ಕೇಂದ್ರ ಪುರಾತತ್ವ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ| ಈ ಬಗ್ಗೆ ಕ್ರಮವಹಿಸಬೇಕು ಎಂದು ವಿಜಯನಗರ ಸ್ಮಾರಕ ಸಂಸ್ಕೃತಿ ಸಂರಕ್ಷಣಾ ಸೇನೆ ಒತ್ತಾಯ| ಹಂಪಿಯಲ್ಲಿ ನಿರಂತರವಾಗಿ ಅನಧಿಕೃತವಾಗಿ ನಡೆಯುತ್ತಿರುವ ಕಾರ್ಯ ಚಟುವಟಿಕೆಗಳಿಗೆ ಕಡಿವಾಣ ಹಾಕಿ ಸ್ಮಾರಕಗಳ ರಕ್ಷಣೆ ಮಾಡಬೇಕು ಎಂಬ ಆಗ್ರಹ|
ಬಳ್ಳಾರಿ(ಜ.13): ಹಂಪಿಗೆ ಬರುವ ಪ್ರವಾಸಿಗರು ನಿಯಮ ಉಲ್ಲಂಘಿಸಿ ಡ್ರೋಣ್ ಕ್ಯಾಮೆರಾ ಬಳಕೆ ಮಾಡುತ್ತಿರುವ ಘಟನೆಗಳು ಮತ್ತೆ ಮತ್ತೆ ಮರುಕಳಿಸುತ್ತಿವೆ. ಹಂಪಿಯ ಮಾತಂಗ ಪರ್ವತ ಬಳಿ ಸೋಮವಾರ ಮತ್ತೆ ಡ್ರೋಣ್ ಕ್ಯಾಮೆರಾ ಬಳಕೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಆದರೆ, ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಗಮನ ಹರಿಸುತ್ತಿಲ್ಲ ಎಂಬ ಆರೋಪಗಳು ಕೇಳಿ ಬಂದಿವೆ.
ಹಂಪಿಯಲ್ಲಿ ನಿಯಮ ಉಲ್ಲಂಘನೆ ಪ್ರಕರಣಗಳು ಹೊಸದಲ್ಲ. ಡ್ರೋಣ್ ಕ್ಯಾಮೆರಾ ಬಳಕೆ ಸೇರಿದಂತೆ ಸ್ಮಾರಕಗಳ ಬಳಿ ವಿಡಿಯೋ ಚಿತ್ರೀಕರಣ ಸಹ ಅನೇಕ ಬಾರಿ ನಡೆದಿವೆ. ಆದರೆ, ಇದನ್ನು ಕೇಂದ್ರ ಪುರಾತತ್ವ ಇಲಾಖೆ ಅಧಿಕಾರಿಗಳು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ. ನಿಯಮ ಉಲ್ಲಂಘಿಘಿÜಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸುತ್ತಿಲ್ಲ ಎಂಬ ಆರೋಪಗಳನ್ನು ಸಹ ತಳ್ಳಿ ಹಾಕುವಂತಿಲ್ಲ. ಈಗಾಗಲೇ ಅನೇಕ ಬಾರಿ ಡ್ರೋಣ್ ಕ್ಯಾಮೆರಾ ಬಳಕೆಯ ಘಟನೆಗಳು ನಡೆದಿವೆ. ಸ್ಥಳೀಯವಾಗಿ ಪೊಲೀಸರು ಇದ್ದಾಗ್ಯೂ ಯಾವುದೇ ಕ್ರಮಕ್ಕೆ ಮುಂದಾಗದಿರುವುದೇ ನಿರಂತರವಾಗಿ ನಿಯಮ ಉಲ್ಲಂಘನೆಗೆ ಮುಖ್ಯ ಕಾರಣ ಎಂಬುದು ಸ್ಥಳೀಯರ ಸ್ಮಾರಕ ಪ್ರಿಯರ ಆರೋಪ.
