ್‌ ಕಾರ್ಯನಿರ್ವಹಿಸಿತ್ತು. ಆಗ ಸೋಂಕಿತರ ಬಲ ಹೆಚ್ಚಿಸಲು ಸಾಕಷ್ಟು ಅನುಕೂಲವಾಗಿತ್ತು. ಹೀಗಾಗಿ 2ನೇ ಅಲೆ ತೀವ್ರಗತಿಯಲ್ಲಿ ಹಬ್ಬುತ್ತಿದೆ. ಈ ಅಲೆಯಿಂದ ಜನರ ಮನೋಬಲ ಸಾಕಷ್ಟು ಕುಸಿತವಾಗುತ್ತಿದೆ. ಹೀಗಾಗಿ ಮತ್ತೆ ಸೈಕೋ ಥೆರಪಿ ಸೆಂಟರ್‌ ಪ್ರಾರಂಭಿಸಲು ನಿರ್ಧರಿಸಲಾಗಿದೆ ಎಂದು ಡಿಮ್ಹಾನ್ಸ್‌ ಮೂಲಗಳು ತಿಳಿಸುತ್ತವೆ. ಒಟ್ಟಿನಲ್ಲಿ ಸೋಂಕಿತರಲ್ಲಿ ಮನೋಬಲ ಹೆಚ್ಚಿಸಲು ಮತ್ತೆ ಟೆಲಿಫೋನಿಕ್‌ ಸೈಕೋ ಥೆರಪಿ ಸೆಂಟರ್‌ ಆರಂಭವಾಗುತ್ತಿರುವುದಂತೂ ಸತ್ಯ.

ಸೋಂಕಿತರ ಮನೋಬಲ ಹೆಚ್ಚಿಸಿದರೆ ಸಹಜವಾಗಿ ಸೋಂಕಿನ ಪರಿಣಾಮ ಅಷ್ಟೊಂದು ಗಂಭೀರವಾಗಲ್ಲ. ಈ ಕಾರಣದಿಂದ ಸೆಂಟರ್‌ ತೆರೆಯಲಾಗುತ್ತಿದೆ. ಕಳೆದ ಬಾರಿ ತೆರೆದಾಗ ಸೋಂಕಿತರಿಗೆ ಸಾಕಷ್ಟುಅನುಕೂಲವಾಗಿತ್ತು. ಸೆಂಟರ್‌ ಪ್ರಾರಂಭಕ್ಕೆ ಬೇಕಾದ ಸಿದ್ಧತೆಗಳೆಲ್ಲ ಬಹುತೇಕ ಪೂರ್ಣಗೊಂಡಿವೆ. ಇನ್ನೆರಡು ದಿನಗಳಲ್ಲಿ ಕಾರ್ಯಾರಂಭ ಮಾಡಲಿದೆ ಎಂದು ಡಿಮ್ಹಾನ್ಸ್‌ ನಿರ್ದೇಶಕ ಡಾ. ಮಹೇಶ ದೇಸಾಯಿ ತಿಳಿಸಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ನ್ಯೂಸ್‌ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona
 

click me!