ವಿಶ್ವವಿಖ್ಯಾತ ಪ್ರವಾಸಿ ತಾಣ ಕೆಆರ್‌ಎಸ್ ಅಣೆಕಟ್ಟೆಯಲ್ಲಿ ಮತ್ತೊಮ್ಮೆ ಚಿರತೆ ಪ್ರತ್ಯಕ್ಷಗೊಂಡು ಸಿಬ್ಬಂದಿ ಹಾಗೂ ಪ್ರವಾಸಿಗರಲ್ಲಿ ಆತಂಕ ಮೂಡಿಸಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಸೋಮವಾರ ಪ್ರವಾಸಿಗರಿಗೆ ಬೃಂದಾವನ ಗಾರ್ಡನ್ ವೀಕ್ಷಣೆಗೆ ಪ್ರವೇಶ ನಿರ್ಬಂಧಿಸಲಾಗಿದೆ.
ಶ್ರೀರಂಗಪಟ್ಟಣ (ನ.07): ವಿಶ್ವವಿಖ್ಯಾತ ಪ್ರವಾಸಿ ತಾಣ ಕೆಆರ್‌ಎಸ್ ಅಣೆಕಟ್ಟೆಯಲ್ಲಿ ಮತ್ತೊಮ್ಮೆ ಚಿರತೆ ಪ್ರತ್ಯಕ್ಷಗೊಂಡು ಸಿಬ್ಬಂದಿ ಹಾಗೂ ಪ್ರವಾಸಿಗರಲ್ಲಿ ಆತಂಕ ಮೂಡಿಸಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಸೋಮವಾರ ಪ್ರವಾಸಿಗರಿಗೆ ಬೃಂದಾವನ ಗಾರ್ಡನ್ ವೀಕ್ಷಣೆಗೆ ಪ್ರವೇಶ ನಿರ್ಬಂಧಿಸಲಾಗಿದೆ. ಇಡೀ ಬೃಂದಾವನ ಹಾಗೂ ಅಣೆಕಟ್ಟೆಭಾಗದ ಜನರಲ್ಲಿ ಭಯದ ವಾತಾವರಣ ನಿರ್ಮಿಸಿದೆ. ಕಳೆದ ನ.4ರಂದು ಕೆ.ಆರ್.ನಗರದಲ್ಲಿ ಚಿರತೆ ಕಾಣಿಸಿಕೊಂಡು ಹಲವರ ಮೇಲೆ ದಾಳಿ ಮಾಡಿದ ಪ್ರಕರಣ ಮಾಸುವ ಮುನ್ನವೇ ಕೆಆರ್‌ಎಸ್‌ನಲ್ಲಿಯೂ ಭಾನುವಾರ ಮೀನುಗಾರಿಕೆ ಇಲಾಖೆ ಬಳಿ ಚಿರತೆ ಕಾಣಿಸಿಕೊಂಡಿದೆ.
ಕಣ್ಣೆದುರೆ ಚಿರತೆಯನ್ನು ನೋಡಿದ ಸಿಬ್ಬಂದಿ ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಭಾನುವಾರ ಮಧ್ಯರಾತ್ರಿ ಸುಮಾರು 12.30ರ ವೇಳೆ ಕೆಆರ್‌ಎಸ್ ಬೃಂದಾವನಕ್ಕೆ ತೆರಳುವ ಚೆಕ್ ಪೋಸ್ಟ್ ಬಳಿ ಚಿರತೆ ಹಾದು ಹೋಗುತ್ತಿದ್ದು, ಹತ್ತಾರು ನಾಯಿಗಳು ಸೇರಿ ಚಿರತೆಯನ್ನು ಓಡಾಡಿಸುತ್ತಿರುವ ದೃಶ್ಯ ಹೆದ್ದಾರಿ ಹೋಟೆಲ್‌ಗಳ ಸಿಸಿ ಟಿವಿಯಲ್ಲಿ ಸೆರೆಯಾಗಿರುವುದು ಸಾರ್ವಜನಿಕರಲ್ಲೂ ಸಹ ಭಯದ ವಾತಾವರಣ ಸೃಷ್ಟಿಮಾಡಿದೆ. ಕಳೆದ 20 ದಿನಗಳ ಅಂತರದಲ್ಲಿ ಸುಮಾರು ಐದಾರು ಬಾರಿ ಕಾಣಿಸಿಕೊಂಡಿರುವ ಚಿರತೆ ಅಧಿಕಾರಿಗಳ ನಿದ್ದೆಗೆಡಿಸಿದೆ.