ಇನ್ನು ಸ್ಥಳೀಯರಿಗೆ ಡ್ರೋಣ್ ಕ್ಯಾಮೆರಾ ಬಳಕೆಗೆ ಅವಕಾಶ ನೀಡದ ಅಧಿಕಾರಿಗಳು ಹೊರಗಡೆಯಿಂದ ಬರುವ ಪ್ರವಾಸಿಗರಿಗೆ ಅನುಕೂಲ ಮಾಡಿಕೊಡಲಾಗುತ್ತಿದ್ದು, ಇದು ಎಷ್ಟುಸರಿ ಎಂದು ಸ್ಥಳೀಯ ಕಮಲಾಪುರದ ಯುವಕರು ಸಾಮಾಜಿಕ ಜಾಲತಾಣಗಳಲ್ಲಿ ಡ್ರೋಣ್ ಕ್ಯಾಮೆರಾ ಹಾರಾಟ ಮಾಡುತ್ತಿರುವುದನ್ನು ಶೇರ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದಿಲ್ಲಿ ಪರೇಡ್‌ಗೆ ರಾಜ್ಯದಿಂದ ವಿಜಯನಗರ ಟ್ಯಾಬ್ಲೋ
ಕ್ರಮಕ್ಕೆ ಆಗ್ರಹ
ಹಂಪಿಯಲ್ಲಿ ಭದ್ರತಾ ನಿಯಮ ಮೀರಿ ಪ್ರವಾಸಿಗರು ಡ್ರೋನ್ ಕ್ಯಾಮೆರಾ ಹಾರಿಸಿದ್ದು, ಈ ಬಗ್ಗೆ ಕ್ರಮವಹಿಸಬೇಕು ಎಂದು ವಿಜಯನಗರ ಸ್ಮಾರಕ ಸಂಸ್ಕೃತಿ ಸಂರಕ್ಷಣಾ ಸೇನೆ ಒತ್ತಾಯಿಸಿದೆ.
ಕೇಂದ್ರ ಪುರಾತತ್ವ ಇಲಾಖೆ, ರಾಜ್ಯ ಪುರಾತತ್ವ ಇಲಾಖೆ, ಹಂಪಿ ವಿಶ್ವ ಪರಂಪರಾ ಪ್ರದೇಶ ನಿರ್ವಹಣಾ ಪ್ರಾಧಿಕಾರ, ಪೊಲೀಸ್ ಇಲಾಖೆ. ಅಧಿಕಾರಿಗಳು ಕಾರ್ಯ ಪ್ರವೃತ್ತರಾಗಿ ಹಂಪಿಯಲ್ಲಿ ನಿರಂತರವಾಗಿ ಅನಧಿಕೃತವಾಗಿ ನಡೆಯುತ್ತಿರುವ ಕಾರ್ಯ ಚಟುವಟಿಕೆಗಳಿಗೆ ಕಡಿವಾಣ ಹಾಕಿ ಸ್ಮಾರಕಗಳ ರಕ್ಷಣೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಡ್ರೋನ್ ಬಳಸಿದವರನ್ನು ಇಲಾಖೆಗಳಿಗೆ ಒಪ್ಪಿಸಿದರೂ ಯಾವುದೇ ರೀತಿಯ ದೂರನ್ನು ದಾಖಲಿಸಿಕೊಳ್ಳದೆ ಅವರನ್ನು ಬಿಟ್ಟು ಕಳಿಸಲಾಗಿದೆ. ಮುಂದೆ ಸ್ಮಾರಕಗಳಿಗೆ ಯಾವುದೇ ರೀತಿಯ ಹಾನಿಯಾದರೆ ಅದಕ್ಕೆ ಇಲಾಖೆಗಳ ನಿರ್ಲಕ್ಷ್ಯ ಕಾರಣವಾಗುತ್ತದೆ ಎಂದು ವಿಜಯನಗರ ಸ್ಮಾರಕ ಸಂಸ್ಕೃತಿ ಸಂರಕ್ಷಣಾ ಸೇನೆ ಅಧ್ಯಕ್ಷ ವಿಶ್ವನಾಥ ಮಾಳಗಿ ಒತ್ತಾಯಿಸಿದ್ದಾರೆ.
ಮಾತಂಗ ಪರ್ವತ ಬಳಿ ಪ್ರವಾಸಿಗರೊಬ್ಬರು ಡ್ರೋಣ್ ಕ್ಯಾಮೆರಾ ಬಳಕೆ ಮಾಡುತ್ತಿದ್ದಾರೆ ಎಂದು ಗೊತ್ತಾಗುತ್ತಿದ್ದಂತೆಯೇ ಸ್ಥಳೀಯ ಸೆಕ್ಯುರಿಟಿಗಳು ತಡೆದಿದ್ದಾರೆ. ಕೂಡಲೇ ನಾವು ಸ್ಥಳಕ್ಕೆ ತೆರಳಿ, ಬಳಕೆಗೆ ಅವಕಾಶ ನೀಡದೆ ಕಳಿಸಿದೆವು ಎಂದು ಕಮಲಾಪುರದ ಕೇಂದ್ರ ಪುರಾತತ್ವ ಇಲಾಖೆಯ ಅಧೀಕ್ಷಕ ಕಾಳಿಮುತ್ತು ಹೇಳಿದ್ದಾರೆ.