Mysuru: ಸಿಕ್ಕ ಸಿಕ್ಕವರ ಮೇಲೆ ದಾಳಿಗೆ ಯತ್ನಿಸಿದ ಚಿರತೆ ಕೊನೆಗೂ ಸೆರೆ
ಅ.21ರಂದು ಹಾಡಹಗಲೇ ಸಿಬ್ಬಂದಿಗೆ ಮೊದಲ ಬಾರಿಗೆ ಕಾಣಿಸಿಕೊಂಡಿದ್ದ ಚಿರತೆ ನಂತರ ಶ್ರೀರಂಗಪಟ್ಟಣದ ಅರಣ್ಯ ಇಲಾಖೆ ಸಿಬ್ಬಂದಿ ರಾಯಲ್ ಆರ್ಕಿಡ್ ಹೋಟೆಲ್ ಬಳಿ ಬೋನ್ ಇರಿಸಿ ಕ್ಯೂಬಿಂಗ್ ಕೂಡ ನಡೆಸಿದ್ದರು. ಆದರೆ, ನಂತರ ಅತ್ತ ಚಿರತೆ ಸುಳಿಯಲಿಲ್ಲ. ಮತ್ತೆ ಅ.27ರಂದು ನಾಥ್‌ರ್‍ಗೇಟ್ ಬಳಿ ಕರ್ನಾಟಕ ಕೈಗಾರಿಕಾ ಭದ್ರತಾ ಪಡೆ ಅಧಿಕಾರಿ ಸಂತೋಷ್ ಅವರ ಕಣ್ಣಿಗೆ ಬಿದ್ದಿದ್ದ ಚಿರತೆ ನಂತರ ಅಧಿಕಾರಿಗಳು ಮತ್ತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ವಿಷಯ ತಿಳಿಸಲಾಗಿ ಸ್ಥಳಕ್ಕೆ ಬಂದ ಪಾಂಡವಪುರ ಅರಣ್ಯ ಇಲಾಖೆ ಅಧಿಕಾರಿಗಳಿಗೂ ಅದೇ ಸ್ಥಳದಲ್ಲಿ ರಾತ್ರಿ 10ರ ಸುಮಾರಿಗೆ ಚಿರತೆ ಕಾಣಿಸಿಕೊಂಡಿತ್ತು. ನಂತರ ಅಲ್ಲಿಂದ ಚಿರತೆ ಕಾಲ್ಕಿತ್ತಿತ್ತು.
ಇದೇ ಸ್ಥಳದಲ್ಲಿ ಬೋನ್ ಇರಿಸಿದ ಮಾರನೇ ದಿನ ಕ್ಯೂಬಿಂಗ್ ಕೂಡ ನಡೆಸಿ ನಂತರ ನಾಥ್‌ರ್‍ಗೇಟ್ ಬಳಿಯ ಉದ್ಯಾನವನ ಹಾಗೂ ಮ್ಯೂಜಿಲ್ ಫೌಂಟೆನ್ ಬಂದ್ ಮಾಡಿಸಿ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿತ್ತು. ಈಗ ಮತ್ತೆ ಚಿರತೆ ಕಾಣಿಸಿಕೊಂಡು ಅಧಿಕಾರಿಗಳು ಮತ್ತು ಸಿಬ್ಬಂದಿಯಲ್ಲೂ ಆತಂಕ ಮೂಡಿಸಿದ ಹಿನ್ನೆಲೆಯಲ್ಲಿ ಅಣೆಕಟ್ಟೆಆಸುಪಾಸಿನಲ್ಲಿ ಚಿರತೆ ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತಿರುವುದರಿಂದ ಮುಂಜಾಗೃತ ಕ್ರಮವಾಗಿ ಪ್ರವಾಸಿಗರಿಗೆ ಬೃಂದಾವನ ಸೇರಿದಂತೆ ಇತರೆ ಪ್ರದೇಶಗಳಿಗೆ ಪ್ರವೇಶ ನಿಷೇಧಗೊಳಿಸಲಾಗಿದೆ.
ಕೆಆರ್‌ಎಸ್ ಬೃಂದಾವನದಲ್ಲಿ ಚಿರತೆ ಪ್ರತ್ಯಕ್ಷ: ಪ್ರವಾಸಿಗರಿಗೆ ನಿರ್ಬಂಧ
ನಿಗಮದ ಅಧಿಕಾರಿಗಳು, ಅರಣ್ಯ, ತೋಟಗಾರಿಕೆ, ಪೊಲೀಸ್ ಇಲಾಖೆ ಸೇರಿದಂತೆ ಇತರೆ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಚಿರತೆ ಸೆರೆಗೆ ಅಗತ್ಯ ಕ್ರಮವಹಿಸಿದ್ದಾರೆ. ಈಗಾಗಲೇ ಬೃಂದಾವನ ಬಳಿ ಇರುವ ರಾಯಲ್ ಆರ್ಕಿಡ್ ಹೋಟೆಲ್ ಹಿಂಭಾಗ, ನಾಥ್‌ರ್ ಬ್ಯಾಂಕ್ ಹಾಗೂ ಮೀನುಗಾರಿಕೆ ಬಳಿ ಸೇರಿದಂತೆ ಒಟ್ಟು 3 ಬೋನ್ ಇರಿಸಿ ನಾಯಿ ಸಹ ಕಟ್ಟಿಹಾಕಲಾಗಿದೆ. ಜೊತೆಗೆ ಸಾರ್ವಜನಿಕರು ಅಡ್ಡಾದಿಡ್ಡಿ ತಿರುಗಾಡದಂತೆ ಆಟೋ ಮೂಲಕ ಪ್ರಚಾರ ಮಾಡಿ ಜಾಗೃತಿ ಮೂಡಿಸಲಾಗದೆ ಎಂದು ಅರಣ್ಯ ಇಲಾಖೆ ಅಧಿಕಾರಿ ಮಾಹಿತಿ ನೀಡಿದ್ದಾರೆ.